ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಛತ್ತೀಸ್‌ಗಢದಲ್ಲಿ ಪ್ರಕರಣ ದಾಖಲಿಸಲಾಗಿದೆ. “ತಲೆ ಕತ್ತರಿಸಿ ಮೇಜಿನ ಮೇಲೆ ಇಡಬೇಕು” ಎಂದು ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ.
ಮೊಯಿತ್ರಾ ಅವರ ಹೇಳಿಕೆಗಳು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಅವಮಾನಿಸಿದ್ದು, ದ್ವೇಷ ಹರಡಿದೆ. ರಾಷ್ಟ್ರೀಯ ಏಕತೆಗೆ ಅಪಾಯವನ್ನುಂಟುಮಾಡಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಗೋಪಾಲ್ ಸಮಾಂಟೊ ಸಲ್ಲಿಸಿದ ದೂರಿನ ಆಧಾರದ ಮೇಲೆ ರಾಯ್‌ಪುರದ ಮಾನಾ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಭಾರತಕ್ಕೆ ಅಕ್ರಮ ಬಾಂಗ್ಲಾದೇಶಿಗಳ ಒಳನುಸುಳುವಿಕೆಯನ್ನು ತಡೆಯುವಲ್ಲಿ ವಿಫಲವಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತಲೆದಂಡವಾಗಬೇಕು ಎಂದು ಶುಕ್ರವಾರ ಅವರು ನೀಡಿದ್ದ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿದೆ.
ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೊಯಿತ್ರಾ, ಗಡಿ ಭದ್ರತೆ ಗೃಹ ಸಚಿವಾಲಯದ ಜವಾಬ್ದಾರಿಯಾಗಿದೆ. ಒಳನುಸುಳುವಿಕೆಗೆ ತೃಣಮೂಲ ಸರ್ಕಾರವನ್ನು ದೂಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಗೃಹ ಸಚಿವರಂತಹ ಹಿರಿಯ ಸಾಂವಿಧಾನಿಕ ಹುದ್ದೆಯ ವಿರುದ್ಧ ಇಂತಹ ಪ್ರಚೋದನಕಾರಿ ಭಾಷೆ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದಲ್ಲದೆ, ವಿಚ್ಛಿದ್ರಕಾರಕ ಅಂಶಗಳನ್ನು ಪ್ರೋತ್ಸಾಹಿಸಬಹುದು ಎಂದು ದೂರುದಾರರು ವಾದಿಸಿದ್ದಾರೆ.
“ನಾನು ತುಂಬಾ ಭಾರವಾದ ಹೃದಯದಿಂದ ದೂರು ದಾಖಲಿಸಿದ್ದೇನೆ. ಅವರಂತೆಯೇ ಅದೇ ಸಮುದಾಯದಿಂದ ಬಂದಿದ್ದೇನೆ. ಸಂಸದರು ಗೃಹ ಸಚಿವರ ಬಗ್ಗೆ ಮುಜುಗರದ ರೀತಿಯಲ್ಲಿ ತಪ್ಪಾಗಿ ಮಾತನಾಡುವುದು ಇಡೀ ಸಮುದಾಯಕ್ಕೆ ಮಾಡಿದ ಅವಮಾನ. ಅವರಿಗೆ ಶಿಕ್ಷೆಯಾಗುವಂತೆ ಮತ್ತು ಅವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಖಚಿತಪಡಿಸಿಕೊಳ್ಳುವುದು ಈ ದೂರಿನ ಉದ್ದೇಶವಾಗಿದೆ” ಎಂದು ಸಮಂತೋ ರಾಯ್‌ಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸೆಕ್ಷನ್ 196 ಮತ್ತು 197 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ದ್ವೇಷವನ್ನು ಉತ್ತೇಜಿಸುವುದು, ಸಾಮಾಜಿಕ ಸಾಮರಸ್ಯವನ್ನು ಕದಡುವುದು ಮತ್ತು ಸಾಂವಿಧಾನಿಕ ಅಧಿಕಾರಿಗಳ ವಿರುದ್ಧ ಆರೋಪಗಳನ್ನು ಉಂಟುಮಾಡುವ ಸೆಕ್ಷನ್‌ಗಳನ್ನು ಒಳಗೊಂಡಿದೆ.
ಈ ಬಗ್ಗೆ ವಿವಾದ ಭುಗಿಲೆದ್ದ ನಂತರ, ಕೃಷ್ಣನಗರ ಸಂಸದರ ತೀಕ್ಷ್ಣವಾದ ಮಾತುಗಳು ಬಿಜೆಪಿಯಿಂದ ತಕ್ಷಣದ ಖಂಡನೆಗೆ ಗುರಿಯಾದವು. ಅವರ ಹೇಳಿಕೆಗಳು ‘ತಾಲಿಬಾನಿ ಮನಸ್ಥಿತಿಯನ್ನು’ ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ. ಪಶ್ಚಿಮ ಬಂಗಾಳದ ಪೊಲೀಸ್ ಠಾಣೆಯಲ್ಲಿ ಮಹುವಾ ವಿರುದ್ಧ ಪ್ರತ್ಯೇಕ ದೂರು ಕೂಡ ದಾಖಲಾಗಿದೆ.
ಮೊಯಿತ್ರಾ ಅವರ ಮಾತುಗಳು “ಐಸಿಸ್ ಶೈಲಿಯ ವಾಕ್ಚಾತುರ್ಯ”ವನ್ನು ಪ್ರತಿಧ್ವನಿಸುತ್ತಿವೆ, ತೃಣಮೂಲ ಪಕ್ಷವು ಹಿಂಸಾತ್ಮಕ ರಾಜಕೀಯ ಭಾಷೆಯನ್ನು ಸಾಮಾನ್ಯಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ಲಾ ಹೇಳಿದ್ದಾರೆ. ಮತ್ತೊಬ್ಬ ಬಿಜೆಪಿ ನಾಯಕ, ಅವರ ಹೇಳಿಕೆಗಳು ಭಾರತದ ಪ್ರಜಾಪ್ರಭುತ್ವ ಸಂಸ್ಕೃತಿಗೆ ಮಾಡಿದ ಅವಮಾನ ಎಂದು ಕರೆದರು.
ಆದರೆ, ಮೊಯಿತ್ರಾ ಬಿಜೆಪಿಯ ಟೀಕೆಗಳಿಂದ ವಿಚಲಿತರಾಗಲಿಲ್ಲ. ಬಿಜೆಪಿಯನ್ನು ಅಪಹಾಸ್ಯ ಮಾಡಿದ ಅವರು, “ಬಿಜೆಪಿಯವರು ಜಿಗಿಯುವುದು ಮತ್ತು ಹಾರುವುದು” ತಮಾಷೆಯಾಗಿದೆ ಎಂದು ಹೇಳಿದರು.
ಎಸ್‌ಐಆರ್ ನಂತರ ಬಿಹಾರದ ಎಲ್ಲ ಮತದಾರರಿಗೆ ಹೊಸ ಕಾರ್ಡ್: ಚುನಾವಣಾ ಆಯೋಗ