ಕೇಂದ್ರ ಸರ್ಕಾರವು 2021ರ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಬುಧವಾರ ಬದಲಾಯಿಸಿದೆ. ಈ ಬದಲಾವಣೆಯಿಂದ, ಇಂಟರ್‌ನೆಟ್‌ನಲ್ಲಿ ಹಾಕಲಾದ ವಿಷಯ (ಕಂಟೆಂಟ್) ಅನ್ನು ತೆಗೆದುಹಾಕಲು ಯಾವ ಸರ್ಕಾರಿ ಸಂಸ್ಥೆಗಳು ಅಥವಾ ಅಧಿಕಾರಿಗಳು ಆದೇಶಿಸಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ.
ಈ ಹಿಂದಿನ ನಿಯಮದಲ್ಲಿ ಸರ್ಕಾರ ಅಥವಾ ಅದರ ಸಂಸ್ಥೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ವಿಷಯವನ್ನು ತೆಗೆದುಹಾಕಲು ನಿರ್ದೇಶಿಸಬಹುದು ಎಂದು ಹೇಳಲಾಗಿತ್ತು.
ತಿದ್ದುಪಡಿ ನಿಯಮ ಅಥವಾ ಹೊಸ ನಿಯಮದಲ್ಲಿ, ಸಾಮಾಜಿಕ ಮಾಧ್ಯಮ ವೇದಿಕೆಗಳ ವಿಷಯಗಳನ್ನು ತೆಗೆದುಹಾಕಲು ಅಥವಾ ಅದರ ಬಳಕೆಗೆ ನಿರ್ಬಂಧ ವಿಧಿಸಲು ಸಮರ್ಥ ನ್ಯಾಯವ್ಯಾಪ್ತಿಯ ನ್ಯಾಯಾಲಯದ ಆದೇಶದ ಮೂಲಕ ಅಥವಾ ಜಂಟಿ ಕಾರ್ಯದರ್ಶಿ ಅಥವಾ ನಿರ್ದೇಶಕರ ಹುದ್ದೆಗಿಂತ ಕಡಿಮೆಯಿಲ್ಲದ ಸರ್ಕಾರಿ ಅಧಿಕಾರಿಯ ಸೂಚನೆಯ ಮೂಲಕ ನಿರ್ದೇಶಿಸಬಹುದು ಎಂದು ಹೇಳಲಾಗಿದೆ.
ಪೊಲೀಸರಿಂದ ಟೇಕ್-ಡೌನ್ ನೋಟಿಸ್ (ತೆಗೆದು ಹಾಕುವ ಪತ್ರ) ಬಂದರೆ, ಅದನ್ನು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಹುದ್ದೆಗಿಂತ ಕಡಿಮೆಯಿಲ್ಲದ ಅಧಿಕಾರಿ ಹೊರಡಿಸಿರಬೇಕು. ಅಲ್ಲದೆ, ಅಂತಹ ಸೂಚನೆಗಳು ‘ಲಿಖಿತ ರೂಪದಲ್ಲಿ ತಾರ್ಕಿಕ ಮಾಹಿತಿ’ ಆಗಿರಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.
ಮಾರ್ಚ್‌ನಲ್ಲಿ, ಸಾಮಾಜಿಕ ಮಾಧ್ಯಮ ಕಂಪನಿ ಎಕ್ಸ್ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರ ಅಡಿಯಲ್ಲಿ ತನ್ನ ವೇದಿಕೆಯಲ್ಲಿ ಪೋಸ್ಟ್ ಮಾಡಲಾದ ವಿಷಯವನ್ನು ತೆಗೆದುಹಾಕಲು ಅಥವಾ ನಿರ್ಬಂಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದೇಶಗಳನ್ನು ಹೊರಡಿಸುತ್ತಿರುವ ವಿಧಾನವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಕಂಪನಿಯು ತನ್ನ ಅರ್ಜಿಯಲ್ಲಿ, ವಿಷಯವನ್ನು ತೆಗೆದುಹಾಕುವ ಸೂಚನೆಗಳು ಸಾಮಾನ್ಯವಾಗಿ ‘ಸರಿಯಾದ ತಾರ್ಕಿಕತೆಯನ್ನು ಹೊಂದಿರುವುದಿಲ್ಲ’ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಕಾರ್ಯವಿಧಾನಕ್ಕೆ ಅನುಗುಣವಾಗಿಲ್ಲ ಎಂದು ವಾದಿಸಿತ್ತು.
ಮಾಹಿತಿ ತಂತ್ರಜ್ಞಾನ ನಿಯಮ 3(1)(d) ಅಡಿಯಲ್ಲಿ, ನ್ಯಾಯಾಲಯದ ಆದೇಶ ಅಥವಾ ಸರ್ಕಾರಿ ಅಧಿಸೂಚನೆಯನ್ನು ಸ್ವೀಕರಿಸಿದ 36 ಗಂಟೆಗಳ ಒಳಗೆ ಸಾಮಾಜಿಕ ಮಾಧ್ಯಮ ವೇದಿಕೆಗಳು ವಿಷಯವನ್ನು ತೆಗೆದುಹಾಕಬೇಕಾಗುತ್ತದೆ.
ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್ ಎಕ್ಸ್ ಅರ್ಜಿಯನ್ನು ವಜಾಗೊಳಿಸಿತ್ತು. ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಅನಿಯಂತ್ರಿತ ಸ್ವಾತಂತ್ರ್ಯವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಎಕ್ಸ್ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಸಿದ್ಧತೆ ನಡೆಸುತ್ತಿದೆ.
ವಿವರವಾದ ಕಾರಣವಿಲ್ಲದೆ ಅಧಿಕಾರಿಗಳು ಟೇಕ್-ಡೌನ್ ನೋಟಿಸ್‌ಗಳನ್ನು ಹೊರಡಿಸುತ್ತಿದ್ದಾರೆ. ಅವರ ಆದೇಶವನ್ನು 36 ಗಂಟೆಗಳಲ್ಲಿ ಪಾಲಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಎಕ್ಸ್ ಹೈಕೋರ್ಟ್‌ನಲ್ಲಿ ವಾದಿಸಿತ್ತು.
ಬುಧವಾರದ ಹೊಸ ತಿದ್ದುಪಡಿ ನಿಯಮಗಳ ಜಾರಿ ಮೂಲಕ ಕೇಂದ್ರ ಸರ್ಕಾರವು ಆನ್‌ಲೈನ್ ವಿಷಯವನ್ನು ತೆಗೆದುಹಾಕಲು ಆದೇಶಿಸಿ ನೋಟಿಸ್‌ಗಳನ್ನು ನೀಡುವ ಪರಿಶೀಲನಾ ಕಾರ್ಯವಿಧಾನವನ್ನು ಪರಿಚಯಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕನಿಷ್ಠ ಕಾರ್ಯದರ್ಶಿ ಹಂತದ ಅಧಿಕಾರಿಯನ್ನು ನೇಮಿಸಬೇಕು. ಈ ಅಧಿಕಾರಿಯು ಪ್ರತಿ ತಿಂಗಳು ಆನ್‌ಲೈನ್ ವಿಷಯವನ್ನು ತೆಗೆದುಹಾಕಲು ಕಳುಹಿಸಲಾದ ನೋಟಿಸ್‌ಗಳನ್ನು ಪರಿಶೀಲಿಸಬೇಕು. ಇದರಿಂದಾಗಿ ಈ ನೋಟಿಸ್‌ಗಳು ಅಗತ್ಯವಾಗಿವೆಯೇ, ಸೂಕ್ತವಾಗಿವೆಯೇ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ (ಐಟಿ ಕಾಯ್ದೆ) ಅನುಗುಣವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದಿದೆ.
ಈ ತಿದ್ದುಪಡಿಯ ಪ್ರಕಾರ, ಅಧಿಕಾರಿಗಳು ಕಳುಹಿಸುವ ನೋಟಿಸ್‌ಗಳು, ಕಾನೂನು ಆಧಾರ ಮತ್ತು ಉಲ್ಲೇಖಿಸಲಾದ ಕಾನೂನು ನಿಬಂಧನೆ, ಕಾನೂನುಬಾಹಿರ ಕೃತ್ಯದ ಸ್ವರೂಪ ಮತ್ತು ತೆಗೆದುಹಾಕಬೇಕಾದ ಅಥವಾ ನಿಷ್ಕ್ರಿಯಗೊಳಿಸಬೇಕಾದ ಮಾಹಿತಿಯ ನಿರ್ದಿಷ್ಟ ಯುಆರ್‌ಎಲ್ ಗುರುತಿನ ಸಂಖ್ಯೆ ಅಥವಾ ಇತರ ಎಲೆಕ್ಟ್ರಾನಿಕ್ ಸ್ಥಳ, ದಿನಾಂಕ ಅಥವಾ ಸಂನಿವೇಶ ಸಂಪರ್ಕ ಸೇರಿದಂತೆ ಕೆಲವು ವಿಷಯಗಳನ್ನು ಸ್ಪಷ್ಟವಾಗಿ ಒಳಗೊಂಡಿರಬೇಕು.
ಡೀಪ್‌ಫೇಕ್ ದುರುಪಯೋಗ ತಡೆಗಟ್ಟಲು ಎಐ ಮೇಲೆ ನಿಯಂತ್ರಣ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್


