ಐದು ಮತ್ತು ಎಂಟನೇ ತರಗತಿಯಲ್ಲಿ ಕಲಿಯುವ ಮಕ್ಕಳನ್ನು ಅನುತ್ತೀರ್ಣಗೊಳಿಸದಂತೆ ತಡೆ ನೀಡಿದ್ದ ‘ಅನುತ್ತೀರ್ಣರಹಿತ ನೀತಿ’ಯನ್ನು (ನೋ ಡಿಟೆನ್ಷನ್ ಪಾಲಿಸಿ) ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಇದರಿಂದ ವಾರ್ಷಿಕ ಪರೀಕ್ಷೆಯಲ್ಲಿ ಪಾಸಾಗದ 5 ಮತ್ತು 8ನೇ ತರಗತಿ ಮಕ್ಕಳನ್ನು ಇನ್ನು ಮುಂದೆ ಅನುತ್ತೀರ್ಣಗೊಳಿಸಬಹುದು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಶಿಕ್ಷಣ ಹಕ್ಕು ಕಾಯ್ದೆ-2010ರಲ್ಲಿ (ಆರ್‌ಟಿಇ) ‘ಅನುತ್ತೀರ್ಣರಹಿತ ನೀತಿ’ಯನ್ನು ಅಳವಡಿಸಲಾಗಿತ್ತು. ಅನುತ್ತೀರ್ಣಗೊಳಿಸುವುದರಿಂದ ಮಕ್ಕಳ ಮನಸ್ಸಲ್ಲಿ ವೈಫಲ್ಯದ ಭಾವನೆ ಮೂಡಬಾರದು ಎಂಬ ಉದ್ದೇಶದಿಂದ ಈ ನೀತಿ ತರಲಾಗಿತ್ತು. ಆದರೆ, 2019ರಲ್ಲಿ ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಈ ನೀತಿಯನ್ನು ಮುಂದುರಿಸಬೇಕೇ..ಬೇಡವೇ? ಎಂದು ನಿರ್ಧರಿಸುವ ಆಯ್ಕೆಯನ್ನು ರಾಜ್ಯಗಳಿಗೆ ನೀಡಿದೆ.
ಸೋಮವಾರ (ಡಿ.23) ಅನುತ್ತೀರ್ಣರಹಿತ ನೀತಿ’ಯನ್ನು ರದ್ದುಗೊಳಿಸಿ ಕೇಂದ್ರ ಶಿಕ್ಷಣ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ ಮತ್ತು ಸೈನಿಕ ಶಾಲೆಗಳು ಸೇರಿದಂತೆ ಕೇಂದ್ರ ಸರ್ಕಾರ ಅಧೀನದಲ್ಲಿರುವ 3 ಸಾವಿರಕ್ಕೂ ಅಧಿಕ ಶಾಲೆಗಳಿಗೆ ಈ ಆದೇಶ ಅನ್ವಯವಾಗಲಿದೆ.
ಶೈಕ್ಷಣಿಕ ವರ್ಷದ ಕೊನೆಯಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಯಲ್ಲಿ ಪಾಸಾಗದ ವಿದ್ಯಾರ್ಥಿಗಳಿಗೆ ಫಲಿತಾಂಶ ಹೊರಬಿದ್ದ ಎರಡು ತಿಂಗಳ ಒಳಗಾಗಿ ಮರು ಪರೀಕ್ಷೆ ನಡೆಸಬೇಕು. ಅದರಲ್ಲೂ ವಿದ್ಯಾರ್ಥಿ ಪಾಸಾಗದಿದ್ದರೆ ಇನ್ನೊಂದು ವರ್ಷ ಅದೇ ತರಗತಿಯಲ್ಲಿ (5-8) ಕಲಿಕೆ ಮುಂದುವರೆಸಬೇಕಾಗುತ್ತದೆ ಎಂದು ಸರ್ಕಾರದ ಸುತ್ತೋಲೆ ತಿಳಿಸಿದೆ.
ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಶಿಕ್ಷಕರು ವಿಶೇಷ ಗಮನವಹಿಸಬೇಕು. ಅವರ ಕಲಿಕಾ ಹಿನ್ನಡೆಯ ಬಗ್ಗೆ ಪೋಷಕರಿಗೂ ಮನದಟ್ಟು ಮಾಡಬೇಕು. ಕಾಲ ಕಾಲಕ್ಕೆ ಕಲಿಕಾ ಸಾಮರ್ಥ್ಯದ ಮೌಲ್ಯಮಾಪನ ನಡೆಸಿ, ಅದಕ್ಕೆ ತಕ್ಕಂತೆ ತರಬೇತಿ ನೀಡಬೇಕು ಎಂದು ಸುತ್ತೋಲೆ ಸೂಚಿಸಿದೆ.
ಆದರೆ, ಪ್ರಾಥಮಿಕ ಶಿಕ್ಷಣ ಪೂರ್ಣಗೊಳ್ಳುವವರೆಗೆ ಯಾವುದೇ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರದ ಆದೇಶದ ಕುರಿತು ಚಿಂತಕರು ಮತ್ತು ಶಿಕ್ಷಣ ತಜ್ಞರುಗಳಾದ ಶ್ರೀಪಾದ್ ಭಟ್ ಮತ್ತು ನಿರಂಜನಾರಾಧ್ಯ ಅವರು ನಾನುಗೌರಿ.ಕಾಂ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅನುತ್ತೀರ್ಣರಹಿತ ನೀತಿಯ ರದ್ದತಿಯಿಂದ ಉಂಟಾಗುವ ಸಮಸ್ಯೆಗಳು ಮತ್ತು ಮಕ್ಕಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ವಿವರಿಸಿದ್ದಾರೆ.
ಚಿಂತಕ, ಶಿಕ್ಷಣ ತಜ್ಞ ಶ್ರೀಪಾದ್ ಭಟ್ ಅವರ ಮಾತುಗಳು.. ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಮಕ್ಕಳು ಪ್ರತಿಭಾವಂತರು ಎನ್ನಲಾಗುತ್ತಿದೆ. ಮಕ್ಕಳ ಕಲಿಕೆಯನ್ನು ಅಥವಾ ಪ್ರತಿಭೆಯನ್ನು ಪರೀಕ್ಷೆ ಎಂಬ ಮಾನದಂಡದಿಂದ ಮಾತ್ರ ಅಳೆಯಲಾಗುತ್ತಿದೆ. ಈ ಪರೀಕ್ಷೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
ಪ್ರಸ್ತುತ ಇರುವ ಪರೀಕ್ಷಾ ವಿಧಾನಗಳೂ ಸರಿಯಿಲ್ಲ. ಕೇವಲ ವಾರ್ಷಿಕ ಪರೀಕ್ಷೆಯಲ್ಲಿ ಮಕ್ಕಳು ಅಂಕ ಪಡೆಯದಿದ್ದರೆ, ಅವರು ಅನರ್ಹ ಎಂದು ಪರಿಗಣಿಸಲಾಗುತ್ತಿದೆ. ಮಕ್ಕಳ ಕಲಿಕೆಯ ಕುರಿತು ಪ್ರತಿದಿನ ಮೌಲ್ಯ ಮಾಪನ ಮಾಡಬೇಕು. ಅದಲ್ಲದೆ, ಶೈಕ್ಷಣಿಕ ವರ್ಷದ ಕೊನೆಯಲ್ಲಿ ಮಾಡುವ ಒಂದು ಪರೀಕ್ಷೆಯಿಂದ ಮಕ್ಕಳನ್ನು ಅಳೆಯುವುದು ಸರಿಯಲ್ಲ.
ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರೆ ಅವರನ್ನು ಅದೇ ತರಗತಿಯಲ್ಲಿ ಇನ್ನೊಂದು ವರ್ಷ ಕೂರಿಸಲು ಸರ್ಕಾರ ಮುಂದಾಗಿದೆ. ಆದರೆ, ಮಕ್ಕಳು ಏಕೆ ಅನುತ್ತೀರ್ಣಗೊಳ್ಳುತ್ತಾರೆ ಎಂಬುವುದನ್ನು ಸರ್ಕಾರ ಅಥವಾ ಸಂಬಂಧಪಟ್ಟವರು ಕಂಡು ಹಿಡಿಯುತ್ತಿಲ್ಲ. ಮಕ್ಕಳ ವೈಯಕ್ತಿಕ ಪ್ರತಿಭೆಯನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಆದರೆ, ಅವರ ಕಲಿಕೆಗೆ ಅಡ್ಡಿಯಾದ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸುತ್ತಿಲ್ಲ.
ಪ್ರಸ್ತುತ ಶಾಲೆಗಳಲ್ಲಿ ಹಲವಾರು ಸಮಸ್ಯೆಗಳಿವೆ. ಸರಿಯಾದ ತರಗತಿ ಕೊಠಡಿಗಳಿಲ್ಲ. ಇದ್ದರೂ, ಅವುಗಳ ಮೇಲ್ಚಾವಣಿ ಸೋರುತ್ತಿದೆ. ಮಕ್ಕಳಿಗೆ ಕುಳಿತುಕೊಳ್ಳಲು ಬೆಂಚ್, ಡೆಸ್ಕ್‌ಗಳ ವ್ಯವಸ್ಥೆಗಳಿಲ್ಲ. ಸರಿಯಾದ ಸಮಯಕ್ಕೆ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆಯಾಗುತ್ತಿಲ್ಲ. ಹೆಚ್ಚಿನ ಶಾಲೆಗಳಲ್ಲಿ ಬೇಕಾದಷ್ಟು ಶಿಕ್ಷಕರಿಲ್ಲ. ಅತಿಥಿ ಶಿಕ್ಷಕರಿದ್ದರೆ ಅವರು 10 ಸಾವಿರ ರೂ. ವೇತನ ಪಡೆದುಕೊಂಡು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಪಾಠ ಮಾಡಲು ಸಾಧ್ಯವಿಲ್ಲ. ಈ ಸಮಸ್ಯೆಗಳ ಬಗ್ಗೆ ಗಮನಹರಿಸುವವರು ಯಾರು ಇಲ್ಲ.
ಕೆಲವೊಂದು ಶಾಲೆಗಳಲ್ಲಿ ಶಿಕ್ಷಕರಿದ್ದರೂ ಅವರು ಸರಿಯಾದ ರೀತಿಯಲ್ಲಿ ಪಾಠ ಮಾಡುತ್ತಿಲ್ಲ. ಶಾಲಾ ಅವಧಿಯಲ್ಲಿ ಎಲ್ಲೆಲ್ಲೋ ಹೊರಗಡೆ ಸುತ್ತಾಡುವ ಶಿಕ್ಷಕರಿದ್ದಾರೆ. ಇತರ ವ್ಯವಹಾರಗಳನ್ನು ಮಾಡುವವರೂ ಇದ್ದಾರೆ.
ಮಕ್ಕಳ ಹಿನ್ನೆಲೆಯೂ ಭಿನ್ನವಾಗಿರುತ್ತದೆ. ಮನೆಯಲ್ಲಿ ಪೋಷಕರಲ್ಲಿ ಕೌಟುಂಬಿಕ ಸಮಸ್ಯೆಗಳಿರುವರು ಇದ್ದಾರೆ. ಸರಿಯಾದ ಮನೆಯೇ ಇಲ್ಲದವರಿದ್ದಾರೆ. ಮೂಲಭೂತ ವ್ಯವಸ್ಥೆಗಳಾದ ಆಹಾರ, ವಸತಿ, ನೀರು, ವಿದ್ಯುತ್ ಇವುಗಳು ದೊರಕದವರಿದ್ದಾರೆ. ಕಡು ಬಡತನದ ಹಿನ್ನೆಲೆಯ ಮಕ್ಕಳಿದ್ದಾರೆ. ಒಂದು ಕಡೆ ದುಡಿಯುತ್ತಾ ಮತ್ತೊಂದು ಕಡೆ ತರಗತಿಗೆ ಹಾಜರಾಗುವವರಿದ್ದಾರೆ. ಜಾತಿ, ಧರ್ಮಗಳು, ವಾಸಿಸುವ ಪ್ರದೇಶ, ಅಲ್ಲಿನ ವಾತಾವರಣ ಕಲಿಗೆ ಅಡ್ಡಿಯಾಗಬಹುದು. ಇದು ಅವರು ಕಲಿಕೆಯಲ್ಲಿ ಹಿಂದೆ ಉಳಿಯಲು ಕಾರಣವಾಗಿರಬಹುದು. ಹೆಣ್ಣು ಮಕ್ಕಳಿಗೆ ಋತುಸ್ರಾವದ ಅವಧಿ ಸಮಸ್ಯೆ ಇರಬಹುದು. ಆದರೆ, ಈ ಬಗ್ಗೆ ಯೋಚನೆ ಮಾಡುವವರು ಯಾರು?
ಈ ಸಮಸ್ಯೆಗಳ ಬಗ್ಗೆಯೆಲ್ಲ ಯೋಚನೆ ಮಾಡದೆ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂದು ಕೇವಲ ಒಂದು ಪರೀಕ್ಷೆಯನ್ನು ಮಾನದಂಡವಾಗಿಸಿ ಅನುತ್ತೀರ್ಣ ಮಾಡುವುದು ಎಷ್ಟು ಸರಿ?
ಪರೀಕ್ಷೆಯಿಂದ ಮಕ್ಕಳ ಪ್ರತಿಭೆಯನ್ನು ನಿರ್ಧರಿಸುವುದು ಸಮಂಜಸವಲ್ಲ. ಪ್ರತಿಭೆ ನಿರ್ಧರಿಸಲು ಮಾನದಂಡವೇ ಇಲ್ಲ. ಕಂಠಪಾಠ ಮಾಡಿಕೊಂಡು ಹೋಗಿರುವುದನ್ನು ಬರೆದ ತಕ್ಷಣ ಮಕ್ಕಳು ಪ್ರತಿಭಾವಂತರೆನಿಸುವುದಿಲ್ಲ. ಪ್ರತಿಯೊಂದು ಮಗುವಿನ ಪ್ರತಿಭೆಯೂ ಭಿನ್ನವಾಗಿರುತ್ತದೆ. ಹಾಗಾಗಿ, ಪ್ರತಿಭೆ ನಿರ್ಧರಿಸಲು ಮಾನದಂಡಗಳೇ ಇಲ್ಲ. ಆದ್ದರಿಂದ ಮಕ್ಕಳನ್ನು ಏಕೆ ಅನುತ್ತೀರ್ಣಗೊಳಿಸಬೇಕು ಎನ್ನುವುದಕ್ಕೆ ಸರ್ಕಾರದ ಬಳಿ ಸ್ಪಷ್ಟನೆಯೇ ಇಲ್ಲ.
ಮಕ್ಕಳು ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಎರಡು ತಿಂಗಳಲ್ಲಿ ಮರು ಪರೀಕ್ಷೆ ಮಾಡಬೇಕು. ಅದರಲ್ಲೂ ಅನುತ್ತೀರ್ಣಗೊಂಡರೆ ಮತ್ತೊಂದು ವರ್ಷ ಅದೇ ತರಗತಿಯಲ್ಲಿ ಕೂರಿಸಬೇಕು ಎಂದು ಸರ್ಕಾರ ಹೇಳಿದೆ. ಒಂದು ವರ್ಷ ಕಲಿತು ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಮಕ್ಕಳು ಎರಡು ತಿಂಗಳಲ್ಲಿ ಕಲಿತು ಮರು ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು ಹೇಗೆ ಸಾಧ್ಯ? ಅವರೇನು ಯಂತ್ರಗಳ? ಹಾಗೇನಾದರು ಉತ್ತೀರ್ಣಗೊಂಡರೂ, ಅವರ ಮೇಲೆ ಅಷ್ಟೇ ಒತ್ತಡ ಬಿದ್ದಿರುತ್ತದೆ. ಮಕ್ಕಳನ್ನು ಪಾಸ್ ಮಾಡಬೇಕು ಎಂದು ಹಠಕ್ಕೆ ಬೀಳುವ ಶಿಕ್ಷಕರು ಅವರ ಮೇಲೆ ವಯಸ್ಸಿಗೆ ಮೀರಿದ ಒತ್ತಡ ಹೇರುತ್ತಾರೆ. ಇದು ಮಾನಸಿಕವಾಗಿ ಮಗುವಿನ ಮೇಲೆ ಪರಿಣಾಮ ಬೀರುತ್ತದೆ.
‘ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ, ಬಾಲಕಾರ್ಮಿಕ ಪದ್ದತಿ ಹೆಚ್ಚಾಗುತ್ತದೆ’
5 ಮತ್ತು 8 ನೇ ತರಗತಿಯಲ್ಲಿ ಮಕ್ಕಳನ್ನು ಅನುತ್ತೀರ್ಣಗೊಳಿಸಿದರೆ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಬಾಲ ಕಾರ್ಮಿಕರ ಸಂಖ್ಯೆಯೂ ಹೆಚ್ಚಳವಾಗುತ್ತದೆ. ಏಕೆಂದರೆ, ಸಾಮಾಜಿಕ, ಕೌಟುಂಬಿಕ, ಪ್ರಾದೇಶಿಕ, ಆರ್ಥಿಕ ಸಮಸ್ಯೆಗಳಿಂದ ಕಲಿಯಿಂದ ಹಿಂದುಳಿಯುವವರು ಪರಿಶಿಷ್ಟ ಜಾತಿ, ಪಂಗಡದವರು, ಅಲ್ಪ ಸಂಖ್ಯಾತ, ಹಿಂದುಳಿದ ವರ್ಗದವರಾಗಿರುತ್ತಾರೆ. ಈ ಮಕ್ಕಳು ಶಾಲೆಯ ಮೆಟ್ಟಿಲು ಹತ್ತುವುದೇ ಸವಾಲಾಗಿದೆ. ಹೀಗಿರುವಾಗ ಅವರು ಇನ್ನೊಂದು ವರ್ಷ ಅದೇ ತರಗತಿಯಲ್ಲಿ ಕೂರಿಸಿದರೆ ಕಲಿಕೆ ಮುಂದುವರೆಸಲು ಸಾಧ್ಯವೇ?
ಸರ್ಕಾರ ಶಿಕ್ಷಣ ಸಮಸ್ಯೆಗಳು, ಕಲಿಕೆಯ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿಲ್ಲ. ಶಿಕ್ಷಕರ ನೇಮಕಾತಿ ಮಾಡುತ್ತಿಲ್ಲ. ಶಾಲೆಗಳು ಬೀಳುವ ಹಂತದಲ್ಲಿವೆ. ಸರಿಯಾದ ಸಮಯಕ್ಕೆ ಪಠ್ಯ ಪುಸ್ತಕ, ಸಮವಸ್ತ್ರ ವಿತರಿಸುತ್ತಿಲ್ಲ. ಕೆಲವೊಂದು ಕಡೆಗಳಲ್ಲಿ ಮಕ್ಕಳಿಗೆ ಶಾಲೆಗೆ ತೆರಳಲು ದಾರಿಯೇ ಇಲ್ಲ. ಇವೆಲ್ಲದರ ಬಗ್ಗೆ ಗಮನಹರಿಸದೆ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂದು ಅವರನ್ನು ಬಲಿಪಶು ಮಾಡುವುದು ಎಷ್ಟು ಸರಿ?
ಶಿಕ್ಷಣ ಎನ್ನುವುದು ಸಮವರ್ಥಿ ಪಟ್ಟಿಯಲ್ಲಿ ಬರುತ್ತದೆ. ಕೇಂದ್ರ ಸರ್ಕಾರ ಮಾತ್ರ ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ರೀತಿಯ ವಿಚಾರಗಳು ರಾಜ್ಯ ಸರ್ಕಾರಕ್ಕೆ ಬಿಟ್ಟು ಬಿಡಬೇಕು. ಶಿಕ್ಷಣ ವ್ಯವಸ್ಥೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಹೀಗಿರುವಾಗ ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಶಿಕ್ಷಣ ತಜ್ಞ ನಿರಂಜನಾರಾಧ್ಯ ಅವರ ಮಾತುಗಳು.. ಶಿಕ್ಷಣ ಹಕ್ಕು ಕಾಯ್ದೆಯಲ್ಲಿ (ಆರ್‌ಟಿಇ) ನಿರಂತರ ಮತ್ತು ಸಮಗ್ರ ಮೌಲ್ಯಮಾಪನ (ಸಿಸಿಇ) ಎಂದಿದೆ. ಸಿಸಿಇ ಎಂದರೆ ಪ್ರತಿನಿತ್ಯ ಮಕ್ಕಳ ಕಲಿಕೆಯ ಮೌಲ್ಯ ಮಾಪನ ಮಾಡಬೇಕು. ಮಕ್ಕಳು ಹಿಂದುಳಿದಿದ್ದರೆ ಅವರ ಕಲಿಕಾ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಒಟ್ಟಾರೆ ಎಲ್ಲಾ ಮಕ್ಕಳು ಉತ್ತೀರ್ಣರಾಗುವಂತೆ ನೋಡಿಕೊಳ್ಳಬೇಕು. ಅದಲ್ಲದೆ, ಮಕ್ಕಳು ಹಿಂದುಳಿದಿದ್ದಾರೆ ಎಂದು ಅವರನ್ನು ಅನುತ್ತೀರ್ಣಗೊಳಿಸುವುದಲ್ಲ.
ಕೆಲ ಶ್ರೇಷ್ಠತೆಯ ವ್ಯಸನಿಗಳಿಗೆ ಎಲ್ಲರೂ ಪಾಸಾಗಬಹುದು, ಎಲ್ಲರೂ ಶಿಕ್ಷಣ ಪಡೆಯಬಹುದು ಎಂಬ ಆತಂಕವಿದೆ. ಹಾಗಾಗಿ, ಒಂದಷ್ಟು ಜನರನ್ನು ಫೇಲ್ ಮಾಡಲು ಮುಂದಾಗಿದ್ದಾರೆ. ಆ ಫೇಲ್ ಆಗುವವರು ಯಾರು ಎಂದು ನೋಡಿದರೆ, ಅದೇ ಎಸ್‌ಸಿ, ಎಸ್‌ಟಿ, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಾಗಿರುತ್ತಾರೆ.
ಮಕ್ಕಳನ್ನು ಅನುತ್ತೀರ್ಣಗೊಳಿಸುವುದು ಸಾಮಾನ್ಯ ವಿಷಯವಾಗಿ ಕಂಡರೂ, ಅದರ ಹಿಂದೆ ದೊಡ್ಡದೊಂದು ಹುನ್ನಾರವಿದೆ. ಜಾತಿಯ ಕಾರಣ ಮುಂದಿಟ್ಟುಕೊಂಡು ಕೆಲ ವರ್ಗದ ಜನರಿಗೆ ಹಕ್ಕುಗಳನ್ನು ಹೇಗೆ ನಿರಾಕರಿಸಲಾಗುತ್ತಿದೆಯೋ, ಇದೂ ಕೂಡ ಅದೇ ರೀತಿಯ ಒಂದು ತಾರತಮ್ಯದ ಹುನ್ನಾರವಾಗಿದೆ. ದಲಿತರು, ಅಲ್ಪ ಸಂಖ್ಯಾತರು, ಹಿಂದುಳಿದವರ ಮಕ್ಕಳನ್ನು ಶಿಕ್ಷಣದಿಂದ ಹೊರಗಿಡುವ ಹುನ್ನಾರ.
ಯಾವುದೇ ಮಗು ಕಲಿಯಬೇಕು ಎಂದು ಶಾಲೆಗೆ ಬರುತ್ತದೆ. ಫೇಲ್ ಆಗಬೇಕು ಎಂದು ಬರಲ್ಲ. ವ್ಯವಸ್ಥೆಗಳು ಸರಿಯಿಲ್ಲದೆ, ಸರಿಯಾಗಿ ಕಲಿಸದೆ ಫೇಲ್ ಆದರೆ, ಅದಕ್ಕೆ ಮಗುವನ್ನು ಕಾರಣ ಮಾಡುವುದು ಎಷ್ಟು ಸರಿ? ಸರಿಯಾಗಿ ವ್ಯವಸ್ಥೆಗಳಿದ್ದು, ಚೆನ್ನಾಗಿ ಕಲಿಸಿದರೆ ಎಲ್ಲಾ ಮಕ್ಕಳು ಕಲಿಯುತ್ತಾರೆ.
ಇದು ಶಿಕ್ಷಣದ ಹಕ್ಕನ್ನು ಕಸಿಯುವ ಹುನ್ನಾರ. ಆದರೆ, ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಇದು ಅರ್ಥವಾಗುತ್ತಿಲ್ಲ. ಕನಿಷ್ಠ ಪಕ್ಷ ಅವರದ್ದೇ ಯುಪಿಎ ಸರ್ಕಾರ ಇದ್ದಾಗ ಮಾಡಿರುವ ಕಾನೂನುಗಳನ್ನು ದುರ್ಬಗೊಳಿಸುತ್ತಿರುವುದರ ವಿರುದ್ದ ಧ್ವನಿ ಎತ್ತಲಿ. ನಾವು ಇವುಗಳನ್ನೆಲ್ಲ ಜಾರಿಗೊಳಿಸುವುದಿಲ್ಲ ಎಂದು ಹೇಳಲಿ. ತಮಿಳುನಾಡು ಕನಿಷ್ಠ ಪಕ್ಷ ಪ್ರತಿಕ್ರಿಯೆ ಆದರೂ ನೀಡಿದೆ.
ಶಿಕ್ಷಣ ಸಮವರ್ಥಿ ಪಟ್ಟಿಯಲ್ಲಿರುವ ವಿಷಯ. ಅಲ್ಲದೆ, ಮೋದಿ ಸರ್ಕಾರ 2019ರಲ್ಲಿ ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತರುವಾಗ ಮಕ್ಕಳನ್ನು ಅನುತ್ತೀರ್ಣಗೊಳಿಸಬೇಕೆ..ಬೇಡವೇ? ಎಂದು ನಿರ್ಧರಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ. ಹಾಗಾಗಿ, ರಾಜ್ಯ ಸರ್ಕಾರ ನಾವು ಮಕ್ಕಳನ್ನು ಅನುತ್ತೀರ್ಣಗೊಳಿಸುವುದಿಲ್ಲ ಸಿಸಿಇಯನ್ನು ಸರಿಯಾಗಿ ಅನುಷ್ಠಾನಗೊಳಿಸಿ ಎಲ್ಲಾ ಮಕ್ಕಳನ್ನು ಉತ್ತೀರ್ಣ ಮಾಡುತ್ತೇವೆ ಎಂದು ಹೇಳಬೇಕು.
ಕೆಲವೊಂದು ಪೋಷಕರು, ಶಿಕ್ಷಕರೂ ಕೂಡ ಮಕ್ಕಳನ್ನು ಅನುತ್ತೀರ್ಣಗೊಳಿಸಬೇಕು ಎಂದೇ ಹೇಳುತ್ತಾರೆ. ಕಲಿಸುವ ಶಿಕ್ಷಕರು ಮಕ್ಕಳು ಕಲಿಕೆಯಲ್ಲಿ ಹಿಂದುಳಿದರೆ ಅವರನ್ನು ಫೇಲ್ ಮಾಡಬೇಕು ಎನ್ನುವುದಲ್ಲ. ಅವರ ಕಲಿಕೆಯ ಗುಣಮಟ್ಟ ಹೆಚ್ಚಿಸಿ ಪಾಸ್ ಮಾಡಲು ನೋಡಬೇಕು. ಫೇಲ್ ಆದರೆ ಅದಕ್ಕೆ ಹೊಣೆ ಶಿಕ್ಷಕರು, ಶಿಕ್ಷಣ ವ್ಯವಸ್ಥೆಯೇ ಹೊರತು ಮಕ್ಕಳಲ್ಲ.
ಸಣ್ಣ ಮಕ್ಕಳನ್ನು ಫೇಲ್ ಮಾಡಿ ಅವರಲ್ಲಿ ನೀನು ಅನರ್ಹ, ವಿಫಲ ಎಂಬ ಭಾವನೆ ಹುಟ್ಟಿಸಿದರೆ, ಅವರಿಗೆ ನಾನು ಜೀವದಲ್ಲಿ ಫೇಲ್ ಆದೆ ಎಂಬ ಭಾವನೆ ಮೂಡುತ್ತದೆ. ಅದು ಅವರನ್ನು ಮಾನಸಿಕವಾಗಿ ಕುಗ್ಗಿಸುತ್ತದೆ.
ಹಾಗಾಗಿ, ಎಲ್ಲಾ ಸಮಸ್ಯೆಗಳಿಗೆ ಮಕ್ಕಳನ್ನು ಫೇಲ್ ಮಾಡುವುದು ಪರಿಹಾರವಲ್ಲ. ಶಾಲೆಗಳಲ್ಲಿ ಸಿಸಿಇಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಬೇಕು. ಕೊಂಚ ಹಿಂದುಳಿದ ಮಕ್ಕಳಿಗೆ ಅಗತ್ಯ ಬೆಂಬಲ ಒದಗಿಸಬೇಕು. ಎಲ್ಲಾ ಮಕ್ಕಳು ಪಾಸ್ ಆಗುವಂತೆ ನೋಡಿಕೊಳ್ಳಬೇಕು.
5, 8ನೇ ತರಗತಿ ವಿದ್ಯಾರ್ಥಿಗಳ ಕಡ್ಡಾಯ ಪಾಸ್ ನಿಯಮ ರದ್ದು : ಅನುತ್ತೀರ್ಣಕ್ಕೆ ಅವಕಾಶ


