ಇಂದು (ಜನವರಿ 13) ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, 7-8 ಜನ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಇದರ ಬೆನ್ನಲ್ಲೇ ನೂತನ ಸಚಿವರ ಸಂಭಾವ್ಯ ಪಟ್ಟಿ ಹರಿದಾಡುತ್ತಿದ್ದು, ಅದರಲ್ಲಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೆಸರಿಲ್ಲದಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, “ಲಾಭಿ ಮಾಡಿದವರು ಸಚಿವರಾಗುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಂ.ಪಿ. ರೇಣುಕಾಚಾರ್ಯ,”ನೇರ, ನಿಷ್ಠುರ ಮಾತುಗಳೇ ನನಗೆ ಮುಳುವಾಯಿತು. ಲಾಬಿ ಮಾಡಿದವರು ಸಚಿವರಾಗುತ್ತಾರೆ. ಯಾರ ಬಳಿಯೂ ಲಾಬಿ ಮಾಡುವ ಹವ್ಯಾಸ ನನಗೆ ಇಲ್ಲ. ಅದು ನನ್ನ ಅಪರಾಧ. ವೈಯಕ್ತಿಕವಾಗಿ ನನಗೆ ಬೇಸರವಾಗಿದೆ. ಮಂತ್ರಿಗಿರಿ ಕೊಡಿ ಎಂದು ಯಾರಿಗೂ ನಾನು ಅರ್ಜಿ ಹಾಕಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
“ಇದು ಬೆಂಗಳೂರು-ಬೆಳಗಾವಿ ಕ್ಯಾಬಿನೆಟ್ ಆಗಿದೆ. ಮಧ್ಯ ಕರ್ನಾಟಕಕ್ಕೆ ಅನ್ಯಾಯವಾಗಿದೆ. ನನಗೆ ಬೇಸರವಾಗಿದೆ. ನಾವು ಯಾರ ಮುಂದೆ ಆಸಮಾಧಾನ ಹೇಳಿಕೊಳ್ಳಬೇಕು. ಸ್ವಾಭಿಮಾನ ಬಿಟ್ಟು ಬದುಕುವ ವ್ಯಕ್ತಿ ನಾನಲ್ಲ. ಕ್ಷೇತ್ರದ ಜನ ಹೇಳಿದಂತೆ ಕೇಳುವ ವ್ಯಕ್ತಿ ನಾನು” ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಇಂದು ಸಚಿವ ಸಂಪುಟ ವಿಸ್ತರಣೆ: ಪ್ರಮಾಣವಚನ ಸ್ವೀಕರಿಸುವ ನೂತನ ಸಚಿವರ ಪಟ್ಟಿ ಇಲ್ಲಿದೆ…
ಜನವರಿ 13 ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಈ ಹಿಂದೆ ಹೇಳಿದ್ದರು. ಅದರಂತೆ ಇಂದು (ಬುಧವಾರ) 7-8 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಗಳವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, “ಏಳರಿಂದ ಎಂಟು ಶಾಸಕರು ಪ್ರಮಾಣ ಸ್ವೀಕರಿಸಲಿದ್ದಾರೆ. ಕೆಲವು ಶಾಸಕರಿಗೆ ಈ ಸಂಬಂಧ ಸೂಚನೆಯನ್ನೂ ನೀಡಲಾಗಿದೆ” ಎಂದು ಹೇಳಿದರು.
ಉಮೇಶ್ ಕತ್ತಿ, ಎಸ್. ಅಂಗಾರ, ಸಿ.ಪಿ. ಯೋಗೀಶ್ವರ್, ಅರವಿಂದ ಲಿಂಬಾವಳಿ, ಎಂಟಿಬಿ ನಾಗರಾಜ್, ಆರ್. ಶಂಕರ್, ಮುರುಗೇಶ್ ನಿರಾಣಿ ಅವರ ಹೆಸರುಗಳನ್ನು ರಾಜಭವನಕ್ಕೆ ಕಳುಹಿಸಲಾಗಿದ್ದು, ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಜೋ ಬೈಡೆನ್ ಪ್ರಮಾಣವಚನ ಸ್ವೀಕಾರ ಹಿನ್ನೆಲೆ: ವಾಶಿಂಗ್ಟನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಟ್ರಂಪ್!


