ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಪ್ರಕರಣದಲ್ಲಿ ಮುಂದಿನ ಆಯ್ಕೆಗಳನ್ನು ಪರಿಶೀಲಿಸಲು ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುವುದಾಗಿ ಕೇಂದ್ರ ಸರ್ಕಾರ ಮಂಗಳವಾರ (ಡಿ.31) ಭರವಸೆ ನೀಡಿದೆ.
ಯೆಮನ್ ಪ್ರಜೆಯನ್ನು ಕೊಲೆ ಮಾಡಿದ ಅಪರಾಧದಲ್ಲಿ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಯೆಮನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಅವರು ಅನುಮೋದನೆ ನೀಡಿದ್ದಾರೆ. ಈ ಬೆನ್ನಲ್ಲೆ ಕೇಂದ್ರ ವಿದೇಶಾಂಗ ಸಚಿವಾಲಯ (ಎಂಇಎ) ಪ್ರತಿಕ್ರಿಯೆ ಕೊಟ್ಟಿದೆ.
ವರದಿಗಳ ಪ್ರಕಾರ, ನಿಮಿಷಾ ಪ್ರಿಯಾ ಅವರಿಗೆ ಒಂದು ತಿಂಗಳೊಳಗೆ ಮರಣದಂಡನೆ ಜಾರಿಯಾಗುವ ಸಾಧ್ಯತೆಯಿದೆ.
“ಯೆಮನ್‌ನಲ್ಲಿ ನಿಮಿಷಾ ಪ್ರಿಯಾ ಅವರು ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಮಾಹಿತಿ ನಮಗೆ ಗೊತ್ತಿದೆ. ಆಕೆಯ ಕುಟುಂಬ ಮುಂದಿನ ಆಯ್ಕೆಗಳನ್ನು ಪರಿಶೀಲಿಸುತ್ತಿದೆ ಎಂಬುವುದೂ ನಮ್ಮ ಗಮನಕ್ಕೆ ಬಂದಿದೆ. ಅವರಿಗೆ ಸರ್ಕಾರದ ಕಡೆಯಿಂದ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡಲಾಗುವುದು” ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
Our response to media queries regarding the case of Ms. Nimisha Priya:https://t.co/DlviLboqKG pic.twitter.com/tSgBlmitCy
— Randhir Jaiswal (@MEAIndia) December 31, 2024
ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್‌ನ ನರ್ಸ್ ನಿಮಿಷಾ ಪ್ರಿಯಾ ಅವರು 2008ರಲ್ಲಿ ಯೆಮೆನ್‌ಗೆ ತೆರಳಿದವರು. ಅಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಲವಾರು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದಾರೆ. ನಂತರ ತಮ್ಮದೇ ಸ್ವಂತ ಕ್ಲಿನಿಕ್ ಸ್ಥಾಪಿಸಲು ಯೋಜಿಸಿದ್ದರು.
2017ರಲ್ಲಿ, ಅವರು ತಮ್ಮ ಸ್ಥಳೀಯ ಪಾಲುದಾರ ತಲಾಲ್ ಅಬ್ದೋ ಮಹದಿ ಅವರೊಂದಿಗೆ ಹಣದ ವಿಚಾರಕ್ಕೆ ಜಗಳವಾಡಿಕೊಂಡಿದ್ದರು. ನಿಮಿಷಾ ಅವರ ಕುಟುಂಬದ ಪ್ರಕಾರ, ಮಹದಿ ಹಣ ದುರುಪಯೋಗಪಡಿಸಿಕೊಳ್ಳುವುದನ್ನು ನಿಮಷಾ ವಿರೋಧಿಸಿದ್ದರು.
ಜಗಳದ ಮುಂದುವರಿದ ಭಾಗವಾಗಿ, ಮಹದಿ ವಶಪಡಿಸಿಕೊಂಡಿದ್ದ ತನ್ನ ಪಾಸ್‌ಪೋರ್ಟ್ ಅನ್ನು ವಾಪಸ್ ಪಡೆಯಲು ನಿಮಿಷಾ ಅವರು ಮಹದಿಗೆ ನಿದ್ರೆಯ ಇಂಜೆಕ್ಷನ್ ಚುಚ್ಚಿದ್ದರು. ಅದು ಓವರ್ ಡೋಸ್ ಆಗಿ ಯೆಮನ್ ಪ್ರಜೆ ಮಹದಿ ಸಾವನ್ನಪ್ಪಿದ್ದರು.
ಆ ಬಳಿಕ ಯೆಮೆನ್‌ನಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ನಿಮಿಷ ಅವರನ್ನು ಬಂಧಿಸಲಾಗಿತ್ತು. 2018ರಲ್ಲಿ ಅವರನ್ನು ಅಪರಾಧಿ ಎಂದು ನ್ಯಾಯಾಲಯ ಘೋಷಿಸಿತ್ತು. 2020ರಲ್ಲಿ, ಸನಾದ ವಿಚಾರಣಾ ನ್ಯಾಯಾಲಯ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತು.
ದ.ಕೊರಿಯಾ | ವಾಗ್ದಂಡನೆಗೆ ಗುರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಬಂಧನಕ್ಕೆ ವಾರೆಂಟ್


