Homeಕರ್ನಾಟಕಮತ್ತೆ ಭುಗಿಲೆದ್ದ ಕಾವೇರಿ ನದಿ ವಿವಾದ; ಮಳೆ ಮತ್ತು ಮಾತುಕತೆಯೇ ಪರಿಹಾರ

ಮತ್ತೆ ಭುಗಿಲೆದ್ದ ಕಾವೇರಿ ನದಿ ವಿವಾದ; ಮಳೆ ಮತ್ತು ಮಾತುಕತೆಯೇ ಪರಿಹಾರ

- Advertisement -
- Advertisement -

ಅದು 2002ನೇ ಇಸವಿ; ರಾಜ್ಯದಲ್ಲಿ ಬರ ಆವರಿಸಿತ್ತು. ಅಂತಹ ಸಂದರ್ಭದಲ್ಲಿಯೂ ಕಾವೇರಿ ನೀರನ್ನು ಹರಿಸಬೇಕೆಂದು ತಮಿಳುನಾಡು ಸರ್ಕಾರ ಒತ್ತಡ ಹಾಕಿತ್ತು. ಸುಪ್ರೀಂ ಕೋರ್ಟ್ ಸಹ ತಮಿಳುನಾಡಿಗೆ ನೀರು ಬಿಡಬೇಕೆಂದು ಆದೇಶಿಸಿತ್ತು. ಆದೇಶ ಧಿಕ್ಕರಿಸಿದ್ದ ಕರ್ನಾಟಕ ರಾಜ್ಯ ಸರ್ಕಾರ ಪ್ರತಿಭಟನೆ ಹಾದಿ ಹಿಡಿದಿತ್ತು. ಮಂಡ್ಯ-ಮೈಸೂರಿನಲ್ಲಿ ರೈತರು ಹಿಂಸಾತ್ಮಕ ಪ್ರತಿಭಟನೆಗೆ ಇಳಿದಿದ್ದರು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸಿಎಂ ಆಗಿದ್ದ ಎಸ್.ಎಂ ಕೃಷ್ಣರವರು ಬೆಂಗಳೂರಿನಿಂದ ಕೆ.ಆರ್.ಎಸ್‌ವರೆಗೆ ಪಾದಯಾತ್ರೆ ಹೋರಾಟವನ್ನು ಕೈಗೊಂಡಿದ್ದರು. ಪಾದಯಾತ್ರೆ ಮಂಡ್ಯ ತಲುಪಿದ ಸಂದರ್ಭದಲ್ಲಿ ಹಲವು ಗಂಟೆಗಳ ಕಾಲ ಜೋರು ಮಳೆ ಸುರಿಯಿತು. ಅಲ್ಲಿಗೆ ಪಾದಯಾತ್ರೆಯೂ ನಿಂತಿತು. ರೈತರ ಹೋರಾಟವೂ ನಿಂತಿತು. ತಮಿಳುನಾಡು ಸಹ ಸುಮ್ಮನಾಯಿತು. ಅಂದು ಆರಂಭವಾದ ಮಳೆ ಆಗ ತಾತ್ಕಾಲಿಕ ಪರಿಹಾರ ನೀಡಿತ್ತು.

ಶತಮಾನದ ಇತಿಹಾಸ ಹೊಂದಿರುವ ಕಾವೇರಿ ನದಿ ವಿವಾದ ಇಂದು ಮತ್ತೆ ಭುಗಿಲೆದ್ದಿದೆ. ಕಾರಣ ಎರಡೂ ರಾಜ್ಯಗಳಲ್ಲಿ ಮಳೆ ಕೊರತೆ ಉಂಟಾಗಿದೆ. ತಮಿಳುನಾಡು ತನ್ನ ಪಾಲಿನ ನೀರು ಬಿಡುವಂತೆ ಒತ್ತಾಯ ಮಾಡುತ್ತಿದೆ. ನಮಗೇ ನೀರು ಕೊರತೆಯಿರುವಾಗ ಹೆಚ್ಚಿನ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರ ವಾದಿಸಿದೆ. ಈ ಕುರಿತು ಎರಡು ರಾಜ್ಯಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ಪ್ರತ್ಯೇಕ ಪೀಠ ರಚನೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಇತ್ತ ರಾಜ್ಯದಲ್ಲಿ ಅಧಿಕಾರಾರೂಢ ಕಾಂಗ್ರೆಸ್ ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿದೆ. ಪ್ರತಿ ಬರಗಾಲದಲ್ಲಿ ಧುತ್ತನೇ ಉದಯವಾಗುವ ಈ ಕಾವೇರಿ ನದಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲವೇ ಎಂಬ ಚರ್ಚೆ ಎದ್ದಿದೆ. ಅದಕ್ಕೂ ಮುನ್ನ ವಿವಾದದ ಇತಿಹಾಸದ ಮೇಲೆ ಕಣ್ಣು ಹಾಯಿಸೋಣ.

ಕಾವೇರಿ ನದಿಯು ಕೊಡಗು ಜಿಲ್ಲೆಯ ತಲಕಾವೇರಿ ಎಂಬಲ್ಲಿ ಹುಟ್ಟಿ ಕೊಡಗು, ಮಂಡ್ಯ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳ ಮೂಲಕ ಹಾದು ತಮಿಳುನಾಡು ಪ್ರವೇಶಿಸುತ್ತದೆ. ಈ ನದಿ ನೀರಿನ ಹಂಚಿಕೆಯ ಕುರಿತು 1892ರಲ್ಲಿಯೇ ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ಸಂಸ್ಥಾನದ ನಡುವೆ ಒಪ್ಪಂದಗಳು ಏರ್ಪಟ್ಟಿದ್ದವು. ಆ ಒಪ್ಪಂದದಂತೆ ಕರ್ನಾಟಕವು ನದಿಯ ಮೇಲ್ಭಾಗದ ರಾಜ್ಯ ಮತ್ತು ತಮಿಳುನಾಡು ಕೆಳಭಾಗದ ರಾಜ್ಯವಾದ್ದರಿಂದ ತಮಿಳುನಾಡಿಗೆ ಹೆಚ್ಚಿನ ನೀರು ಹರಿಸಬೇಕೆಂಬ ನಿಯಮಗಳಿದ್ದವು. ಆನಂತರ ಕರ್ನಾಟಕದಲ್ಲಿ ಕೆಆರ್‌ಎಸ್ ಅಣೆಕಟ್ಟು ಮತ್ತು ತಮಿಳುನಾಡಿನಲ್ಲಿ ಮೆಟ್ಟೂರು ಅಣೆಕಟ್ಟು ಕಟ್ಟಲು ಯೋಜನೆಗಳು ಆರಂಭವಾಗಿ 1924ರಲ್ಲಿ ಮತ್ತೊಂದು ಒಪ್ಪಂದವಾಯಿತು. ಆ ಪ್ರಕಾರ ತಮಿಳುನಾಡಿಗೆ ಎಷ್ಟು ನೀರು ಬಿಡಬೇಕೆಂಬ ತೀರ್ಮಾನವಾಯಿತು. ಅಲ್ಲದೇ ಮೇಲ್ಭಾಗದ ರಾಜ್ಯವಾದ ಕರ್ನಾಟಕವು ಕಾವೇರಿ ನದಿ ನೀರಿನ ಸಹಜ ಹರಿವಿಗೆ ತಡೆಯೊಡ್ಡುವಂತಿಲ್ಲ; ಅಂದರೆ ತಮಿಳುನಾಡಿನ ಒಪ್ಪಿಗೆಯಿಲ್ಲದೆ ತನ್ನ ನೆಲದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ಅಣೆಕಟ್ಟು, ಡ್ಯಾಂ ನಿರ್ಮಾಣ ಮಾಡುವಂತಿರಲಿಲ್ಲ ಎಂಬ ಷರತ್ತು ಹೇರಲ್ಪಟ್ಟವು.

ಈ ಎಲ್ಲಾ ಒಪ್ಪಂದಗಳು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದ್ದವು. ಅಂದಿನ ಬ್ರಿಟಿಷ್ ಅಧಿಪತ್ಯದಲ್ಲಿದ್ದರಿಂದ ಮೈಸೂರು ಸಂಸ್ಥಾನ ಅದನ್ನು ವಿರೋಧಿಸಲಾಗಲಿಲ್ಲ. ಆದರೆ ಸ್ವಾತಂತ್ರ್ಯಾ ನಂತರವೂ ಅವುಗಳನ್ನು ರದ್ದುಪಡಿಸುವ ಗೋಜಿಗೆ ಕರ್ನಾಟಕವನ್ನು ಆಳಿದವರು ಹೋಗಲಿಲ್ಲ. ಅದು ಈ ವಿವಾದ ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಯಿತು. ತಮಿಳುನಾಡು ಸರ್ಕಾರದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ 1990ರಲ್ಲಿ ಕಾವೇರಿ ನದಿ ನೀರು ಹಂಚಿಕೆಗೆ ನ್ಯಾಯಾಧೀಕರಣ ಸ್ಥಾಪಿಸಿತು. ಇದನ್ನು ಕರ್ನಾಟಕ ತೀವ್ರವಾಗಿ ವಿರೋಧಿಸಿತು. ನ್ಯಾಯಾಧೀಕರಣವು 1991ರಲ್ಲಿ ತಮಿಳುನಾಡಿಗೆ ಪ್ರತಿವರ್ಷ 205 ಟಿಎಂಸಿ ನೀರನ್ನು ಬಿಡಬೇಕು ಮತ್ತು ಕರ್ನಾಟಕ ತನ್ನ ನೀರಾವರಿ ಪ್ರದೇಶವನ್ನು ವಿಸ್ತರಿಸಬಾರದು ಎಂದು ತೀರ್ಪು ನೀಡಿತು. ಎರಡೂ ರಾಜ್ಯಗಳ ಅಸಮಾಧಾನ ವ್ಯಕ್ತಪಡಿಸಿದ ಕಾರಣ ಕಾವೇರಿ ವಿವಾದ ದೊಡ್ಡ ಸ್ವರೂಪ ಪಡೆದುಕೊಂಡಿತು.

ಕರ್ನಾಟಕ ರಾಜ್ಯ ನೀರು ಬಿಡುವುದಿಲ್ಲವೆಂದು ಸುಗ್ರೀವಾಜ್ಞೆ ಹೊರಡಿಸಿತು. ಅದನ್ನು ತಿರಸ್ಕರಿಸಿ ನೀರು ಬಿಡುವಂತೆ ಸುಪ್ರೀಂ ಆದೇಶಿಸಿತು. ಆನಂತರ ಉತ್ತಮ ಮಳೆಯಾದ ವರ್ಷಗಳಲ್ಲಿ ಕರ್ನಾಟಕ ಸರಾಗವಾಗಿ ನೀರು ಹರಿಸುತ್ತಿತ್ತು. ಮಳೆ ಕೊರತೆಯಾದಾಗ, ಬರ ಬಂದಾಗ ನೀರು ಬಿಡಲು ಸಾಧ್ಯವಾಗುತ್ತಿರಲಿಲ್ಲ. ಆಗ ವಿವಾದ ಮತ್ತೆ ಮೇಲೆದ್ದು ಬರುತ್ತಿತ್ತು. ಈ ನಡುವೆ 1997ರಲ್ಲಿ ಅಂದಿನ ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪ್ರತಿನಿಧಿಗಳನ್ನು ಒಳಗೊಂಡ ಕಾವೇರಿ ನದಿ ಪ್ರಾಧಿಕಾರ ರಚಿಸಲಾಯಿತು. 2002ರಲ್ಲಿ ಬರ ಬಂದಿದ್ದಾಗಲೂ ಪ್ರತಿ ದಿನ ಕನಿಷ್ಟ 9,000 ಕ್ಯುಸೆಕ್ಸ್ ನೀರು ಹರಿಸಬೇಕೆಂದು ಕಾವೇರಿ ನದಿ ಪ್ರಾಧಿಕಾರ ಆದೇಶಿಸಿತ್ತು. ಅದನ್ನು ಕರ್ನಾಟಕ ಸರ್ಕಾರ ಉಲ್ಲಂಘಿಸಿತ್ತು. ಹೀಗೆ ಪ್ರತಿಯೊಂದು ಸಂದರ್ಭದಲ್ಲಿಯೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇತ್ತು ಎಂದು ರೈತರು ಆರೋಪಿಸುತ್ತಾರೆ.

ಇದನ್ನೂ ಓದಿ: ಜಲ ವಿವಾದ: ಪ್ರಧಾನಿ ಬಳಿ ಸರ್ವ ಪಕ್ಷ ನಿಯೋಗ ಕೊಂಡೊಯ್ಯಲಾಗುವುದು; ಸಿಎಂ ಸಿದ್ದರಾಮಯ್ಯ

2007ರಲ್ಲಿ ನ್ಯಾಯಮಂಡಳಿಯು ಅಂತಿಮ ತೀರ್ಪು ಪ್ರಕಟಿಸಿತು. ಅದರಂತೆ ಒಂದು ಸಾಮಾನ್ಯ ವರ್ಷದಲ್ಲಿ ಕಾವೇರಿ ಕಣಿವೆಯಲ್ಲಿ 740ಟಿಎಂಸಿ ನೀರು ಸಂಗ್ರಹವಾಗುತ್ತಿದ್ದು ಅದರಲ್ಲಿ ಕರ್ನಾಟಕವು 270 ಟಿಎಂಸಿ ಇಟ್ಟುಕೊಂಡು 419 ಟಿಎಂಸಿ ನೀರನ್ನು ತಮಿಳುನಾಡಿಗೂ, 30 ಟಿಎಂಸಿ ನೀರನ್ನು ಕೇರಳಕ್ಕೂ ಮತ್ತು 7 ಟಿಎಂಸಿ ನೀರನ್ನು ಪುದುಚೇರಿಗೂ ಹರಿಸಬೇಕೆಂದು ಆದೇಶಿಸಲಾಗಿತ್ತು. ತಮಿಳುನಾಡಿನಲ್ಲಿ ಹರಿಯುವ ನೀರು ಸೇರಿದರೆ ಕರ್ನಾಟಕದ ಅಣೆಕಟ್ಟುಗಳಿಂದ 192 ಟಿಎಂಸಿ ನೀರನ್ನು ಪ್ರತಿವರ್ಷ ಹರಿಸಬೇಕಾಗಿತ್ತು.

ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸರ್ಕಾರಗಳು ಮೇಲ್ಮನವಿಗಳನ್ನು ಸಲ್ಲಿಸಿದ್ದವು. ಅವುಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ 2018ರ ಫೆಬ್ರುವರಿ 16ರಂದು ತೀರ್ಪು ನೀಡಿತು. ಅದರಂತೆ ತಮಿಳುನಾಡಿನಲ್ಲಿರುವ ಅಂತರ್ಜಲ ಮತ್ತು ಬೆಂಗಳೂರಿಗೂ ಕುಡಿಯುವ ನೀರು ಪೂರೈಕೆ ಮಾಡುವುದನ್ನು ಪರಿಗಣಿಸಿ ಇನ್ನು ಮುಂದೆ ತಮಿಳುನಾಡಿಗೆ ವಾರ್ಷಿಕ 177.25 ಟಿಎಂಸಿ ನೀರು ಬಿಡಬೇಕು. ಕರ್ನಾಟಕವು 270 ಟಿಎಂಸಿಯಿಂದ 284.75 ಟಿಎಂಸಿ ನೀರು ಪಡೆಯಬಹುದು, ಅದರಲ್ಲಿ ಬೆಂಗಳೂರಿಗೆ ಕುಡಿಯುವ ನೀರಿನ ಪ್ರಮಾಣ 4.75 ಟಿಎಂಸಿ ಎಂದಿದೆ. ಒಂದು ಹಂತಕ್ಕೆ ಎಲ್ಲಾ ರಾಜ್ಯಗಳಿಗೂ ಸಮಾಧಾನ ತರುವ ರೀತಿಯ ತೀರ್ಪು ಇದಾಗಿದೆ.

ಮಳೆ ಬಾರದಿರುವುದೇ ಸಮಸ್ಯೆ

ಕರ್ನಾಟಕದ ಕೆಆರ್‌ಎಸ್, ಹೇಮಾವತಿ, ಕಬಿನಿ ಮತ್ತು ಹಾರಂಗಿ ಜಲಾಶಯಗಳಿಂದ ಸಾಧಾರಣ ವರ್ಷಗಳಲ್ಲಿ ವಾರ್ಷಿಕ 177.25 ಟಿಎಂಸಿ ನೀರು ತಮಿಳುನಾಡಿಗೆ ಬಿಡಬೇಕು. 2021 ಮತ್ತು 2022ರಲ್ಲಿ ಹೆಚ್ಚಿನ ಮಳೆಯಾದ ಪರಿಣಾಮ ಅದಕ್ಕಿಂತಲೂ ಹೆಚ್ಚಿನ ನೀರನ್ನು ಹರಿಸಲಾಗಿದೆ. ಆದರೆ 2023ರಲ್ಲಿ ಮುಂಗಾರು ಕೈಕೊಟ್ಟ ಪರಿಣಾಮ ನೀರು ಹರಿಸುವುದು ಅಸಾಧ್ಯವಾಗಿದೆ. ಅಲ್ಲದೇ ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಿನಲ್ಲಿ ಕ್ರಮವಾಗಿ 34, 50, 40 ಟಿಎಂಸಿ ನೀರು ಹರಿಸಬೇಕೆಂದು ನ್ಯಾಯಾಧೀಕರಣ ಹೇಳಿತ್ತು. ಈ ಸಂದರ್ಭದಲ್ಲಿ ಮಳೆ ಇಲ್ಲದಿರುವುದರಿಂದ ಈ ಕುರಿತು ಮರುಪರಿಶೀಲನೆ ಮಾಡಬೇಕಾಗಿದೆ. ತಮಿಳುನಾಡು ಸರ್ಕಾರವು 15,000 ಕ್ಯುಸೆಕ್ಸ್ ಹರಿಸಬೇಕೆಂಬ ಬೇಡಿಕೆ ಇಟ್ಟಿದೆ. ಸದ್ಯ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ 100 ಅಡಿ ಆಸುಪಾಸಿನಲ್ಲಿದ್ದು, ಪ್ರತಿನಿತ್ಯ 10,000 ಕ್ಯುಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಇದಕ್ಕೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದ್ದು ಹೋರಾಟದ ಸೂಚನೆ ನೀಡಿವೆ. ರೈತರು ನೀರು ಹರಿಸುವುದನ್ನು ನಿಲ್ಲಿಸಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಕರ್ನಾಟಕ ಸರ್ಕಾರ ಸರ್ವಪಕ್ಷ ಸಭೆ ನಡೆಸುತ್ತಿದೆ.

ಇಲ್ಲಿ ತಮಿಳುನಾಡು ಸರ್ಕಾರ ಅರ್ಥ ಮಾಡಿಕೊಳ್ಳಬೇಕಾದ್ದು ಇದು ಸಾಧಾರಣ ವರ್ಷ ಅಲ್ಲ. ಬದಲಿಗೆ ಸಂಕಷ್ಟದ ವರ್ಷವಾಗಿದೆ. ಹಾಗಾಗಿ ಇಂತಿಷ್ಟೇ ನೀರು ಬಿಡಿ ಎಂದು ಒತ್ತಾಯ ಮಾಡುವುದನ್ನು ಬಿಡಬೇಕು. ಅಲ್ಲದೇ 2018ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ “ಮಳೆ ಕಡಿಮೆಯಾದಾಗ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯ ಕಾವೇರಿ ಆಯೋಗ ನೀರಿನ ಪ್ರಮಾಣವನ್ನು ನಿರ್ಧರಿಸುವುದು” ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಸದ್ಯ ಮಳೆ ಇಲ್ಲಿದಿರುವುದರಿಂದ ಕಾವೇರಿ ಮೇಲುಸ್ತುವಾರಿ ಮಂಡಳಿಯು ಮಳೆ ಪ್ರಮಾಣ, ಡ್ಯಾಂಗಳ ನೀರಿನ ಮಟ್ಟ, ನೀರಿನ ಹರಿವು, ಆವಿಯಾಗುವ ಪ್ರಮಾಣ, ರಾಜ್ಯಗಳ ಅಗತ್ಯ ಇತ್ಯಾದಿಗಳೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಅಂಕಿಅಂಶಗಳ ಸಮೇತ ಎರಡು ರಾಜ್ಯಗಳ ಪ್ರತಿನಿಧಿಗಳ ಜೊತೆ ಮಾತನಾಡಿ ಸಮಾಧಾನಕಾರ ನಿಲುವಿಗೆ ಬರಬೇಕಿದೆ. ಇದಕ್ಕೆ ಮುಖ್ಯವಾಗಿ ಪ್ರಧಾನಿಗಳ ಇಚ್ಛಾಶಕ್ತಿ ಬೇಕಾಗಿದೆ.

ಕಾವೇರಿ ಗಲಾಟೆಯೆಂದರೆ ಪ್ರತಿಭಟನೆ, ರಸ್ತೆ ಬಂದ್, ಟೈರು ಸುಡುವುದು ಇಷ್ಟೇ ಅಲ್ಲ. ಈ ವಿವಾದ ಆರಂಭವಾದಾಗಲೇ ಕರ್ನಾಟಕ ಪ್ರಜ್ಞಾವಂತ ರೈತರು ಮತ್ತು ತಮಿಳುನಾಡಿನ ರೈತರು ಸೇರಿ ಕಾವೇರಿ ಕುಟುಂಬ ಎಂಬ ನಿಯೋಗ ರಚಿಸಿದ್ದರು. ಆ ನಿಯೋಗವು ಎರಡು ರಾಜ್ಯಗಳ ಪರಿಸ್ಥಿತಿ ಅಧ್ಯಯನ ಮಾಡಿ ಮಾತುಕತೆಗಳ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಶಿಫಾರಸ್ಸು ಮಾಡಿತ್ತು. ಆದರೆ ಯಾವ ಸರ್ಕಾರಗಳು ಅವರ ಮಾತನ್ನು ಕೇಳಿಸಿಕೊಳ್ಳದೇ ತಮ್ಮ ಮೊಂಡುವಾದವನ್ನು ಮುಂದೆ ಮಾಡಿದವು. ಅದರ ಪರಿಣಾಮವನ್ನು ನಾವೀಗಾಗಲೇ ನೋಡಿದ್ದೇವೆ. ಗಲಾಟೆ ಭುಗಿಲೆದ್ದಾಗ ಅದು ಬೆಂಗಳೂರಿನಲ್ಲಿ ಕನ್ನಡಿಗ-ತಮಿಳರ ನಡುವಿನ ಗಲಭೆ ರೂಪ ಪಡೆದುಕೊಂಡಿದೆ. ಆದರೆ ಆ ಗಾಯಗಳೆಲ್ಲ ಮಾಯುವ ಹಂತದಲ್ಲಿ ನಾವಿದ್ದೇವೆ. ಉತ್ತಮ ಮಳೆ ಮತ್ತು ಮಾತುಕತೆ ಮೂಲಕ ಮಾತ್ರವೇ ಈ ಸಮಸ್ಯೆ ಬಗೆಹರಿಸಬಹುದೆಂಬುದನ್ನು ಇತಿಹಾಸವೂ ಹೇಳುತ್ತಿದೆ. ಹಾಗಾಗಿ ಕಾವೇರಿ ವಿಚಾರದಲ್ಲಿ ಆಡಳಿತ ಪಕ್ಷವಾಗಲಿ, ವಿಪಕ್ಷಗಳಾಗಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ಕೊಡುವುದರ ಬದಲಿಗೆ ಸಮಾಧಾನದಿಂದ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕಿರುವುದು ಈ ಸಂದರ್ಭದ ಅಗತ್ಯವಾಗಿದೆ.

ಒಟ್ಟಾರೆ ಕಾವೇರಿ ನದಿ ನೀರಿನ ವಿವಾದವು ಮಾನವ ಕುಲಕ್ಕೆ ದೊಡ್ಡ ಪಾಠ ಹೇಳುತ್ತಿದೆ. ನೀರಿನ ಮಿತ ಬಳಕೆ, ಬೆಳೆಗಳ ಬದಲಾವಣೆ, ಕಾಡು ಸಂರಕ್ಷಣೆ, ಪರಿಸರ ಸಮತೋಲನ ಕಾಪಾಡಿಕೊಳ್ಳದಿದ್ದರೆ ಮುಂದೆ ಎಂತಹ ಭೀಕರ ಪರಿಸ್ಥಿತಿ ಬರಬಹುದು ಎಂಬುದರ ಸೂಚಕವಾಗಿದೆ. ಹಾಗಾಗಿ ಈ ವಿಚಾರದಲ್ಲಿ ಆಳುವ ಸರ್ಕಾರಗಳು ಮೊದಲು ಎಚ್ಚರಗೊಳ್ಳುವಂತೆ ಮತ್ತು ಸುಸ್ಥಿರ ಪರಿಸರಸ್ನೇಹಿ ಕ್ರಮಗಳನ್ನು ಪಾಲಿಸುವಂತೆ ಒತ್ತಡ ತರಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...