ನಟಿಯೊಬ್ಬರ ದೂರಿನ ಮೇರೆಗೆ ಕೇರಳದ ಕೊಲ್ಲಂನ ಸಿಪಿಐ(ಎಂ) ಶಾಸಕ ಹಾಗೂ ನಟ ಮುಕೇಶ್ ಮತ್ತು ನಟ ಜಯಸೂರ್ಯ ಸೇರಿದಂತೆ ಹಲವರ ವಿರುದ್ದ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಎರಡು ದಿನದ ಹಿಂದೆ ಹಿರಿಯ ನಟಿಯೊಬ್ಬರು ನಟರಾದ ಜಯಸೂರ್ಯ, ಮಣಿಯನ್ ಪಿಳ್ಳ ರಾಜು, ಶಾಸಕ ಹಾಗೂ ನಟ ಮುಕೇಶ್, ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಪ್ರಮುಖ ನಾಯಕ ಇಡವೇಳ ಬಾಬು ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಈ ಎಲ್ಲರ ವಿರುದ್ದ ದೂರು ದಾಖಲಿಸುವುದಾಗಿ ತಿಳಿಸಿದ್ದರು.
ಅದರಂತೆ, ನಟಿ ಬುಧವಾರ ರಾತ್ರಿ ಕೊಚ್ಚಿ ನಗರದ ಮಾರಾಡು ಪೊಲೀಸ್ ಠಾಣೆಯಲ್ಲಿ ಒಟ್ಟು ಏಳು ಮಂದಿಯ ವಿರುದ್ದ ಅತ್ಯಾಚಾರ, ಲೈಂಗಿಕ ದೌರ್ಜನ್ಯ ದೂರು ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ನಟ, ಶಾಸಕ ಮುಕೇಶ್, ನಟರಾದ ಜಯಸೂರ್ಯ, ಮಣಿಯನ್ ಪಿಳ್ಳ ರಾಜು, ಇಡವೇಳ ಬಾಬು, ಪ್ರೊಡಕ್ಷನ್ ಎಕ್ಸಿಕ್ಯೂಟಿವ್ಸ್ ನೋಬಲ್ ಮತ್ತು ವಿಚು, ನಿರ್ಮಾಪಕ ಮತ್ತು ವಕೀಲರ ಕಾಂಗ್ರೆಸ್ ನಾಯಕ ಅಡ್ವೊಕೇಟ್ ವಿ ಎಸ್ ಚಂದ್ರಶೇಖರನ್ ವಿರುದ್ದ ನಟಿ ದೂರು ದಾಖಲಿಸಿರುವುದಾಗಿ ವರದಿಯಾಗಿದೆ.
ನಟ, ಶಾಸಕ ಮುಕೇಶ್ ವಿರುದ್ದ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ನಟ ಜಯಸೂರ್ಯ ವಿರುದ್ದ ಸೆಕ್ಷನ್ 354 ಅಡಿ ಹಾಗೂ ಇತರರ ವಿರುದ್ದ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಜಾರಿಯಾಗುವ ಮುನ್ನವೇ ಎಲ್ಲಾ ಪ್ರಕರಣಗಳು ನಡೆದಿರುವುದರಿಂದ ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯೇ ಎಲ್ಲರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಹೇಮಾ ಸಮಿತಿ ವರದಿ ಬಹಿರಂಗೊಂಡ ಬಳಿಕ ಇಬ್ಬರು ನಟಿಯರ ದೂರಿನ ಮೇರೆಗೆ ಮಲಯಾಳಂ ಸಿನಿಮಾ ರಂಗದ ಪ್ರಮುಖರಾದ ನಿರ್ದೇಶಕ ರಂಜಿತ್, ನಟ ಸಿದ್ದೀಕ್ ವಿರುದ್ದ ಈಗಾಗಲೇ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಇದೀಗ ಮೂರನೇ ನಟಿಯ ದೂರು ಆಧರಿಸಿ ಏಳು ಮಂದಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳ ತನಿಖೆಯನ್ನು ಕೇರಳ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ನಡೆಸುವ ಸಾಧ್ಯತೆ ಇದೆ. ಹೇಮಾ ಸಮಿತಿ ವರದಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ಸರ್ಕಾರ ವಿಶೇಷ ಪೊಲೀಸ್ ತಂಡ ರಚಿಸಿದೆ.
ಇದನ್ನೂ ಓದಿ : ಮಲಯಾಳಂ ನಟ ಸಿದ್ದೀಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು


