ಸುಪ್ರೀಂ ಕೋರ್ಟ್‌ನಲ್ಲಿ ವಕೀಲನಿಂದ ಶೂ ಎಸೆತ ಪ್ರಯತ್ನದ ಬಳಿಕ, ಮುಖ್ಯ ನ್ಯಾಯಮೂರ್ತಿ ಬಿ. ಆರ್ ಗವಾಯಿ ಅವರ ಜಾತಿ ಗುರಿಯಾಗಿಸಿ ನಿಂದನಾತ್ಮಕ ಪೋಸ್ಟ್‌ಗಳನ್ನು ಹಾಕಿದ 100ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ದ ಪಂಜಾಬ್ ಪೊಲೀಸರು ಬುಧವಾರ (ಅ.8) ಹಲವು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯ ಜಾತಿ ನಿಂದನೆ ಮಾಡುವ ಮತ್ತು ಕೋಮು ದ್ವೇಷವನ್ನು ಪ್ರಚೋದಿಸುವ ಪೋಸ್ಟ್‌ಗಳನ್ನು ಹಾಕುವ ಮೂಲಕ ಶಾಂತಿ-ಸುವ್ಯವಸ್ಥೆಯನ್ನು ಕದಡಲು ಪ್ರಯತ್ನಿಸಿದ ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ದ ಕಾನೂನಿನ ಪ್ರಕಾರ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ವಕ್ತಾರರು ತಿಳಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳು ಮತ್ತು ವಿಡಿಯೋಗಳು ಕೋಮು ಸೌಹಾರ್ದತೆ, ಶಾಂತಿ- ಸುವ್ಯವಸ್ಥೆಯನ್ನು ಕದಡುವ ಮತ್ತು ನ್ಯಾಯಾಂಗ ಸಂಸ್ಥೆಗಳ ಮೇಲಿನ ಗೌರವವನ್ನು ಕುಗ್ಗಿಸುವ ಉದ್ದೇಶದಿಂದ ಜಾತಿವಾದ ಮತ್ತು ದ್ವೇಷ ತುಂಬಿದ ಅಭಿವ್ಯಕ್ತಿಗಳನ್ನು ಒಳಗೊಂಡಿವೆ ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.
ಹಿಂಸೆಯನ್ನು ಉತ್ತೇಜಿಸುವ, ಸಂವಿಧಾನದ ಗೌರವವನ್ನು ಕುಗ್ಗಿಸುವ, ಪರಿಶಿಷ್ಟ ಜಾತಿಗಳ ಜನರ ವಿರುದ್ಧ ದ್ವೇಷ ಹರಡುವ, ಜಾತಿಯ ಆಧಾರದ ಮೇಲೆ ಗುಂಪುಗಳ ನಡುವೆ ಘರ್ಷಣೆಯನ್ನು ಉಂಟುಮಾಡುವ, ಶಾಂತಿಭಂಗಕ್ಕೆ ಕಾರಣವಾಗುವಂತೆ ಅವಮಾನಿಸುವ ಮತ್ತು ಸಾರ್ವಜನಿಕ ಗೊಂದಲಕ್ಕೆ ಕಾರಣವಾಗುವ ಉದ್ದೇಶವನ್ನು ಈ ಪೋಸ್ಟ್‌ಗಳು ಹೊಂದಿವೆ ಎಂದಿದ್ದಾರೆ.
ಸಿಜೆಐ ಮೇಲೆ ಶೂ ಎಸೆಯುವ ಪ್ರಯತ್ನ ನಡೆಯುವ ಮುನ್ನವೇ ಯೂಟ್ಯೂಬ್ ವಿಡಿಯೋಗಳು, ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳ ಮೂಲಕ, ಹಲವರು ಸಿಜೆಐ ಮೇಲೆ ದಾಳಿಗೆ ಪ್ರಚೋದಿಸಿದ್ದರು. ವಿಶೇಷವಾಗಿ ದಲಿತ ಸಮುದಾಯದವರಾದ ಸಿಜೆಐ ಅವರ ಜಾತಿ ಮುಂದಿಟ್ಟು ನಿಂದಿಸಲಾಗಿತ್ತು. ಶೂ ಎಸೆತ ಪ್ರಯತ್ನದ ಬಳಿಕ ಹಲವರು ಸಿಜೆಐ ಹತ್ಯೆಯನ್ನು ಬಯಸಿ ಪೋಸ್ಟ್ ಹಾಕಿದ್ದರು.
ಈ ಎಲ್ಲಾ ಪೋಸ್ಟ್‌ಗಳು ಮತ್ತು ವಿಡಿಯೋಗಳ ವಿರುದ್ದ ಪಂಜಾಬ್ ಹೊರತುಪಡಿಸಿ ಪೊಲೀಸರು ಕ್ರಮ ಕೈಗೊಂಡಿರುವ ಬಗ್ಗೆ ಎಲ್ಲೂ ವರದಿಯಾಗಿಲ್ಲ. ಕನಿಷ್ಠ ಪಕ್ಷ ಫೇಸ್‌ಬುಕ್, ಎಕ್ಸ್‌ನಂತಹ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಇಂತಹ ಬೆದರಿಕೆ, ಜಾತಿ ನಿಂದನೆಯ ಪೋಸ್ಟ್‌ಗಳನ್ನು ತೆಗೆದು ಹಾಕುವ ಪ್ರಯತ್ನವನ್ನೂ ಮಾಡಿಲ್ಲ.
ಸಿಜೆಐ ಮೇಲೆ ದಾಳಿ: ಆರೋಪಿ ವಕೀಲನ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಅನುಮತಿ ಕೋರಿ ಪತ್ರ


