ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಂತಹ ಇಲಾಖೆಗಳು ಅಗತ್ಯವಿಲ್ಲ, ಅವುಗಳನ್ನು ಮುಚ್ಚಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದು, ಈ ಬಗ್ಗೆ ಇಂಡಿಯಾ ಮೈತ್ರಿಕೂಟದ ನಾಯಕರ ಮುಂದೆ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.
ಸಿಬಿಐ ಮತ್ತು ಇಡಿಯನ್ನು ಮುಚ್ಚಬೇಕು, ನೀವು ಮೋಸ ಮಾಡಿದ್ದರೆ ಅದನ್ನು ಎದುರಿಸಲು ಆದಾಯ ತೆರಿಗೆ ಇಲಾಖೆ ಇದೆ. ನಿಮಗೆ ಸಿಬಿಐ ಏಕೆ ಬೇಕು? ಪ್ರತಿ ರಾಜ್ಯವು ಭ್ರಷ್ಟಾಚಾರ ನಿಗ್ರಹ ಇಲಾಖೆಯನ್ನು ಹೊಂದಿದೆ, ಅಗತ್ಯವಿದ್ದರೆ ಅದನ್ನು ಬಳಸಿಕೊಳ್ಳಿ ಸಿಬಿಐ ಮತ್ತು ಇಡಿಯನ್ನು ರಾಜಕೀಯ ವಿರೋಧಿಗಳ ವಿರುದ್ಧ ಬಳಸಿಕೊಳ್ಳಲಾಗುತ್ತಿದೆ ಎಂದು ಅಖಿಲೇಶ್ ಯಾದವ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಸರ್ಕಾರಗಳನ್ನು ರಚಿಸಲು ಅಥವಾ ಸರ್ಕಾರಗಳನ್ನು ಅಸ್ಥಿರಗೊಳಿಸಲು ಅಸ್ತ್ರವಾಗಿ ಸಿಬಿಐ ಮತ್ತು ಇಡಿಯನ್ನು ಬಳಸಲಾಗುತ್ತದೆ. ಏಜೆನ್ಸಿಗಳು ನೋಟು ರದ್ದತಿ ಸಮಯದಲ್ಲಿ ಏನು ತಪ್ಪಾಗಿದೆ ಎಂದು ಯಾಕೆ ತನಿಖೆ ಮಾಡಲಿಲ್ಲ? ಜನರು ತಮ್ಮ ಕಪ್ಪು ಹಣವನ್ನು ಹೇಗೆ ಬಿಳಿಯಾಗಿ ಪರಿವರ್ತಿಸಿದರು? ಎಂಬ ಬಗ್ಗೆ ತನಿಖೆ ಮಾಡಿಲ್ಲ ಎಂದು ಹೇಳಿದ್ದಾರೆ.
ಇಂಡಿಯಾ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದರೆ ಇಂತಹ ದೂರಗಾಮಿ ಕ್ರಮವನ್ನು ತೆಗೆದುಕೊಳ್ಳಲು ಸಿದ್ಧವಾಗಿದೆಯೇ? ಇದು ನನ್ನ ಪ್ರಸ್ತಾಪವಾಗಿದೆ ಮತ್ತು ನಾನು ಇದನ್ನು ಇಂಡಿಯಾ ಮೈತ್ರಿ ಕೂಟದ ಮುಂದಿಡುತ್ತೇನೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಮುಗಿದ ನಂತರವೂ ಕಾಂಗ್ರೆಸ್ ಮತ್ತು ಎಸ್ಪಿ ಪಕ್ಷಗಳ ನಡುವಿನ ಮೈತ್ರಿ ಮುಂದುವರಿಯುತ್ತದೆ. ಯಾವುದೇ ಚುನಾವಣೆ ಬಂದರೂ ಮೈತ್ರಿ ಮುಂದುವರಿಯಲಿದೆ. ಸದ್ಯಕ್ಕೆ ನಮ್ಮ ಪ್ರಯತ್ನ ಸರ್ಕಾರವನ್ನು ರಚಿಸುವುದಾಗಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಅಖಿಲೇಶ್ ಯಾದವ್ ಲೋಕಸಭೆ ಚುನಾವಣೆಯ ಹಿನ್ನೆಲೆ ರಾಯ್ ಬರೇಲಿ ಮತ್ತು ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ಮಾಡಿದ್ದಾರೆ.
ಯುಪಿಯಲ್ಲಿ 2019ರಲ್ಲಿ 1 ಸ್ಥಾನ ಪಡೆದಂತೆ ಒಟ್ಟಾರೆಯಾಗಿ ಕಾಂಗ್ರೆಸ್ ಕಳಪೆ ಪ್ರದರ್ಶನ ಮಾಡಿದರೆ ಮೈತ್ರಿಯು ಉಳಿದುಕೊಳ್ಳುತ್ತದೆಯೇ ಎಂದು ಕೇಳಿದಾಗ, ಅಖಿಲೇಶ್ ದೃಢವಾಗಿ “ಹೌದು” ಎಂದು ಪ್ರತಿಕ್ರಿಯಿಸಿದ್ದಾರೆ. ಪ್ರತಿ ಚುನಾವಣೆಯು ಹೊಸ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಇಂಡಿಯಾ ಮೈತ್ರಿಯೂ ಮುಂದುವರಿಯುತ್ತದೆ ಎಂದು ಅಖಿಲೇಶ್ ಯಾದವ್ ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ: ಮೋದಿ ಸ್ಪರ್ಧಿಸುವ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ನಡೆದಿದ್ಯಾ ಅಕ್ರಮ?


