ದೇಶದ ರೈತರು ನಡೆಸುತ್ತಿರುವ ಪ್ರತಿಭಟನೆಯ ಕುರಿತ ಚರ್ಚೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರವು ಅಧಿವೇಶನ ನಡೆಸದೇ ನುಣುಚಿಕೊಳ್ಳುತ್ತಿದೆ ಎಂದು ಶಿವಸೇನೆಯ ಮುಖಂಡ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ.
ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಈ ಕುರಿತು ಬರೆದಿರುವ ಅವರು, “ಚರ್ಚೆ ಮತ್ತು ಸಂಸತ್ ಅಧಿವೇಶನವನ್ನು ನಡೆಸುವ ಬಗ್ಗೆ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಇಷ್ಟವಿಲ್ಲ ಎಂದಮೇಲೆ ₹ 1,000 ಕೋಟಿ ವೆಚ್ಚ ಮಾಡಿ ಸೆಂಟ್ರಲ್ ವಿಸ್ತಾ ನಿರ್ಮಾಣ ಮಾಡುವುದಾದರೂ ಏಕೆ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಕಾರಣ ನೀಡಿ ಸಂಸತ್ತಿನ ’ಚಳಿಗಾಲದ ಅಧಿವೇಶನ’ ರದ್ದುಪಡಿಸಿದ ಕೇಂದ್ರ ಸರ್ಕಾರ
“ಈಗಿರುವ ಸಂಸತ್ ಭವನ ಸದೃಢವಾಗಿಯೇ ಇದೆ. ಇನ್ನೂ 50–75 ವರ್ಷಗಳ ಕಾಲ ಈಗಿರುವ ಕಟ್ಟಡದಲ್ಲಿಯೇ ಸಂಸತ್‌ನ ಕಾರ್ಯಕಲಾಪಗಳನ್ನು ನಡೆಸಬಹುದು. ನಮ್ಮ ಹಿರಿಯರು ಪ್ರಾರಂಭಿಸಿದ ಪರಂಪರೆಯನ್ನು ನಾಶಮಾಡಿ, ಅವರ ಕೊಡುಗೆಗಳನ್ನು ಮರೆಮಾಚುವುದು, ತಮ್ಮ ವರ್ಚಸ್ಸನ್ನು ಬೆಳೆಸಿಕೊಳ್ಳುವ ಸಲುವಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದನ್ನು ಅತಿಯಾದ ಪ್ರಜಾತಂತ್ರ ಎಂದು ಯಾರೂ ಯೋಚಿಸುವುದಿಲ್ಲ” ಎಂದು ನೂತನ ಸಂಸತ್ ಭವನ ನಿರ್ಮಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಕೇಂದ್ರದೊಂದಿಗೆ ರೈತ ಮುಖಂಡರ ಸಭೆ: ಸಂಸತ್ ಅಧಿವೇಶನ ಕರೆದು ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲು ರೈತರ ತಾಕೀತು
“ಮಾಜಿ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳನ್ನು ಸೋಲಿಸಲು ತಮ್ಮ ಎಲ್ಲಾ ಶಕ್ತಿಯನ್ನೂ ಒಗ್ಗೂಡಿಸಿ ಕೆಲಸ ಮಾಡಿದರು. ಆದರೆ ಯಾವಾಗಲೂ ಸೋಲಿಸಲ್ಪಟ್ಟ ಎದುರಾಳಿಗಳನ್ನು ಗೌರವದಿಂದ ಕಾಣುತ್ತಿದ್ದರು. ಮೋದಿ ಮತ್ತು ಅವರ ಸಹೋದ್ಯೋಗಿಗಳು ಚರ್ಚಿಲ್ ಅವರ ಉದಾಹರಣೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು” ಎಂದು ಸಂಜಯ್ ರಾವತ್ ಹೇಳಿದರು.
ಕೊರೊನಾ ಕಾರಣಕ್ಕೆ ಈ ಬಾರಿಯ ಸಂಸತ್ತಿನ ಚಳಿಗಾಳದ ಅಧಿವೇಶನ ನಡೆಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹಲ್ಲಾದ್ ಜೋಶಿ ಈ ಹಿಂದೆ ಹೇಳಿದ್ದರು. ಇದಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಕೂಡಾ ಒಲವು ತೋರಿದೆ ಎಂದೂ ಅವರು ಹೇಳಿದ್ದರು.
ಇದನ್ನೂ ಓದಿ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯರನ್ನು ಸೋಲಿಸಲು JDS-BJP ನಡುವೆ ಒಳಒಪ್ಪಂದ ಆಗಿತ್ತು- ಜೆಡಿಎಸ್ ಶಾಸಕ


