Homeಮುಖಪುಟಬಾಯ್‍ಕಾಟ್ ಚೈನಾ ಅಬ್ಬರದ ಕೂಗು ವಾಣಿಜ್ಯದಲ್ಲಿ ಕಾರ್ಯಗತ ಸಾಧ್ಯವೇ?

ಬಾಯ್‍ಕಾಟ್ ಚೈನಾ ಅಬ್ಬರದ ಕೂಗು ವಾಣಿಜ್ಯದಲ್ಲಿ ಕಾರ್ಯಗತ ಸಾಧ್ಯವೇ?

ಬಾಯ್ ಕಾಟ್ ಚೀನಾ ಎಂಬುದು ಎಷ್ಟು ದೊಡ್ಡ ಪ್ರಹಸನ ಎಂಬುದು ವಿಷಯದ ಆಳಕ್ಕೆ ಇಳಿದರೆ ಅರ್ಥವಾಗುತ್ತದೆ. ಚೀನಾ ನೇರವಾಗಿ ನಮ್ಮ ಮನೆಯೊಳಗೆ ಪ್ರವೇಶಿಸಿ ಎಷ್ಟೋ ಕಾಲವಾಗಿದೆ. ಆಳುವ ಜನರಿಗೂ ಈ ವಾಸ್ತವ ಗೊತ್ತಿದೆ. ಆದರೆ ಜನರ ಭಾವನೆಗಳನ್ನು ಕೆರಳಿಸಿ ರಾಜಕಾರಣ ಮಾಡುವುದು ಅವರ ಹಳೆಯ ಖಯಾಲಿ.

- Advertisement -
- Advertisement -

ಭಾರತ ಚೀನಾ ಗಡಿಭಾಗದ ಗಾಲ್ವಾನ್ ನದಿ ಕಣಿವೆಯಲ್ಲಿ ನಡೆದ ಭಾರತ-ಚೈನಾ ಸೈನಿಕರ ಮುಖಾಮುಖಿ ಸಂಘರ್ಷ ಇತಿಹಾಸದಲ್ಲಿ ಕಂಡು ಕೇಳರಿಯದಂಥದ್ದು. ಮೊಳೆಗಳಿರುವ ರಾಡ್‍ಗಳನ್ನು ಬಳಸಿ ಭಾರತದ ಇಪ್ಪತ್ತು ಸೈನಿಕರನ್ನು ಕೊಲ್ಲಲಾಯಿತು ಎಂದರೆ ಅಲ್ಲಿ ನಡೆದ ನರಮೇಧದ ಕ್ರೌರ್ಯ ಅರ್ಥವಾಗುತ್ತದೆ. ಈ ಮುಖಾಮುಖಿ ಸಂಘರ್ಷದಲ್ಲಿ ಚೀನಾದ ಪಿಎಲ್‍ಎ ಸೈನಿಕರ ಪೈಕಿ ಗಾಯಗೊಂಡ ಮತ್ತು ಮೃತಪಟ್ಟವರ ಸಂಖ್ಯೆ ಒಟ್ಟು ನಲವತ್ಮೂರು ಎಂದು ಭಾರತದ ಎನ್‍ಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿತು. ಆದರೆ ಚೀನಾ ಇದುವರೆಗೆ ತನ್ನ ಪಿಎಲ್‍ಎ ಯೋಧರಿಗೆ ಆದ ಪ್ರಾಣಹಾನಿಯ ಕುರಿತು ಯಾವುದೇ ಸಂಖ್ಯೆಯನ್ನು ಹೇಳಿಕೊಂಡಿಲ್ಲ. ಉಭಯ ದೇಶಗಳ ಜನರ ನಡುವೆ ದ್ವೇಷ, ಪ್ರತೀಕಾರದ ಭಾವನೆಗಳನ್ನು ಎಬ್ಬಿಸಬಹುದಾದ ಹಿನ್ನೆಲೆಯಲ್ಲಿ ತನ್ನ ಸೈನಿಕರ ಸಾವು-ನೋವಿನ ಸಂಖ್ಯೆಯನ್ನು ಹೇಳುತ್ತಿಲ್ಲ ಎಂದು ಚೀನಾ ಸಮರ್ಥನೆ ಮಾಡಿಕೊಂಡಿದೆ.

ಭಾರತ-ಚೀನಾ ಗಡಿ ಸಂಘರ್ಷದಲ್ಲಿ ಇಪ್ಪತ್ತು ಭಾರತೀಯ ಯೋಧರು ಮೃತಪಟ್ಟ ಘಟನೆ ಇಡೀ ದೇಶದಲ್ಲಿ ಆಕ್ರೋಶದ ಅಲೆಯನ್ನು ಎಬ್ಬಿಸಿತು. ಭಾರತ ಭಾಗದ ಗಾಲ್ವಾನ್ ಕಣಿವೆಯಲ್ಲಿ ಚೀನಾ ಪ್ರವೇಶ ಮಾಡಿದ ದಿನದಿಂದಲೂ ಏನಾದರೊಂದು ಅನಾಹುತವಾಗಬಹುದೆಂಬ ಮುನ್ಸೂಚನೆ ಇತ್ತು. ಭಾರತ-ಚೀನಾ ಸೇನಾಧಿಕಾರಿಗಳ ಮಟ್ಟದ ಮಾತುಕತೆಗಳು ನಡೆಯುತ್ತಿದ್ದ ಸಂದರ್ಭದಲ್ಲೇ ಈ ಭಯಾನಕ ಘಟನೆ ನಡೆದುಹೋಯಿತು.

ಈ ನಡುವೆ `ಚೀನಾ ವಸ್ತುಗಳನ್ನು ಬಹಿಷ್ಕರಿಸಿ’ ಎಂಬ ಅಭಿಯಾನ ಭಾರತದಲ್ಲಿ ಆರಂಭಗೊಂಡಿತು. ಇದರ ನೇತೃತ್ವವನ್ನು ವಹಿಸಿಕೊಂಡಿದ್ದು ಭಾರತೀಯ ಮೀಡಿಯಾಗಳು ಮತ್ತು ಅವುಗಳ ಕೂಗುಮಾರಿ ಆಂಕರ್‍ಗಳು. ಚೀನಾ ನಮ್ಮ ಸೈನಿಕರನ್ನು ಕೊಂದಿರುವ ಹಿನ್ನೆಲೆಯಲ್ಲಿ ಚೀನಾ ತಯಾರಿಸಿದ ಯಾವುದೇ ವಸ್ತುಗಳನ್ನು ನಾವು ಬಳಸಬಾರದು ಎಂಬ ಕೂಗನ್ನು ಮೀಡಿಯಾ ಮತ್ತು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಐಟಿ ಸೆಲ್ ಮತ್ತು ಅದರ ಟ್ರೋಲ್ ಆರ್ಮಿ ಎಬ್ಬಿಸಿತು. ಬಾಯ್ ಕಾಟ್ ಚೈನಾ ಎಂಬ ಅಬ್ಬರದ ಹ್ಯಾಶ್ ಟ್ಯಾಗ್ ಗಳು ಎದ್ದುನಿಂತವು.

ಸರ್ಕಾರವನ್ನು ರಕ್ಷಿಸುವ ತಂತ್ರ

ಇಪ್ಪತ್ತು ಭಾರತೀಯ ಸೈನಿಕರು ಹತರಾದರಲ್ಲ? ನಾವು ಭಾರತೀಯರು ದೇಶಭಕ್ತಿಯಲ್ಲಿ ಯಾರಿಗೇನು ಕಡಿಮೆಯಿಲ್ಲ. ಆಕ್ರೋಶದ ಅಲೆ ಹರಡುವುದು ಸಹಜ. ಇಂಥ ಸಂದರ್ಭದಲ್ಲಿ ಸಾರ್ವಜನಿಕ ಆಕ್ರೋಶ ಸರ್ಕಾರದ ಮೇಲೆ ತಿರುಗಬಾರದಲ್ಲ. ಹಲವು ದಿನ ಗಳಿಂದ ಚೀನಾ ಸೈನಿಕರು ಇಂಥದ್ದೊಂದು ಕುತಂತ್ರ ಮಾಡಬಹುದು ಎಂಬುದು ಗೊತ್ತಿದ್ದೂ ಸರ್ಕಾರ ಯಾಕೆ ಗಂಭೀರವಾಗಿ ಪರಿಗಣಿಸಲಿಲ್ಲ. ಗಾಲ್ವಾನ್ ಕಣಿವೆಯಲ್ಲಿ ಬಿಹಾರಿ ರೆಜಿಮೆಂಟ್ ಚೀನಾ ಸೈನಿಕರ ಕೈಗೆ ಸಿಕ್ಕು ಹತರಾಗುವಾಗ ಬ್ಯಾಕ್ ಅಪ್ ಫೋರ್ಸ್ ಯಾಕೆ ಕಳುಹಿಸಲಿಲ್ಲ? ಸೇನಾಧಿಕಾರಿಗಳ ಮಾತುಕತೆ ನಡೆಯುವಾಗಲೇ ಇಂಥದ್ದೊಂದು ಘಟನೆ ನಡೆದಿದ್ದು ಯಾಕೆ? ತಮ್ಮ ಜೀವರಕ್ಷಣೆಗಾಗಿಯಾದರೂ ಬಂದೂಕು ಬಳಸದಂತೆ ಸೈನಿಕರಿಗೆ ಯಾಕೆ ಸೂಚನೆ ನೀಡಲಾಯಿತು? ಇಂಥ ಹತ್ತಾರು ಪ್ರಶ್ನೆಗಳನ್ನು ನಾವು ಕೇಳಬೇಕಾಗಿರುವುದು ಸರ್ಕಾರಕ್ಕೆ ತಾನೇ? ಇಂಥ ಪ್ರಶ್ನೆಗಳನ್ನು ಕೇಳದಂತೆ, ಸಾರ್ವಜನಿಕರ ಆಕ್ರೋಶ ಚೀನಾ ಮೇಲಷ್ಟೇ ಕೇಂದ್ರೀಕೃತವಾಗಿರಲಿ ಎಂಬ ಕಾರಣಕ್ಕೆ ಇಂಥ ಬಾಯ್‍ಕಾಟ್ ಅಭಿಯಾನಗಳು ನಡೆದವು.

ಚೀನಾ ಬಹಿಷ್ಕಾರ ನಿಜಕ್ಕೂ ಸಾಧ್ಯವೇ?

ಚೀನಾ ವಸ್ತುಗಳನ್ನಾಗಲೀ, ಚೀನಾ ಕಂಪೆನಿಗಳನ್ನಾಗಲೀ ಭಾರತದಿಂದ ಬಹಿಷ್ಕರಿಸುವುದು ಅಷ್ಟು ಸುಲಭವೇ? ಪ್ರಧಾನಿ ಮೋದಿ ಕೆಲವು ದಿನಗಳ ಹಿಂದೆ `ಆತ್ಮನಿರ್ಬರ್’ ಭಾರತದ ಪ್ರಸ್ತಾಪ ಮಾಡಿದರು. ಅಪ್ಪಿತಪ್ಪಿಯೂ ಅವರು ಚೀನಾ ಬಹಿಷ್ಕರಿಸೋಣ ಎಂದು ಹೇಳಲಿಲ್ಲ. ಕೇಂದ್ರ ಸಚಿವ ರಾಮ್ ದಾಸ್ ಅಠಾವಲೆ `ಚೀನೀ ರೆಸ್ಟೋರೆಂಟ್ ಮತ್ತು ಚೀನಾ ಆಹಾರ ಪದಾರ್ಥಗಳನ್ನು (ಚೈನೀಸ್ ಫುಡ್)’ ಬಹಿಷ್ಕರಿಸಿ ಎಂದು ಮೂರ್ಖತನದ ಹೇಳಿಕೆ ನೀಡಿದ್ದು ಬಿಟ್ಟರೆ ಕೇಂದ್ರದ ಇನ್ಯಾವ ಸಚಿವರೂ ಸಹ ಬಹಿರಂಗವಾಗಿ ಬಾಯ್ ಕಾಟ್ ಚೀನಾ ಕರೆ ನೀಡಲಿಲ್ಲ. ತನ್ನ ಐಟಿ ಸೆಲ್ ಮತ್ತು ಮೀಡಿಯಾ ಮೂಲಕ ಬಾಯ್‍ಕಾಟ್ ಚೀನಾ ಎಂದು ಹೇಳಿಸುವ ಸರ್ಕಾರ ತಾನೇ ಯಾಕೆ ಚೀನಾ ವಸ್ತುಗಳನ್ನು ಬಹಿಷ್ಕರಿಸಿ, ಚೀನಾ ಜತೆಗಿನ ವ್ಯವಹಾರಗಳನ್ನೆಲ್ಲ ಬಂದ್ ಮಾಡುತ್ತಿಲ್ಲ? ಭಾರತ ಸರ್ಕಾರ ಇಂಥ ದುಸ್ಸಾಹಸ ಮಾಡಲಾಗದು. ಮೊದಲನೆಯದಾಗಿ ಅಂತಾರಾಷ್ಟ್ರೀಯ ಒಪ್ಪಂದಗಳು ಇದಕ್ಕೆ ಅಡ್ಡಿ ಬರುತ್ತವೆ. ಎರಡನೆಯದಾಗಿ ಮೊದಲೇ ಆರ್ಥಿಕತೆಯ ಪಾತಾಳ ತಲುಪಿರುವ ಭಾರತ ಹೀಗೇನಾದರೂ ಅಧಿಕೃತ ಬಾಯ್ ಕಾಟ್ ಮಾಡಿದರೆ ಅದು ಇನ್ನೊಂದು ಬಗೆಯ ಆರ್ಥಿಕ ಆತ್ಮಹತ್ಯೆಯಾಗುತ್ತದೆ.

ಏಪ್ರಿಲ್ 2019ರಿಂದ ಫೆಬ್ರವರಿ 2020ರವರೆಗಿನ ಹನ್ನೊಂದು ತಿಂಗಳ ಲೆಕ್ಕ ಇಟ್ಟುಕೊಂಡು ಈ ಬಗ್ಗೆ ಮಾತನಾಡೋಣ. ಈ ಅವಧಿಯಲ್ಲಿ ಭಾರತ 65.4 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸರಕುಗಳನ್ನು ಚೀನಾದಿಂದ ಆಮದು ಮಾಡಿಕೊಂಡಿತು. ಹೆಚ್ಚುಕಡಿಮೆ ಐದು ಲಕ್ಷ ಕೋಟಿ ರುಪಾಯಿಗಳು! ಇದೇ ಸಮಯದಲ್ಲಿ ಭಾರತ ಇದೇ ಅವಧಿಯಲ್ಲಿ ಚೀನಾಗೆ ಮಾಡಿದ ರಫ್ತು ಪ್ರಮಾಣದ ಮೌಲ್ಯ 15.5 ಬಿಲಿಯನ್ ಡಾಲರ್. ಎರಡರ ನಡುವಿನ ಅಂತರ (Trade deficit ) 47 ಬಿಲಿಯನ್ ಡಾಲರ್! ಭಾರತ ನಿಜಕ್ಕೂ ಕಳವಳಪಡಬೇಕಾಗಿರುವುದು ಈ ಸಂಖ್ಯೆಗೆ. ಭಾರತದ ಒಟ್ಟು ಆಮದು ಬೇಡಿಕೆಯ ಶೇ.14ರಷ್ಟು ಚೀನಾದಿಂದಲೇ ಬರುತ್ತಿರುವಾಗ ನೀವು ಸಂಪೂರ್ಣ ಬ್ಯಾನ್ ಹೇಗೆ ಮಾಡಲು ಸಾಧ್ಯ?

ಚೀನಾ ಜತೆಗಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳು ಅಂತಾರಾಷ್ಟ್ರೀಯ ಒಪ್ಪಂದಗಳು, ನಿಯಮಾವಳಿಗೆ ಬದ್ಧವಾಗಿರುತ್ತವೆ ಎಂಬುದು ಸರ್ಕಾರವನ್ನು ನಡೆಸುವವರಿಗೆ ಗೊತ್ತಿರುವುದಿಲ್ಲವೇ? ಆದರೆ ಜನರ ಭಾವನೆಗಳನ್ನು ತಣ್ಣಗೆ ಮಾಡುವುದೂ ಮುಖ್ಯವಲ್ಲವೇ? ಹೀಗಾಗಿ ಸರ್ಕಾರ ತನ್ನ ಮಾತು ಕೇಳುವ ಮೀಡಿಯಾಗಳಿಂದ ಜನರಿಗೆ ಏನನ್ನು ಹೇಳಿಸಬೇಕೋ ಅಷ್ಟನ್ನು ಹೇಳಿಸುತ್ತದೆ, ಏನನ್ನು ಹೇಳಿಸಿದರೆ ತಮಗೆ ಸಮಸ್ಯೆಯೋ ಅಂಥವನ್ನು ಹೇಳಿಸುವುದಿಲ್ಲ.

ಚೀನಾಗೆ ರಾಜಮಾರ್ಗ ಹಾಕಿಕೊಟ್ಟವರಾರು?

ಚೀನಾ ಇಷ್ಟು ದೊಡ್ಡ ಮಟ್ಟದಲ್ಲಿ ಭಾರತದಲ್ಲಿ ವ್ಯವಹಾರ ಮಾಡಲು ಏನು ಕಾರಣ? 2013ರಲ್ಲಿ ಚೀನಾ ಜತೆಗಿನ ಭಾರತದ Trade deficit 31.4 ಬಿಲಿಯನ್ ಡಾಲರ್ ಆಗಿತ್ತು. ಈಗ ಅದು 47 ಬಿಲಿಯನ್ ಡಾಲರ್ ಆಗಿದೆ. 2016-17ನೇ ಸಾಲಿನಲ್ಲಿ ಇದು 51.1 ಬಿಲಿಯನ್ ಡಾಲರ್ ಮತ್ತು 2017-18ರಲ್ಲಿ 62.9 ಬಿಲಿಯನ್ ಡಾಲರ್ ಆಗಿತ್ತು. ಈಗ `ಆತ್ಮನಿರ್ಬರ್’ ಆಗೋಣ ಎಂದವರು ಆರು ವರ್ಷಗಳಿಂದ ಮಾಡಿದ್ದೇನು? ಯಾಕೆ ಈ ಪ್ರಮಾಣ ಕಡಿಮೆಯಾಗುವಂತೆ ಮಾಡಲಿಲ್ಲ? ಚೀನಾ ಭಾರತೀಯ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿದ್ದು ನಿನ್ನೆ ಮೊನ್ನೆಯಲ್ಲ. 2011ರಲ್ಲಿ ಅದು 74 ಬಿಲಿಯನ್ ಡಾಲರ್ ನಷ್ಟು ವ್ಯವಹಾರ ಮಾಡುವ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಇತರ ದೇಶಗಳನ್ನು ಮೀರಿ ನಿಂತಿತು. 2012ರಲ್ಲಿ ಆರ್ಥಿಕ ಹಿಂಜರಿತದಿಂದಾಗಿ ಸ್ವಲ್ಪ ಮಟ್ಟಿನೆ ಹಿನ್ನೆಡೆ ಕಂಡಿದ್ದು ಬಿಟ್ಟರೆ, ಇವತ್ತಿನವರೆಗೆ ಚೀನಾ ಭಾರತ ಮಾರುಕಟ್ಟೆಯನ್ನು ಡಾಮಿನೇಟ್ ಮಾಡುತ್ತಲೇ ಬಂದಿದೆ. ಚೀನಾ ಜತೆಗಿನ ರಫ್ತು-ಆಮದಿನಲ್ಲಿರುವ ಭಾರೀ ಅಂತರ ಭಾರತದ ಪಾಲಿಗೆ ಅಪಾಯಕಾರಿ ಎಂದು ಆರ್ಥಿಕತಜ್ಞರು ಹೇಳುತ್ತಲೇ ಬಂದಿದ್ದಾರೆ. ಹೇಳಿಕೇಳಿ ಭಾರತ-ಚೀನಾ ನೆರೆಹೊರೆಯ ದೇಶಗಳು. ಭಾರತ ಮತ್ತು ಚೀನಾಗಳು 3488 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿವೆ. 1962ರಲ್ಲಿ ಯುದ್ಧವೊಂದನ್ನೂ ಮಾಡಿಕೊಂಡಿವೆ. ಇಂಥ ಸಂದರ್ಭದಲ್ಲಿ ಭಾರತವು ಚೀನಾವನ್ನು ಹೆಚ್ಚು ಅವಲಂಬಿಸಬಾರದು ಎಂಬುದು ಸಹಜ ಲೆಕ್ಕಾಚಾರವಲ್ಲವೇ? ಆದರೆ ಆರು ವರ್ಷಗಳಲ್ಲಿ ಮೋದಿ ಸರ್ಕಾರ ಮಾಡಿದ್ದೇನು? ಈ ಪ್ರಶ್ನೆಯನ್ನು ಯಾರೂ ಕೇಳಬಾರದೇ?

ಚೀನಾದ ಎರಡನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶ. ಅದರ ಜಿಡಿಪಿ 13.6 ಟ್ರಿಲಿಯನ್ ಡಾಲರ್. ಇದೇ ಸಂದರ್ಭದಲ್ಲಿ ಭಾರತದ ಜಿಡಿಪಿ 2.7 ಟ್ರಿಲಿಯನ್ ಡಾಲರ್. ಹೆಚ್ಚುಕಡಿಮೆ ಚೀನಾ ನಮಗಿಂತ ಐದು ಪಟ್ಟು ಮುಂದಿದೆ. ಪ್ರಧಾನಿ ನರೇಂದ್ರ ಮೋದಿಯವರು ಐದು ಟ್ರಿಲಿಯನ್ ಎಕಾನಮಿಯ ಕನಸು ಕಂಡಿದ್ದಾರೆ. ನಾವು ಐದು ಟ್ರಿಲಿಯನ್ ಎಕಾನಮಿಯಾಗುವ ಹೊತ್ತಿಗೆ ಚೀನಾ ಇಪ್ಪತ್ತೈದು ಅಥವಾ ಮೂವತ್ತು ಟ್ರಿಲಿಯನ್ ಎಕಾನಮಿಯನ್ನು ಹೊಂದಿರುತ್ತದೆ. ಅದು ಎಷ್ಟಾದರೂ ಬೆಳೆಯಲಿ, ನಾವು ಯಾವಾಗ ಅವರ ಹಾಗೆ ಬೆಳೆಯೋದು?
ಭಾರತವು ಹೊರರಾಷ್ಟ್ರಗಳಿಗೆ ರಫ್ತು ಮಾಡುವ ಒಟ್ಟು ಪ್ರಮಾಣದ ಶೇ.5 ರಷ್ಟು ಚೀನಾಗೆ ರಫ್ತು ಮಾಡುತ್ತದೆ. ಇದೇ ಸಂದರ್ಭದಲ್ಲಿ ಭಾರತದ ಒಟ್ಟು ಆಮದಿನ ಪ್ರಮಾಣದ ಶೇ.14ರಷ್ಟು ಚೀನಾದಿಂದಲೇ ಬರುತ್ತದೆ. ಇದೇ ಸಮಯದಲ್ಲಿ ಚೀನಾ ಹೊರದೇಶಗಳಿಗೆ ಮಾಡುವ ರಫ್ತು ಪ್ರಮಾಣದ ಶೇ.3ರಷ್ಟನ್ನು ಮಾತ್ರ ಭಾರತಕ್ಕೆ ಕಳುಹಿಸುತ್ತದೆ. ಇದೆಲ್ಲ ಅಂಕಿಅಂಶಗಳು ಏನನ್ನು ಹೇಳುತ್ತವೆ ಗೊತ್ತೆ? ಭಾರತದ ಚೀನಾ ಮೇಲಿನ ಅವಲಂಬನೆ, ಚೀನಾದ ಭಾರತದ ಮೇಲಿನ ಅವಲಂಬನೆಗಿಂತ ಹೆಚ್ಚು. ಭಾರತ ಜತೆಗಿನ ಚೀನಾ ವ್ಯವಹಾರ ಸ್ಥಗಿತಗೊಂಡರೆ ಸಮಸ್ಯೆಗೆ ಸಿಲುಕಿಕೊಳ್ಳುವುದು ಸದ್ಯದ ಸ್ಥಿತಿಯಲ್ಲಿ ನಾವೇ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚೀನಾ ಜತೆಗಿನ ವ್ಯಾಪಾರ ವಹಿವಾಟು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತ ಬಂದಿದೆ. ವ್ಯಾಪಾರ ಸಂಬಂಧ ಹೆಚ್ಚಿದರೆ ಅದರಿಂದ ನಮ್ಮ ದೇಶಕ್ಕೆ ಅನುಕೂಲವೇ. ಆದರೆ ಮೋದಿ ಸರ್ಕಾರದ ಅವಧಿಯಲ್ಲಿ Trade deficit ಕೂಡ ಏರುತ್ತಲೇ ಬಂದಿದೆ. ಈ ಅಸಮತೋಲನವನ್ನು ನೋಡಿಕೊಂಡು ಮೋದಿ ಯಾಕೆ ಸುಮ್ಮನಿದ್ದರು?

ಭಾರತದಲ್ಲಿನ ಚೀನಾ ಕಂಪೆನಿಗಳು

ಚೀನಾ ದೊಡ್ಡ ಮಟ್ಟದಲ್ಲಿ ಭಾರತಕ್ಕೆ ರಫ್ತು ಮಾಡುತ್ತಿದೆ ಎಂಬುದು ಒಂದಾದರೆ, ಭಾರತದ ಒಳಗೆ ಹಲವಾರು ಚೀನಾ ಕಂಪೆನಿಗಳು ಬಂದು ನೆಲೆ ನಿಂತು ವ್ಯಾಪಾರ ವಹಿವಾಟು ನಡೆಸುತ್ತಿವೆ. ಇದರ ಮೌಲ್ಯವೇನು ಕಡಿಮೆಯೇನಲ್ಲ. ಕೃಷಿ, ಇಂಧನ, ಮನೋರಂಜನೆ, ಆರೋಗ್ಯ, ಮೆಟಲ್, ರಿಯಲ್ ಎಸ್ಟೇಟ್, ತಂತ್ರಜ್ಞಾನ, ಪ್ರವಾಸೋದ್ಯಮ, ಸಾರಿಗೆ, ಮೂಲಭೂತ ಸೌಕರ್ಯ ಇತ್ಯಾದಿ ಹತ್ತಾರು ಕ್ಷೇತ್ರಗಳಲ್ಲಿ ಚೀನಾ ಕಂಪೆನಿಗಳು ಕೆಲಸ ಮಾಡುತ್ತಿವೆ. 2014ರಲ್ಲಿ ಮೋದಿ ಸರ್ಕಾರ ಎಫ್‍ಡಿಐ ನೀತಿಯನ್ನು ಸರಳೀಕರಣಗೊಳಿಸಿದ ನಂತರ ಹೆಚ್ಚು ಚೀನೀ ಕಂಪೆನಿಗಳು ಭಾರತದೊಳಗೆ ತಮ್ಮ ಸಂಸ್ಥೆಗಳನ್ನು ಸ್ಥಾಪಿಸಲು ಸಾಧ್ಯವಾಗಿದೆ. ಮೋದಿಯವರ ಮೇಕ್ ಇನ್ ಇಂಡಿಯಾ ಕರೆಯನ್ನು ಯಾರು ಎಷ್ಟು ಗಂಭೀರವಾಗಿ ಸ್ವೀಕರಿಸಿದರೋ ಇಲ್ಲವೋ, ಚೀನಾ ಮಾತ್ರ ಅಕ್ಷರಶಃ ಪಾಲಿಸಿತು. ಅಲ್ಲಿನ ಕಂಪೆನಿಗಳು ಇಂಡಿಯಾದೊಳಗೆ ಬಂದು, ಇಲ್ಲೇ ಉತ್ಪಾದನೆ ಆರಂಭಿಸಿದವು.

2014ಕ್ಕೂ ಮುನ್ನ ವಿದ್ಯುತ್ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಚೀನಾ ಸಂಸ್ಥೆಗಳು ಹೆಚ್ಚು ಕೆಲಸ ಮಾಡಿದ್ದವು. ಆದರೆ ನಂತರ ಅವುಗಳು ಆಟೋಮೊಬೈಲ್ಸ್, ವಿದ್ಯುತ್, ರಿಯಲ್ ಎಸ್ಟೇಟ್ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದವು. ಕರ್ನಾಟಕದಲ್ಲಿ Xingwing, Huwaei ಮತ್ತು CNTC ಸಂಸ್ಥೆಗಳ ಘಟಕಗಳು ಇವೆ. ಇದನ್ನು ಬಿಟ್ಟರೆ ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶ, ದೆಹಲಿಗಳಲ್ಲಿ ಚೀನೀ ಸಂಸ್ಥೆಗಳು ನೆಲೆಯೂರಿವೆ. ಇದೆಲ್ಲ ಅಲ್ಲದೆ, ಚೀನಾದ ಅಲಿಬಾಬಾ, ಟೆನ್ಸೆಂಟ್, ಬೈಟ್ ಡ್ಯಾನ್ಸ್ ಮತ್ತಿತರ ಸಂಸ್ಥೆಗಳು ಭಾರತದ ಸ್ಟಾರ್ಟ್ ಅಪ್ ಗಳ ಮೇಲೆ ಸಾಕಷ್ಟು ಬಂಡವಾಳ ಹೂಡಿವೆ. ಭಾರತದ ಒಟ್ಟು 31 ಯೂನಿಕಾರ್ನ್‍ಗಳಲ್ಲಿ (ಒಂದು ಬಿಲಿಯನ್ ಡಾಲರ್ ಮೌಲ್ಯ ಹೊಂದಿರುವ ಸ್ಟಾರ್ಟ್ ಅಪ್‍ಗಳನ್ನು ಯೂನಿಕಾರ್ನ್ ಎಂದು ಕರೆಯಲಾಗುತ್ತದೆ) ಹದಿನೆಂಟರಲ್ಲಿ ಚೀನಾ ಸಂಸ್ಥೆಗಳು ಬಂಡವಾಳ ಹೂಡಿವೆ.

ತುಂಬ ಮುಖ್ಯವಾಗಿ ಭಾರತ ಇತರ ದೇಶಗಳಿಗೆ ರಫ್ತು ಮಾಡುತ್ತಿರುವ ವಸ್ತುಗಳ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳಿಗೆ ಚೀನಾವನ್ನು ಅವಲಂಬಿಸಿದೆ. ಜೆನಿರಿಕ್ ಔಷಧಿ ತಯಾರಿಕೆ ಮತ್ತು ರಫ್ತಿನಲ್ಲಿ ಜಗತ್ತಿನ ನಂ.1 ದೇಶವಾಗಿರುವ ಭಾರತ ಈ ಔಷಧಿ ತಯಾರಿಕೆಗೆ ಬೇಕಾದ ಶೇ. 70ರಷ್ಟು ಮೂಲಧಾತುಗಳನ್ನು ಚೀನಾದಿಂದಲೇ ತರಿಸಿಕೊಳ್ಳುತ್ತದೆ. ಭಾರತ ಸೋಲಾರ್ ಕ್ಷೇತ್ರದಲ್ಲಿ ದೊಡ್ಡ ಯೋಜನೆಗಳನ್ನು ಹಮ್ಮಿಕೊಂಡಿದೆ. ಅದಕ್ಕೆ ಬೇಕಾದ ಉಪಕರಣಗಳಲ್ಲಿ ಶೇ.90ರಷ್ಟನ್ನು ಚೀನಾ ಪೂರೈಸುತ್ತಿದೆ.

ಚೀನಾ ಸಂಸ್ಥೆಗಳು ಈಗಾಗಲೇ ಭಾರತದ ಹಲವು ಕಂಪೆನಿಗಳ ಜತೆ ವ್ಯಾವಹಾರಿಕ ಒಪ್ಪಂದಗಳನ್ನು ಮಾಡಿಕೊಂಡಿವೆ, ಕೆಲವು ಭಾರತಕ್ಕೆ ಸಂಬಂಧಿಸಿದ್ದು, ಮತ್ತೆ ಕೆಲವು ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದ್ದು. ಇದ್ಯಾವುದನ್ನೂ ಮುರಿದುಕೊಳ್ಳಲು ಸಾಧ್ಯವಿಲ್ಲ. ಕೊನೆಯದಾಗಿ, ಭಾರತೀಯ ಸಂಸ್ಥೆಗಳು ಚೀನಾದಿಂದ ಪಡೆದಿರುವ ಸಾವಿರಾರು ಕೋಟಿ ರುಪಾಯಿಗಳ ಸಾಲ? ಅದನ್ನು ಯಾರು ತೀರಿಸುತ್ತಾರೆ? ಬಾಯ್ ಕಾಟ್ ಚೀನಾ ಎಂಬುದು ಎಷ್ಟು ದೊಡ್ಡ ಪ್ರಹಸನ ಎಂಬುದು ವಿಷಯದ ಆಳಕ್ಕೆ ಇಳಿದರೆ ಅರ್ಥವಾಗುತ್ತದೆ. ಚೀನಾ ನೇರವಾಗಿ ನಮ್ಮ ಮನೆಯೊಳಗೆ ಪ್ರವೇಶಿಸಿ ಎಷ್ಟೋ ಕಾಲವಾಗಿದೆ. ಆಳುವ ಜನರಿಗೂ ಈ ವಾಸ್ತವ ಗೊತ್ತಿದೆ. ಆದರೆ ಜನರ ಭಾವನೆಗಳನ್ನು ಕೆರಳಿಸಿ ರಾಜಕಾರಣ ಮಾಡುವುದು ಅವರ ಹಳೆಯ ಖಯಾಲಿ.

ಸದ್ಯಕ್ಕೆ ರಾಜಕಾರಣಿಗಳಿಗೆ ಮತಖರೀದಿಗಾಗಿ ದೇಶಭಕ್ತಿಯೇ ಹೆಚ್ಚು ಬಳಕೆಯಾಗುತ್ತದೆಯಲ್ಲವೇ? ಸದ್ಯದ ಕಾಲಘಟ್ಟದ ಕ್ರೂರ ವ್ಯಂಗ್ಯವೆಂದರೆ ದೇಶಭಕ್ತಿಯ ಹೆಸರಲ್ಲಿ ದೇಶವನ್ನೇ ಮಾರಿ ಬಿಡಬಹುದು. ಚಪ್ಪಾಳೆ ಹೊಡೆಯಲು, ತಟ್ಟೆ ಬಡಿಯಲು, ಕ್ಯಾಂಡಲ್ ಹಚ್ಚಲು ನಾವಿದ್ದೇವಲ್ಲವೇ?


ಇದನ್ನು ಓದಿ: ಚೀನಾದ ಒನ್ ಬೆಲ್ಟ್ ಮತ್ತು ಒನ್ ರೋಡ್ ಯೋಜನೆ ವಿವಾದಕ್ಕೆ ಕೇಂದ್ರವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...