ದೀಪಾ ಕೆ ಮೋಹನನ್ ಎಂಬ ದಲಿತ ಸಂಶೋಧನಾ ವಿದ್ಯಾರ್ಥಿಯೊರ್ವರು ತನ್ನ ಜಾತಿ ಕಾರಣಕ್ಕೆ 10 ವರ್ಷವಾದರೂ ತನ್ನ ಪಿಎಚ್‌ಡಿ ಪೂರ್ಣಗೊಳಿಸಲು ವಿಶ್ವವಿದ್ಯಾಲಯ ನಿರಾಕರಿಸುತ್ತಿದೆ ಎಂದು ಆರೋಪಿಸಿ ಕೇರಳದ ಕೊಟ್ಟಾಯಂನಲ್ಲಿರುವ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಇಂಟರ್ನ್ಯಾಷನಲ್ ಮತ್ತು ಇಂಟರ್ ಯೂನಿವರ್ಸಿಟಿ ಸೆಂಟರ್ ಫಾರ್ ನ್ಯಾನೊಸೈನ್ಸ್ ಮತ್ತು ನ್ಯಾನೊಟೆಕ್ನಾಲಜಿ (IIUCNN) ವಿಭಾಗದ ನಿರ್ದೇಶಕರಾದ ನಂದಕುಮಾರ್ ಕಲರಿಕಲ್ ಜಾತಿ ತಾರತಮ್ಯವೆಸಗಿ ತನ್ನ ಪಿಎಚ್‌ಡಿ ಪದವಿಗೆ ಅಡ್ಡಿಯಾಗಿದ್ದಾರೆ ಎಂದು ಆರೋಪಿಸಿ ನಡೆಯುತ್ತಿರುವ ಅವರ ಉಪವಾಸ ಸತ್ಯಾಗ್ರಹ ಇಂದಿಗೆ ಏಳನೇ ದಿನಕ್ಕೆ ತಲುಪಿದೆ.
ಈ ವಿಷಯದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಧ್ಯಪ್ರವೇಶಿಸಿ ದಲಿತ ವಿದ್ಯಾರ್ಥಿನಿಗೆ ನ್ಯಾಯ ಕೊಡಿಸಬೇಕು, ಇದು ಇನ್ನೊಂದು ರೋಹಿತ್ ವೇಮುಲಾ ಪ್ರಕರಣ ಆಗದಂತೆ ತಡೆಯಬೇಕು ಎಂದು ನೂರಾರು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
Bhim Army kerala is taking over the struggle of Deepa P Mohanan, who has not been able to complete her research since last 10 years at Kottayam MG University due to caste discrimination. Bhim army will never let the manuvadi culprits to teach over any students.@BhimArmyChief pic.twitter.com/sFs3uN5UJe
— BHIM ARMY KERALA (@BhimArmyKerala) October 28, 2021
ಮೆಡಿಕಲ್ ಮೈಕ್ರೋಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ದೀಪಾ, ನಂತರ 2011 ರಲ್ಲಿ MG ಯುನಿವರ್ಸಿಟಿ (MGU) ಗೆ ಸೇರಿದರು. ಬಳಿಕ, ತಾವು ಯೂನಿವರ್ಸಿಟಿಗೆ ಸೇರಿದ ಮೊದಲ ವರ್ಷದಿಂದಲೂ ನಂದಕುಮಾರ್ ಕಲರಿಕಲ್ ಅವರು ದಲಿತೆ ಎಂಬ ಕಾರಣಕ್ಕೆ ತನ್ನ ಶಿಕ್ಷಣಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳುತ್ತಾರೆ.
ದೀಪಾ ಅವರು ಇನ್ಸ್ಟಿಟ್ಯೂಟ್‌ನಲ್ಲಿ ಸಂಶೋಧನೆ ಪ್ರಾರಂಭಿಸಿದಾಗ ಜಂಟಿ ನಿರ್ದೇಶಕರಾಗಿದ್ದ ಮತ್ತು ಈಗ IIUCNN ನಲ್ಲಿ ನಿರ್ದೇಶಕರಾಗಿರುವ ನಂದಕುಮಾರ್ ಆಕೆ ಲ್ಯಾಬ್‌ಗೆ ಪ್ರವೇಶಿಸುವುದನ್ನು, ಲ್ಯಾಬ್‌ನಲ್ಲಿ ಕೆಮಿಕಲ್‌ಗಳು ಮತ್ತು ಪಾಲಿಮರ್‌ಗಳನ್ನು ಬಳಸುವುದನ್ನು ನಿರಾಕರಿಸಿದ್ದರು. ಕೂರಲು ಕುರ್ಚಿ ಸಹ ನೀಡುತ್ತಿರಲಿಲ್ಲ ಮಾತ್ರವಲ್ಲದೆ ಅವರಿಗೆ ಬರುವ ಸ್ಟೈಫಂಡ್ ಅನ್ನು ಕೂಡ ತಡೆಹಿಡಿಯಲು ಮುಂದಾಗಿದ್ದರು ಎನ್ನಲಾಗಿದೆ.
ಒಮ್ಮೆ ತಾನು ಲ್ಯಾಬ್‌ನಲ್ಲಿ ಏಕಾಂಗಿಯಾಗಿದ್ದಾಗ, ತನ್ನನ್ನು ಕೂಡಿ ಹಾಕಿದ್ದರು. ತನ್ನ ಬ್ಯಾಚ್‌ನಲ್ಲಿರುವ ಏಕೈಕ ದಲಿತ ಸ್ಕಾಲರ್ ಆಗಿರುವ ತನ್ನೊಂದಿಗೆ ಅಸಭ್ಯವಾಗಿ ಮತ್ತು ನಿಂದನೀಯವಾಗಿ ವರ್ತಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಪಿಎಚ್‌ಡಿ ಪಡೆಯದಂತೆ ತಡೆಯಲು ಎಲ್ಲಾ ರೀತಿಯಲ್ಲೂ ಯತ್ನಿಸುತ್ತಿದ್ದಾರೆ ಎಂದು ದೀಪಾ ಆರೋಪಿಸಿದ್ದಾರೆ.
Our sister Deepa P Mohanan is on hunger strike at MG university kottayam, Kerala.This is the 7th day of her hunger strike. As a person with heart disease. Her health condition is worsoned. This a struggle to achieve the basic citizen rights, right to equality,education and life. pic.twitter.com/rFTFr3c081
— Susheel shinde (@Shinde_Voice) November 4, 2021
“ನಾನು ಈಗಾಗಲೇ ಎಂಫಿಲ್ ಅನ್ನು ಪಡೆದಿದ್ದೇನೆ. 2015 ರ ವೇಳೆಗೆ ನನ್ನ ಪಿಎಚ್‌ಡಿಯನ್ನು ಸಮರ್ಪಕವಾಗಿ ಮುಗಿಸಬಹುದಿತ್ತು. ಆದರೆ, 2021 ಕೊನೆಗೊಳ್ಳುತ್ತಿದೆ. ಪಿಎಚ್‌ಡಿ ಮುಗಿಸಲು ನಾನು ಇನ್ನೂ ಕಷ್ಟಪಡುತ್ತಿದ್ದೇನೆ. ನನ್ನ ನ್ಯಾನೊಮೆಡಿಸಿನ್ ಯೋಜನೆಗಾಗಿ ನಾನು ಸಂಶ್ಲೇಷಣೆಯನ್ನು ಮಾಡಿದ್ದೇನೆ. ನಾನು ಸ್ಕ್ಯಾಫೋಲ್ಡ್ ಅನ್ನು ಅಭಿವೃದ್ಧಿಪಡಿಸಿದ್ದೇನೆ ಮತ್ತು ಅದನ್ನು ಆಪ್ಟಿಮೈಸ್ ಮಾಡಿದ್ದೇನೆ. ಆದರೆ ನಂದಕುಮಾರ್‌ನಿಂದಾಗಿ ನನಗೆ ಇನ್ನೂ ಪಿಎಚ್‌ಡಿ ಮುಗಿಸಲು ಸಾಧ್ಯವಾಗಿಲ್ಲ” ಎಂದು ದೀಪಾ ಹೇಳಿದ್ದಾರೆ.
ತನ್ನ ಸಂಶೋಧನಾ ಮಾರ್ಗದರ್ಶಿಯನ್ನು ಬದಲಾಯಿಸಬೇಕು, ಎಲ್ಲಾ ಇತರ ಪಿಎಚ್‌ಡಿ ವಿದ್ಯಾರ್ಥಿಗಳಂತೆ ಆಕೆಗೆ ತನ್ನ ಸಂಶೋಧನೆಯನ್ನು ಪೂರ್ಣಗೊಳಿಸಲು ಸಾಮಗ್ರಿಗಳನ್ನು ಒದಗಿಸಬೇಕು ಮತ್ತು ನನ್ನ ವಿದ್ಯಾಭ್ಯಾಸಕ್ಕೆ ಅಡ್ಡಿಯಾದ ನಂದಕುಮಾರ್ ಕಲರಿಕಲ್ ಅವರನ್ನು ಸಂಸ್ಥೆಯಿಂದ ತೆಗೆದುಹಾಕಬೇಕು ಎಂಬ ಮೂರು ಹಕ್ಕೊತ್ತಾಯಗಳನ್ನಿಟ್ಟು ಅಕ್ಟೋಬರ್ 29 ರಿಂದ ದೀಪಾ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ
ನವೆಂಬರ್ 1 ರಂದು ವಿಶ್ವವಿದ್ಯಾನಿಲಯವು ದೀಪಾರೊಂದಿಗೆ ಸಭೆ ನಡೆಸಿ ಅವರ ಮೊದಲ ಎರಡು ಬೇಡಿಕೆಗಳನ್ನು ಪೂರೈಸಲು ಒಪ್ಪಿಕೊಂಡದೆ. ಆದರೆ ತಾಂತ್ರಿಕ ಕಾರಣಗಳಿಂದ ನಂದಕುಮಾರ್ ಅವರನ್ನು IIUCNN ನಿಂದ ತೆಗೆದುಹಾಕಲು ನಿರಾಕರಿಸಿದೆ.
Committee member of ASA, Sabari G Rajan met and extended our solidarity to Deepa P Mohanan, PhD scholar from MG university who has been on hunger strike demanding justice against caste discrimination by the university administration. Jai Bhim! #StandWithDeepaMohanan pic.twitter.com/ougoaheR7I
— ASA HCU (@asahcu) November 3, 2021
ದೀಪಾ ಅವರು 2015ರಲ್ಲಿ ನಂದಕುಮಾರ್ ವಿರುದ್ಧ ಜಾತಿ ತಾರತಮ್ಯದ ದೂರು ಸಲ್ಲಿಸಿದ್ದರು. ಆಗ ವಿಶ್ವವಿದ್ಯಾನಿಲಯವು ಆರೋಪಗಳನ್ನು ಪರಿಶೀಲಿಸಲು ಎನ್ ಜಯಕುಮಾರ್ ಮತ್ತು ಕೆಎಸ್ ಇಂದು ಅವರ ದ್ವಿಸದಸ್ಯ ಸಮಿತಿಯನ್ನು ರಚಿಸಿತ್ತು. ಸಮಿತಿಯು ದೀಪಾ ಅವರ ಆರೋಪ ನಿಜವೆಂದು ವರದಿ ನೀಡಿತು. ಅಲ್ಲದೆ, ದೀಪಾ ಅವರ ಸಂಶೋಧನೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ವಿಶ್ವವಿದ್ಯಾಲಯವು ಒದಗಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.
ಅದರ ನಂತರವೂ ಏನೂ ಬದಲಾಗಿಲ್ಲ. ದೀಪಾ ದೂರು ನೀಡಲು ರಾಜ್ಯಪಾಲರನ್ನು ಭೇಟಿ ಮಾಡಲು ಯತ್ನಿಸಿದಾಗ ಅವರನ್ನು ಪೊಲೀಸರು ಬಂಧಿಸಿ ಎರಡು ದಿನಗಳ ಕಾಲ ಠಾಣೆಯಲ್ಲಿ ಇರಿಸಿದ್ದರು. ನಂದಕುಮಾರ್ ಕೇರಳದ ಸಿಪಿಐ(ಎಂ)ನ ಉನ್ನತ ನಾಯಕರ ನಿಕಟವರ್ತಿಯಾಗಿರುವುದು ಇದಕ್ಕೆ ಕಾರಣ ಎಂದು ದೀಪಾ ಈ ಹಿಂದೆ ಆರೋಪಿಸಿದ್ದರು. ಇದಕ್ಕಾಗಿಯೇ, ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾಗಿರುವ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ದಂತಹ ವಿದ್ಯಾರ್ಥಿ ಒಕ್ಕೂಟಗಳು ಸಹ ತನ್ನನ್ನು ಬೆಂಬಲಿಸಿಲ್ಲ ಎಂದು ದೀಪಾ ಹೇಳಿದ್ದಾರೆ.
ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ 2016ರಲ್ಲಿ ನಂದಕುಮಾರ್ ವಿರುದ್ಧ ದೀಪಾ ಪೊಲೀಸ್ ದೂರು ದಾಖಲಿಸಿದ್ದರು. ತದನಂತರ, ಆತ ನನ್ನ ವಿರುದ್ಧ ಹೆಚ್ಚು ಸೇಡು ತೀರಿಸಿಕೊಂಡರು. ಅವರು ನನ್ನನ್ನು IIUCNN ನಿಂದ ವಜಾಗೊಳಿಸುವಂತೆ ಹಲವು ಬಾರಿ ವಿಶ್ವವಿದ್ಯಾಲಯಕ್ಕೆ ಪತ್ರಗಳನ್ನು ಬರೆದಿದ್ದಾರೆ. ಅಧ್ಯಯನ ಕೇಂದ್ರದಲ್ಲಿ ಎಲ್ಲವನ್ನೂ ನಿರ್ಧರಿಸುವವರು ಅವರೇ. ವಿಸಿ ಅವರನ್ನು ರಕ್ಷಿಸುತ್ತಿರುವುದರಿಂದ ನಾನು ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುತ್ತಿದ್ದೇನೆ” ಎಂದು ದೀಪಾ ಹೇಳಿದ್ದಾರೆ.
“ನಾನು ರಕ್ತಹೀನತೆಗೆ ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ ಮತ್ತು ನನಗೆ ಹುಟ್ಟಿನಿಂದಲೂ ವಿಎಸ್‌ಡಿ (ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್) ಸಮಸ್ಯೆ ಇದೆ. ಹಾಗಾಗಿ ನಾನು ಈ ಉಪವಾಸ ಸತ್ಯಾಗ್ರಹದಲ್ಲಿ ಪ್ರಾಣ ಕಳೆದುಕೊಂಡರೆ ಅದಕ್ಕೆ ಕಾರಣ ನಂದಕುಮಾರ್ ಕಲರಿಕಲ್, ವಿ.ಸಿ.ಸಾಬು ಥಾಮಸ್, ಸಂಶೋಧನಾ ಮಾರ್ಗದರ್ಶಕ ಡಾ.ರಾಧಾಕೃಷ್ಣನ್ ಇ.ಕೆ ಮತ್ತು ಈ ಸರ್ಕಾರ” ಎಂದು ಅವರು ಅಕ್ಟೋಬರ್ 31 ರಂದು ತಮ್ಮ ಫೇಸ್‌ಬುಕ್‌ನಲ್ಲಿ ಬಹಿರಂಗ ಪತ್ರ ಬರೆದಿದ್ದಾರೆ.
“ರೋಹಿತ್ ವೇಮುಲ ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನನಗೆ ಈ ಪರಿಸ್ಥಿತಿಯಲ್ಲಿ ಅರ್ಥವಾಗುತ್ತದೆ. ಆದರೆ, ನ್ಯಾಯಕ್ಕಾಗಿ ಹೋರಾಡದೆ ನಾನು ಪ್ರತಿಭಟನೆಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ನನ್ನ ಜನರಿಗಾಗಿ ಹೋರಾಡಬೇಕು. ಸೋತ ಅನೇಕರಿಗಾಗಿ ನಾನು ಇಲ್ಲಿ ಗೆಲ್ಲಬೇಕು” ಎಂದೂ ಅವರು ಬರೆದಿದ್ದಾರೆ.
ಭೀಮ್ ಆರ್ಮಿ ಕೇರಳ, ಬಿರ್ಸಾ ಅಂಬೇಡ್ಕರ್ ಫುಲೆ ಸ್ಟೂಡೆಂಟ್ಸ್ ಅಸೋಸಿಯೇಷನ್ ಮತ್ತು ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್ ಸೇರಿದಂತೆ ಹಲವು ಸಂಘಟನೆಗಳು ದೀಪಾ ಅವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿವೆ.
ಇದನ್ನೂ ಓದಿ: ದಲಿತರಿಗೆ ಕ್ಷೌರ ಮಾಡುವುದಿಲ್ಲ: ಮಂಡ್ಯ ಜಿಲ್ಲೆಯಲ್ಲಿ ಬಹಿರಂಗ ಅಸ್ಪೃಶ್ಯತೆ ಆಚರಣೆ



ದೀಪಾ ಅವರಿಗೆ ನ್ಯಾಯ ದೊರಕಬೇಕು.
Provide Justice to Deepa. This is happening almost all university in India. Really shameless.