ಎಐ ರಚಿತ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಯುವಕನೊಬ್ಬನಿಗೆ, ಇನ್ನೊಬ್ಬ ವ್ಯಕ್ತಿಯ ಪಾದಗಳನ್ನು ತೊಳೆಯುವಂತೆ ಮತ್ತು ಬ್ರಾಹ್ಮಣ ಸಮುದಾಯದವರಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಲಾಗಿದೆ ಎಂಬ ಆರೋಪದ ಕುರಿತು ಮಧ್ಯಪ್ರದೇಶದ ದಾಮೋಹ್ ಜಿಲ್ಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸತಾರಿಯಾ ಗ್ರಾಮದ ನಿವಾಸಿ ಪುರುಷೋತ್ತಮ ಕುಶ್ವಾಹ ಎಂಬಾತ, ತನ್ನ ಗ್ರಾಮದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಅನುಜ್ ಪಾಂಡೆ ಎಂಬ ವ್ಯಕ್ತಿ ಶೂಗಳ ಹಾರವನ್ನು ಧರಿಸಿರುವ ಎಐ ರಚಿತ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಅಲ್ಲದೆ, ಅನುಜ್ ಪಾಂಡೆ ಮದ್ಯ ಮಾರಾಟ ನಿಷೇಧಿಸಿರುವ ಗ್ರಾಮದ ಸಾಮೂಹಿಕ ನಿರ್ಧಾರವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದರು ಎನ್ನಲಾಗಿದೆ.
ಕುಶ್ವಾಹ 15 ನಿಮಿಷಗಳಲ್ಲಿ ತಾನು ಹಾಕಿದ್ದ ಪೋಸ್ಟ್ ಡಿಲಿಟ್ ಮಾಡಿ ಕ್ಷಮೆಯಾಚಿಸಿದ್ದರು. ಆದರೂ, ಗ್ರಾಮದ ಪ್ರಬಲ ವರ್ಗದ ಜನರು ಆತನ ಮೇಲೆ ಆಕ್ರೋಶಗೊಂಡಿದ್ದರು.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಕುಶ್ವಾಹ, ಪ್ರಬಲ ಜಾತಿಯ ಪಾಂಡೆಯ ಪಾದಗಳನ್ನು ತೊಳೆಯುತ್ತಿರುವುದು ಮತ್ತು “ನಾನು ಬ್ರಾಹ್ಮಣ ಸಮುದಾಯಕ್ಕೆ ಕ್ಷಮೆಯಾಚಿಸುತ್ತಿದ್ದೇನೆ. ಇಂತಹ ತಪ್ಪು ಮತ್ತೆ ಸಂಭವಿಸುವುದಿಲ್ಲ. ನಾವು ಬ್ರಾಹ್ಮಣರನ್ನು ಹೀಗೆಯೇ ಪೂಜಿಸುತ್ತಲೇ ಇರುತ್ತೇವೆ” ಎಂದು ಹೇಳಿರುವುದನ್ನು ನೋಡಬಹುದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
ವೈರಲ್ ಆಗಿರುವ ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ದಾಮೋಹ್ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ತಿವಾರಿ ತಿಳಿಸಿದ್ದಾರೆ. ಗ್ರಾಮದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡಲು, ಕ್ರಮ ಕೈಗೊಳ್ಳಲಾಗುತ್ತಿದೆ. ಪೊಲೀಸ್ ತಂಡಗಳು ಗ್ರಾಮದಲ್ಲಿ ನಿರಂತರವಾಗಿ ಗಸ್ತು ತಿರುಗುತ್ತಿವೆ ಎಂದು ತಿವಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗ್ರಾಮದಲ್ಲಿ ಶಾಂತಿ ಕಾಪಾಡಲು ಹಿರಿಯ ಅಧಿಕಾರಿಗಳು ಮತ್ತು ಗ್ರಾಮದ ಪ್ರಮುಖರ ನಡುವೆ ಮಾತುಕತೆ ನಡೆಸಲಾಗಿದೆ. ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪಟೇರಾ ಪೊಲೀಸ್ ಠಾಣೆಯ ಉಸ್ತುವಾರಿಗೆ ಸೂಚಿಸಲಾಗಿದೆ. ಜಾತಿ ದೌರ್ಜನ್ಯದ ಕುರಿತು ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಸತಾರಿಯಾ ಗ್ರಾಮದಲ್ಲಿ ಮದ್ಯ ನಿಷೇಧವನ್ನು ಜನರೇ ಕಟ್ಟು ನಿಟ್ಟಾಗಿ ಜಾರಿಗೆ ತಂದಿದ್ದಾರೆ. ಇದನ್ನು ಉಲ್ಲಂಘಿಸಿ ಮದ್ಯ ಮಾರಾಟ ಮಾಡಿದ ಆರೋಪ ಅನುಜ್ ಪಾಂಡೆ ವಿರುದ್ದ ಕೇಳಿ ಬಂದಿತ್ತು. ಈ ಕಾರಣಕ್ಕೆ ಆತನಿಗೆ ಗ್ರಾಮದಾದ್ಯಂತ ತಿರುಗಾಡಿ ಕ್ಷಮೆ ಯಾಚಿಸುವಂತೆ ಮತ್ತು 2,100 ರೂ. ದಂಡ ಪಾವತಿಸಲು ಸೂಚಿಸಲಾಗಿತ್ತು. ಈ ಕುರಿತ ಎಐ ರಚಿತ ಚಿತ್ರವನ್ನು ಪುರುಷೋತ್ತಮ ಖುಶ್ವಾಹ ಪೋಸ್ಟ್ ಮಾಡಿದ್ದರು ಎನ್ನಲಾಗಿದೆ.
ಖುಶ್ವಾಹ ಅವರ ಪೋಸ್ಟ್ ನೋಡಿ ಪಾಂಡೆ ಮತ್ತು ಆತನ ಸಮುದಾಯದವರು ಆಕ್ರೋಶಗೊಂಡಿದ್ದರು. ಪಾಂಡೆ ಖುಶ್ವಾಹ ಮತ್ತು ಆತನ ಕುಟುಂಬವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎನ್ನಲಾಗಿದೆ.
ಇದು ಬಳಿಕ ಜಾತಿ ಸಂಘರ್ಷಕ್ಕೆ ಕಾರಣವಾಗಿದೆ. ಅಕ್ಕಪಕ್ಕದ ಹಳ್ಳಿಗಳ ಬ್ರಾಹ್ಮಣರು ಒಟ್ಟುಗೂಡಿ, ಖುಶ್ವಾಹ ಹಾಕಿರುವ ಪೋಸ್ಟ್, ಕೇವಲ ಅನುಜ್ ಪಾಂಡೆಗೆ ಮಾಡಿದ ಅವಮಾನವಲ್ಲ, ಇಡೀ ಬ್ರಾಹ್ಮಣ ಸಮುದಾಯಕ್ಕೆ ಮಾಡಿದ ಅವಮಾನ ಎಂದು ತೀರ್ಮಾನಿಸಿದ್ದಾರೆ.
ವಿಡಿಯೋ ವೈರಲ್ ಆದ ಬಳಿಕ ಮಾತನಾಡಿರುವ ಪಾಂಡೆ, “ನಾವು ಖುಶ್ವಾಹಗೆ ಜಾತಿ ದೌರ್ಜನ್ಯ ಎಸಗಿಲ್ಲ. ಆತನದ್ದು ಮತ್ತು ನನ್ನದು ಗುರು ಶಿಷ್ಯರ ರೀತಿಯ ಸಂಬಂಧ. ಆತ ಮಾಡಿದ ತಪ್ಪಿಗೆ ನನ್ನ ಪಾದ ತೊಳೆದು ಕ್ಷಮೆ ಯಾಚಿಸಿದ್ದಾನೆ ಎಂದಿದ್ದಾರೆ.
ಪ್ರತೀಕಾರದ ಭಯದಿಂದಾಗಿ ಕುಶ್ವಾಹ ಮತ್ತು ಅವರ ಕುಟುಂಬವು ಈ ವಿಷಯದ ಬಗ್ಗೆ ಮಾತನಾಡಲು ಅಥವಾ ಔಪಚಾರಿಕ ದೂರು ದಾಖಲಿಸಲು ಹಿಂಜರಿಯುತ್ತಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ: ಆರ್‌ಎಸ್‌ಎಸ್ ಶಿಬಿರಗಳಲ್ಲಿ ಲೈಂಗಿಕ ದೌರ್ಜನ್ಯ ಆರೋಪ