ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಕುರಿತ ಕರಡು ನಿಯಮಾವಳಿಗಳನ್ನು (ಡಿಪಿಡಿಪಿ) ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಶುಕ್ರವಾರ (ಜ.3) ಬಿಡುಗಡೆ ಮಾಡಿದೆ.
ಕರಡು ನಿಯಮಾವಳಿ ಕುರಿತು MyGov ಪೋರ್ಟಲ್ ಮೂಲಕ ಫೆಬ್ರವರಿ 18 ರವರೆಗೆ ಸಾರ್ವಜನಿಕರು ಸಲಹೆ, ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ 2023ರ ಸೆಕ್ಷನ್ 40ರ ಸಬ್ ಸೆಕ್ಷನ್ (1) ಮತ್ತು (2) ಅಡಿ ನೀಡಿರುವ ಅಧಿಕಾರ ಚಲಾಯಿಸುವುದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ಈ ನಿಯಮಾವಳಿಗಳನ್ನು ರೂಪಿಸಿದೆ.
ಕರಡು ನಿಯಮಾವಳಿಗಳಲ್ಲಿ ಮಕ್ಕಳ ವೈಯಕ್ತಿಕ ಮಾಹಿತಿ ಸೇರಿದಂತೆ ದತ್ತಾಂಶ ರಕ್ಷಣೆ ಸಂಬಂಧ ಮುಂದೆ ಜಾರಿಯಾಗುವ ಕಾನೂನಿನ ಮಹತ್ವದ ಅಂಶಗಳಿವೆ. ಹೊಸ ಕಾಯ್ದೆಯಡಿ ದೇಶದಲ್ಲಿ ಮೊದಲ ಬಾರಿಗೆ ದತ್ತಾಂಶ ಸಂರಕ್ಷಣಾ ಮಂಡಳಿಯ ಸ್ಥಾಪಿಸುವ ಕುರಿತು ನಿಬಂಧನೆಗಳನ್ನು ವಿವರಿಸಲಾಗಿದೆ ಎಂದು ವರದಿಗಳು ಹೇಳಿವೆ.
ದತ್ತಾಂಶ ರಕ್ಷಣೆ ಕಾನೂನು ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯಿಸುವುದರಿಂದ, ಅದನ್ನು ಜಾರಿಗೊಳಿಸುವ ಮುನ್ನ ನಿಯಮಾವಳಿಗಳ ಕುರಿತು ಮಾಹಿತಿ ನೀಡಿ, ಆಕ್ಷೇಪಣೆಗಳಿದ್ದರೆ ತಿಳಿಸಲು ಜನರಿಗೆ ಸರ್ಕಾರ ಅವಕಾಶ ನೀಡಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಜನರ ವೈಯಕ್ತಿಕ ಮಾಹಿತಿಗಳು ಕೇವಲ ಒಂದು ಸಂಖ್ಯೆಯೋ, ಪದವೋ ಅಲ್ಲ. ಅದು ನಮ್ಮ ಅಭ್ಯಾಸಗಳು, ಆಯ್ಕೆಗಳು ಮತ್ತು ಗುರುತಿನ ಪ್ರತಿಬಿಂಬವಾಗಿದೆ. ಆದ್ದರಿಂದ ಈ ಮಾಹಿತಿಗಳು ಕಾರ್ಪೋರೇಟ್ ಸಂಸ್ಥೆಗಳಿಗೆ ಚಿನ್ನದಷ್ಟೇ ಅಮೂಲ್ಯ. ಭಾರತದಲ್ಲಿ ಜನರ ವೈಯಕ್ತಿಕ ಮಾಹಿತಿಗಳನ್ನು ಪಡೆಯುದಕ್ಕೆ ಮತ್ತು ಅದನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಲಗಾಮು ಇಲ್ಲದಂತಾಗಿದೆ. ಈ ಕಾರಣಕ್ಕೆ ದತ್ತಾಂಶ ಸಂರಕ್ಷಣೆ ಅಗತ್ಯವಾಗಿದೆ.
ಜನರ ವೈಯಕ್ತಿಕ ದತ್ತಾಂಶಗಳನ್ನು ಬಳಸಿಕೊಂಡು ಅವರನ್ನು ವಂಚಿಸುವುದು, ಕಿರುಕುಳ ಕೊಡುವುದನ್ನು ಹಲವರು ಕಸುಬಾಗಿ ಮಾಡಿಕೊಂಡಿದ್ದಾರೆ. ಅವರಿಗೆ ಮೂಗುದಾರ ಹಾಕುವವರು ಸದಸ್ಯಕ್ಕೆ ಇಲ್ಲ. ಜನರು ಮೋಸ ಹೋದ ಮೇಲೆ ಕ್ರಮ ಕೈಗೊಳ್ಳುವ ಬದಲು, ಡಿಜಿಟಲ್ ವಂಚನೆಗೆ ಒಳಗಾಗದಂತೆ ತಡೆಯುವುದು ಅನಿವಾರ್ಯವಾಗಿದೆ. ಈ ಕಾರಣಕ್ಕೆ ದತ್ತಾಂಶ ರಕ್ಷಣೆಗೆ ಕಾನೂನು ಅಗತ್ಯವಾಗಿದೆ. ಈ ಕಾರಣಕ್ಕೆ ದತ್ತಾಂಶ ಸಂರಕ್ಷಣಾ ಕಾಯ್ದೆ ಮಹತ್ವವೆನಿಸಿದೆ.
ಕರಡು ನಿಯಮಾವಳಿ ನೋಡಲು ಇಲ್ಲಿ ಒತ್ತಿ
ಇದನ್ನೂ ಓದಿ : ಕಾಲೇಜುಗಳಲ್ಲಿ ಜಾತಿ ತಾರತಮ್ಯ : ಯುಜಿಸಿಯಿಂದ ಮಾಹಿತಿ ಕೋರಿದ ಸುಪ್ರೀಂ ಕೋರ್ಟ್, ಕ್ರಮದ ಭರವಸೆ


