ಪಶ್ಚಿಮ ಬಂಗಾಳದಲ್ಲಿ 2010ರ ನಂತರ ನೀಡಲಾದ ಎಲ್ಲಾ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪ್ರಮಾಣಪತ್ರಗಳನ್ನು ಕಲ್ಕತ್ತಾ ಹೈಕೋರ್ಟ್ ಬುಧವಾರ (ಮೇ 22) ರದ್ದುಗೊಳಿಸಿದೆ.
ಒಬಿಸಿ ಕಾಯಿದೆಯ ಅಡಿ ಉದ್ಯೋಗವನ್ನು ಪಡೆದಿರುವ ಮತ್ತು ಒಬಿಸಿ ಮೀಸಲಾತಿಯಿಂದಾಗಿ ಈಗಾಗಲೇ ಸೇವೆಯಲ್ಲಿರುವವರಿಗೆ ಈ ಆದೇಶದಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ತಪಬ್ರತ ಚಕ್ರವರ್ತಿ ಮತ್ತು ರಾಜಶೇಖರ್ ಮಂಥ ಅವರ ವಿಭಾಗೀಯ ಪೀಠವು ರಾಜ್ಯದಲ್ಲಿ ಒಬಿಸಿ ಪ್ರಮಾಣಪತ್ರಗಳನ್ನು ನೀಡುವ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಸಂಬಂಧ ತೀರ್ಪು ನೀಡಿದೆ. ಈ ತೀರ್ಪು 5 ಲಕ್ಷ ಒಬಿಸಿ ಪ್ರಮಾಣಪತ್ರಗಳ ಮೇಲೆ ಪರಿಣಾಮ ಬೀರಲಿದೆ.
ಹಿಂದುಳಿದ ವರ್ಗಗಳ ಆಯೋಗವು 1993ರ ಪಶ್ಚಿಮ ಬಂಗಾಳದ ಹಿಂದುಳಿದ ವರ್ಗಗಳ ಆಯೋಗದ ಕಾಯಿದೆಯ ಆಧಾರದ ಮೇಲೆ ಒಬಿಸಿಗಳ ಹೊಸ ಪಟ್ಟಿಯನ್ನು ತಯಾರಿಸಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ.
ನ್ಯಾಯಾಲಯದ ಆದೇಶದಿಂದ 2011ರಲ್ಲಿ ಅಧಿಕಾರಕ್ಕೆ ಬಂದ ಆಡಳಿತರೂಡ ತೃಣಮೂಲ ಕಾಂಗ್ರೆಸ್ (ಟಿಎಂಸಿ)ಗೆ ಒಂದು ರೀತಿಯಲ್ಲಿ ಹಿನ್ನಡೆಯಾಗಿದೆ. ಏಕೆಂದರೆ, ಟಿಎಂಸಿಯ ಅಧಿಕಾರವಧಿಯ ಎಲ್ಲಾ ಒಬಿಸಿ ಪ್ರಮಾಣಪತ್ರಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಒಬಿಸಿ ವರ್ಗದವರಿಗೆ ಸಾರ್ವಜನಿಕ ಸೇವೆಗಳಲ್ಲಿ ಮೀಸಲಾತಿ ನೀಡುವ ಪಶ್ಚಿಮ ಬಂಗಾಳದ ಹಿಂದುಳಿದ ವರ್ಗಗಳ (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಹೊರತಾಗಿ) ಸೇವೆಗಳು ಮತ್ತು ಹುದ್ದೆಗಳ ಮೀಸಲಾತಿ ಕಾಯಿದೆ- 2012ರ ಕೆಲ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.
ನ್ಯಾಯಾಲಯ ತನ್ನ ಆದೇಶದಲ್ಲಿ ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ) ಸೇವೆಗಳು ಮತ್ತು ಹುದ್ದೆಗಳ ಮೀಸಲಾತಿ ಕಾಯಿದೆ- 2012ರ ಅಡಿಯಲ್ಲಿ 37 ವರ್ಗಗಳನ್ನು ಒಬಿಸಿ ಎಂದು ಗುರುತಿಸಿರುವುದನ್ನೂ ರದ್ದುಗೊಳಿಸಿದೆ.
2010ಕ್ಕಿಂತ ಮೊದಲು ಒಬಿಸಿ ಕಾಯ್ದೆಯಡಿ ವರ್ಗೀಕರಿಸಿದ 66 ಸಮುದಾಯಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ. ಏಕೆಂದರೆ, ಅರ್ಜಿದಾರರು ಅವುಗಳ ಬಗ್ಗೆ ಚಕಾರವೆತ್ತಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ತಾನು ಹೈಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ಆದೇಶವನ್ನು ನಾವು ಒಪ್ಪುವುದಿಲ್ಲ. ಮೀಸಲಾತಿ ಮುಂದುವರಿಯಲಿದೆ. ಒಬಿಸಿ ಮೀಸಲಾತಿ ಜಾರಿಗೊಳಿಸುವ ಮುನ್ನ ಸಮೀಕ್ಷೆಗಳನ್ನು ನಡೆಸಲಾಗಿತ್ತು. ಈ ಹಿಂದೆಯೂ ಈ ಸಂಬಂಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ, ಅದರಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿನ ನೀತಿಗಳ ಬಗ್ಗೆ ಅವರು ಏಕೆ ಮಾತನಾಡುವುದಿಲ್ಲ? ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಕಡಿಮೆ ಗುಣಮಟ್ಟದ ಕಲ್ಲಿದ್ದಲು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅದಾನಿಯಿಂದ ವಂಚನೆ?: ವರದಿ


