ಹಿರಿಯ ಪತ್ರಕರ್ತ ಕರಣ ತಾಪರ್ ಅವರು ‘ದಿ ವೈರ್’ ಸುದ್ದಿ ಮಾಧ್ಯಮಕ್ಕಾಗಿ ನಡೆಸಿದ ಸಂದರ್ಶನದಲ್ಲಿ ದೇಶದ ಅಗ್ರಗಣ್ಯ ವಕೀಲರಲ್ಲಿ ಒಬ್ಬರು ಹಾಗೂ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್‌ನ (ವಕೀಲರ ಸಂಘ) ಮಾಜಿ ಅಧ್ಯಕ್ಷ ದುಷ್ಯಂತ್ ದವೆ ಕಣ್ಣೀರಿಟ್ಟಿದ್ದಾರೆ.
ಸಂದರ್ಶನದ ಕೊನೆಯಲ್ಲಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ ಚಂದ್ರಚೂಡ್ ವಿರುದ್ದ ಅಸಮಾಧಾನ ಹೊರಹಾಕಿದ ದವೆ, “ಮಸೀದಿಗಳ ಸಮೀಕ್ಷೆಗೆ ಅನುಮತಿ ನೀಡುವ ಮೂಲಕ ಚಂದ್ರಚೂಡ್ ಅವರು ಸಂವಿಧಾನ ಮತ್ತು ದೇಶಕ್ಕೆ ದೊಡ್ಡ ಅಪಚಾರ ಮಾಡಿದ್ದಾರೆ” ಎಂದು ಕಣ್ಣೀರು ಹಾಕಿದ್ದಾರೆ.
#TheInterview By Karan Thapar:
By permitting survey of mosques "Justice Chandrachud has done a great disservice to the constitution and country"; "he's playing into the hands" of the BJP: Dushyant Dave
Full Conversation: https://t.co/fVhpxEZnOV pic.twitter.com/32EpIGEr0A
— The Wire (@thewire_in) December 1, 2024
ಸಂದರ್ಶನದಲ್ಲಿ “ನಿವೃತ್ತ ಸಿಜೆಐ ಚಂದ್ರಚೂಡ್ ಅವರು ‘ಯಾರೋ ಹೇಳಿದಂತೆ ನಡೆಯುತ್ತಿದ್ದಾರೆ’ ಎಂದು ದವೆ ಹೇಳಿದರು. ಆಗ ಕರಣ್ ತಾಪರ್ “ಇದರರ್ಥ ಆಡಳಿತರೂಢ ಬಿಜೆಪಿ, ಮೋದಿಯೇ?” ಎಂದು ಮರು ಪ್ರಶ್ನೆ ಹಾಕಿದರು. ಅದಕ್ಕೆ ಉತ್ತರಿಸಿದ ದವೆ, “ಆ ಬಗ್ಗೆ ಸಂದೇಹ ಬೇಡ. ಮೋದಿ ಜೊತೆ ಸೇರಿ ಚಂದ್ರಚೂಡ್ ಅವರು ‘ಆರತಿ ಮಾಡಿರುವುದರಿಂದ, ದೇವರ ಕೃಪೆಯಿಂದ ಆಯೋಧ್ಯೆ ಸಮಸ್ಯೆ ಇತ್ಯರ್ಥವಾಯಿತು ಎಂದು ಹೇಳಿರುವುದರಿಂದ ಇದು ಸಾಬೀತಾಗಿದೆ” ಎಂದಿದ್ದಾರೆ.
“ನಾನು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೇನೆ. ನಾನು ಚಿಂತಿತನಾಗಿದ್ದೇನೆ. ಈ ಘಟನೆಗಳು ನನ್ನ ಮೇಲೆ ಇಷ್ಟೊಂದು ಪರಿಣಾಮ ಬೀರುತ್ತಿದ್ದರೆ, ಅಲ್ಪ ಸಂಖ್ಯಾತ ಸಮುದಾಯಗಳಿಗೆ ಸೇರಿದವರ ಮೇಲೆ ಎಂತಹ ಪರಿಣಾಮ ಬೀರುತ್ತಿರಬಹುದು? ಈ ದೇಶದ ಪ್ರಸ್ತುತ ಸನ್ನಿವೇಶಗಳ ಬಗ್ಗೆ ಯಾರೂ ಏಕೆ ಏನೂ ಮಾತನಾಡುತ್ತಿಲ್ಲ? ಎಲ್ಲರೂ ಕೇಳುತ್ತಾರೆ ನೀನು ಏಕೆ ಅದರಲ್ಲಿ ಕೈ ಹಾಕುತ್ತಿಯಾ? ಎಂದು. ಇದು ನನ್ನ ದೇಶ, ನಾನು ಸುಮ್ಮನಿರಲು ಸಾಧ್ಯವಿಲ್ಲ” ಎಂದು ದವೆ ಬೇಸರ ವ್ಯಕ್ತಪಡಿಸಿದ್ದಾರೆ.
ದೇಶದ ಪ್ರಸ್ತಕ ಪರಿಸ್ಥಿತಿ ಮತ್ತು ಮಸೀದಿಯ ಅಡಿಯಲ್ಲಿ ಮಂದಿರ ಹುಡುಕುವ ರಾಜಕೀಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ದವೆ, ” ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದ ಹಿಂಸಾಚಾರ ಮತ್ತು ಮುಸ್ಲಿಂ ಯುವಕರ ಹತ್ಯೆಗೆ ಮಾಜಿ ಸಿಜೆಐ ಡಿ.ವೈ ಚಂದ್ರಚೂಡ್ ಅವರೇ ನೇರ ಹೊಣೆ” ಎಂದು ಆರೋಪಿಸಿದ್ದಾರೆ.
“ಚಂದ್ರಚೂಡ್ ಮತ್ತು ಅವರ ಸಹೋದ್ಯೋಗಿಗಳು ಈ ಹಿಂದಿನ ಸುಪ್ರೀಂ ಕೋರ್ಟ್ ಆದೇಶಗಳನ್ನು ಧಿಕ್ಕರಿಸಿದ್ದಾರೆ. ಅವರು ಕಾನೂನಿನ ನಿಯಮವನ್ನು, ಅಂದರೆ ‘ರೂಲ್ ಆಫ್ ಲಾ’ ವನ್ನು ಮುರಿದಿಲ್ವಾ?” ಎಂದು ದವೆ ಪ್ರಶ್ನಿಸಿದ್ದಾರೆ. “ಚಂದ್ರಚೂಡ್ ಮುಸ್ಲಿಮರ ಮೇಲೆ ದಬ್ಬಾಳಿಕೆ ಮಾಡುವವರಿಗೆ ಮತ್ತು ಮಂದಿರ ಮಸೀದಿ ವಿಭಜಿಸಿ ಲಾಭ ಪಡೆಯುವವರಿಗೆ ಬೇಕಾದಂತೆ ನಡೆದುಕೊಂಡಿದ್ದಾರೆ” ಎಂದು ದವೆ ಆರೋಪಿಸಿದ್ದಾರೆ.
ನ್ಯಾಯಮೂರ್ತಿ ಚಂದ್ರಚೂಡ್ ಅವರ ಕಾರ್ಯವೈಖರಿ ಮತ್ತು ಮೇ 2022ರ ಜ್ಞಾನವ್ಯಾಪಿ ಮಸೀದಿ ಕುರಿತ ಅವರ ತೀರ್ಪನ್ನು ದವೆ ನೇರವಾಗಿ ಟೀಕಿಸಿದ್ದಾರೆ.
1991ರ ಆರಾಧನಾ ಸ್ಥಳಗಳ ಕಾಯ್ದೆಯು ಧಾರ್ಮಿಕ ಸ್ಥಳದ ಸ್ವರೂಪ ಬದಲಾವಣೆಯನ್ನು ನಿಷೇಧಿಸಿದ್ದರೂ, ಕೇವಲ ಸ್ಥಳವೊಂದರ ಧಾರ್ಮಿಕ ಲಕ್ಷಣವನ್ನು ಖಚಿತಪಡಿಸಿಕೊಳ್ಳುವುದು ಕಾಯ್ದೆಯನ್ನು ಉಲ್ಲಂಘಿಸುವುದಿಲ್ಲ” ಎಂದು ಚಂದ್ರಚೂಡ್ 2022ರಲ್ಲಿ ಮೌಖಿವಾಗಿ ಹೇಳಿದ್ದರು.
“ನ್ಯಾಯಮೂರ್ತಿ ಚಂದ್ರಚೂಡ್ ಅವರು ತಾವೇ ಭಾಗವಾಗಿದ್ದ ಅಯೋಧ್ಯ ತೀರ್ಪನ್ನು ಈ ಮೂಲಕ ಉಲ್ಲಂಘಿಸಿದ್ದಾರೆ. ನ್ಯಾಯಾಂಗ ಕಾನೂನಿಗೆ ಬದ್ದವಾಗಿರಬೇಕು. ಆದರೆ, ಜ್ಞಾನವ್ಯಾಪಿ ಪ್ರಕರಣದಲ್ಲಿ ಅವರ ತೀರ್ಪು ಆಘಾತಕಾರಿ. ಚಂದ್ರಚೂಡ್ ಅವರು ಜಾತ್ಯಾತೀತತೆ ಮತ್ತು ಕಾನೂನಿನ ನಿಯಮಗಳ ಕುರಿತು ವಿಶ್ವದಾದ್ಯಂತ ಉಪನ್ಯಾಸಗಳನ್ನು ನೀಡುತ್ತಾರೆ. ಆದರೆ, ಅವರ ಜ್ಞಾನವ್ಯಾಪಿ ಕುರಿತ ತೀರ್ಪು ಇದೆಲ್ಲದಕ್ಕೂ ನೇರ ವಿರುದ್ದವಾಗಿದೆ” ದವೆ ಹೇಳಿದ್ದಾರೆ.
“ಆರಾಧನಾ ಸ್ಥಳಗಳ ಕಾಯ್ದೆ, ಧಾರ್ಮಿಕ ಸ್ಥಳಗಳ ಸ್ವರೂಪ ಬದಲಾಯಿಸಲು ಸಾಧ್ಯವಿಲ್ಲ. 1947ರಲ್ಲಿ ಸ್ವಾತಂತ್ರ್ಯ ಬರುವಾಗ ಇದ್ದ ರೀತಿಯಲ್ಲೇ ಇರಬೇಕು ಎನ್ನುತ್ತದೆ. ಧಾರ್ಮಿಕ ಸ್ಥಳಗಳ ಸ್ವರೂಪ ಬದಲಾಯಿಸಲು ಸಾಧ್ಯವಿಲ್ಲ ಎನ್ನುವಾಗ, ಅದನ್ನು ಸಮೀಕ್ಷೆ ನಡೆಸಿ ಹಿನ್ನಲೆ ತಿಳಿಯುವ ಅಗತ್ಯವೇನಿದೆ? ಎಂದು ದವೆ ಪ್ರಶ್ನಿಸಿದ್ದಾರೆ. ಆರಾಧನಾ ಸ್ಥಳಗಳ ಕಾಯ್ದೆಯ ಮೂಲ ಉದ್ದೇಶವನ್ನೇ ತನ್ನ ಅಭಿಪ್ರಾಯದ ಮೂಲಕ ಚಂದ್ರಚೂಡ್ ಒಡೆದು ಹಾಕಿದ್ದಾರೆ” ಎಂದು ದವೆ ಕಿಡಿಕಾರಿದ್ದಾರೆ.
“ಚಂದ್ರಚೂಡ್ ಅವರೇ ಭಾಗವಾಗಿದ್ದ ಅಯೋಧ್ಯೆ ತೀರ್ಪು ಕೂಡ ಆರಾಧನಾ ಸ್ಥಳಗಳ ಕಾಯ್ದೆ1991ನ್ನು ಶ್ಲಾಘಿಸಿದೆ. ಈ ಕಾಯ್ದೆ ಸಂವಿಧಾನದ ಮೂಲಭೂತ ಮೌಲ್ಯಗಳನ್ನು ರಕ್ಷಿಸುತ್ತದೆ ಎಂದು ಹೇಳಿದೆ. ಆದರೆ, ಅದೇ ಚಂದ್ರಚೂಡ್ ಅವರು ಜ್ಞಾನವ್ಯಾಪಿ ಪ್ರಕರಣದಲ್ಲಿ ನೀಡಿರುವ ಮೌಖಿಕ ಹೇಳಿಕೆ, ಅವರೇ ಭಾಗವಾಗಿದ್ದ ಅಯೋಧ್ಯೆ ತೀರ್ಪಿನ ಪೀಠದ ಹೇಳಿಕೆಗೆ ನೇರ ವಿರುದ್ದವಾಗಿದೆ” ಎಂದು ದವೆ ತಿಳಿಸಿದ್ದಾರೆ.
ಸಂಭಾಲ್ ಹಿಂಸಾಚಾರಕ್ಕೆ ನ್ಯಾಯಾಂಗ ಹೊಣೆಯಲ್ಲವೇ? ಎಂದು ದವೆ ಪ್ರಶ್ನಿಸಿದ್ದಾರೆ. ಜ್ಞಾನವ್ಯಾಪಿ ಪ್ರಕರಣದಲ್ಲಿ ಇತರ ನ್ಯಾಯಾಧೀಶರು ಚಂದ್ರಚೂಡ್ ಅಭಿಪ್ರಾಯದ ವಿರುದ್ದ ನಿಲ್ಲಬೇಕಿತ್ತು. ಚಂದ್ರಚೂಡ್ ಅಪ್ರಮಾಣಿಕ ವ್ಯಾಖ್ಯಾನ ನೀಡಿದ್ದಾರೆ. ಅವು ಹಾನಿಕರ ಮತ್ತು ಉದ್ದೇಶಪೂರ್ವಕ ಎಂದು ದವೆ ಆರೋಪಿಸಿದ್ದಾರೆ.
ಆರಾಧನಾ ಸ್ಥಳಗಳ ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ಅರ್ಜಿಗಳನ್ನು ಏಕೆ ತಿರಸ್ಕರಿಸಿಲ್ಲ? ಎಂದು ದವೆ ಪ್ರಶ್ನಿಸಿದ್ದಾರೆ. ಅಯೋಧ್ಯೆ ತೀರ್ಪಿನಲ್ಲಿ ಪರೋಕ್ಷವಾಗಿ ನ್ಯಾಯಾಲಯ ಈ ಕಾಯ್ದೆಯನ್ನು ಎತ್ತಿ ಹಿಡಿದಿತ್ತು ಎಂದು ದವೆ ಪುನರುಚ್ಚರಿಸಿದ್ದಾರೆ. ಆರಾಧನಾ ಸ್ಥಳಗಳ ಕಾಯ್ದೆ-1991 ಅನ್ನು ಸಂಸತ್ತಿನಲ್ಲೇ ಹಿಂಪಡೆಯಲು ದವೆ ಬಿಜೆಪಿಗೆ ನೇರ ಸವಾಲು ಹಾಕಿದ್ದಾರೆ. ಅದಕ್ಕೆ ಬಿಜೆಪಿಯ ಮಿತ್ರಪಕ್ಷಗಳೇ ಬೆಂಬಲಿಸುವುದಿಲ್ಲ ಎಂದಿದ್ದಾರೆ.
“ಹೊಸ ಸಿಜೆಐ ಖನ್ನಾ ನೇತೃತ್ವದಲ್ಲಿ ಹೊಸ ರೂಪದಲ್ಲಿ ಸುಪ್ರೀಂ ಕೋರ್ಟ್ ನಡೆಯಲಿದೆ ಎಂದು ದವೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಂವಿಧಾನವನ್ನು ಅವರು ಗೌರವಿಸುತ್ತಾರೆ. 2014ರಿಂದ 2024ರ ನಡುವೆ ನಡೆದಿರುವ ತಪ್ಪುಗಳನ್ನು ಅವರು ಸರಿಪಡಿಸುತ್ತಾರೆ. ನ್ಯಾಯಮೂರ್ತಿ ಖನ್ನಾ ಅವರ 7 ತಿಂಗಳ ಅಲ್ವಾವಧಿಯ ಅಧಿಕಾರದ ಬಳಿಕ, ಅನೇಕ ಒಳ್ಳೆಯ ನ್ಯಾಯಾಧೀಶರು, ಮುಖ್ಯ ನ್ಯಾಯಮೂರ್ತಿಗಳು ಬರುತ್ತಿದ್ದಾರೆ. ನನಗೆ ಅವರ ಮೇಲೆ ಭರವಸೆ ಇದೆ” ಎಂದು ದೆವ ಹೇಳಿದ್ದಾರೆ.
“ನಾನು ಹೆಮ್ಮೆಯ ಹಿಂದೂ, ನಾನೂ ಬ್ರಾಹ್ಮಣ. ನಾನು ನನ್ನ ದೇವರುಗಳನ್ನು ಪೂಜಿಸುತ್ತೇನೆ. ಆದರೆ, ನಾನು ಇತರ ಧರ್ಮಗಳನ್ನು ಗೌರವಿಸುತ್ತೇನೆ. ನಾವೀಗ ಮಂದಿರ-ಮಸೀದಿ ಅನ್ನುವುದನ್ನು ನಿಲ್ಲಿಸದಿದ್ದರೆ, ದೇಶ ಹೊತ್ತಿ ಉರಿಯಲಿದೆ” ಎಂದು ದವೆ ಎಚ್ಚರಿಸಿದ್ದಾರೆ.
“ಸಂಭಾಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಡೆ ನೀಡಿರುವುದು ಸ್ವಾಗತಾರ್ಹ. ಈ ರೀತಿ ಎಲ್ಲಾ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಕ್ರಮ ಕೈಗೊಳ್ಳಬೇಕು. ನಾನು ಇನ್ನೊಂದು ಪಾಕಿಸ್ತಾನ, ಬಾಂಗ್ಲಾದೇಶ ಆಗಲು ಬಯಸುವುದಿಲ್ಲ. ನಾವು ನಮ್ಮ ದೇಶದಲ್ಲಿ ಧಾರ್ಮಿಕ ಸಹಿಷ್ಣುತೆ ಬಯಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ಪೂಜಾಸ್ಥಳಗಳ ಕಾಯ್ದೆ ಕುರಿತು ಚಂದ್ರಚೂಡ್ ಹೇಳಿಕೆ ಎಲ್ಲಾ ವಿವಾದಗಳಿಗೆ ಮೂಲ : ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್


