ತ್ರಿವಳಿ ತಲಾಖ್ ವಿರುದ್ಧದ ಕಾನೂನನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಈ ಸಂಬಂಧಿತ ಕಾಯ್ದೆಯು, ವಿವಾಹಿತ ಮುಸ್ಲಿಂ ಮಹಿಳೆಯರಿಗೆ ಲಿಂಗ ಸಮಾನತೆಯನ್ನು ಒದಗಿಸಿಕೊಡುವ ದೊಡ್ಡ ಸಾಂವಿಧಾನಿಕ ಗುರಿಯನ್ನು ಸಾಧಿಸಲು ಮತ್ತು ತಾರತಮ್ಯ ನೀತಿಯನ್ನು ಹೋಗಲಾಡಿಸಿ, ಮಹಿಳೆಯರ ಸಬಲೀಕರಣಕ್ಕೆ ಸಹಾಯ ಮಾಡಲಿದೆ ಎಂದು ಹೇಳಿದೆ.
ಮುಸ್ಲಿಂ ಮಹಿಳೆಯರ (ವಿವಾಹದ ಮೇಲಿನ ಹಕ್ಕುಗಳ ರಕ್ಷಣೆ) ಕಾಯ್ದೆ-2019 ಅಥವಾ ತ್ರಿವಳಿ ತಲಾಖ್ ನಿಷೇಧ ಕಾಯ್ದೆಯು ಅಸಂವಿಧಾನಿಕ ಮತ್ತು ಸಂವಿಧಾನದ ವಿಧಿಗಳಾದ 14,15, 21, ಮತ್ತು 123 ಅನ್ನು ಉಲ್ಲಂಘಿಸುತ್ತದೆ ಎಂದು ಘೋಷಿಸಲು ಕೋರಿ ಸಮಸ್ತ ಕೇರಳ ಜಮಿಯತುಲ್ ಉಲಮಾ ಸಲ್ಲಿಸಿದ್ದ ಅರ್ಜಿಗೆ ಈ ತಿಂಗಳ ಆರಂಭದಲ್ಲಿ ಕೇಂದ್ರ ಮೇಲಿನಂತ ಪ್ರತಿಕ್ರಿಯೆ ನೀಡಿದೆ ಎಂದು ತಿಳಿದು ಬಂದಿದೆ.
ತನ್ನ ಅಫಿಡವಿಟ್‌ನಲ್ಲಿ ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿಗೆ ಬಂದ ಸಂದರ್ಭವನ್ನು ವಿವರಿಸಿರುವ ಕೇಂದ್ರ ಸರ್ಕಾರ “ಮೂಲಭೂತವಾಗಿ ತಲಾಖ್-ಎ-ಬಿದ್ದತ್ ಅಥವಾ ತತ್‌ಕ್ಷಣದ ತ್ರಿವಳಿ ತಲಾಖ್‌ನ ಅಭ್ಯಾಸ ಕಾನೂನುಬದ್ಧ ಮತ್ತು ಸಾಂಸ್ಥಿಕವಾಗಿ ಪತ್ನಿಯರನ್ನು ಅವರ ಗಂಡಂದಿರು ತ್ಯಜಿಸುವುದನ್ನು ಹೇಳಿದೆ. ಇದು ವೈಯಕ್ತಿಕವಾಗಿ ಮಾತ್ರವಲ್ಲ, ಸಾಮಾಜಿಕವಾಗಿ ಮತ್ತು ಸಂಪೂರ್ಣ ವೈವಾಹಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ” ಎಂದು ಹೇಳಿದೆ.
ಶಾಯರಾ ಬಾನು ಪ್ರಕರಣದಲ್ಲಿ ಆಗಸ್ಟ್ 22, 2017ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮತ್ತು ತ್ರಿವಳಿ ತಲಾಖ್ ತಡೆಯುವ ಸಂಬಂಧ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನೀಡಿರುವ ಭರವಸೆಗಳ ಹೊರತಾಗಿಯೂ ದೇಶದ ಹಲವು ಭಾಗಗಳಲ್ಲಿ ತ್ರಿವಳಿ ತಲಾಖ್ ಪ್ರಕರಣಗಳು ವರದಿಯಾಗುತ್ತಿದೆ. ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ನಿಷೇಧ ಮಾಡಿದ್ದರೂ, ಮುಸ್ಲಿಮರಲ್ಲಿ ಅದನ್ನು ಕಡಿಮೆ ಮಾಡಲು ಆಗಿಲ್ಲ. ಆದ್ದರಿಂದ ತ್ರಿವಳಿ ತಲಾಖ್ ಸಂತ್ರಸ್ತರ ಕುಂದು ಕೊರತೆಗಳನ್ನು ಸರ್ಕಾರ ಆಲಿಸಬೇಕಿದೆ. ಅವರಿಗೆ ನ್ಯಾಯ ಒದಗಿಸಲು ಕಾನೂನು ರೂಪಿಸಲಾಗಿದೆ. ಹಾಗಾಗಿ, ಅದನ್ನು ಜಾರಿಗೆ ತರಲು ನ್ಯಾಯಾಲಯ ಅನುಮತಿಸಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಅನ್ನು ಕೋರಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಬಿಜೆಪಿಯ ಹಣದ ಪ್ರಭಾವದಿಂದಾಗಿ ಹಿಂಜರಿಕೆಯಿಲ್ಲದೆ ಬಿಜೆಪಿ ಸೇರುತ್ತಿದ್ದಾರೆ: ಹೇಮಂತ್ ಸೊರೇನ್


