HomeUncategorizedಏಕಾಏಕಿ ಲಾಕ್‌ಡೌನ್‌ ಘೋಷಿಸಿದ ಸರ್ಕಾರ; ದುಸ್ತರಗೊಂಡಿದೆ ’ಕಲ್ಲಂಗಡಿ’ ಬೆಳೆದ ರೈತರ ಬದುಕು

ಏಕಾಏಕಿ ಲಾಕ್‌ಡೌನ್‌ ಘೋಷಿಸಿದ ಸರ್ಕಾರ; ದುಸ್ತರಗೊಂಡಿದೆ ’ಕಲ್ಲಂಗಡಿ’ ಬೆಳೆದ ರೈತರ ಬದುಕು

- Advertisement -
- Advertisement -

ಬೇಸಿಗೆ ಬಂತೆಂದರೆ ಕರಬೂಜ, ಕಲ್ಲಂಗಡಿ ಎಲ್ಲೆಲ್ಲೂ ಕಂಡುಬರುವುದು ಸಾಮಾನ್ಯ. ರಸ್ತೆಗಳ ಬದಿಯಲ್ಲಿ ರಾಶಿ ರಾಶಿ ಹಾಕಿಕೊಂಡಿರುತ್ತಿದ್ದ ಕಲ್ಲಂಗಡಿ, ಕರಬೂಜ ಹಣ್ಣುಗಳು ಈ ಬಾರಿ ಕಣ್ಮರೆಯಾಗಿವೆ. ಬೇಸಿಗೆ ಬಿರುಬಿಸಿಲಿನ ಧಗೆಯಿಂದ ನಿವಾರಿಸಿಕೊಳ್ಳಲು ಜನರು ಈ ಹಣ್ಣು ತಿಂದು, ಜ್ಯೂಸ್ ಕುಡಿದು ದೇಹ ತಂಪು ಮಾಡಿಕೊಳ್ಳುತ್ತಿದ್ದರು. ಕೊರೊನ ವೈರಸ್ ವ್ಯಾಪಿಸಿದ ಹಿನ್ನೆಲೆಯಲ್ಲಿ ದೇಶ ಲಾಕ್‌ಡೌನ್ ಮಾಡಿದ ಮೇಲೆ ಕಲ್ಲಂಗಡಿ ಮತ್ತು ಕರಬೂಜ ಬೆಳೆಗಾರರು ಮತ್ತು ಮಾರಾಟಗಾರರು ಹಾಕಿದ ಬಂಡವಾಳವೂ ಬರದೆ ತೀವ್ರ ನಷ್ಟ ಅನುಭವಿಸುವಂತಾಗಿದೆ.

ಮಾರುಕಟ್ಟೆಗಳು, ಪ್ರಮುಖ ರಸ್ತೆಗಳು, ಆಸ್ಪತ್ರೆಗಳು, ಕಾಲೇಜು ಮೈದಾನದ ಬಳಿ – ಹೀಗೆ ಕಲ್ಲಂಗಡಿ ಮತ್ತು ಕರಬೂಜದ ಹಣ್ಣುಗಳನ್ನು ಇಟ್ಟುಕೊಂಡು ಸಣ್ಣತುಂಡುಗಳಾಗಿ ಕೊಯ್ದು ಮಾರಾಟ ಮಾಡುತ್ತಿದ್ದರು. ಪ್ರತಿ ತುಂಡಿಗೆ 10 ರೂಪಾಯಿ ಬೆಲೆ ನಿಗದಿಪಡಿಸುತ್ತಿದ್ದರು. ಬಿಸಿಲಿನಿಂದ ಬಳಲಿ ಬಂದವರು ಕಲ್ಲಂಗಡಿ ಹಣ್ಣು ತಿಂದು ನಿರಾಳವಾಗಿ ಮನೆಗೆ ತೆರಳುತ್ತಿದ್ದರು. ಜೊತೆಗೆ ಅಂಗಡಿಗಳಲ್ಲಿ ಈ ಹಣ್ಣುಗಳ ಜ್ಯೂಸ್  ಕುಡಿದು ಬಳಲಿಕೆಯಿಂದ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತಿದ್ದರು. ಕೊರೊನ ವೈರಸ್ ವ್ಯಾಪಕವಾಗಿ ಹರಡುವ ಮೊದಲು ಮಾರಾಟಗಾರರು ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡಿದರು. ಕೆಜಿ ಗೆ 20 ರಿಂದ 25 ರೂಪಾಯಿಯಂತೆ ಒಂದು ಕಲ್ಲಂಗಡಿ ಹಣ್ಣಿಗೆ 200 ರೂಪಾಯಿ ದೊರೆಯುತ್ತಿತ್ತು. ಭಾರತವೇ ಲಾಕ್‌ಡೌನ್ ಆದ ಮೇಲೆ ಇವರ ಬದುಕು ದುಸ್ಥರವಾಗಿದೆ.

ನಾನುಗೌರಿ.ಕಾಮ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ ಪಟೇಲ್ “ಕಲ್ಲಂಗಡಿ ಅಷ್ಟೇ ಅಲ್ಲ, ಅಲ್ಪಾವಧಿ ಬೆಳೆಗಳಿಗೆ ಮಾರುಕಟ್ಟೆಯೇ ಇಲ್ಲ. ಈ ಹಿನ್ನೆಲೆಯಲ್ಲಿ ರೈತರು ಆತ್ಮಹತ್ಯೆಯ ಹಾದಿ ಹಿಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಬಹುಸಂಖ್ಯಾತರು ಅವರ ಬಗ್ಗೆ ಆಡಳಿತ ಪಕ್ಷಗಳು ಯೋಚನೆ ಮಾಡುತ್ತಿಲ್ಲ. ಅಲ್ಪಾವಧಿ ಬೆಳೆಗಳಿಗೆ ವ್ಯವಸ್ಥಿತ ಮಾರುಕಟ್ಟೆ ಸಿಗದೆ ನಷ್ಟವಾಗಿದೆ  ದೇಶದ ಯಾವುದೇ ಭಾಗದಲ್ಲಿಯೂ ಶೀತಲ ಕೇಂದ್ರಗಳಿಲ್ಲ. ಹಣ್ಣು ತರಕಾರಿಗಳನ್ನು ಕೋಲ್ಡ್ ಸ್ಟೋರೇಜ್ ನಲ್ಲಿಟ್ಟು ಬೆಲೆ ಬಂದಾಗ ಮಾರಾಟ ಮಾಡಿದರೆ ರೈತರಿಗೆ ಲಾಭವಾಗುತ್ತದೆ. ಆದರೆ ಆ ಪರಿಸ್ಥಿತಿ ದೇಶದಲ್ಲಿ ಎಲ್ಲಿಯೂ ಇಲ್ಲ. ಮುಂದಾಲೋಚನೆಯಿಲ್ಲದ ರಾಜಕಾರಣಿಗಳಿಂದ ಎಲ್ಲಾ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಕೊರೊನ ಕಡೆ ಕೈ ತೋರಿಸುತ್ತಾರೆ” ಎಂದು ಹೇಳಿದರು.

ಕಲ್ಲಂಗಡಿ-ಕರಬೂಜ ಬೆಳೆದ ರೈತರು ತಮ್ಮ ಬೆಳೆಗೆ ಸರಿಯಾದ ಮಾರಕಟ್ಟೆ ಲಭಿಸದೆ ಲಕ್ಷಾಂತರ ರೂ ನಷ್ಟ  ಅನುಭವಿಸಿದ್ದಾರೆ. ಕೊಳ್ಳುವವರೂ ಇಲ್ಲದೆ, ಮಾರಾಟವೂ ಆಗದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿಗೆ ಉತ್ತಮ ಕಲ್ಲಂಗಡಿ ಬೆಳೆ ಬಂದಿತ್ತು. ಆದರೆ ಮಾರಾಟವಾಗದೆ, ಹಾಕಿದ ಬಂಡವಾಳ ಮತ್ತು ಮಾಡಿದ ಸಾಲವನ್ನು ತೀರಿಸುವುದು ಕಷ್ಟವಾಗಿದೆ. ಕಲ್ಲಂಗಡಿ ಮತ್ತು ಕರಬೂಜ ಬೆಳೆಯಲು ಸಾವಿರಾರು ರೂ. ಸಾಲ ಮಾಡಿದ್ದೆವು. ಕೊರೊನ ರೋಗದಿಂದ ಇಡೀ ಬೆಳೆಯೇ ನಾಶವಾಯಿತು . ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ.

ನಾನುಗೌರಿ.ಕಾಮ್ ಜೊತೆ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ. ಅಜ್ಜಪ್ಪ “ಏಕಾಏಕಿ ಲಾಕ್‌ಡೌನ್ ಮಾಡಿದ್ದರಿಂದ ಕೃಷಿಕರಿಗೆ, ರೈತರಿಗೆ ಭಾರೀ ಅನ್ಯಾಯವಾಗಿದೆ. ಲಾಕ್‌ಡೌನ್ ಮಾಡುವ ಮೊದಲು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಅದನ್ನು ಮಾಡಿಲ್ಲ. ಹೀಗಾಗಿ ರೈತರು ಬೆಳೆದ ಟೊಮೋಟ, ಕಲ್ಲಂಗಡಿ ಹಣ್ಣನ್ನು ಸರ್ಕಾರವೇ ನೇರ ಖರೀದಿ ಮಾಡಬೇಕು. ರೈತರ ನೆರವಿಗೆ ಬರಬೇಕು. ಕೇಂದ್ರ ಸರ್ಕಾರದ ಕ್ರಮದಿಂದ ಬೆಳೆದ ಹಣ್ಣುಗಳು ತಿನ್ನಲೂ ಆಗದೆ ಮಣ್ಣು ಪಾಲಾಗುತ್ತಿವೆ. ಇದರಿಂದ ಸರ್ಕಾರ ಖರೀದಿ ಮಾಡಿ ಜನರಿಗೆ ವಿತರಿಸುವ ಕೆಲಸ ಮಾಡಬೇಕು” ಎಂದು ಆಗ್ರಹಿಸಿದರು.

ಲಾಕ್‌ಡೌನ್ ಪರಿಣಾಮ ಹಣ್ಣಿಗೆ ವೈಜ್ಞಾನಿಕ ಬೆಲೆ ಮತ್ತು ಮಾರುಕಟ್ಟೆ ಸಿಗದೆ ಕಲಬುರಗಿಯಲ್ಲಿ ರೈತರೊಬ್ಬರು ಮೃತಪಟ್ಟಿದ್ದಾರೆ. ವರ್ಷಕ್ಕೊಮ್ಮೆ ಬರುವ ಈ ಬೆಳೆಯಿಂದ ಒಟ್ಟಿಗೆ ಒಂದಿಷ್ಟು ಹಣವನ್ನು ರೈತರು ಮತ್ತು ಮಾರಾಟಗಾರರು ಪಡೆದು ಅದರಲ್ಲೇ ಜೀವನ ಸಾಗಿಸುತ್ತಿದ್ದರು. ಈಗ ಬೆಳೆ ಬೆಳೆದರೂ ಅದು ಹಣವಾಗಿ ಪರಿವರ್ತನೆಯಾಗುವ ಹೊತ್ತಿಗೆ ಕೊರೊನ ಬಂದು ರೈತರ ಬದುಕನ್ನೇ ನಾಶ ಮಾಡಿದೆ. ಕಲ್ಲಂಗಡಿಯೂ ಇಲ್ಲ, ಕರಬೂಜವೂ ಇಲ್ಲ, ಎಳೆನೀರು ಸಿಗುತ್ತಿಲ್ಲ. ಬೇಸಿಗೆಯ ಬೆಳೆಯಿಂದ ಸಂಪೂರ್ಣ ಕೈಸುಟ್ಟುಕೊಂಡಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...