Homeಮುಖಪುಟರಾಜ್ಯಪಾಲರು, ರಾಷ್ಟ್ರಪತಿಗೆ ಗಡುವು ವಿಧಿಸಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್ ಅಭಿಪ್ರಾಯಕ್ಕೆ ನ್ಯಾಯವಾದಿಗಳು, ಚಿಂತಕರು ಏನಂದ್ರು?

ರಾಜ್ಯಪಾಲರು, ರಾಷ್ಟ್ರಪತಿಗೆ ಗಡುವು ವಿಧಿಸಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್ ಅಭಿಪ್ರಾಯಕ್ಕೆ ನ್ಯಾಯವಾದಿಗಳು, ಚಿಂತಕರು ಏನಂದ್ರು?

- Advertisement -
- Advertisement -

ವಿಧಾನಸಭೆ ಅಂಗೀಕರಿಸಿದ ಮಸೂದೆಗೆ ನಿಗದಿತ ಸಮಯದೊಳಗೆ ಸಹಿ ಹಾಕುವಂತೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗೆ ಗಡುವು ವಿಧಿಸಲು ಸಾಧ್ಯವಿಲ್ಲ ಎಂದು 2025ರ ನವೆಂಬರ್ 20ರಂದು ಐವರು ಸದಸ್ಯರ ಸುಪ್ರೀಂ ಕೋರ್ಟ್‌ನ ಸಾವಿಂಧಾನಿಕ ಪೀಠ ಹೇಳಿದೆ.

ಸಂವಿಧಾನದ 143ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2025ರ ಮೇ ತಿಂಗಳಲ್ಲಿ ಮಾಡಿದ್ದ ಉಲ್ಲೇಖಕ್ಕೆ ಉತ್ತರಿಸಿರುವ ಸುಪ್ರೀಂ ಕೋರ್ಟ್, “ಸಂವಿಧಾನದ 200/201ನೇ ವಿಧಿಗಳ ಅಡಿಯಲ್ಲಿ ಮಸೂದೆಗಳಿಗೆ ಒಪ್ಪಿಗೆ ನೀಡುವ ಕುರಿತು ರಾಷ್ಟ್ರಪತಿ ಮತ್ತು ರಾಜ್ಯಪಾಲರ ನಿರ್ಧಾರಗಳಿಗೆ ನ್ಯಾಯಾಲಯವು ಯಾವುದೇ ಸಮಯ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ.

ರಾಷ್ಟ್ರಪತಿ ಮತ್ತು ರಾಜ್ಯಪಾಲರು ಕಾಲಮಿತಿಯನ್ನು ಉಲ್ಲಂಘಿಸಿದರೆ, ನ್ಯಾಯಾಲಯಗಳು ಮಸೂದೆಗಳಿಗೆ ‘ಪರಿಗಣಿತ ಒಪ್ಪಿಗೆ’ (ತಾನಾಗಿಯೇ ಒಪ್ಪಿಗೆ) ಎಂದು ಘೋಷಿಸುವ ಪರಿಕಲ್ಪನೆಯು ಸಂವಿಧಾನದ ಆಶಯ ಮತ್ತು ಅಧಿಕಾರಗಳ ಪ್ರತ್ಯೇಕತೆಯ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಇದು ವಾಸ್ತವಿಕವಾಗಿ ರಾಜ್ಯಪಾಲರಿಗೆ ಮೀಸಲಾಗಿರುವ ಕಾರ್ಯಗಳನ್ನು ಆಕ್ರಮಿಸಿಕೊಳ್ಳುವುದಾಗಿ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ವಿಧಾನಸಭೆಯಲ್ಲಿ ಅಂಗೀಕೃತಗೊಂಡ ಮಸೂದೆಗೆ ಅಂಕಿತ ಹಾಕಲು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ನ್ಯಾಯಾಂಗ ಗಡುವೊಂದನ್ನು ವಿಧಿಸುವುದು, ಆ ಗಡುವು ಮೀರಿದ ನಂತರ ‘ಅನುಮೋದನೆ ತಾನಾಗಿಯೇ ಸಿಕ್ಕಿತು’ (deemed consent) ಎಂದು ಪರಿಗಣಿಸುವಂತೆ ಆದೇಶಿಸುವುದು ಸಂವಿಧಾನಾತ್ಮಕವಾಗಿ ತಪ್ಪು ಮತ್ತು ಅಸಾಧ್ಯ. ಏಕೆಂದರೆ, ಇಂತಹ ಆದೇಶದಿಂದ ನ್ಯಾಯಾಂಗವು ಕಾರ್ಯಾಂಗದ ಮೂಲಭೂತ ಅಧಿಕಾರವನ್ನೇ ಆಕ್ರಮಿಸಿಕೊಂಡಂತಾಗುತ್ತದೆ ಮತ್ತು ರಾಜ್ಯಪಾಲರು ಅಥವಾ ರಾಷ್ಟ್ರಪತಿಯ ಸ್ಥಾನವನ್ನು ಬದಲಾಯಿಸಿದಂತಾಗುತ್ತದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಂವಿಧಾನದ 200 ಮತ್ತು 201ನೇ ವಿಧಿಗಳು ಈ ಅಧಿಕಾರವನ್ನು (ಮಸೂದೆಗೆ ಅನುಮೋದನೆ ನೀಡುವ) ಕೇವಲ ಕಾರ್ಯಾಂಗಕ್ಕೆ ಮಾತ್ರ ನೀಡಿವೆ, ನ್ಯಾಯಾಂಗಕ್ಕೆ ಅಲ್ಲ. ಆದ್ದರಿಂದ ಇಂತಹ ‘ತಾನಾಗಿ ಅನುಮೋದನೆ’ ಎಂಬ ಪರಿಕಲ್ಪನೆಯನ್ನು ಸಂವಿಧಾನದ ಚೌಕಟ್ಟಿನಲ್ಲಿ ಸಂಪೂರ್ಣ ಅನುಚಿತ ಮತ್ತು ಅನುಮತಿಸಲಾಗದ ಕ್ರಮ ಎಂದು ಸುಪ್ರೀಂ ಕೋರ್ಟ್ ದೃಢವಾಗಿ ತೀರ್ಮಾನಿಸಿದೆ.

ಇದೇ ವೇಳೆ, ರಾಜ್ಯಪಾಲರು ಮಸೂದೆಗಳಿಗೆ ಸಂಬಂಧಿಸಿದಂತೆ ಯಾವುದೇ ಕಾರಣವಿಲ್ಲದೆ ಅತ್ಯಂತ ದೀರ್ಘಕಾಲ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ತಡೆಹಿಡಿದು, ವಿಧಾನಮಂಡಲದ ಕಾನೂನು ರಚನಾ ಪ್ರಕ್ರಿಯೆಯನ್ನೇ ವಿಫಲಗೊಳಿಸುತ್ತಿದ್ದರೆ, ನ್ಯಾಯಾಲಯವು ತನ್ನ ಸೀಮಿತ ನ್ಯಾಯಾಂಗ ಪರಿಶೀಲನಾ ಅಧಿಕಾರವನ್ನು (limited judicial review) ಬಳಸಿಕೊಂಡು ರಾಜ್ಯಪಾಲರಿಗೆ ‘ನಿರ್ದಿಷ್ಟ ಸಮಯದೊಳಗೆ ತೀರ್ಮಾನ ತೆಗೆದುಕೊಳ್ಳಿ’ ಎಂದು ಆದೇಶ ನೀಡಬಹುದು ಎಂದಿದೆ.

ಆದರೆ, ಈ ಆದೇಶದಲ್ಲಿ ಮಸೂದೆಯ ಒಳಿತು-ಕೆಡುಕುಗಳ ಬಗ್ಗೆ (merits of the Bill) ಏನನ್ನೂ ಹೇಳುವಂತಿಲ್ಲ ಅಥವಾ ಮಸೂದೆಗೆ ಅನುಮೋದನೆ ಕೊಡಿ/ತಡೆಯಿರಿ ಎಂದು ಆದೇಶಿಸುವಂತಿಲ್ಲ. ಕೇವಲ ‘ತೀರ್ಮಾನ ತೆಗೆದುಕೊಳ್ಳುವ ಕೆಲಸವನ್ನು ತಡೆಯಬೇಡಿ, ಸಮಯಕ್ಕೆ ಸರಿಯಾಗಿ ಮಾಡಿ’ ಎಂದು ಮಾತ್ರ ಹೇಳಬಹುದು. ಈ ರೀತಿ ನ್ಯಾಯಾಲಯವು ಕಾರ್ಯಾಂಗದ ಅಧಿಕಾರವನ್ನು ಆಕ್ರಮಿಸಿಕೊಳ್ಳದೆ, ಕೇವಲ ಕಾನೂನು ರಚನಾ ಪ್ರಕ್ರಿಯೆಯನ್ನು ರಕ್ಷಿಸುವ ಸೀಮಿತ ಹಸ್ತಕ್ಷೇಪ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ ನಾಥ್, ಪಿ.ಎಸ್ ನರಸಿಂಹ ಮತ್ತು ಎ.ಎಸ್ ಚಂದೂರ್ಕರ್ ಅವರನ್ನೊಳಗೊಂಡ ಪೀಠವು ಹತ್ತು ದಿನಗಳ ಕಾಲ ಈ ಪ್ರಕರಣದ ವಿಚಾರಣೆ ನಡೆಸಿ 2025ರ ಸೆಪ್ಟೆಂಬರ್ 11ರಂದು ತನ್ನ ಅಭಿಪ್ರಾಯವನ್ನು ಕಾಯ್ದಿರಿಸಿತ್ತು. ನವೆಂಬರ್ 20ರಂದು ಅದನ್ನು ಪ್ರಕಟಿಸಿದೆ.

2025ರ ಏಪ್ರಿಲ್ 20ರಂದು, ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕಾರಗೊಂಡ 10 ಮಸೂದೆಗಳನ್ನು ರಾಷ್ಟ್ರಪತಿಯ ಪರಿಶೀಲನೆಯ ಕಾರಣ ಹೇಳಿ ಸುದೀರ್ಘ ಸಮಯ ತಡೆಹಿಡಿದು ಇರಿಸಿಕೊಂಡಿದ್ದ ರಾಜ್ಯಪಾಲ ಆರ್‌. ಎನ್‌. ರವಿ ನಡೆ ‘ಅಸಂವಿಧಾನಿಕ’ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ತೀರ್ಪು ಪ್ರಕಟಿಸುವ ವೇಳೆ, ರಾಜ್ಯ ಶಾಸಕಾಂಗ ಕಳುಹಿಸುವ ಮಸೂದೆಯ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಂವಿಧಾನದ 200ನೇ ವಿಧಿಯಡಿ ಹೇಳಲಾದ ರಾಜ್ಯಪಾಲರ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು.

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠವು, ರಾಜ್ಯಪಾಲರು ಜನರ ಪ್ರಜಾಸತ್ತಾತ್ಮಕ ಇಚ್ಛೆಯನ್ನು ದುರ್ಬಲಗೊಳಿಸಬಾರದು ಎಂದಿತ್ತು. ಮಸೂದೆಗಳಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬ ತಡೆಯಲು ಕೆಲವು ನಿರ್ದೇಶನಗಳನ್ನು ಕೂಡ ನೀಡಿತ್ತು. ರಾಜ್ಯಪಾಲರು ತಮಗೆ ಕಳುಹಿಸಲಾದ ಮಸೂದೆಗಳ ಮೇಲೆ ಕ್ರಮ ಕೈಗೊಳ್ಳಲು ನಿರ್ದಿಷ್ಟ ಸಮಯ ನಿಗದಿಪಡಿಸಿತ್ತು.

ರಾಜ್ಯಪಾಲರು ‘ವೀಟೋ’ ಅಧಿಕಾರ ಹೊಂದಿಲ್ಲ, ಅಂದರೆ, ಅವರು ಶಾಸಕಾಂಗ ಅಂಗೀಕರಿಸಿದ ಮಸೂದೆಗಳ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಸುಮ್ಮನೆ ತಡೆ ಹಿಡಿದು ಇರಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿತ್ತು. ವಿಧಿ 200ರ ಮೊದಲ ನಿಬಂಧನೆಯ ‘ಸಾಧ್ಯವಾದಷ್ಟು ಬೇಗ’ ಎಂಬ ಪದವು ರಾಜ್ಯಪಾಲರು ಮಸೂದೆಯ ಕುರಿತು ತುರ್ತು ನಿರ್ಧಾರ ತೆಗೆದುಕೊಳ್ಳಬೇಕು ಎಂಬುವುದನ್ನು ಹೇಳುತ್ತದೆ ಎಂದಿತ್ತು.

ಮಾನ್ಯವಾದ ಸಾಂವಿಧಾನಿಕ ಕಾರಣಗಳಿಲ್ಲದೆ ಮಸೂದೆಯ ಕುರಿತು ನಿರ್ಧಾರ ತೆಗೆದುಕೊಳ್ಳಲು ವಿಳಂಬ ಮಾಡುವ ಅಥವಾ ಮಸೂದೆಯನ್ನು ಸುಖಾ ಸುಮ್ಮನೆ ತಡೆಹಿಡಿಯುವ ‘ಪಾಕೆಟ್ ವೀಟೋ’ ಅಧಿಕಾರ ಚಲಾಯಿಸಲು ರಾಜ್ಯಪಾಲರಿಗೆ ಅವಕಾಶ ಇಲ್ಲ. ಒಂದಾ ಮಸೂದೆಗೆ ಸಹಿ ಹಾಕಬೇಕು ಅಥವಾ ಹಿಂದಿರುಗಿಸಬೇಕು, ಇಲ್ಲದಿದ್ದರೆ ರಾಷ್ಟ್ರಪತಿಯ ಪರಿಶೀಲನೆಗೆ ಕಳುಹಿಸಬೇಕು ಎಂದು ಸ್ಪಷ್ಟಪಡಿಸಿತ್ತು.

ರಾಜ್ಯಪಾಲರು ಹಿಂದಿರುಗಿಸಿದ ಮಸೂದೆಯನ್ನು ಶಾಸಕಾಂಗ ಪರಿಶೀಲನೆ ನಡೆಸಿ ಮತ್ತೆ ಕಳುಹಿಸಿದರೆ ರಾಜ್ಯಪಾಲರು ಅದಕ್ಕೆ ಸಹಿ ಹಾಕಬೇಕು, ಮತ್ತೆ ರಾಷ್ಟ್ರಪತಿಗಳ ಪರಿಶೀಲನೆಗೆ ಕಾಯ್ದಿರಿಸಲು ಸಾಧ್ಯವಿಲ್ಲ ಎಂದಿತ್ತು.

ಶಾಸಕಾಂಗ ಮರು ಪರಿಶೀಲನೆ ಮಾಡಿ ಕಳುಹಿಸಿದ ಬಳಿಕವೂ ತಮಿಳುನಾಡಿನ 10 ಮಸೂದೆಗಳನ್ನು ರಾಷ್ಟ್ರಪತಿಯ ಪರಿಶೀಲನೆಗೆಂದು ತಡೆ ಹಿಡಿದು ಇರಿಸಿಕೊಂಡಿದ್ದ ತಮಿಳುನಾಡು ರಾಜ್ಯಪಾಲರ ನಡೆ ‘ಅಸಂವಿಧಾನಿಕ’ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿತ್ತು. ಇದು ‘ಅಧಿಕಾರದ ದುರ್ಬಳಕೆ’ ಎಂದಿತ್ತು.

ಆ 10 ಮಸೂದೆಗಳ ಕುರಿತು ರಾಷ್ಟ್ರಪತಿ ತೆಗೆದುಕೊಂಡ ಯಾವುದೇ ನಂತರದ ಕ್ರಮವು ನಿಲ್ಲುವುದಿಲ್ಲ ಎಂದು ಆದೇಶಿಸಿತ್ತು. ಶಾಸಕಾಂಗವು ಮಸೂದೆಗಳನ್ನು ಮರುಪರಿಶೀಲಿಸಿದ ದಿನಾಂಕದಂದು ರಾಜ್ಯಪಾಲರು ಈ ಮಸೂದೆಗಳಿಗೆ ಒಪ್ಪಿಗೆ ನೀಡಿದ್ದಾರೆ ಎಂದು ಪರಿಗಣಿಸಲಾಗಿದೆ. ಈ ನಿರ್ಧಾರವನ್ನು ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯದ ಅಂತರ್ಗತ ಅಧಿಕಾರವನ್ನು ಬಳಸಿಕೊಂಡು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿತ್ತು.

ಆದರೆ, ನವೆಂಬರ್ 20ರ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯವು, ಅದರದ್ದೇ ಹಳೆಯ ಅಭಿಪ್ರಾಯವನ್ನು ಅಲ್ಲಗಳೆದಂತಾಗಿದೆ. ಈ ಮೂಲಕ ಜನರಲ್ಲಿ ಗೊಂದಲ ಉಂಟಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯಪಾಲರಿಗೆ ಅಪರಿಮಿತ ಅಧಿಕಾರ ಕೊಟ್ಟಂತಾಗಿದೆ. ಹೊಸ ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗಿದೆ.

ಸುಪ್ರೀಂ ಕೋರ್ಟ್ ತೀರ್ಪನ್ನು ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ಆರ್‌.ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸ್ವಾಗತಿಸಿದ್ದಾರೆ.

ಪ್ರಕರಣದ ವಿಚಾರಣೆಯ ಸಮಯದಲ್ಲಿ, ರಾಜ್ಯಪಾಲರು ಮತ್ತು ರಾಷ್ಟ್ರಪತಿಗೆ ಕಾಲಮಿತಿಗಳನ್ನು ವಿಧಿಸುವುದು ಅಧಿಕಾರಗಳ ಪ್ರತ್ಯೇಕತೆಯನ್ನು ಉಲ್ಲಂಘಿಸುತ್ತದೆ ಎಂದು ಇಬ್ಬರೂ ವಾದಿಸಿದ್ದರು. ಆದರೆ, ಸುಪ್ರೀಂ ಕೋರ್ಟ್‌ನ ಇತ್ತೀಚಿನ ಅಭಿಪ್ರಾಯದ ಬಳಿಕ, “ಇದು ಕಾರ್ಯಾಂಗದ ಅಧಿಕಾರವನ್ನು ನ್ಯಾಯಾಂಗ ಸ್ವಾಧೀನಪಡಿಸಿಕೊಳ್ಳುವುದನ್ನು ತಡೆಯುತ್ತದೆ” ಎಂದು ಶ್ಲಾಘಿಸಿದ್ದಾರೆ.

ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನು ಸಂಭ್ರಮಿಸಿದ ಬಿಜೆಪಿಗರು

ಬಿಜೆಪಿಯ ಕಾನೂನು ವಿಶ್ಲೇಷಕ ಮತ್ತು ಪರಿಣಮ್ ಲಾ ಅಸೋಸಿಯೇಟ್ಸ್‌ನ ವ್ಯವಸ್ಥಾಪಕ ಪಾಲುದಾರ ಹಿತೇಶ್ ಜೈನ್, “ಮಸೂದೆಗಳಿಗೆ ಸಹಿ ಹಾಕಲು ರಾಜ್ಯಪಾಲರು ಮತ್ತು ರಾಷ್ಟ್ರಪತಿಗೆ ಗಡುವು ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪರಿಗಣಿತ ಒಪ್ಪಿಗೆ ಪರಿಕಲ್ಪನೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಕ್ಕೆ ಸ್ಥಿರತೆ ಬರುತ್ತದೆ. ಸಂವಿಧಾನದ ನೈತಿಕತೆ ಮತ್ತಷ್ಟು ಬಲಗೊಳ್ಳುತ್ತದೆ. ನ್ಯಾಯಾಂಗ ಪರಿಶೀಲನೆ ಎಂದರೆ ಕೇವಲ ಪರಿಶೀಲನೆ ಮಾಡುವುದು, ಆಡಳಿತ ನಡೆಸುವುದಲ್ಲ ಎಂಬುವುದನ್ನು ಮತ್ತೊಮ್ಮೆ ಗಟ್ಟಿಯಾಗಿ ಹೇಳಲಾಗಿದೆ” ಎಂದಿದ್ದಾರೆ.

TridentX Intel (@TridentxIN) ಎಂಬ ಬಿಜೆಪಿ ಪರ ವಿಶ್ಲೇಷಕ ಸಂಸ್ಥೆಯ ಎಕ್ಸ್‌ ಖಾತೆಯಲ್ಲಿ, “ಸಾಂವಿಧಾನಿಕ ಸಮತೋಲನಕ್ಕೆ ದೊಡ್ಡ ಗೆಲುವು. ಮಸೂದೆಗಳಿಗೆ ಅಂಕಿತ ಹಾಕಲು ರಾಜ್ಯಪಾಲರಿಗೆ ಗಡುವು ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿರೋಧ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಿಗೆ ದೊಡ್ಡ ಹಿನ್ನಡೆ” ಎಂದು ಪೋಸ್ಟ್ ಹಾಕಲಾಗಿದೆ.

ರಾಜಕೀಯ ವಿಶ್ಲೇಷಕ ಎಂದು ಹೇಳಲಾಗುವ JagVyas (@jav_j21) ಎಂಬ ಎಕ್ಸ್‌ ಖಾತೆಯಲ್ಲಿ, “ಸುಪ್ರೀಂ ಕೋರ್ಟ್ ಕೊನೆಗೂ ಸರಿಯಾದ ಮಾರ್ಗಕ್ಕೆ ಬಂದಿದೆ…ಇದು ಮೋದಿ ಯುಗಕ್ಕೆ ಸಿಕ್ಕ ದೊಡ್ಡ ಸಂವಿಧಾನಿಕ ಗೆಲುವು. ಅಧಿಕಾರಗಳ ವಿಭಜನೆಯನ್ನು ಮರುಸ್ಥಾಪಿಸಿ, ನ್ಯಾಯಾಂಗದ ಸಾಹಸಪ್ರಯೋಗಗಳನ್ನು (judicial adventurism) ಕೊನೆಗಾಣಿಸಲಾಗಿದೆ” ಎಂದು ಬರೆದುಕೊಳ್ಳಲಾಗಿದೆ.

ಸನಾತನಿ ರಾಷ್ಟ್ರೀಯವಾದಿ ಎನ್ನಲಾದ Saravanakumar (@Saravana_2785) ಎಂಬ ಎಕ್ಸ್‌ ಖಾತೆಯಲ್ಲಿ “ಸುಪ್ರೀಂ ಕೋರ್ಟ್ ಈಗ ತಾನೇ ಹಿಂದೆ ಮಾಡಿದ ತಪ್ಪನ್ನು ಒಪ್ಪಿಕೊಂಡು ಸರಿಪಡಿಸಿಕೊಂಡಿದೆ. I
ಹಿಂದೆ ನ್ಯಾಯಾಲಯಗಳು ತಮ್ಮ ಗಡಿ ಮೀರಿ ರಾಜ್ಯಪಾಲರು/ರಾಷ್ಟ್ರಪತಿಗಳ ಕೆಲಸದಲ್ಲಿ ತಲೆಹಾಕುತ್ತಿದ್ದವು.
ಈ ತೀರ್ಪಿನಲ್ಲಿ ಅದನ್ನು ಸರಿಪಡಿಸಿ, “ರಾಜ್ಯಪಾಲರಿಗೆ ತನ್ನದೇ ಆದ ಚಿಂತನೆ-ನಿರ್ಧಾರದ ಸ್ವಾತಂತ್ರ್ಯ ಇದೆ” ಎಂಬುದನ್ನು ಒಪ್ಪಿಕೊಂಡಿದೆ. ಇದು ಒಳ್ಳೆಯ ಸುಧಾರಣೆ ಮತ್ತು ಸಕಾರಾತ್ಮಕ ಹೆಜ್ಜೆ” ಎಂದು ಶ್ಲಾಘಿಸಲಾಗಿದೆ.

ಇನ್ನುಳಿದಂತೆ ಹಲವು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ಸ್ವಾಗತಿಸಲಾಗಿದೆ. ಸಾಂವಿಧಾನಿಕ ಬಿಕ್ಕಟ್ಟನ್ನು ವಿರೋಧ ಪಕ್ಷಗಳ ಆಡಳಿತದ ರಾಜ್ಯಗಳ ವಿರುದ್ದ ಕೇಂದ್ರ ಸರ್ಕಾರಕ್ಕೆ ಗೆಲುವು ಎಂಬಂತೆ ಬಿಂಬಿಸಲಾಗಿದೆ.

ನ್ಯಾಯವಾದಿಗಳು ಚಿಂತಕರು ಏನಂದ್ರು?

ಸುಪ್ರೀಂ ಕೋರ್ಟ್‌ನ ಅಭಿಪ್ರಾಯದ ಕುರಿತು ನಾನುಗೌರಿ.ಕಾಂಗೆ ಪ್ರತಿಕ್ರಿಯಿಸಿರುವ ಹೈಕೋರ್ಟ್ ನ್ಯಾಯವಾದಿ ಎಸ್‌. ಬಾಲನ್‌, “ಸುಪ್ರೀಂ ಕೋರ್ಟ್ ರಾಜ್ಯಪಾಲರಿಗೆ ಪರಮಾಧಿಕಾರ ಕೊಟ್ಟಿರುವುದು ‘ಸಾಂವಿಧಾನಿಕ ನೈತಿಕತೆ ಅಲ್ಲ” ಎಂದಿದ್ದಾರೆ.

ಭಾರತ ರಾಜ್ಯಗಳ ಒಕ್ಕೂಟ. ರಾಜ್ಯಪಾಲರು ಒಕ್ಕೂಟ ಸರ್ಕಾರದ ಏಜೆಂಟ್‌ಗಳ ರೀತಿ ವರ್ತಿಸಿಕೊಂಡು ಒಕ್ಕೂಟ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದ್ದಾರೆ. ಹಾಗಾಗಿ, ಈ ರಾಜ್ಯಪಾಲ ಹುದ್ದೆಯನ್ನೇ ತೆಗೆದು ಹಾಕಬೇಕು ಎಂದು ಬಾಲನ್ ಅಭಿಪ್ರಾಯಟ್ಟಿದ್ದಾರೆ.

ಇತ್ತೀಚೆಗೆ ಕಾರ್ಪೋರೇಟ್, ಸನಾತನವಾದಿಗಳು ರಾಜ್ಯಪಾಲ ಹುದ್ದೆಗೆ ಬಂದಿದ್ದಾರೆ. ಒಂದು ದೇಶ, ಸನಾತನ ದೇಶ ಮಾಡುವುದು ಅವರ ಉದ್ದೇಶ. ಎಲ್ಲಾ ಕಡೆಗಳಲ್ಲಿ ಆರ್‌ಎಸ್‌ಎಸ್‌ನವರು ರಾಜ್ಯಪಾಲ ಹುದ್ದೆಯಲ್ಲಿದ್ದಾರೆ. ಆರ್‌ಎಎಸ್‌ಎಸ್‌ನವರು ಸಂವಿಧಾನ ವಿರೋಧಿಗಳು, ಅಂತವರು ರಾಜ್ಯಪಾಲರಂತಹ ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತರೆ ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಸುಪ್ರೀಂ ಕೋರ್ಟ್ ತನ್ನ ಅಭಿಪ್ರಾಯದ ಮೂಲಕ ರಾಜ್ಯಪಾಲರಿಗೆ ಪರಮಾಧಿಕಾರ ಕೊಟ್ಟಿದೆ. ಇದನ್ನು ಬಳಸಿಕೊಂಡು ರಾಜ್ಯಪಾಲರು ತಮ್ಮ ಅಜೆಂಡಾ ಸಾಧಿಸುತ್ತಾರೆ. ಹಾಗಾಗಿ, ಇದು ಸಾಂವಿಧಾನಿಕ ನೈತಿಕತೆ ಅಲ್ಲ ಎಂದು ಬಾಲನ್ ಹೇಳಿದ್ದಾರೆ.

ಚಿಂತಕ ಶಿವಸುಂದರ್ ಮಾತನಾಡಿ, ನಿವೃತ್ತಿಗೆ ಮುನ್ನ, ರಾಜ್ಯದ ಮಸೂದೆಗಳಿಗೆ ಒಪ್ಪಿಗೆ ಕೊಡದೆ ಕಾಡಿಸುವ ಕೇಂದ್ರದ ಏಜೆಂಟ್ ರಾಜ್ಯಪಾಲರಿಗೆ ಸಮಯ ಮಿತಿ ವಿಧಿಸಲು ಸಾಧ್ಯವಿಲ್ಲವೆಂದು ತೀರ್ಪು ನೀಡಿ ಭಾರತದ ಫೆಡರಲ್ ಸ್ವರೂಪದ ಇನ್ನಷ್ಟು ಅವನತಿಗೆ ಮತ್ತು ಮೋದಿ ಸರ್ವಾಧಿಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಗವಾಯಿ ಸಾಹೇಬರು ಮಾನ್ಯತೆ ನೀಡಿದ್ದಾರೆ ಎಂದು ಟೀಕಿಸಿದ್ದಾರೆ.

ಹೈಕೋರ್ಟ್ ನ್ಯಾಯವಾದಿ ರಾಜಲಕ್ಷ್ಮಿ ಅಂಕಲಗಿ ಮಾತನಾಡಿ, ಸುಪ್ರೀಂ ಕೋರ್ಟ್ ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ನೀಡಿದ್ದ ತನ್ನದೇ ಆದೇಶವನ್ನು ಇತ್ತೀಚಿನ ಅಭಿಪ್ರಾಯದ ಮೂಲಕ ಬದಿಗೆ ಸರಿಸಿದೆ. ಇದರಿಂದ ಜನ ಸಾಮಾನ್ಯರಲ್ಲಿ ಸಂವಿಧಾನದ ಮೇಲೆಯೇ ಗೊಂದಲ ಮೂಡುವಂತೆ ಮಾಡಿದೆ ಎಂದಿದ್ದಾರೆ. ಸಾವಿಂಧಾನಿಕ ಬಿಕ್ಕಟ್ಟು ಬಂದಾಗ ಅದನ್ನು ಪರಿಹರಿಸುವುದು ಸುಪ್ರೀಂ ಕೋರ್ಟ್‌ನ ಜವಾಬ್ದಾರಿ. ಹೀಗಿರುವಾಗ ಸುಪ್ರೀಂ ಕೋರ್ಟ್‌ ಕೈಚೆಲ್ಲಿ ಕುಳಿತರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯ ತಾಂತ್ರಿಕವಾಗಿ ಸರಿ ಇದ್ದರೂ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂವಿಧಾನದ ಆಶಯಗಳನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ವಿವೇಚನೆ ಬಳಸಬೇಕಿತ್ತು ಎಂದಿದ್ದಾರೆ.

ಸುಪ್ರೀಂ ಕೋರ್ಟ್ ತನ್ನದೇ ಆದೇಶವನ್ನು ಬದಿಗೆ ಸರಿಸುವ ಮೂಲಕ ಜನರಲ್ಲಿ ದ್ವಂದ್ವ ಉಂಟು ಮಾಡಿದೆ. ಇದರ ಜೊತೆಗೆ ರಾಜ್ಯಪಾಲರಿಗೆ ಪರಮಾಧಿಕಾರ ಕೊಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...

ಬೆಂಗಳೂರು ಚಲೋ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಚಿವ ಮಹದೇವಪ್ಪ: ಸಿಎಂ ಜೊತೆ ಚರ್ಚಿಸುವ ಭರವಸೆ 

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ‘ಬೆಂಗಳೂರು ಚಲೋ’...

ಛತ್ತೀಸ್‌ಗಢ : ಬಿಜಾಪುರದಲ್ಲಿ 41 ಮಾವೋವಾದಿಗಳು ಶರಣಾಗತಿ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ (ನವೆಂಬರ್ 26) 41 ಮಂದಿ ನಕ್ಸಲರು ಶರಣಾಗಿದ್ದು, ಈ ಪೈಕಿ 32 ಮಂದಿಯ ತಲೆಗೆ ಒಟ್ಟು 1.19 ಕೋಟಿ ರೂಪಾಯಿ ಬಹುಮಾನ ಘೋಷಣೆಯಾಗಿತ್ತು ಎಂದು ವರದಿಯಾಗಿದೆ. ಸರ್ಕಾರದ ಹೊಸ...

ಬೆಂಗಳೂರು ಚಲೋ: ಧರಣಿ ಸ್ಥಳಕ್ಕೆ ಬಾರದ ಸಚಿವರು, ಕೋಪಗೊಂಡು ರಸ್ತೆಗಿಳಿದ ಪ್ರತಿಭಟನಾಕಾರರು

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೃಹತ್ 'ಬೆಂಗಳೂರು ಚಲೋ' ಬುಧವಾರ (ನವೆಂಬರ್ 26) ಫ್ರೀಡಂ...