ವಿಧಾನಪರಿಷತ್‌ನಲ್ಲಿ ಗುರುವಾರ (ಡಿ.19) ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಿ.ಟಿ ರವಿ ಅವಾಚ್ಯ ಶಬ್ಧ ಬಳಸಿ ನಿಂದಿಸಿದ್ದಾರೆ ಎಂಬ ವಿಚಾರ ರಾಜ್ಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ.
ನಿನ್ನೆ (ಡಿ.19) ಸಂಜೆ ಬೆಳಗಾವಿಯ ಸುವರ್ಣಸೌಧದಲ್ಲಿ ಬಂಧನಕ್ಕೊಳಗಾದ ಸಿ.ಟಿ ರವಿ ಅವರನ್ನು ತಡರಾತ್ರಿ ಬೆಳಗಾವಿಯಿಂದ ಬೆಂಗಳೂರಿಗೆ ಕರೆ ತರಲಾಗುತ್ತಿದೆ ಎಂದು ವರದಿಯಾಗಿತ್ತು. ಆದರೆ, ಇಂದು ಮುಂಜಾನೆಯ ವರದಿಗಳು ರವಿ ಅವರನ್ನು ರಾತ್ರಿಯಿಡೀ ಬೆಳಗಾವಿ ಜಿಲ್ಲೆಯಲ್ಲೇ ಸುತ್ತಾಡಿಸಲಾಗಿದೆ. ಪ್ರಸ್ತುತ ಅವರು ಜಿಲ್ಲೆಯ ಯರಗಟ್ಟಿ ಸಮೀಪ ಇದ್ದಾರೆ ಎಂದು ಹೇಳಿವೆ.
ಇಂದು ಸಿ.ಟಿ ರವಿ ಅವರನ್ನು ಬೆಳಗಾವಿಯಲ್ಲೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದಾ?, ಇಲ್ಲಾ ಬೆಂಗಳೂರಿಗೆ ಕರೆತಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರಾ? ಎಂಬುವುದು ತಿಳಿದು ಬರಬೇಕಿದೆ.
ಸಿ.ಟಿ ರವಿ ಪ್ರತಿದೂರು
ಅವಾಚ್ಯ ಪದ ಬಳಸಿ ನನ್ನನ್ನು ನಿಂದಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿನ್ನೆ ಸಂಜೆ ಸಿ.ಟಿ ರವಿ ವಿರುದ್ದ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬೆನ್ನಲ್ಲೇ ಅವರ ಬಂಧನವಾಗಿದೆ. ನಂತರ ರಾತ್ರಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಬೆಳಗಾವಿಯ ಖಾನಾಪುರ ಪೊಲೀಸ್ ಠಾಣೆಯಲ್ಲಿ ಸಿ.ಟಿ ರವಿ ಪ್ರತಿದೂರು ದಾಖಲಿಸಿದ್ದಾರೆ. “ನನ್ನ ಕೊಲೆಗೆ ಸಂಚು ರೂಪಿಸಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.
ಸಿ.ಟಿ ರವಿ ತಲೆಗೆ ಗಾಯ
ತಡರಾತ್ರಿ ಖಾನಾಪುರ ಪೊಲೀಸ್ ಠಾಣೆಯಿಂದ ಹೊರ ಬಂದಾಗ ಸಿ.ಟಿ ರವಿ ತಲೆಯಲ್ಲಿ ಗಾಯ ಆಗಿರುವುದು ಕಂಡು ಬಂದಿದೆ. ಆದರೆ, ಅದಕ್ಕೆ ಕಾರಣ ಏನು ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ. ಬಿಜೆಪಿಯವರು ಪೊಲೀಸರು ಸಿ.ಟಿ ರವಿ ಮೇಲೆ ಠಾಣೆಯಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನನಗಾಗುವ ತೊಂದರೆಗೆ ಸರ್ಕಾರ ಕಾರಣ-ಸಿ.ಟಿ ರವಿ
ಇಂದು (ಡಿ.20) ಮುಂಜಾನೆ 5.30ರ ಸುಮಾರಿಗೆ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಸಿ.ಟಿ ರವಿ “ಪೊಲೀಸ್ ಕಸ್ಟಡಿಯಲ್ಲಿ ತಲೆಗೆ ಆದ ಗಾಯಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಲು ಮೂರು ಗಂಟೆ ತೆಗೆದುಕೊಂಡ ಕರ್ನಾಟಕ ಪೊಲೀಸರು. ಈಗ ಕಳೆದ ಐದಾರು ಗಂಟೆಗಳಿಂದ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಸುತ್ತಾಡಿಸುತಿದ್ದಾರೆ. ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಫೋನ್‌ನಲ್ಲಿ ಮಾತುಕತೆ ನಡೆಸುತ್ತಾ ಏನೋ ಷಡ್ಯಂತ್ರ ಮಾಡುತ್ತಿದ್ದಾರೆ. ನನಗಾಗುವ ಯಾವುದೇ ತೊಂದರೆಗೆ ಪೊಲೀಸ್ ಇಲಾಖೆ ಹಾಗು ಕಾಂಗ್ರೇಸ್ ಸರ್ಕಾರವೇ ಕಾರಣ” ಎಂದು ಬರೆದುಕೊಂಡಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿ ತಲೆಗೆ ಆದ ಗಾಯಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಲು ಮೂರು ಗಂಟೆ ತೆಗೆದುಕೊಂಡ ಕರ್ನಾಟಕ ಪೊಲೀಸರು. ಈಗ ಕಳೆದ ಐದಾರು ಗಂಟೆಗಳಿಂದ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಸುತ್ತಾಡಿಸುತಿದ್ದಾರೆ.
ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಫೋನ್ ನಲ್ಲಿ ಮಾತುಕತೆ ನಡೆಸುತ್ತಾ ಏನೋ ಷಡ್ಯಂತ್ರ ಮಾಡುತ್ತಿದ್ದಾರೆ. ನನಗಾಗುವ ಯಾವುದೇ… pic.twitter.com/kNDzbmL2Rr
— C T Ravi 🇮🇳 ಸಿ ಟಿ ರವಿ (@CTRavi_BJP) December 19, 2024
ರಕ್ತ ಬರುವಂತೆ ಹೊಡೆದಿದ್ದಾರೆ -ಆರ್. ಅಶೋಕ್
ಪೊಲೀಸರು ಸಿ.ಟಿ ರವಿಗೆ ರಕ್ತ ಬರುವಂತೆ ಹೊಡೆದಿದ್ದಾರೆ. ಈ ಕಾಂಗ್ರೆಸ್ನವರು ಏನು ಮಾಡುವುದಕ್ಕೂ ಹಿಂಜರಿಯುವುದಿಲ್ಲ. ಸರ್ಕಾರ ಬೆಳಗಾವಿಯನ್ನು ಮಿನಿ ಪಾಕಿಸ್ತಾನ ಮಾಡಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ.
ಇಂದು ಕಾಂಗ್ರೆಸ್-ಬಿಜೆಪಿ ಪ್ರತಿಭಟನೆ, ಚಿಕ್ಕಮಗಳೂರು ಬಂದ್‌ಗೆ ಕರೆ
ಸಿ.ಟಿ ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಶಬ್ದ ಬಳಸಿ ನಿಂದಿಸಿರುವುದನ್ನು ಖಂಡಿಸಿ ಮತ್ತು ಸಿ.ಟಿ ರವಿ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ರಾಜ್ಯ ಮಹಿಳಾ ಕಾಂಗ್ರೆಸ್ ಬೆಂಗಳೂರಿನ ಕೆಪಿಸಿಸಿ ಕಚೇರಿ ಬಳಿಯ ಕ್ವೀನ್ಸ್ ರಸ್ತೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಮಾಹಿತಿ ದೊರೆತಿದೆ. ಇದರ ಜೊತೆಗೆ ರಾಜ್ಯದ ವಿವಿದೆಡೆ ಕಾಂಗ್ರೆಸ್ ಕಾರ್ಯಕರ್ತರಿಂದ ಸಿ.ಟಿ ರವಿ ವಿರುದ್ದ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ.
ಮತ್ತೊಂದೆಡೆ, ಸಿ.ಟಿ ರವಿ ಮೇಲೆ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ರಾಜ್ಯಾದ್ಯಂತ ಇಂದು ಪ್ರತಿಭಟನೆ ನಡೆಸಲು ಬಿಜೆಪಿ ಮುಂದಾಗಿದೆ. ಚಿಕ್ಕಮಗಳೂರು ಬಿಜೆಪಿ ಇಂದು ಜಿಲ್ಲಾ ಬಂದ್‌ಗೆ ಕರೆ ಕೊಟ್ಟಿದೆ.
ಇದನ್ನೂ ಓದಿ : ಮುಡಾ ಪ್ರಕರಣ| ತನಿಖೆ ಮುಂದುವರಿಸದಂತೆ ಲೋಕಾಯುಕ್ತ ನ್ಯಾಯಾಲಯಕ್ಕೆ ಹೈಕೋರ್ಟ್ ಆದೇಶ


