ಕೇಂದ್ರ ಸರ್ಕಾರ ಶುಕ್ರವಾರ (ನವೆಂಬರ್ 21) ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ. ವೇತನ ಸಂಹಿತೆ 2019, ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಸಾಮಾಜಿಕ ಭದ್ರತಾ ಸಂಹಿತೆ 2020 ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ದುಡಿಯುವ ಪರಿಸ್ಥಿತಿಗಳ ಸಂಹಿತೆ 2020, ಇವುಗಳು ಜಾರಿಗೆ ಬಂದಿವೆ.
ಇದೊಂದು ಐತಿಹಾಸಿಕ ನಿರ್ಧಾರವೆಂದು ಬಣ್ಣಿಸಿರುವ ಕೇಂದ್ರ ಸರ್ಕಾರ, 29 ಕಾರ್ಮಿಕ ಕಾನೂನುಗಳನ್ನು ಈ ಮೂಲಕ ಏಕರೂಪಗೊಳಿಸಿದೆ. ಶತಮಾನಗಳಷ್ಟು ಹಳೆಯದಾದ ದೇಶದ ಕಾರ್ಮಿಕ ಕಾನೂನುಗಳ ಕಾರ್ಯಚೌಕಟ್ಟನ್ನು ನಾಲ್ಕು ಕಾರ್ಮಿಕ ಸಂಹಿತೆಗಳು ಸರಳಗೊಳಿಸಿವೆ ಹಾಗೂ ಕೋಟ್ಯಾಂತರ ಕಾರ್ಮಿಕರಿಗೆ ಉದ್ಯೋಗ ಸಂರಕ್ಷಣೆಯನ್ನು ಇದು ವಿಸ್ತರಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ಶ್ರಮ ಏವ ಜಯತೇ!, ಇಂದು ನಮ್ಮ ಸರ್ಕಾರವು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಅನುಷ್ಠಾನಗೊಳಿಸಿದೆ. ಸ್ವಾತಂತ್ರ್ಯಾನಂತರ ಇದು ಅತ್ಯಂತ ಸಮಗ್ರ ಹಾಗೂ ಪ್ರಗತಿಪರವಾದ ಕಾರ್ಮಿಕ ಕೇಂದ್ರಿತ ಸುಧಾರಣಾ ಕ್ರಮಗಳಾಗಿವೆ. ಇದು ನಮ್ಮ ಕಾರ್ಮಿಕರನ್ನು ಮಹೋನ್ನತವಾಗಿ ಸಬಲೀಕರಣಗೊಳಿಸುತ್ತದೆ. ಇದು ಅನುಸರಣಾ ವಿಧಾನಗಳನ್ನು ಸರಳೀಕೃತಗೊಳಿಸುತ್ತದೆ ಹಾಗೂ ‘ಸುಲಲಿತ ಉದ್ಯಮ ನಿರ್ವಹಣೆ’ಯನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.
ಈ ಸಂಹಿತೆಗಳು, ಸಾರ್ವತ್ರಿಕ ಸಾಮಾಜಿಕ ಭದ್ರತೆ, ವೇತನಗಳ ಕನಿಷ್ಠ ಮತ್ತು ಸಕಾಲಿಕ ಪಾವತಿಗೆ ಬಲವಾದ ಅಡಿಪಾಯ ಹಾಕಲಿದೆ. ಸುರಕ್ಷಿತ ಕೆಲಸದ ಸ್ಥಳಗಳನ್ನು ಸೃಷ್ಟಿಸಲಿದೆ ಹಾಗೂ ನಾರಿಶಕ್ತಿ ಮತ್ತು ಯುವಶಕ್ತಿಗೆ ವ್ಯಾಪಕ ಅವಕಾಶಗಳನ್ನು ತೆರೆದುಕೊಡಲಿದೆ ಹಾಗೂ ವಿಕಸಿತ ಭಾರತದೆಡೆಗೆ ನಮ್ಮ ಪಯಣಕ್ಕೆ ವೇಗೋತ್ಕರ್ಷವನ್ನು ನೀಡಲಿದೆ ಎಂದು ಪ್ರಧಾನಿ ಹೇಳಿದ್ದಾರೆ.


