ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ.
ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಅನುಮತಿಯನ್ನು ವಾಪಸ್ ಪಡೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮ ಪ್ರಶ್ನಿಸಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಉಮೇಶ್ ಎಂ. ಅಡಿಗ ಅವರ ವಿಭಾಗೀಯ ಪೀಠ ನಡೆಸಿದೆ.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆದಿದ್ದ ಕ್ರಮ ಪ್ರಶ್ನಿಸಿ ಸಿಬಿಐ & ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಆರಂಭಿಸಿದ ಕರ್ನಾಟಕ ಹೈಕೋರ್ಟ್.@DKShivakumar @CBIHeadquarters #KarnatakaHighCourt pic.twitter.com/98gPwxtSz7
— ಬಾರ್ & ಬೆಂಚ್ – Kannada Bar & Bench (@Kbarandbench) August 12, 2024
ಯತ್ನಾಳ್ ಅವರನ್ನು ಪ್ರತಿನಿಧಿಸಿದ್ದ ವಕೀಲ ವೆಂಕಟೇಶ್ ದಳವಾಯಿ ಅವರು “ಒಮ್ಮೆ ಸಿಬಿಐ ತನಿಖೆಗೆ ಒಪ್ಪಿಗೆ ನೀಡಿ ಅದನ್ನು ಹಿಂಪಡೆದರೆ ತನಿಖೆ ಮೊಟಕಾಗಲಿದೆಯೇ ಎಂಬುವುದು ನ್ಯಾಯಾಲಯ ಮುಂದಿರುವ ಪ್ರಶ್ನೆ. ಭ್ರಷ್ಟಾಚಾರ ವಿರೋಧಿ ಕಾಯ್ದೆಯಡಿ ಅಪರಾಧದ ತನಿಖೆ ನಡೆಸಲು ಸಿಬಿಐ ಸಂಪೂರ್ಣ ಸ್ವತಂತ್ರವಾಗಿರುತ್ತದೆ. ಇಲ್ಲಿ ಅರ್ಜಿದಾರರಿಗೆ ಸಂವಿಧಾನದ 131ನೇ ವಿಧಿ ಅನ್ವಯಿಸುವುದು ಊರ್ಜಿತವಾಗುವುದಿಲ್ಲ. ಒಮ್ಮೆ ಸಿಬಿಐ ಪ್ರಕರಣ ದಾಖಲಿಸಿದ ಮೇಲೆ ಅದು ತಾರ್ಕಿಕ ಅಂತ್ಯ ಕಾಣಬೇಕು. ಸಿಬಿಐ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ವಜಾ ಮಾಡಬೇಕು. ಇದರಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಪಾತ್ರ ಇರುವುದಿಲ್ಲ” ಎಂದು ಹೇಳಿದ್ದಾರೆ.
ಸಿಬಿಐ ಪರವಾಗಿ ವಾದ ಮಂಡಿಸಿರುವ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್, “ರಾಜ್ಯ ಸರ್ಕಾರ ಸಿಬಿಐಗೆ ನೀಡಿರುವ ಅನುಮತಿ ಹಿಂಪಡೆದರೂ ಸಿಬಿಐ ಎಫ್‌ಐಆರ್ ಬಾಕಿ ಉಳಿಯಲಿದೆ. ಇದು ಪ್ರಮುಖ ವಿಚಾರವಾಗಿದೆ. ಇನ್ನು ಸಿಬಿಐ ಎಫ್‌ಐಆರ್ ಪ್ರಶ್ನಿಸಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ” ಎಂದಿದ್ದಾರೆ.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ “ಸಿಬಿಐ ಕೇಂದ್ರ ಸರ್ಕಾರದ ಒಂದು ಘಟಕ, ಅದು ಸ್ವತಂತ್ರ ಸಂಸ್ಥೆಯಲ್ಲ. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಡಿ ಬರುವ ಸಿಬಿಐಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡುತ್ತದೆ. ಪಶ್ಚಿಮ ಬಂಗಾಳ ಪ್ರಕರಣದಲ್ಲಿ ಸಿಬಿಐ ಸೂಕ್ತ ಪಕ್ಷಕಾರರಲ್ಲ, ಕೇಂದ್ರ ಸರ್ಕಾರ ಸೂಕ್ತ ಪಕ್ಷಕಾರ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಮುಂದೆ ಡಿಕೆ ಶಿವಕುಮಾರ್ ಅವರು ಎಫ್‌ಐಆರ್ ರದ್ದುಪಡಿಸುವಂತೆ ಕೋರಿದ್ದರು. ಇಲ್ಲಿ ರಾಜ್ಯ ಸರ್ಕಾರದ ಪಾತ್ರ ಇರಲಿಲ್ಲ. ಸಿಬಿಐ ಮತ್ತು ಶಿವಕುಮಾರ್ ಪಕ್ಷಕಾರರಾಗಿದ್ದರು. ಸಿಬಿಐ ತನಿಖೆಗೆ ಅನುಮತಿ ನೀಡಿದ್ದು ಪ್ರಕರಣದ ವಿಚಾರವಾಗಿರಲಿಲ್ಲ” ಎಂದಿದ್ದಾರೆ.
“ಸಿಬಿಐಗೆ ಅನುಮತಿ ನೀಡುವ ವಿಚಾರದಲ್ಲಿ ಈ ಪ್ರಕರಣದಲ್ಲಿ ಸರ್ಕಾರ ವಂಚಿಸಿದೆ. ಹಿಂದಿನ ಬಿಜೆಪಿ ಸರ್ಕಾರದ (ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ) ಮೌಖಿಕ ನಿರ್ದೇಶನದ ಮೂಲಕ ಸಿಬಿಐಗೆ ಅನುಮತಿಸಿತ್ತು. ಈಗ ಸರ್ಕಾರ ಬದಲಾಗಿದ್ದು, ನ್ಯಾಯಾಲಯದ ಮುಂದೆ ಬಂದಿದೆ. ಎಫ್‌ಐಆರ್ ರದ್ದತಿ ವಿಚಾರದಲ್ಲಿ ಹೈಕೋರ್ಟ್ ಆದೇಶವು ಶಿವಕುಮಾರ್‌ಗೆ ಅನ್ವಯಿಸುತ್ತದೆಯೇ ವಿನಾ ರಾಜ್ಯ ಸರ್ಕಾರಕ್ಕಲ್ಲ. ಸಿಬಿಐಗೆ ವಾಸ್ತವಿಕ ವಿಚಾರಗಳು ನ್ಯಾಯಾಲಯದ ಮುಂದೆ ಬರುವುದು ಬೇಕಿಲ್ಲ” ಎಂದು ಹೇಳಿದ್ದಾರೆ.
ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ. ಕೆಲ ತಿಂಗಳ ಹಿಂದೆಯೇ ಈ ಪ್ರಕರಣದ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿತ್ತು. ಆದರೆ, ಕೆಲವು ವಿಚಾರಗಳಿಗೆ ಸ್ಪಷ್ಟನೆ ಬಯಸಿ ಮತ್ತೆ ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸಿತ್ತು.
ಕೃಪೆ : ಬಾರ್ & ಬೆಂಚ್
ಇದನ್ನೂ ಓದಿ : ಯುಜಿಸಿ-ನೆಟ್ ರದ್ದತಿ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್