ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆ ಕುರಿತು ಕೇಂದ್ರ ಸರ್ಕಾರ ಗುರುವಾರ (ಅ.16) ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದು, ಪ್ರಕರಣದ ಪ್ರಸ್ತುತ ಸ್ಥಿತಿಯ ಬಗ್ಗೆ ವಿವರಿಸಿದೆ.
ಯೆಮನ್‌ನಲ್ಲಿ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಪ್ರಸ್ತುತ ತಡೆ ಹಿಡಿಯಲಾಗಿದೆ. ಯಾವುದೇ ಪ್ರತಿಕೂಲ ಬೆಳವಣಿಗೆಗಳು ನಡೆಯುತ್ತಿಲ್ಲ ಎಂದು ಕೇಂದ್ರ ಸರ್ಕಾರದ ಪರ ಭಾರತದ ಅಟಾರ್ನಿ (ಎಜೆ) ಜನರಲ್ ಆರ್. ವೆಂಕಟರಮಣಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಪ್ರಕರಣದಲ್ಲಿ ಹೊಸ ಮಧ್ಯಸ್ಥಿಕೆದಾರರು ಆಗಮಿಸಿದ್ದಾರೆ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠಕ್ಕೆ ಎಜೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, “ಮರಣದಂಡನೆ ಏನಾಯಿತು?” ಎಂದು ಕೇಳಿದೆ.
ನಿಮಿಷಾ ಪ್ರಿಯಾ ಅವರಿಗೆ ಕಾನೂನು ಬೆಂಬಲ ನೀಡುತ್ತಿರುವ ‘ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್’ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲರು ಕೂಡ, “ಮರಣದಂಡನೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ” ಎಂದು ಖಚಿತಪಡಿಸಿದ್ದಾರೆ. ಹಾಗಾಗಿ, ವಿಚಾರಣೆಯನ್ನು ಮುಂದೂಡಬಹುದು ಎಂದಿದ್ದಾರೆ.
ಈ ವೇಳೆ ಪೀಠವು, ಜನವರಿ 2026ಕ್ಕೆ ಪ್ರಕರಣವನ್ನು ಮುಂದಿನ ವಿಚಾರಣೆಗೆ ಪಟ್ಟಿ ಮಾಡಿ ಎಂದು ಸೂಚಿಸಿದೆ. ಅಲ್ಲದೆ, ಪರಿಸ್ಥಿತಿಗೆ ಅನುಗುಣುವಾಗಿ ಅಗತ್ಯವಿದ್ದರೆ ಪಕ್ಷಕಾರರು ವಿಚಾರಣೆಗೆ ಅರ್ಜಿ ಸಲ್ಲಿಸಲು ಮುಕ್ತರಾಗಿರುತ್ತಾರೆ ಎಂದಿದೆ.
2017ರಲ್ಲಿ ತನ್ನ ಯೆಮೆನ್ ವ್ಯವಹಾರ ಪಾಲುದಾರನನ್ನು ಕೊಲೆ ಮಾಡಿದ ಆರೋಪದಲ್ಲಿ ಮರಣದಂಡನೆ ಘೋಷಣೆಯಾಗಿರುವ 38 ವರ್ಷದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ರಕ್ಷಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಕಳೆದ ಆಗಸ್ಟ್ 14ರಂದು, ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್ ವಕೀಲರು ಪ್ರಿಯಾಗೆ “ತಕ್ಷಣಕ್ಕೆ ಯಾವುದೇ ಅಪಾಯ ಇಲ್ಲ” ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.
ಜುಲೈ 16ರಂದು ನಿಗದಿಯಾಗಿದ್ದ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ತಡೆಹಿಡಿಯಲಾಗಿದೆ ಎಂದು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿತ್ತು. ಜುಲೈ 18 ರಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು, ಪ್ರಿಯಾ ಅವರನ್ನು ಸುರಕ್ಷಿತವಾಗಿ ಜೈಲಿನಿಂದ ಹೊರ ತರಲು ಪ್ರಯತ್ನಗಳು ನಡೆಯುತ್ತಿವೆ. ಸರ್ಕಾರವು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ ಎಂದು ಹೇಳಿತ್ತು.
ಪ್ರಿಯಾ ಅವರ ತಾಯಿ ಸಂತ್ರಸ್ತನ ಕುಟುಂಬದೊಂದಿಗೆ ಮಾತುಕತೆ ನಡೆಸಲು ಯೆಮೆನ್‌ಗೆ ತೆರಳಿದ್ದಾರೆ. ಅವರಿಗೆ ಅಲ್ಲಿಗೆ ಪ್ರಯಾಣಿಸಲು ಅನುಮತಿ ನೀಡುವಂತೆ ದೆಹಲಿ ಹೈಕೋರ್ಟ್ ಸೂಚಿಸಿದ್ದರಿಂದ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಸಂಘಟನೆಯವರು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.
ಜುಲೈ 16ರಂದು ನಿಗದಿಯಾಗಿದ್ದ ನಿಮಿಷಾ ಪ್ರಿಯಾ ಅವರ ಮರಣದಂಡನೆ ಭಾರತದ ಗ್ರ್ಯಾಂಡ್ ಮುಫ್ತಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಮಧ್ಯಪ್ರವೇಶದಿಂದ ಮುಂದೂಡಿಕೆಯಾಗಿದೆ. ಆ ಬಳಿಕವಷ್ಟೇ ಕೇಂದ್ರ ಸರ್ಕಾರ ಈ ಪ್ರಕರಣದಲ್ಲಿ ಹೇಳಿಕೆ ನೀಡಲು ಪ್ರಾರಂಭಿಸಿದೆ. ಇದಕ್ಕೂ ಮುನ್ನ ಜುಲೈ 14ರಂದು “ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ” ಎಂದು ಕೇಂದ್ರ ಸರ್ಕಾರ ಕೈ ತೊಳೆದುಕೊಂಡಿತ್ತು.
ಸಿಜೆಐ ಮೇಲೆ ದಾಳಿ: ವಕೀಲ ರಾಕೇಶ್ ಕಿಶೋರ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಎಜಿ ಒಪ್ಪಿಗೆ


