ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಧ್ಯೆ ಕಾಸರಗೋಡಿನಿಂದ ತೀವ್ರ ಅನಾರೋಗ್ಯ ಪೀಡಿತ ರೋಗಿಗಳಿಗೆ ಅಂತರರಾಜ್ಯ ಗಡಿಯನ್ನು ತೆರೆಯುವುದಿಲ್ಲ ಎಂದು ಕರ್ನಾಟಕ ಸರ್ಕಾರ ಇಂದು ಸ್ಪಷ್ಟಪಡಿಸಿದೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯ ನಡೆಸಿದ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಕೇರಳ ಹೈಕೋರ್ಟ್‌ಗೆ ಈ ವಿಷಯವನ್ನು ತಿಳಿಸಿದೆ. ಕಾಸರಗೋಡಿನಲ್ಲಿ ಕೊರೊನ ಪ್ರಕರಣಗಳು ಹೆಚ್ಚುತ್ತಿವೆ. ಮಂಗಳೂರು ಆಸ್ಪತ್ರೆಗಳನ್ನು ಕೊರೊನ ವೈರಸ್ ಆರೋಗ್ಯ ಕೇಂದ್ರಗಳಾಗಿ ಪರಿವರ್ತಿಸಿರುವುದರಿಂದ ಜನ ಇಲ್ಲಿಗೆ ಕರೆ ತರಲು ಬಯಸಿದ್ದಾರೆ. ಆದರೆ ಅದು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಲಾಕ್‌ಡೌನ್ ಸಮಯದಲ್ಲಿ ವಯನಾಡ್‌ನಿಂದ ಕರ್ನಾಟಕದವರೆಗಿನ ಎರಡು ಅಂತರರಾಜ್ಯ ರಸ್ತೆಗಳು – ಸುಲ್ತಾನ್ ಬತ್ತೇರಿ-ಗುಂಡ್ಲು ಪೇಟೆ ರಸ್ತೆ, ಮನಥವಾಡಿ-ಸಿರ್ಗೂರ್-ಮೈಸೂರು ರಸ್ತೆ – ತೆರೆದಿರುತ್ತದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಇರಿಟ್ಟಿ-ಕೊಡಗು-ಮೈಸೂರು ರಸ್ತೆಯನ್ನು ತೆರೆಯುವಂತೆ ಕಣ್ಣೂರು ಜಿಲ್ಲಾಧಿಕಾರಿ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದ ಮನವಿಗೆ ಒಪ್ಪಿಗೆ ಸೂಚಿಸಿದರೂ, ಪ್ರಸ್ತುತ ಸನ್ನಿವೇಶದಲ್ಲಿ ಕಾಸರಗೋಡು-ಮಂಗಳೂರು ರಸ್ತೆಯನ್ನು ತೆರೆಯಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಮಂಗಳೂರಿನ ಆಸ್ಪತ್ರೆಗೆ ಬರದಂತೆ ಕೇರಳಿಗರಿಗೆ ತಡೆ: ಮತ್ತೆ ಮೂರು ಸಾವು
ಈ ಮಧ್ಯೆ, ತೀವ್ರ ಅಸ್ವಸ್ಥ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡುವ ಮಂಗಳೂರಿನ ಎರಡು ಆಸ್ಪತ್ರೆಗಳ ಹೆಸರನ್ನು ನೀಡುವಂತೆ ಕೇರಳ ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ. ಕೇರಳದ ಗಡಿಯನ್ನು ಕರ್ನಾಟಕ ಸರ್ಕಾರವು ನಿರ್ಬಂಧಿಸಿದ ಬಗ್ಗೆ ಕೇರಳ ಹೈಕೋರ್ಟ್ ಸೋಮವಾರ ಕರ್ನಾಟಕದ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯಗಳನ್ನು ಕೋರಿತ್ತು.
ರಸ್ತೆಗಳನ್ನು ತೆರೆಯಲು ನಿರ್ದೇಶನ ಕೋರಿ ಕೇರಳ ಹೈಕೋರ್ಟ್ ವಕೀಲರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಪರಿಗಣಿಸಿ, ನ್ಯಾಯಮೂರ್ತಿಗಳಾದ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ಶಾಜಿ ಪಿ ಚಾಲಿ ಅವರನ್ನೊಳಗೊಂಡ ನ್ಯಾಯಪೀಠವು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾಗಳು ಕರ್ನಾಟಕದ ಅಡ್ವೊಕೇಟ್ ಜನರಲ್ಗೆ ಮನವಿ ಮಾಡಿತ್ತು. ಅಂತರರಾಜ್ಯ ರಸ್ತೆಗಳಲ್ಲಿ ತಡೆಗಳನ್ನು ನಿರ್ಮಿಸುವ ದಿಗ್ಬಂಧನಗಳು ಜನರ ಬದುಕಿನ ಹಕ್ಕಿನ ಮೇಲೆ ಪರಿಣಾಮ ಬೀರುತ್ತವೆ ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿದೆ.
ಕಾಸರಗೋಡಿನ ಗಡಿಯಲ್ಲಿರುವ ಮಂಗಳೂರು ನಗರದ ಆಸ್ಪತ್ರೆಗಳಲ್ಲಿ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳು ಮತ್ತು ತುರ್ತು ಚಿಕಿತ್ಸೆ ಪಡೆಯುವ ಜನರ ಸಂಚಾರವನ್ನು ತಡೆಯಲು ಕರ್ನಾಟಕ ಸರ್ಕಾರ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಿತ್ತು. ಇದರಿಂದಾಗಿ ತೀವ್ರ ಚಿಂತಾಜನಕ ಸ್ಥಿತಿಯಲ್ಲಿದ್ದ ಐದು ರೋಗಿಗಳು ಇದುವರೆಗೆ ಸಾವಿಗೀಡಾಗಿದ್ದಾರೆ.


