ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿ ಸಂಚು ರೂಪಿಸುವಲ್ಲಿ ಗೃಹ ಸಚಿವ ಅಮಿತ್ ಅವರ ಕೈವಾಡ ಇದೆ ಎಂದು ಕೆನಡಾ ಸರ್ಕಾರ ನೇರವಾಗಿ ಆರೋಪಿಸಿದೆ.
ಕೆನಡಾ ನೆಲದಲ್ಲಿನ ಸಿಖ್ ಪ್ರತ್ಯೇಕತಾವಾದಿಗಳ ವಿರುದ್ದದ ಹಿಂಸಾಚಾರದ ಸಂಚಿನಲ್ಲಿ ಭಾರತದ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿರುವುದನ್ನು ತಾನೇ ಖಚಿತಪಡಿಸಿ ವಾಷಿಂಗ್ಟನ್ ಪೋಸ್ಟ್‌ಗೆ ಹೇಳಿಕೆ ನೀಡಿದ್ದಾಗಿ ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ಹೇಳಿದ್ದಾರೆ.
ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತ ಕೆನಡಾದ ಸಂಸದೀಯ ಸಮಿತಿಯ ವಿಚಾರಣೆ ವೇಳೆ ಡೇವಿಡ್ ಮಾರಿಸನ್ ಹೀಗೆ ಹೇಳಿರುವುದಾಗಿ ವರದಿಯಾಗಿದೆ. ಭಾರತದ ಏಜೆಂಟರು ಕೆನಡಾದಲ್ಲಿ ಹಿಂಸೆಗೆ ಕುಮ್ಮಕ್ಕು ನೀಡುತ್ತಿದ್ಧಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಅಕ್ಟೋಬರ್ 14ರಂದು ಆರೋಪಿಸಿದ್ದರು.
ಭಾರತ ಸರ್ಕಾರದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (RAW) ಅಧಿಕಾರಿಯೊಬ್ಬರು ಮತ್ತು ಹಿರಿಯ ಸಚಿವರು ಕೆನಡಾದಲ್ಲಿ ಗುಪ್ತವಾಗಿ ಮಾಹಿತಿ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಅಲ್ಲಿ ಸಿಖ್ ಪ್ರತ್ಯೇಖತಾವಾದಿಗಳನ್ನು ಗುರಿಯಾಗಿಸುತ್ತಿದ್ದಾರೆ ಎಂಬುವುದಕ್ಕೆ ಕೆನಡಾದ ಭದ್ರತಾ ಏಜೆನ್ಸಿಗಳು ಪುರಾವೆಗಳನ್ನು ಸಂಗ್ರಹಿಸಿವೆ ಎಂದು ವಾಷಿಂಗ್ಟನ್ ಪೋಸ್ಟ್ ವಾರದ ಹಿಂದೆ ಮೊದಲ ವರದಿ ಮಾಡಿತ್ತು.
ಮೊದಲ ವರದಿಯಲ್ಲಿ ವಾಷಿಂಗ್ಟನ್ ಪೋಸ್ಟ್ ಅಮಿತ್ ಶಾ ಹೆಸರನ್ನು ಉಲ್ಲೇಖಿಸಿರಲಿಲ್ಲ. ಭಾರತದ ಹಿರಿಯ ಸಚಿವರು ಮತ್ತು RAWದ ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಮಾತ್ರ ಹೇಳಿತ್ತು. ನಂತರ ಪರಿಷ್ಕರಿಸಿದ ವರದಿಯಲ್ಲಿ ಅಮಿತ್ ಶಾ ಹೆಸರನ್ನು ನೇರವಾಗಿ ಉಲ್ಲೇಖಿಸಿತ್ತು. ಈ ಮಾಹಿತಿಯನ್ನು ವಾಷಿಂಗ್ಟನ್ ಪೋಸ್ಟ್‌ಗೆ ಹೇಳಿದ್ದು ನಾನೇ ಎಂದು ಡೇವಿಡ್ ಮಾರಿಸನ್ ತಿಳಿಸಿದ್ದಾರೆ.
“ಪತ್ರಿಕೆಯವರು ಕರೆ ಮಾಡಿ ಸಿಖ್ ಪ್ರತ್ಯೇಕತಾವಾದಿಗಳ ವಿರುದ್ಧದ ಸಂಚಿನ ಹಿಂದೆ ಇರುವುದು ಅವರೇ (ಅಮಿತ್ ಶಾ)? ಎಂದು ಕೇಳಿದ್ದರು. ಅದಕ್ಕೆ ನಾನು ‘ಹೌದು’ ಎಂದು ಉತ್ತರಿಸಿರುವುದಾಗಿ ಸಂಸದೀಯ ಸಮಿತಿಗೆ ಡೇವಿಡ್ ಮಾರಿಸನ್ ಹೇಳಿದ್ದಾರೆ.
ಭಾರತೀಯ ಗೃಹ ವ್ಯವಹಾರಗಳ ಸಚಿವ ಕೆನಡಾ ನೆಲದಲ್ಲಿನ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಮಾಹಿತಿಯನ್ನು ಕೆನಡಾದಲ್ಲಿ ಬಿಡುಗಡೆ ಮಾಡಲಾಗಿಲ್ಲ. ಆದರೂ, ಅದು ವಾಷಿಂಗ್ಟನ್ ಪೋಸ್ಟ್‌ನಲ್ಲಿ ಮಾತ್ರ ಹೇಗೆ ಬಹಿರಂಗಗೊಂಡಿತು ಎಂದು ಕೇಳಲಾಯಿತು. ಆ ಪ್ರಶ್ನೆಗೆ ಉತ್ತರಿಸಿದ ಮಾರಿಸನ್, ತಾನೇ ಹೇಳಿಕೆ ನೀಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ಭಾರತ ಸರ್ಕಾರದ ಏಜೆಂಟರ ಮೂಲಕ ಕೆನಡಾದಲ್ಲಿ ಚುನಾವಣಾ ಹಸ್ತಕ್ಷೇಪ ಮತ್ತು ಕ್ರಿಮಿನಲ್ ಚಟುವಟಿಕೆಗಳು ನಡೆದಿರುವ ಬಗ್ಗೆಯೂ ಸಮಿತಿ ಸದಸ್ಯರು ಪ್ರಶ್ನೆಗಳನ್ನು ಕೇಳಿದರು. ಸಿಖ್ ಸಮುದಾಯದ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳುವ ಟ್ರುಡೊ ಅವರ ರಾಜಕೀಯ ಅಜೆಂಡಾ ಇದಾಗಿದೆ ಎಂದು ಈಗಾಗಲೇ ಪ್ರತಿಪಾದಿಸಿರುವ ಭಾರತ, ಟ್ರುಡೋ ದೊಡ್ಡ ತಪ್ಪು ಮಾಡುತ್ತಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ : ಗಾಜಾದಲ್ಲಿ ಮುಂದುವರಿದ ಇಸ್ರೇಲ್ ಮಾರಣಹೋಮ; ವಸತಿ ಕಟ್ಟಡದ ಮೇಲೆ ದಾಳಿಗೆ 100 ಕ್ಕೂ ಹೆಚ್ಚು ಮಂದಿ ಬಲಿ, ಸತ್ತವರಲ್ಲಿ ಮಕ್ಕಳೆ ಹೆಚ್ಚು


