ಕ್ರಿಮಿನಲ್ ಅಪರಾಧಗಳಲ್ಲಿ ಶಿಕ್ಷೆಗೊಳಗಾದವರು ಸಂಸತ್ತು ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಆಜೀವ ನಿಷೇಧ ಹೇರಲು ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.
ಹಾಗೆ ನಿಷೇಧ ಹೇರುವುದು ಸಂಸತ್ತಿನ ವಿವೇಚನೆಗೆ ಬಿಟ್ಟ ವಿಚಾರವೇ ಹೊರತು, ನ್ಯಾಯಾಂಗದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಸಂಸತ್ತು ಪರಿಶೀಲಿಸಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.
ಆಜೀವ ನಿಷೇಧ ಹೇರುವುದು ಸೂಕ್ತವೇ ಅಥವಾ ಇಲ್ಲವೇ ಎಂಬುವುದು ಸಂಸತ್ತಿನ ವ್ಯಾಪ್ತಿಗೆ ಒಳಪಡುವ ವಿಚಾರವಾಗಿದ್ದು, ನಿಷೇಧ ಸೂಕ್ತ ಅಥವಾ ಅಲ್ಲ ಎನ್ನುವುದು ಅರ್ಜಿದಾರರಿಗೆ ಸಂಬಂಧಿಸಿದ್ದಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದ್ದಾಗಿ ವರದಿಯಾಗಿದೆ.
ಜನ ಪ್ರತಿನಿಧಿಗಳ ಕಾಯ್ದೆಯೆ ಸೆಕ್ಷನ್ 8 ಮತ್ತು 9ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಈ ಉತ್ತರ ನೀಡಿದೆ.
ಶಿಕ್ಷೆಗೊಳಗಾದ ರಾಜಕಾರಣಿಗಳು ಶಿಕ್ಷೆಯ ಅವಧಿ ಮುಗಿದ ನಂತರ ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಕಾಯ್ದೆಯ ಸೆಕ್ಷನ್ 8 ನಿಷೇಧಿಸುತ್ತದೆ. ಇದು ಕೆಲವು ವರ್ಗೀಕೃತ ಅಪರಾಧಗಳಿಗೆ ಮತ್ತು ಎರಡು ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುವ ಯಾವುದೇ ಕೃತ್ಯಕ್ಕೆ ಅನ್ವಯವಾಗುತ್ತದೆ.
ಭ್ರಷ್ಟಾಚಾರ ಅಥವಾ ದೇಶದ್ರೋಹದ ಕಾರಣದಿಂದಾಗಿ ಸರ್ಕಾರಿ ಉದ್ಯೋಗಗಳಿಂದ ವಜಾಗೊಂಡ ವ್ಯಕ್ತಿಗಳು, ವಜಾಗೊಂಡ ದಿನದಿಂದ ಐದು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಕಾಯ್ದೆಯ ಸೆಕ್ಷನ್ 9 ತಡೆಯುತ್ತದೆ.
ಶಿಕ್ಷೆಗೊಳಗಾದ ಶಾಸಕರ ಅನರ್ಹತೆಯ ಅವಧಿಯನ್ನು ಆರು ವರ್ಷಗಳಿಗೆ ಸೀಮಿತಗೊಳಿಸುವುದರ ಹಿಂದಿನ ತಾರ್ಕಿಕತೆಯ ಬಗ್ಗೆ ಮಾಹಿತಿ ನೀಡುವಂತೆ ಫೆಬ್ರವರಿ 10 ರಂದು ನ್ಯಾಯಮೂರ್ತಿ ದೀಪಂಕರ್ ದತ್ತ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಕಾನೂನು ಭಂಜಕರನ್ನೇ ಕಾನೂನು ರೂಪಿಸುವವರನ್ನಾಗಿ ಮಾಡುವುದು ‘ಸ್ಪಷ್ಟ ಹಿತಾಸಕ್ತಿ ಸಂಘರ್ಷ’ ಎಂದಿತ್ತು.
ಯೋಗಿ ಆದಿತ್ಯನಾಥ್ ಅವರ ‘ಉರ್ದು ವಿರೋಧಿ’ ಹೇಳಿಕೆ: ಮೌಲಾನಾ ವಿವಿಯ ವಿದ್ಯಾರ್ಥಿಗಳಿಂದ ಪ್ರತಿಭಟನೆ


