“ಪ್ರಸ್ತುತ ರಾಜ್ಯ ಮತ್ತು ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಂ ಸಮುದಾಯವು ಭವಿಷ್ಯದಲ್ಲಿ ಬಹುಸಂಖ್ಯಾತರಾಗಬಹುದು” ಎಂದು ಪಶ್ಚಿಮ ಬಂಗಾಳದ ಸಚಿವ ಫಿರ್ಹಾದ್ ಹಕೀಮ್ ಅವರು ಶನಿವಾರ ನೀಡಿದ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ.
ಕೋಲ್ಕತ್ತಾದ ಸರ್ಕಾರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹಕೀಮ್, “ಪಶ್ಚಿಮ ಬಂಗಾಳದಲ್ಲಿ ನಾವು ಪ್ರಸ್ತುತ ಶೇಕಡಾ 33 ರಷ್ಟಿದ್ದೇವೆ. ರಾಷ್ಟ್ರೀಯವಾಗಿ ನಾವು ಶೇಕಡಾ 17 ರಷ್ಟಿದ್ದೇವೆ. ಆದ್ದರಿಂದ, ನಮ್ಮನ್ನು ಅಲ್ಪಸಂಖ್ಯಾತರು ಎಂದು ಸಂಬೋಧಿಸಲಾಗುತ್ತಿದೆ. ಆದರೆ, ನಾವು ನಮ್ಮನ್ನು ಅಲ್ಪಸಂಖ್ಯಾತರೆಂದು ಪರಿಗಣಿಸುವುದಿಲ್ಲ. ಭಗವಂತನ ಕೃಪೆಯಿಂದ ನಾವೂ ಕೂಡ ಒಂದು ದಿನ ಬಹುಸಂಖ್ಯಾತರಾಗಬಹುದು” ಎಂದರು.
ಹಕೀಮ್ ಹೇಳಿಕೆಗೆ ಬಿಜೆಪಿಯಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಬಿಜೆಪಿ ಮಾಹಿತಿ ತಂತ್ರಜ್ಞಾನ ಕೋಶದ ಮುಖ್ಯಸ್ಥ ಮತ್ತು ಪಶ್ಚಿಮ ಬಂಗಾಳದ ವೀಕ್ಷಕ ಅಮಿತ್ ಮಾಳವಿಯಾ, “ಹಿಂದೂಗಳನ್ನು ಇಸ್ಲಾಂಗೆ ಪರಿವರ್ತಿಸುವ ದಾವತ್-ಎ-ಇಸ್ಲಾಂನ ಪ್ರಯತ್ನಗಳನ್ನು ಅನುಮೋದಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಎಕ್ಸ್‌ಲ್ಲಿ ಪೋಸ್ಟ್ ಮಾಡಿರುವ ಮಾಳವಿಯಾ, “ಮುಸ್ಲಿಂ ಬಹುಸಂಖ್ಯೆ ಕುರಿತು ಹಕೀಮ್ ಅವರ ದೃಷ್ಟಿಕೋನವು ಮುಸ್ಲಿಮರು ನ್ಯಾಯವನ್ನು ತಮ್ಮ ಕೈಗೆ ತೆಗೆದುಕೊಳ್ಳಲು, ಶರಿಯಾ ಕಾನೂನನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರಲು ಕಾರಣವಾಗಬಹುದು ಎಂದು ಸಲಹೆ ನೀಡಿದ್ದಾರೆ” ಎಂದರು.
ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್, ಹಕೀಮ್ ಅವರ ಹೇಳಿಕೆಯನ್ನು ‘ದ್ವೇಷ ಭಾಷಣ’ ಹಾಗೂ ‘ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿಯನ್ನು ಸೃಷ್ಟಿಸುವ ನೀಲನಕ್ಷೆ’ ಎಂದು ಆರೋಪಿಸಿದ್ದಾರೆ. ಈ ವಿಚಾರದಲ್ಲಿ ಇಂಡಿಯಾ ಬ್ಲಾಕ್‌ನಲ್ಲಿರುವ ಇತರ ವಿರೋಧ ಪಕ್ಷಗಳ ಮೌನವನ್ನು ಅವರು ಪ್ರಶ್ನಿಸಿದರು.
ತೃಣಮೂಲ ಕಾಂಗ್ರೆಸ್ ನಾಯಕ ಕುನಾಲ್ ಘೋಷ್ ಅವರು ಹಕೀಮ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಅದನ್ನು ಯಾವ ಸಂದರ್ಭದಲ್ಲಿ ಮಾಡಲಾಗಿದೆ ಎಂಬುದರ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಭಾಷಣದ ನಿರ್ದಿಷ್ಟ ಭಾಗವನ್ನು ಪ್ರತ್ಯೇಕಿಸಿ ಅದನ್ನು ಹೈಲೈಟ್ ಮಾಡುವುದು ಅನ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ; ಇಂಡಿಯಾ ಬಣದ ನಾಯಕತ್ವವನ್ನು ಕಾಂಗ್ರೆಸ್ ಸಮರ್ಥಿಸಿಕೊಳ್ಳಬೇಕು: ಒಮರ್ ಅಬ್ದುಲ್ಲಾ ಸಲಹೆ


