ಇಂದಿನ (ಜ.16) ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಜಾತಿ ಗಣತಿ ವರದಿಯನ್ನು ಮಂಡಿಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಯೂ ಟರ್ನ್ ಹೊಡೆದಿದ್ದು, ಇಂದಿನ ಸಭೆಯಲ್ಲಿ ವರದಿ ಮಂಡನೆ ಇಲ್ಲ ಎಂದಿದ್ದಾರೆ.
ಬುಧವಾರ (ಜ.15) ನವದೆಹಲಿಯಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಕನ್ನಡ ಭವನದ ನೂತನ ಕಟ್ಟಡವನ್ನು ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ” ಜಾತಿ ಗಣತಿ ವರದಿಯಲ್ಲಿರುವ ಅಂಕಿ ಅಂಶ ಇನ್ನೂ ಸಾರ್ವಜನಿಕವಾಗದೇ, ಊಹಾಪೋಹಗಳಾಗಿರುವುದರಿಂದ, ಈ ವಿಚಾರದ ಬಗ್ಗೆ ವಿರೋಧ ಅನವಶ್ಯಕ. ನಾಳೆ ನಡೆಯುವ ಸಂಪುಟಸಭೆಯಲ್ಲಿ ಜಾತಿ ಗಣತಿ ವರದಿಯ ವಿಷಯವನ್ನು ಮಂಡಿಸಲಾಗುವುದಿಲ್ಲ. ಮುಂದಿನ ಸಂಪುಟಸಭೆಯಲ್ಲಿ ವಿಷಯ ಮಂಡಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ಸಮೀಕ್ಷೆ ನಡೆಸಿ ಸಿದ್ದಪಡಿಸಿರುವ ವರದಿಯನ್ನು ಸರ್ಕಾರ ಸ್ವೀಕರಿಸಲೇಬಾರದು ಎಂದು ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳು ಪಟ್ಟು ಹಿಡಿದಿವೆ. ‘ಇದೊಂದು ಅವೈಜ್ಞಾನಿಕ ವರದಿ’, ಅಂಕಿ ಅಂಶಗಳು ಊಹಾಪೋಹದಿಂದ ಕೂಡಿವೆ. ಈ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು ಎಂದು ಒಕ್ಕಲಿಗ ಹಾಗೂ ಲಿಂಗಾಯತ ಸಂಘಟನೆಗಳು ಒತ್ತಾಯಿಸಿವೆ.
ಹಾಗಾಗಿ, ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳ ಒತ್ತಡಕ್ಕೆ ಮಣಿದಿರುವ ಸರ್ಕಾರ ಜಾತಿ ಗಣತಿ ವರದಿ ಮಂಡನೆಯನ್ನು ಮುಂದೂಡಿದೆ ಎಂದು ವರದಿಗಳು ಹೇಳಿವೆ.
ಈ ಹಿಂದಿನ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ, ಅಂದರೆ 2015ರಲ್ಲಿ 160 ಕೋಟಿ ರೂಪಾಯಿ ವೆಚ್ಚ ಮಾಡಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ನಡೆಸಿ ವರದಿ ಸಿದ್ದಪಡಿಸಲಾಗಿದೆ. ನ್ಯಾಯಮೂರ್ತಿ ಹೆಚ್. ಕಾಂತರಾಜು ಆಯೋಗ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ ಈ ವರದಿಯನ್ನು ಸಿದ್ದಪಡಿಸಿದೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರಕ್ಕೆ ವರದಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. 2023ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರು ಸಿಎಂ ಆದ ಬಳಿಕ ವರದಿಯನ್ನು ಸರ್ಕಾರ ಸ್ವೀಕರಿಸಿದೆ. ಆದರೆ, ಅದರ ಮಂಡನೆಗೆ ಮೀನಾಮೇಷಾ ಎನಿಸುತ್ತಿದೆ.
ರಾಷ್ಟ್ರಮಟ್ಟದಲ್ಲಿ ಜಾತಿಗಣತಿಗೆ ಲೋಹಿಯಾ ವಿಚಾರ ವೇದಿಕೆ ಒತ್ತಾಯ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಣಯಕ್ಕೆ ಆಗ್ರಹ


