ಸಿಧಿ ಮೂತ್ರ ವಿಸರ್ಜನೆ ಪ್ರಕರಣಕ್ಕೆ ಸಂಬಂಧಿಸಿ ಟೀಕಿಸಿ ಕಾರ್ಟೂನ್ ಟ್ವೀಟ್ ಮಾಡಿರುವ ಭೋಜ್‌ಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್ ವಿರುದ್ಧ ಶುಕ್ರವಾರ ಭೋಪಾಲೋನ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಗಾಯಕಿ ನೇಹಾ ಸಿಂಗ್ ಅವರ ಟ್ವೀಟ್‌ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಹೇಳಲಾಗಿದೆ. ಎಎನ್‌ಐ ಪ್ರಕಾರ, ಆರ್‌ಎಸ್‌ಎಸ್ ಉಡುಪಿನ ವ್ಯಕ್ತಿಯೊಬ್ಬರು ಮತ್ತೋರ್ವ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ಆ ಚಿತ್ರದಲ್ಲಿ ಚಿತ್ರಿಸಲಾಗಿದೆ.
M P में का बा..?
Coming Soon.. #comingsoon #nehasinghrathore #प्रवेश_शुक्ला #ArrestPraveshShukla #politics #humanity #Shameless #women #upcoming pic.twitter.com/0suKLF9A87
— Neha Singh Rathore (@nehafolksinger) July 6, 2023
ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನೇ ಚಿತ್ರಿಸುವಂತೆ ಈ ಟ್ವೀಟ್ ಮಾಡಲಾಗಿದೆ. ಪ್ರವೇಶ್ ಶುಕ್ಲಾ ಎನ್ನುವ ಬಿಜೆಪಿ ಮುಖಂಡನು ಬುಡಕಟ್ಟು ಸಮುದಾಯದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದನು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಶುಕ್ಲಾ ಅವರನ್ನು ಬಂಧಿಸಲಾಗಿದೆ.
ಈ ಘಟನೆ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಖಂಡನೆ ವ್ಯಕ್ತವಾಯಿತು. ಆ ಬಳಿಕ ಆರೋಪಿಯನ್ನು ಬಂಧಿಸಿ ಎನ್‌ಎಸ್‌ಸಿ ಪ್ರಕರಣ ದಾಖಲಿಸಲಾಗಿದೆ.
ಇದೀಗ ಈ ಪ್ರಕರಣವನ್ನು ಟೀಕಿಸಿ ಟ್ವೀಟ್ ಮಾಡಿರುವವರ ವಿರುದ್ಧ ರಾಜ್ಯ ಬಿಜೆಪಿ ಸಮರ ಸಾರಿದ್ದು, ಗಾಯಕಿ ನೇಹಾ ಸಿಂಗ್ ರಾಥೋಡ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಹಬೀಬ್‌ಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಮನೀಶ್ ಸಿಂಗ್ ಭಡೋರಿಯಾ, ”ನಾವು ಐಪಿಸಿ ಸೆಕ್ಷನ್ 153ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ” ಎಂದು ಹೇಳಿದ್ದಾರೆ.
”ನಾವು ಟ್ವಿಟರ್ ಕಂಪನಿಯಿಂದ ಖಾತೆದಾರರ ಬಗ್ಗೆ ಮಾಹಿತಿಯನ್ನು ಪಡೆಯುತ್ತೇವೆ. ಈ ರೀತಿಯ ಟ್ವೀಟ್‌ನ್ನು ಬೇರೆ ಯಾವುದೇ ವ್ಯಕ್ತಿ ಹಾಕಿದ್ದಾರೆಯೇ ಎಂಬುದು ತನಿಖೆಯ ನಂತರ ಸ್ಪಷ್ಟವಾಗುತ್ತದೆ. ಆರೆಸ್ಸೆಸ್ ಮತ್ತು ಬುಡಕಟ್ಟು ಸಮುದಾಯದ ನಡುವೆ ವೈಷಮ್ಯವನ್ನು ಹುಟ್ಟುಹಾಕಿದ ಆರೋಪ ಗಾಯಕಿಯ ಮೇಲಿದೆ” ಎಂದು ಅವರು ತಿಳಿಸಿದ್ದಾರೆ.
ಇದೀಗ ಈ ಘಟನೆ ಕುರಿತು ಹೇಳಿಕೆ ನೀಡಿರುವ ಸಂತ್ರಸ್ತ ದಶಮತ್ ರಾವತ್, ”ಆರೋಪಿಯಿಂದ ತಪ್ಪಾಗಿದೆ. ಅವರಿಗೆ ತಪ್ಪಿನ ಅರಿವಾಗಿದೆ. ಅವರನ್ನು ಬಿಡುಗಡೆಗೊಳಿಸಿ” ಎಂದು ರಾಜ್ಯ ಸರ್ಕಾರವನ್ನು ಕೋರಿದ್ದಾರೆ.
ಏನಿದು ಘಟನೆ:
ಮಧ್ಯಪ್ರದೇಶದ ಬಿಜೆಪಿ ನಾಯಕನೊಬ್ಬ ಆದಿವಾಸಿ ಬುಡಕಟ್ಟು ಸಮುದಾಯದ ಯುವಕನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಅಮಾನುಷ ಘಟನೆ ಸಿಧಿ ಜಿಲ್ಲೆಯಲ್ಲಿ ವರದಿಯಾಗಿತ್ತು. ಮನುಷ್ಯರೆಲ್ಲರೂ ತಲೆತಗ್ಗಿಸಬೇಕಾದ ಅಮಾನವೀಯ ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆರೋಪಿಯನ್ನು ಬಂಧಿಸಿದ್ದಾರೆ ಮತ್ತು ಅವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯನ್ನು ದಾಖಲು ಮಾಡಿದ್ದಾರೆ.
ಆರೋಪಿ ಸಿಧಿ ಬಿಜೆಪಿ ಶಾಸಕ ಕೇದಾರ್ ನಾಥ್ ಶುಕ್ಲಾ ಅವರ ಬೆಂಬಲಿಗ ಪ್ರವೇಶ್ ಶುಕ್ಲಾನನ್ನು ಬಂಧಿಸಲು ಹಲವಾರು ತಂಡಗಳನ್ನು ಕಳುಹಿಸಲಾಗಿತ್ತು. ಆರೋಪಿ ತನ್ನ ಸ್ಥಳಗಳನ್ನು ಬದಲಾಯಿಸುತ್ತಿದ್ದ ಕೊನೆಗೂ ಅವರನ್ನು ಪತ್ತೆಹಚ್ಚುವಲ್ಲಿ ಮಧ್ಯಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ. ನಿನ್ನೆ ತಡರಾತ್ರಿ ಆತನನ್ನು ಬಂಧಿಸಲಾಗಿದ್ದು, ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿರುವ ಪೊಲೀಸರು, NSA ಜೊತೆಗೆ, ಐಪಿಸಿ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು SC/ST (ದೌರ್ಜನ್ಯ ತಡೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಇದು ಸುಮಾರು ಮೂರು ತಿಂಗಳ ಹಿಂದಿನ ವೀಡಿಯೋ ಎನ್ನುವುದು ಗೊತ್ತಾಗಿದೆ. ಈ ವಿಚಾರ ತಿಳಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಆರೋಪಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹೇಳಿದ್ದಾರೆ.
ವಿಪಕ್ಷಗಳಿಂದ ಟೀಕೆ:
”ಶುಕ್ಲಾ ಅವರು ಬಿಜೆಪಿಯ ಸಿದ್ಧಿ ಶಾಸಕ ಕೇದಾರನಾಥ್ ಶುಕ್ಲಾ ಅವರ ಸಹವರ್ತಿ” ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಈ ಆರೋಪವನ್ನು ಬಿಜೆಪಿ ಮತ್ತು ಅದರ ಶಾಸಕರು ನಿರಾಕರಿಸಿದ್ದಾರೆ.
ಅವರ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್‌ಪಿ ವರಿಷ್ಠೆ ಮಾಯಾವತಿ, ”ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಆ ಕ್ರಿಮಿನಲ್ ವಿರುದ್ಧ ಎನ್‌ಎಸ್‌ಎ ಮಾತ್ರವಲ್ಲದೆ ಆತನ ಆಸ್ತಿಯನ್ನು ಮುಟ್ಟುಗೋಲು ಹಾಕುವ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರು ತಮ್ಮ ಪಕ್ಷಕ್ಕೆ ಸೇರಿದವರು ಎಂದು ಹೇಳುತ್ತಿಲ್ಲ. ಇಂತಹ ಘಟನೆಗಳು ಎಲ್ಲರಿಗೂ ನಾಚಿಕೆ ತರುತ್ತವೆ” ಎಂದು ಹೇಳಿದ್ದಾರೆ.


