ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯದ ವಿರುದ್ದ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಸಂಬಂಧ ಮಾಹಿತಿ ಒದಗಿಸುವಂತೆ ವಿಶ್ವವಿದ್ಯಾನಿಲಯಗಳ ಧನ ಸಹಾಯ ಆಯೋಗ (ಯುಜಿಸಿ)ಕ್ಕೆ ಶುಕ್ರವಾರ (ಜ.3) ಸೂಚಿಸಿದೆ.
ಯುಜಿಸಿಯ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಉತ್ತೇಜನ) ನಿಯಮಗಳು-2012ರ ಅಡಿ ಎಷ್ಟು (ಕೇಂದ್ರ, ರಾಜ್ಯ, ಖಾಸಗಿ, ಡೀಮ್ಡ್) ವಿಶ್ವವಿದ್ಯಾನಿಲಯಗಳಲ್ಲಿ ಸಮಾನ ಅವಕಾಶದ ಘಟಕ ಸ್ಥಾಪನೆಯಾಗಿವೆ ಮತ್ತು ಅದರಡಿ ತಾರತಮ್ಯಕ್ಕೆ ಸಂಬಂಧಿಸಿದ ಎಷ್ಟು ದೂರುಗಳನ್ನು ಸ್ವೀರಿಸಲಾಗಿದೆ ಎಂಬ ದತ್ತಾಂಶ ನೀಡುವಂತೆ ಯುಜಿಸಿಗೆ ಕೋರ್ಟ್ ಆದೇಶಿಸಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯದ ವಿರುದ್ದ ಕ್ರಮಕೈಗೊಳ್ಳುವಂತೆ ಜಾತಿ ದೌರ್ಜನ್ಯಕ್ಕೆ ಬಲಿಯಾದ ವಿದ್ಯಾರ್ಥಿಗಳಾದ ರೋಹಿತ್ ವೇಮುಲಾ ಮತ್ತು ಪಾಯಲ್ ತದ್ವಿಯ ತಾಯಂದಿರು ಸುಪ್ರೀಂ ಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದಾರೆ.
ಅರ್ಜಿದಾರರ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಮತ್ತು ವಕೀಲೆ ದಿಶಾ ವಾಡೇಕರ್ ಅವರ ವಾದ ಆಲಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠ, ಯುಜಿಸಿಯಿಂದ ಮಾಹಿತಿ ಕೇಳಿದೆ.
ಯುಜಿಸಿ 2012ರ ತನ್ನ ನಿಯಮಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ವಾದಿಸಿದ ಅರ್ಜಿದಾರರ ಪರ ವಕೀಲರು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳ ಆತ್ಮಹತ್ಯೆಯ ವರದಿ ಸೇರಿದಂತೆ ಇತರೆ ಮಾಹಿತಿಗಳನ್ನು ನೀಡಲು ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮಾನ್ಯತೆ ಮಂಡಳಿಗೆ ನಿರ್ದೇಶಿಸುವಂತೆ ಕೋರಿದ್ದಾರೆ.
ಯುಜಿಸಿ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲರು, ಆಯೋಗ ರಚಿಸಿದ್ದ ಸಮಿತಿಯು ತನ್ನ ಶಿಫಾರಸನ್ನು ಸಲ್ಲಿಸಿದ್ದು, ಜಾತಿಯಾಧಾರಿತ ತಾರತಮ್ಯವನ್ನು ನಿಲ್ಲಿಸಲು ಹೊಸ ಕರಡು ನಿಯಮಾವಳಿಯನ್ನು ರಚಿಸಲಾಗಿದೆ. ಒಂದು ತಿಂಗಳೊಳಗೆ ಸಾರ್ವಜನಿಕರಿಂದ ಆಕ್ಷೇಪಗಳು ಮತ್ತು ಸಲಹೆಗಳನ್ನು ಆಹ್ವಾನಿಸಲು ಅದನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕಿದೆ. ಆ ಬಳಿಕ ಅದನ್ನು ಅಧಿಸೂಚಿಸಲಾಗುವುದು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಕರಡು ನಿಯಮಾವಳಿಗಳ ಸಂಬಂಧ ಅಧಿಸೂಚನೆ ಹೊರಡಿಸುವಂತೆ ನಿರ್ದೇಶನ ನೀಡಿದರು.
ನ್ಯಾಯಾಲಯ ಯುಜಿಸಿಗೆ ನಿರ್ದೇಶನ ನೀಡಿದ ಬೆನ್ನಲ್ಲೇ, “ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ವಿದ್ಯಾರ್ಥಿಗಳ ಆತ್ಮಹತ್ಯೆ ಮಾಹಿತಿಯನ್ನು ಜಾತಿವಾರು ನೀಡಲು ಯುಜಿಸಿಗೆ ಸೂಚಿಸುವಂತೆ ವಕೀಲೆ ಇಂದಿರಾ ಜೈಸಿಂಗ್ ನ್ಯಾಯಾಧೀಶರನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಒಂದೇ ಬಾರಿಗೆ ಎಲ್ಲಾ ಮಾಹಿತಿ ಕೇಳುವುದು ಬೇಡ, ಹಂತ ಹಂತವಾಗಿ ಆದೇಶಗಳನ್ನು ನೀಡುವುದಾಗಿ ತಿಳಿಸಿದರು.
2004-24ರ ನಡುವೆ ಐಐಟಿಗಳಲ್ಲಿಯೇ 115 ಆತ್ಮಹತ್ಯೆಗಳು ನಡೆದಿವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕಾಂತ್ ಅವರು, “ನ್ಯಾಯಾಲಯ ಈ ವಿಷಯದ ಸೂಕ್ಷ್ಮತೆಯನ್ನು ಅರಿತುಕೊಂಡಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲ್ಲಿದೆ. 2012ರ ನಿಯಮಾವಳಿಗಳನ್ನು ವಾಸ್ತವಿಕವಾಗಿ ಪಾಲಿಸಲಾಗುತ್ತಿದೆಯೇ ಎನ್ನುವುದನ್ನು ನೋಡಲು ಕೆಲವು ಪರಿಣಾಮಕಾರಿ ಕಾರ್ಯವಿಧಾನಗಳನ್ನು ನಾವು ಕಂಡುಕೊಳ್ಳಬೇಕಿದೆ” ಎಂದು ಹೇಳಿದರು.
ಇದನ್ನೂ ಓದಿ : ದೆಹಲಿ ವಿಧಾನಸಭೆ ಚುನಾವಣೆ : ಸಿಎಂ ಅತಿಶಿ ವಿರುದ್ಧ ಅಲ್ಕಾ ಲಂಬಾರನ್ನು ಕಣಕ್ಕಿಳಿಸಿದ ಕಾಂಗ್ರೆಸ್


