2020-21ರ ಶೈಕ್ಷಣಿಕ ವರ್ಷಕ್ಕೆ 11ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಕ್ರಮದಿಂದ ಪೌರತ್ವ, ಒಕ್ಕೂಟ ವ್ಯವಸ್ಥೆ, ರಾಷ್ಟ್ರೀಯತೆ ಮತ್ತು ಜಾತ್ಯತೀತತೆಯ ಅಧ್ಯಾಯಗಳನ್ನು CBSE (ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ) ಕೈಬಿಟ್ಟಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಪಠ್ಯಕ್ರಮವನ್ನು ತರ್ಕಬದ್ಧಗೊಳಿಸುವ ಭಾಗವಾಗಿ ಈ ಪರಿಷ್ಕರಣೆಗಳನ್ನು ಮಾಡಲಾಗಿದೆ ಎಂದು ಮಂಡಳಿ ತಿಳಿಸಿದೆ.
“ನಮಗೆ ಸ್ಥಳೀಯ ಸರ್ಕಾರಗಳು ಏಕೆ ಬೇಕು?” ಮತ್ತು “ಭಾರತದಲ್ಲಿ ಸ್ಥಳೀಯ ಸರ್ಕಾರದ ಬೆಳವಣಿಗೆ”ಯನ್ನು ಪಠ್ಯಕ್ರಮದಿಂದ ತೆಗೆದುಹಾಕಲಾಗಿದೆ. ಪರಿಷ್ಕೃತ ಪಠ್ಯಕ್ರಮ ಮತ್ತು ಅಳಿಸಿದ ಅಧ್ಯಾಯಗಳು ಮತ್ತು ವಿಷಯಗಳ ಪಟ್ಟಿಯನ್ನು CBSE ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ.
ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ, ಲಿಂಗ, ಧರ್ಮ ಮತ್ತು ಜಾತಿ; ಪ್ರಮುಖ ಹೋರಾಟಗಳು ಮತ್ತು ಚಳುವಳಿ, ಇತರ ವಿಭಾಗಗಳಲ್ಲಿನ ಅಧ್ಯಾಯಗಳನ್ನು ತೆಗೆದುಹಾಕಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ರಾಜಕೀಯ ವಿಜ್ಞಾನ ಪಠ್ಯಕ್ರಮವನ್ನು ಪುನರ್ರಚಿಸಲಾಗಿದೆ.

ಈ ಅಧ್ಯಾಯಗಳನ್ನು ಇನ್ನು ಮುಂದೆ ಇರುವುದಿಲ್ಲ. ಆದರೆ ಅಸ್ತಿತ್ವದಲ್ಲಿರುವ ವಿಷಯಗಳ ಪ್ರಸ್ತುತತೆಯ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಲು ಶಿಕ್ಷಕರನ್ನು ಕೇಳಲಾಗಿದೆ. ಶಾಲೆಗಳ ಮುಖ್ಯಸ್ಥರು ಮತ್ತು ಶಿಕ್ಷಕರು ವಿಭಿನ್ನ ವಿಷಯಗಳನ್ನು ಸಂಪರ್ಕಿಸಲು ಅಗತ್ಯವಿರುವ ಮಟ್ಟಿಗೆ ವಿದ್ಯಾರ್ಥಿಗಳಿಗೆ ವಿವರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬಹುದು ಎಂದು CBSE ಹೇಳಿಕೆಯಲ್ಲಿ ತಿಳಿಸಿದೆ. ಜೊತೆಗೆ ಕಡಿಮೆಯಾದ ಪಠ್ಯಕ್ರಮವು ಮಂಡಳಿಯ ಆಂತರಿಕ ಮೌಲ್ಯಮಾಪನ ಮತ್ತು ವರ್ಷಾಂತ್ಯದ ಪರೀಕ್ಷೆಯ ವಿಷಯಗಳ ಭಾಗವಾಗಿರುವುದಿಲ್ಲ ಎಂದು ತಿಳಿಸಿದೆ.
ಕೊರೊನಾ ಸಾಂಕ್ರಾಮಿಕ ರೋಗದ ಕಾರಣಕ್ಕೆ 2020-21ರ ಶೈಕ್ಷಣಿಕ ವರ್ಷಕ್ಕೆ ಒಂಬತ್ತರಿಂದ 12ನೇ ತರಗತಿವರೆಗಿನ ಪಠ್ಯಕ್ರಮವನ್ನು 30%ವರೆಗೆ ಕಡಿಮೆ ಮಾಡಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನಿರ್ದೇಶನದ ನೀಡಿತ್ತು. ಆ ಭಾಗವಾಗಿ ಪಠ್ಯವನ್ನು ಕೈಬಿಡಲಾಗಿದೆ ಎಂದು ಸಿಬಿಎಸ್‌ಇ ತಿಳಿಸಿದೆ.
ಮಾರ್ಚ್ 24 ರಂದು ದೇಶಾದ್ಯಂತ ಲಾಕ್‌ಡೌನ್ ಹೇರುವ ಒಂದು ವಾರದ ಮೊದಲು ಭಾರತದ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲಾಯಿತು. ಅವುಗಳು ಮತ್ತೆ ಪ್ರಾರಂಭವಾಗುವುದರ ಕುರಿತು ಅನಿಶ್ಚಿತತೆ ಎದುರಾಗಿದೆ.
ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿ ಚಾಲ್ತಿಯಲ್ಲಿರುವ “ಅಸಾಧಾರಣ ಪರಿಸ್ಥಿತಿ” ಯಿಂದಾಗಿ ಶಾಲೆಗಳ ಪಠ್ಯಕ್ರಮವನ್ನು ಪರಿಷ್ಕರಿಸಲಾಗಿದೆ ಎಂದು ಸಿಬಿಎಸ್‌ಇ ಹೇಳಿದೆ. ಕಲಿಕೆಯ ಮಟ್ಟವನ್ನು ಸಾಧಿಸುವ ಪ್ರಾಮುಖ್ಯತೆಯನ್ನು ಪರಿಗಣಿಸಿ, ಪಠ್ಯಕ್ರಮದ ಮುಖ್ಯ ಪರಿಕಲ್ಪನೆಗಳನ್ನು ಉಳಿಸಿಕೊಳ್ಳುವ ಮೂಲಕ ಸಾಧ್ಯವಾದಷ್ಟು ಮಟ್ಟಿಗೆ ತರ್ಕಬದ್ಧಗೊಳಿಸಲಾಗಿದೆ ಎಂದು ಮಂಡಳಿಯು ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆ ಮಾಡುವುದು ಹೇಗೆ ಎಂಬ ಬಗ್ಗೆ ಕೇಂದ್ರವು ಶಿಕ್ಷಣ ತಜ್ಞರ ಸಲಹೆಗಳನ್ನು ಕೇಳಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ನಿಶಾಂಕ್ ಪೋಖ್ರಿಯಾಲ್ ತಿಳಿಸಿದ್ದಾರೆ. “ನಾವು ಒಂದೂವರೆ ಸಾವಿರಕ್ಕೂ ಹೆಚ್ಚಿನ ಸಲಹೆಗಳನ್ನು ಸ್ವೀಕರಿಸಿದ್ದೇವೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಅಗಾಧ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಡಾ.ಬಿ.ಆರ್.ಅಂಬೇಡ್ಕರ್‌ರವರ ಮುಂಬೈ ಮನೆ ‘ರಾಜ್‌ಗೃಹ’ ಮೇಲೆ ದಾಳಿ, ಧ್ವಂಸ


