Homeಮುಖಪುಟಚೀನಾದ ಒನ್ ಬೆಲ್ಟ್ ಮತ್ತು ಒನ್ ರೋಡ್ ಯೋಜನೆ ವಿವಾದಕ್ಕೆ ಕೇಂದ್ರವೇ?

ಚೀನಾದ ಒನ್ ಬೆಲ್ಟ್ ಮತ್ತು ಒನ್ ರೋಡ್ ಯೋಜನೆ ವಿವಾದಕ್ಕೆ ಕೇಂದ್ರವೇ?

ಶೋಷಣೆ ಮತ್ತು ವಸಾಹತುಶಾಹಿಯ ವಿರುದ್ಧ ಜನರ ಸತತ ಹೋರಾಟದ ಫಲವಾಗಿ 40ರ ದಶಕದ ಅಂತ್ಯದಲ್ಲಿ ಚೀನಾ ದೇಶವು ಮಾವೊ ಜೆಡಾಂಗ್ ನೇತೃತ್ವದಲ್ಲಿ ಸಾಮಾಜಿಕ ಕ್ರಾಂತಿಯನ್ನು ಕಂಡಿತು ಹಾಗೂ ಚೀನಾ ದೇಶವು ತನ್ನನ್ನು ತಾನು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಎಂದು ಘೋಷಿಸಿಕೊಂಡಿತು. ಮಾವೋ ನಿಧನದ ನಂತರ ಚೀನಾ ಕ್ರಮೇಣವಾಗಿ ತನ್ನದೇ ಆದ ಬಂಡವಾಳಶಾಹಿ ಮಾದರಿಯೊಂದಿಗೆ ಹಂತಹಂತವಾಗಿ ಉತ್ಪಾದನೆಯನ್ನು ಪ್ರಾರಂಭಿಸಿತು

- Advertisement -
- Advertisement -

2016 ರ ಮೇ 1 ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳ ಮುಂಚೆ ಒಂದು ರ್ಯಾಲಿಯಲ್ಲಿ ಡೊನಾಲ್ಡ್ ಟ್ರಂಪ್ ಹೀಗೆ ಹೇಳುತ್ತಾರೆ, “ಚೀನಾ ದೇಶವು ಅಮೇರಿಕದ ಮೇಲೆ ಬಲಾತ್ಕಾರ ಮಾಡುತ್ತಿದೆ ಹಾಗೂ ವ್ಯಾಪಾರದಲ್ಲಿ ಅಮೆರಿಕವನ್ನು ಹತ್ಯೆ ಮಾಡುತ್ತಿದೆ”. ಮುಂದಿನ ವರ್ಷಗಳಲ್ಲಿ ಅವರ ಧೋರಣೆ ಒಂದಿಷ್ಟು ಮೃದುವಾಗಿದ್ದು ಕಂಡುಬಂದಿದ್ದರೂ, ಜನವರಿ 2018 ರಲ್ಲಿ ಚೀನಾ ವಿರುದ್ಧ ಹಿಂದೆ ಎಂದು ಕಾಣದ ವಾಣಿಜ್ಯ ಸಮರವನ್ನು ಡೊನಾಲ್ಡ್ ಟ್ರಂಪ್ ಶುರು ಮಾಡಿದರು.

“ನಾವು ಸುಳ್ಳು ಹೇಳಿದೆವು, ನಾವು ಮೋಸ ಮಾಡಿದೆವು ಹಾಗೂ ನಾವು ಲೂಟಿ ಮಾಡಿದೆವು.” ಎಂದು ಮಾಜಿ ಸಿಐಎ ನಿರ್ದೇಶಕ ಹಾಗೂ ಹಾಲಿ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪೆಯೊ ಒಂದು ಸಲ ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಈ ಹೇಳಿಕೆಯೂ ಟ್ರಂಪ್ ಹೇಳಿದ್ದನ್ನೇ ಪ್ರತಿಪಾದಿಸಿತು. ಅವರು ನಿರ್ದಿಷ್ಟವಾಗಿ ಹೇಳಿದ್ದು: “ಚೀನಾದ ಅಭಿವೃದ್ಧಿಯು ನಮ್ಮ ವ್ಯಾಪಾರಕ್ಕೆ ಮತ್ತು ನಮ್ಮ ಆರ್ಥಿಕತೆಗೆ ದೊಡ್ಡ ಅಪಾಯ”. ಇಂದಿನ ಚೀನಾ ಮುಂಚೆಯ ಚೀನಾ ಅಲ್ಲ ಎಂದು ಅವರು ಸೂಚಿಸಿದರು. ಆರ್ಥಿಕ ಯಶಸ್ಸು ಚೀನಾವನ್ನು ಜಾಗತಿಕ ಆರ್ಥಿಕ ಮಾದರಿಯನ್ನಾಗಿಸಿ, ಮುಂದೆ ಆರ್ಥಿಕ ಸೂಪರ್ ಪವರ್ ಆಗಿ ಸ್ಥಾಪಿಸುತ್ತಿದೆ. ಚೀನಾದ ಅರ್ಥಿಕತೆ ಇಷ್ಟು ಬಲಶಾಲಿಯಾಗಲು ಕಾರಣಗಳೇನು? ‘ಒನ್ ಬೆಲ್ಟ್ ಒನ್ ರೋಡ್ ಅಥವಾ ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್ ಎಂದರೇನು ಹಾಗೂ 21ನೇ ಶತಮಾನದ ಈ ಸಿಲ್ಕ್ ರೋಡ್ ಆತಂಕಕ್ಕೆ ಏಕೆ ಎಡೆ ಮಾಡಿಕೊಟ್ಟಿದೆ?

ರೇಷ್ಮೆ ರಸ್ತೆ ಅಥವಾ ಸಿಲ್ಕ್ ರೂಟ್ ಅಥವಾ ಸ್ಪೈಸ್ ರೂಟ್

21ನೇ ಶತಮಾನದ ಸಿಲ್ಕ್ ರೂಟ್ ಅನ್ನು ಅಭಿವೃದ್ಧಿಪಡಿಸುವ ಚೀನಾದ ಯೋಜನೆಯನ್ನು ಅರ್ಥಮಾಡಿಕೊಳ್ಳಲು ಸಿಲ್ಕ್ ರೋಡ್‍ನ ಇತಿಹಾಸವನ್ನು ತಿಳಿದುಕೊಳ್ಳಬೇಕಿದೆ. (ಭಾರತದಲ್ಲಿ ಅದನ್ನು ಸ್ಪೈಸ್ ರಸ್ತೆ ಎಂತಲೂ ಕರೆಯಲಾಗುತ್ತಿತ್ತು).

ವ್ಯಾಪಾರದೊಂದಿಗೆ ಜನರ ನಂಬಿಕೆಗಳು ಮತ್ತು ಪರಿಕಲ್ಪನೆಗಳು ಚಲಿಸಿದ ಈ ಹಳೆಯ ಸಿಲ್ಕ್ ರೂಟ್ ಎಂಬುದು ಪೂರ್ವ ಏಷ್ಯ-ಆಗ್ನೇಯ ಏಷ್ಯ- ಪಶ್ಚಿಮ ಏಷ್ಯದಿಂದ ದಕ್ಷಿಣ ಯುರೋಪಿಗೆ ತಲುಪುತಿತ್ತು. ಇದು ಸುಮಾರು ಕ್ರಿಸ್ತಪೂರ್ವ 130 ರಿಂದ ಹದಿನೈದನೇ ಶತಮಾನದ ತನಕ ಚಾಲ್ತಿಯಲ್ಲಿತ್ತು. ಈ ಸಿಲ್ಕ್ ರೂಟನಿಂದಾಗಿ ಅನೇಕ ನಗರಗಳು ರೂಪುಗೊಂಡು ಇಂದಿನವರೆಗೆ ಉಳಿದಿವೆ. ಉದಾಹರಣೆಗೆ, ಇಸ್ತಾಂಬುಲ್ (ಕಾನ್ಸ್ಟಂಟಿನೋಪಲ್), ಡಮಾಸ್ಕಸ್, ಇಸ್‍ಫಹಾನ್, ಸಮರ್‍ಖಂಡ್, ಕಾಬುಲ್ ಮತ್ತು ಕಾಶಗರ್. ಈ ಸಿಲ್ಕ್ ರೂಟ್‍ನ ಮೂಲಕವೇ ಬೌದ್ಧ ಧರ್ಮ, ಕ್ರೈಸ್ತ ಧರ್ಮ ಹಾಗೂ ಇಸ್ಲಾಮ್ ಧರ್ಮಗಳು ಜಗತ್ತಿನ ವಿವಿಧ ಕಡೆಗೆ ಬೇರೆಬೇರೆ ಸಮಯದಲ್ಲಿ ಹರಡಿದವು.

ಮಾರ್ಕೊ ಪೊಲೊ ಎಂಬ 13ನೇ ಶತಮಾನದ ಪ್ರಯಾಣಿಕ, ಈ ಸಿಲ್ಕ್ ರೂಟ್ ಮೂಲಕ ಚೀನಾ ತಲುಪಿದ. ಆಗ ಯುಆನ್ ರಾಜವಂಶ ಆಳ್ವಿಕೆ ನಡೆಸುತ್ತಿತ್ತು. ತನ್ನ ಪ್ರವಾಸಕಥನಗಳಲ್ಲಿ ಚೀನಾದ ಬಹುಸಾಂಸ್ಕೃತಿಕ ಸಾಮ್ರಾಜ್ಯ, ಸಂಪತ್ತು ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಬರೆದು, ಆ ಕಾಲವನ್ನು ಅಮರಗೊಳಿಸಿದ. ಆ ಪ್ರವಾಸಕಥನಗಳು ಯುರೋಪಿಯನ್ನರಲ್ಲಿ ಪೂರ್ವ ಪ್ರದೇಶದ ಬಗ್ಗೆ ಕುತೂಹಲ ಕೆರಳಿಸಿ, ಮುಂದೆ ಅನೇಕರು ಚೀನಾ ಭಾಗವನ್ನು ಅಭ್ಯಸಿಸಲು ಪ್ರೇರೇಪಿಸಿತು.

15ನೇ ಶತಮಾನದ ಕೊನೆಯಲ್ಲಿ ಸಿಲ್ಕ್ ರೋಡ್‍ನ ಪತನ ಆರಂಭವಾಯಿತು. ಆ ಕಾಲದಲ್ಲೇ ಕ್ರಿಸ್ಟೋಫರ್ ಕೊಲಂಬಸ್ ಅಮೆರಿಕ ತಲುಪಿದ ಹಾಗೂ ವಾಸ್ಕೋ ಡಿ ಗಾಮ ಆಫ್ರಿಕದ ತುದಿಯನ್ನು ಮುಟ್ಟಿ ಭಾರತವನ್ನು ತಲುಪಿದ. ತದನಂತರ ಯುರೋಪಿಯನ್ನರು ತಮ್ಮ ಮಿಲಿಟರಿ ಶಕ್ತಿಯ ಸಹಾಯದಿಂದ ವ್ಯಾಪಾರ, ಆರ್ಥಿಕತೆ ಮತ್ತು ನೌಕಾಯಾನವನ್ನು ಬಲಪಡಿಸಿ, ಜಗತ್ತಿನ ಬಹುಭಾಗವನ್ನು ತಮ್ಮ ವಸಾಹತನ್ನಾಗಿ ಮಾರ್ಪಡಿಸಿದರು. ಅಭಿವೃದ್ಧಿಯ ಹೆಸರಿನಲ್ಲಿ ಇಂದಿಗೂ ಅನೇಕ ದೇಶಗಳು ಬಡದೇಶಗಳಾಗಿ ಉಳಿಯುವಂತೆ ಮಾಡಲು ಆಗಿನ ವಸಾಹತುಶಾಹಿ ವ್ಯವಸ್ಥೆ ಕಾರಣ ಎಂದು ಹೇಳಬಹುದಾಗಿದೆ.

ಶೋಷಣೆ ಮತ್ತು ವಸಾಹತುಶಾಹಿಯ ವಿರುದ್ಧ ಜನರ ಸತತ ಹೋರಾಟದ ಫಲವಾಗಿ 40ರ ದಶಕದ ಅಂತ್ಯದಲ್ಲಿ ಚೀನಾ ದೇಶವು ಮಾವೊ ಜೆಡಾಂಗ್ ನೇತೃತ್ವದಲ್ಲಿ ಸಾಮಾಜಿಕ ಕ್ರಾಂತಿಯನ್ನು ಕಂಡಿತು ಹಾಗೂ ಚೀನಾ ದೇಶವು ತನ್ನನ್ನು ತಾನು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಎಂದು ಘೊಷಿಸಿಕೊಂಡಿತು. ಮಾವೋ ನಿಧನದ ನಂತರ ಚೀನಾ ಕ್ರಮೇಣವಾಗಿ ತನ್ನದೇ ಆದ ಬಂಡವಾಳಶಾಹಿ ಮಾದರಿಯೊಂದಿಗೆ ಹಂತಹಂತವಾಗಿ ಉತ್ಪಾದನೆಯನ್ನು ಪ್ರಾರಂಭಿಸಿತು. ಅದರಲ್ಲಿ ಅದು ಅಭೂತಪೂರ್ವ ಯಶಸ್ಸನ್ನು ಕಂಡು, ಜಾಗತಿಕ ಮಟ್ಟದ ಶಕ್ತಿಗಳೊಂದಿಗೆ ಸೆಣೆಸುವ ಆರ್ಥಿಕಶಕ್ತಿಯಾಗಿ ಹೊರಹೊಮ್ಮಿತು.

ಆ ದೇಶದ ಅಭಿವೃದ್ಧಿಯನ್ನು ಅಳೆಯಬೇಕೆಂದರೆ, ಆ ದೇಶದ ಹೈಸ್ಪೀಡ್ ರೈಲ್ವೆ ಜಾಲಗಳನ್ನು ನೋಡಬೇಕು. 2008 ರಲ್ಲಿ ಒಂದೇ ಒಂದು ಹೈ ಸ್ಪೀಡ್ ರೈಲ್ವೆ ಜಾಲವನ್ನು ಹೊಂದಿರಲಿಲ್ಲ ಚೀನಾ. ಆದರೆ 2018ರ ಹೊತ್ತಿಗೆ ವಿಶ್ವದ ಒಟ್ಟಾರೆ 66% ಹೈ ಸ್ಪೀಡ್ ರೈಲ್ವೆ ಜಾಲ ಚೀನಾದಲ್ಲಿತ್ತು; 30,000 ಕಿಲೋಮೀಟರ್‍ಗಳಿಗಿಂತ ಹೆಚ್ಚಿನ ಹೈ ಸ್ಪೀಡ್ ರೈಲ್ವೆ ಜಾಲವನ್ನು ಹತ್ತು ವರ್ಷಗಳಲ್ಲಿ ಅಭಿವೃದ್ಧಿಪಡಿಸಿತ್ತು. ಬೃಹತ್ ಆಣೆಕಟ್ಟುಗಳು, ಹೈ ಸ್ಪೀಡ್ ರೈಲ್ವೆ ಜಾಲಗಳು, ವಿದ್ಯುತ್ ಯೋಜನೆಗಳು, ಬಂದರುಗಳನ್ನು ನಿರ್ಮಿಸುವುದು ಹೀಗೆ ಚೀನಾ, ಅಮೆರಿಕ 60 ವರ್ಷಗಳನ್ನು ಮಾಡಿದ್ದನ್ನು ಕೆಲವೇ ವರ್ಷಗಳಲ್ಲಿ ಮಾಡಿ ತೋರಿಸಿದೆ. ಹಾಗಾಗಿ ಜಾಗತಿಕ ಆರ್ಥಿಕ ಸೂಚ್ಯಾಂಕದಲ್ಲಿ ಚೀನಾ ಎರಡನೇ ಸ್ಥಾನದಲ್ಲಿದ್ದು, 2030ರ ಹೊತ್ತಿಗೆ ಅಮೆರಿಕವನ್ನು ಮೀರಿಸುವ ಸಾಧ್ಯತೆ ಹೊಂದಿದೆ.

ಇಂತಹ ಅನೇಕ ಅಭಿವೃದ್ಧಿಯ ಯೋಜನೆಗಳ ನಂತರ, ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ನೇತೃತ್ವದಲ್ಲಿ ಸೆಪ್ಟೆಂಬರ್ 2013 ರಲ್ಲಿ 900 ಶತಕೋಟಿ (ಬಿಲಿಯನ್) ಡಾಲರ್ ವೆಚ್ಚದ ಬೃಹತ್ ಮತ್ತು ಮಹತ್ವಾಕಾಂಕ್ಷಿ ಯೋಜನೆಯಾದ ‘ಒನ್ ಬೆಲ್ಟ್ ಒನ್ ರೋಡ್’ ಅನ್ನು ಘೋಷಿಸಿತು.

ಒಂದು ಪಟ್ಟಿ ಒಂದು ರಸ್ತೆ ಯೋಜನೆ (ಒನ್ ಬೆಲ್ಟ್ ಒನ್ ರೋಡ್ ಯೋಜನೆ)

ಈ ಯೋಜನೆಯನ್ನು ಶತಮಾನದಲ್ಲಿ ಒಂದು ಬಾರಿ ಆಗಬಹುದಾದ ಭೌಗೋಳಿಕ-ರಾಜಕೀಯ ಯೋಜನೆ ಎಂದು ಕರೆಯಲಾಗುತ್ತಿದೆ. ಈ ಪಟ್ಟಿಯು 6 ಭೂಭಾಗದಲ್ಲಿಯ ವ್ಯಾಪಾರದ ಮಾರ್ಗಗಳನ್ನು ಮತ್ತು 3 ಕಡಲ ವ್ಯಾಪಾರ ಮಾರ್ಗಗಳನ್ನು ಪ್ರತಿನಿಧಿಸುತ್ತದೆ. ಮಧ್ಯ ಏಷ್ಯ ಮತ್ತು ಮಾಸ್ಕೋ ಮಾರ್ಗವಾಗಿ ಬೀಜಿಂಗ್‍ನಿಂದ ರೊಟರ್‍ಡ್ಯಾಮ್, ಮಧ್ಯ ಏಷ್ಯದಿಂದಲೇ ಬೀಜಿಂಗ್‍ನಿಂದ ಹೆಲ್ಸಿಂಕಿ, ತೆಹ್ರಾನ್ ಮತ್ತು ಇಸ್ತಾಂಬುಲ್ ಮಾರ್ಗವಾಗಿ ಶಾಂಘಾಯಿಯಿಂದ ಪ್ಯಾರಿಸ್, ಶಾಂಘಾಯಿಯಿಂದ ಲಿಸ್ಬನ್ ಇತ್ಯಾದಿ, ಇದರ ಆರ್ಥಿಕ ಕಾರಿಡಾರ್ ಪಾಕಿಸ್ತಾನ್ ಹಾದುಹೋಗುತ್ತದೆ ಹಾಗೂ ಇದರ ನೌಕಾಮಾರ್ಗವು ಶಾಂಘಾಯಿಯಿಂದ ಇಟಲಿಯ ವೆನಿಸ್, ಫ್ರಾನ್ಸ್‍ನ ಮಾರ್ಸೇಲ್, ಕೌಲಾ ಲಾಂಪುರ ಮಾರ್ಗವಾಗಿ ಬೀಜಿಂಗ್‍ನಿಂದ ಆಫ್ರಿಕಾದ ನೈರೋಬಿ ಇತ್ಯಾದಿ. ಇದರಿಂದ ಸೃಷ್ಟಿಯಾಗುವುದು ಒಂದು ಹೊಸ ಆರ್ಥಿಕತೆ ಹಾಗೂ ಅದರ ತಾಂತ್ರಿಕ ಮತ್ತು ಹಣಕಾಸು ಕೇಂದ್ರವಾಗಿರುವುದು ಚೀನಾ. ಪ್ರಾರಂಭದಲ್ಲಿ ಈ ಯೋಜನೆಗೆ 60 ದೇಶಗಳು ಸಹಿ ಹಾಕಿವೆ; ಅಂದರೆ ವಿಶ್ವದ 70% ಜನಸಂಖ್ಯೆ ಮತ್ತು ಜಿಡಿಪಿಯ 35%. ಈಗ ಇದಕ್ಕೆ ಒಪ್ಪಿದ ರಾಷ್ಟ್ರಗಳ ಸಂಖ್ಯೆ 130 ಆಗಿದೆ.

ಕಳೆದ 20 ವರ್ಷಗಳಲ್ಲಿ ಕೇವಲ ಆಫ್ರಿಕಾ ಖಂಡದಲ್ಲಿಯೇ ಚೀನಾ 200 ಶತಕೋಟಿ ಡಾಲರ್‍ಗಳ ಹೂಡಿಕೆ ಮಾಡಿದೆ. ಆಫ್ರಿಕಾದ 53 ದೇಶಗಳ ಪೈಕಿ 5 ರಾಷ್ಟ್ರಗಳು ಮಾತ್ರ ಒಬಿಒರ್ (ಒಂದು ಪಟ್ಟಿ ಒಂದು ರಸ್ತೆ) ಗೆ ವಿರೋಧ ವ್ಯಕ್ತಪಡಿಸಿವೆ. ರ್ವಾಂಡಾ, ದಕ್ಷಿಣ ಆಫ್ರಿಕ, ಕೀನ್ಯ, ಮೊರೊಕ್ಕೊ, ಈಜಿಪ್ಟ್ ಹಾಗೂ ಇಥಿಯೋಪಿಯ ದೇಶಗಳಲ್ಲಿ ಚೀನಾ ನಿರ್ಮಿತ ಕೈಗಾರಿಕಾ ವಲಯಗಳು, ರೈಲ್ವೆಜಾಲಗಳು ಹೆಚ್ಚುತ್ತಲೇ ಇವೆ ಹಾಗೂ ಕೇವಲ ವ್ಯಾಪಾರವಲ್ಲದೇ ಚೀನಾದ ಕೈಗಾರಿಕಾ ಹೂಡಿಕೆ ಇನ್ನೂ ಹೆಚ್ಚುವ ಲಕ್ಷಣಗಳಿವೆ.

ಲ್ಯಾಟಿನ್ ಅಮೆರಿಕ ಹಾಗೂ ಕ್ಯಾರಿಬಿಯನ್ ದ್ವೀಪಗಳಲ್ಲಿ 141 ಬಿಲಿಯನ್ ಡಾಲರ್‍ಗಳ ಹೂಡಿಕೆ ಮಾಡಲಾಗಿದೆ, ಅದರಲ್ಲಿ ಪ್ರಮುಖವಾದ ದೇಶಗಳು; ವೆನೆಜುಎಲಾ, ಬ್ರೆಜಿಲ್, ಇಕ್ವೆಡಾರ್ ಮತ್ತು ಅರ್ಜೆಂಟಿನ. ಮಧ್ಯ ಏಷ್ಯದಲ್ಲಿ, ಆಗ್ನೇಯ ಏಷ್ಯದಲ್ಲಿ ನಿರ್ಮಿಸಿದ ಹೈ ಸ್ಪೀಡ್ ರೈಲ್ವೆ ಜಾಲಗಳು.., ಹೀಗೆ ಪಟ್ಟಿ ಉದ್ದವಾಗಿದೆ. ಚೀನಾ ದೇಶವು ಕೇವಲ ಮೂಲಸೌಕರ್ಯ, ಸಾರಿಗೆ ಹಾಗೂ ಕೈಗಾರಿಕಾ ವಲಯಗಳನ್ನು ಸ್ಥಾಪಿಸುವುದಕ್ಕೆ ತನ್ನನ್ನು ಸೀಮಿತಗೊಳಿಸಿಲ್ಲ. ಅದರೊಂದಿಗೆ ಚೀನಾದ ದೂರಸಂಪರ್ಕ ಕಂಪನಿಗಳು ಹಾಗೂ ದೈತ್ಯ ಮೊಬೈಲ್ ಕಂಪನಿಗಳಾದ ಹುವಾಇ ಮತ್ತು ಜೆಡ್‍ಟಿಇ ಮೂಲಕ ‘ಮಾಹಿತಿ ಸಿಲ್ಕ್ ರೋಡ್’ ಮಾಡಿ ಡಿಜಿಟಲ್ ಸಂಪನ್ಮೂಲದ ವಿಸ್ತರಣೆಯನ್ನು ಮಾಡುತ್ತಿದೆ.

ಈ ಒಬಿಒಆರ್ ಯೋಜನೆಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಅದರೊಂದಿಗೆ ಚೀನಾದ ಪ್ರಾಬಲ್ಯದ ಬಗ್ಗೆಯೂ ಪಾಶ್ಚಾತ್ಯ ಮಾಧ್ಯಮಗಳು ಆತಂಕ ವ್ಯಕ್ತಪಡಿಸುತ್ತಲೇ ಇವೆ. ಅಮೆರಿಕಾ ಒಳಗೊಂಡಂತೆ ಪಾಶ್ಚಾತ್ಯ ದೇಶಗಳು ವಿಶ್ವ ಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ನಿಧಿ, ಯುರೋಪಿಯನ್ ಯೂನಿಯನ್, ವಿಶ್ವಸಂಸ್ಥೆ, NATO, WTO ಮುಂತಾದ ಸಂಸ್ಥೆಗಳನ್ನು ಬಳಸಿಕೊಂಡು ಹಾಗೂ ಭಯೋತ್ಪಾದನೆಯ ವಿರುದ್ಧದ ಹೆಸರಿನಲ್ಲಿ ಅನೇಕ ದೇಶಗಳ ಮೇಲೆ ತಮ್ಮ ಹಿಡಿತವನ್ನು ಸಾಧಿಸಿಕೊಂಡಿವೆ. ಇಂತಹ ಸಮಯದಲ್ಲಿ ಚೀನಾ ಒಂದು ಹೊಸ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವುದು, ಒಬಿಒಆರ್ ನಂತಹ ಮಹಾತ್ವಾಕಾಂಕ್ಷಿ ಯೋಜನೆಗಳೊಂದಿಗೆ ಆರ್ಥಿಕ ಏಕಸ್ವಾಮ್ಯ ಪಡೆಯುವ ದಾರಿಯಲ್ಲಿ ಕಾಣಿಸಿಕೊಳ್ಳುತ್ತಿರುವಾಗ ಸ್ವಾಭಾವಿಕವಾಗಿ ಹಳೆಯ ಶಕ್ತಿಗಳು ಆತಂಕಗೊಂಡಿವೆ. ಚೀನಾ ಇನ್ನಷ್ಟು ಶಕ್ತಿಶಾಲಿಯಾದಲ್ಲಿ ಜಗತ್ತಿನಲ್ಲಿ ಒಂದು ಹೊಸ ಆರ್ಥಿಕ ವ್ಯವಸ್ಥೆ ಸೃಷ್ಟಿಯಾಗುವುದರಲ್ಲಿ ಸಂದೇಹವಿಲ್ಲ. ಆದರೆ ಪ್ರಶ್ನೆ ಇರುವುದು ಆ ಹೊಸ ವ್ಯವಸ್ಥೆಯು ಈಗಿರುವ ವ್ಯವಸ್ಥೆಗಿಂತ ಉತ್ತಮವಾಗಿರುತ್ತೋ ಇಲ್ಲವೋ ಎನ್ನುವುದು. ಅಮೆರಿಕ ಮತ್ತು ಐರೋಪ್ಯ ದೇಶಗಳು ಎಷ್ಟೇ ಆದರೂ ಪ್ರಜಾಪ್ರಭುತ್ವ ಗಣರಾಜ್ಯಗಳು, ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಇಂದಿಗೂ ಗಟ್ಟಿಯಾಗಿಯೇ ಉಳಿದುಕೊಂಡಿದೆ. ಚೀನಾದ ಬಗ್ಗೆ ಅದನ್ನು ಹೇಳಲಾಗದು. ಹಾಗಾಗಿ ಆತಂಕಗಳು ನ್ಯಾಯಸಮ್ಮತವಾಗಿಯೂ ಇವೆ. ಮುಂದಿನ ವಾರ ಚೀನಾದ ಪ್ರಾಬಲ್ಯದ ಪರವಿರೋಧದ ಬಗ್ಗೆ ಇರುವ ಪ್ರಶ್ನೆಗಳ ಬಗ್ಗೆ ಚರ್ಚಿಸೋಣ


ಇದನ್ನು ಓದಿ: ದೆಹಲಿಯಿಂದ ಮಂಗಳೂರಿನವರೆಗೆ ಸಿಎಎ-ಎನ್‍ಆರ್‍ಸಿ ವಿರೋಧಿಗಳನ್ನು ಹಣಿಯಲು ಹಿಂಬಾಗಿಲ ಸಂಚು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...