ಬೆಂಗಳೂರಿನಾದ್ಯಂತ ನಂದಿನಿ ಡೈರಿ ಪಾರ್ಲರ್‌ಗಳಿಗೆ ನಕಲಿ ತುಪ್ಪ ಉತ್ಪನ್ನಗಳನ್ನು ಪೂರೈಸುತ್ತಿದ್ದ ಜಾಲವನ್ನು ಭೇದಿಸಲಾಗಿದ್ದು, ಅಧಿಕೃತ ವಿತರಕರೇ ಹಣದಾಸೆಗೆ ನಡೆಸುತ್ತಿದ್ದ ಕಲಬೆರಕೆ ಕೃತ್ಯವನ್ನು ಅಧಿಕಾರಿಗಳು ಬಯಲು ಮಾಡಿದ್ದಾರೆ.
ತಮಿಳುನಾಡಿನಲ್ಲಿ ಕಲಬೆರಕೆ ತುಪ್ಪ ಉತ್ಪಾದಿಸಿ, ನಕಲಿ ನಂದಿನಿ ಸ್ಯಾಚೆಟ್‌ಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿಸಿ, ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಪರವಾನಗಿಗಳನ್ನು ಹೊಂದಿರುವ ಬೆಂಗಳೂರಿನ ಆರೋಪಿಗಳಿಗೆ ಪೂರೈಸಿದ್ದಾರೆ ಎಂದು ತನಿಖೆಯಿಂದ ಬಹಿರಂಗವಾಗಿದೆ. ಆರೋಪಿತ ವಿತರಕರು ನಕಲಿ ತುಪ್ಪವನ್ನು ಸಗಟು ಅಂಗಡಿಗಳು, ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ನಂದಿನಿ ಪಾರ್ಲರ್‌ಗಳಿಗೆ ಪೂರ್ಣ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಿದ್ದಾರೆ.
ತುಪ್ಪ ಪೂರೈಕೆಯಲ್ಲಿ ವ್ಯತ್ಯಾಸ ಗಮನಿಸಿದ ಕೆಎಂಎಫ್ ಅಧಿಕಾರಿಗಳು ತನಿಖೆಗೆ ಇಳಿದ ನಂತರ ಹಗರಣ ಬೆಳಕಿಗೆ ಬಂದಿದೆ. ನಿಯಮಿತವಾಗಿ ದೊಡ್ಡ ಪ್ರಮಾಣದ ತುಪ್ಪದ ಆರ್ಡರ್‌ಗಳನ್ನು ನೀಡುತ್ತಿದ್ದ ಅಧಿಕೃತ ಕೆಎಂಎಫ್ ಡೀಲರ್-ಕಮ್-ವಿತರಕ ಮಹೇಂದ್ರ ಇದ್ದಕ್ಕಿದ್ದಂತೆ ತನ್ನ ಆರ್ಡರ್ ಕಡಿತಗೊಳಿಸಲು ಪ್ರಾರಂಭಿಸಿದರು. ಸಾಮಾನ್ಯವಾಗಿ ಆರ್ಡರ್ ಮಾಡುತ್ತಿದ್ದ 100 ಲೀಟರ್‌ಗಳ ಬದಲಿಗೆ, ಅವರು ಇತ್ತೀಚಿನ ತಿಂಗಳುಗಳಲ್ಲಿ ಕೇವಲ 50 ಲೀಟರ್‌ಗಳನ್ನು ಆರ್ಡರ್ ಮಾಡುತ್ತಿದ್ದರು.
ಇದರಿಂದ ಅಧಿಕಾರಿಗಳಿಗೆ ಅನುಮಾನ ಶುರುವಾಗಿದೆ. ಪ್ರಮುಖ ಆರೋಪಿ ಮಹೇಂದ್ರ, ಪಾಮ್ ಆಯಿಲ್ ಮತ್ತು ಇತರ ಕೊಬ್ಬನ್ನು ನಿಜವಾದ ನಂದಿನಿ ತುಪ್ಪದೊಂದಿಗೆ ಬೆರೆಸಿ, 1 ಲೀಟರ್ ನಿಜವಾದ ತುಪ್ಪದಿಂದ 5 ಲೀಟರ್ ಕಲಬೆರಕೆ ಉತ್ಪನ್ನವನ್ನಾಗಿ ಪರಿವರ್ತಿಸುತ್ತಿದ್ದ ಎಂದು ತಿಳಿದುಬಂದಿದೆ. ನಂತರ ಈ ನಕಲಿ ತುಪ್ಪವನ್ನು ನಗರದಾದ್ಯಂತ ನಂದಿನಿ ಪಾರ್ಲರ್‌ಗಳಿಗೆ ಸರಬರಾಜು ಮಾಡುತ್ತಿದ್ದ.
ಸಿಸಿಬಿ ವಿಶೇಷ ತನಿಖಾ ದಳ ಮತ್ತು ಕೆಎಂಎಫ್ ವಿಜಿಲೆನ್ಸ್ ವಿಂಗ್ ಜಂಟಿ ಕಾರ್ಯಾಚರಣೆ ನಡೆಸಿ, ರಹಸ್ಯವಾಗಿ ಸಂಗ್ರಹಿಸಿದ ಗುಪ್ತಚರ ಮಾಹಿತಿಯ ಮೇರೆಗೆ ಜಾಲವನ್ನು ಪತ್ತೆಹಚ್ಚಿತು. ಶುಕ್ರವಾರ, ಈ ತಂಡಗಳು ಚಾಮರಾಜಪೇಟೆಯಲ್ಲಿರುವ ಕೃಷ್ಣ ಎಂಟರ್‌ಪ್ರೈಸಸ್‌ಗೆ ಸೇರಿದ, ಪ್ರಮುಖ ಆರೋಪಿ ಮತ್ತು ಅವರ ಕುಟುಂಬದ ಒಡೆತನದ ಗೋದಾಮುಗಳು, ಅಂಗಡಿ ಸೇರಿದಂತೆ ಸರಕು ವಾಹನಗಳ ಮೇಲೆ ದಾಳಿ ನಡೆಸಿದವು. ಕಲಬೆರಕೆ ತುಪ್ಪ ಸಾಗಿಸುತ್ತಿದ್ದ ವಾಹನವನ್ನು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಲಾಯಿತು.
ತನಿಖೆ ವಿಸ್ತರಿಸಿದ ಕೆಎಂಎಫ್ ವಿಜಿಲೆನ್ಸ್ ತಂಡ, ಮಹೇಂದ್ರನ ಕಾರ್ಯಾಚರಣೆಯ ಸಂಪೂರ್ಣ ವ್ಯಾಪ್ತಿಯನ್ನು ಬಹಿರಂಗಪಡಿದೆ. ಮೂಲಗಳ ಪ್ರಕಾರ, ಅವನು ತನ್ನ ಮಗಳ ಮದುವೆಗೆ ಹಣ ಸಂಗ್ರಹಿಸಲು ಕಲಬೆರಕೆ ಆರಂಭಿಸಿದ್ದ ಎಂದು ಆರೋಪಿಸಲಾಗಿದೆ.
“ಇದುವರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಅಧಿಕಾರಿಗಳು 8,136 ಲೀಟರ್ ಕಲಬೆರಕೆ ತುಪ್ಪ, ತೆಂಗಿನಕಾಯಿ ಮತ್ತು ತಾಳೆ ಎಣ್ಣೆ, 1.19 ಲಕ್ಷ ರೂ. ನಗದು, ನಾಲ್ಕು ಸರಕು ವಾಹನಗಳು, ಕಲಬೆರಕೆ ತುಪ್ಪ ತಯಾರಿಸಲು ಬಳಸಿದ ಯಂತ್ರೋಪಕರಣಗಳು ಮತ್ತು ಇತರ ಸಂಬಂಧಿತ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಆಸ್ತಿಯ ಒಟ್ಟು ಮೌಲ್ಯ ಸುಮಾರು 1.27 ಕೋಟಿ ರೂ.” ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿ : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್


