ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪಶ್ಚಿಮ ಬಂಗಾಳ ಭೇಟಿಗೆ ಸಂಬಂಧಿಸಿದಂತೆ ರಾಜ್ಯದ ಟಿಎಂಸಿ ಸರ್ಕಾರ ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನಡುವೆ ರಾಜಕೀಯ ಕಿತ್ತಾಟ ತೀವ್ರಗೊಂಡಂತೆ ಗೋಚರಿಸುತ್ತಿದೆ.
ರಾಷ್ಟ್ರಪತಿ ಭೇಟಿಯ ವೇಳೆ ಪಶ್ಚಿಮ ಬಂಗಾಳ ಸರ್ಕಾರ ಶಿಷ್ಟಾಚಾರ ಉಲ್ಲಂಘಿಸಿದೆ ಎಂದು ಆರೋಪಿಸಿರುವ ಕೇಂದ್ರ ಸರ್ಕಾರ, ಭಾನುವಾರ (ಮಾ.8) ಸಂಜೆ 5 ಗಂಟೆಯೊಳಗೆ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಳಿದೆ.
ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ, ಕೇಂದ್ರ ಗೃಹ ಕಾರ್ಯದರ್ಶಿಯವರು ‘ಬ್ಲೂ ಬುಕ್’ ನಿಯಮಗಳ ಶಿಷ್ಟಾಚಾರ, ಸ್ಥಳ ಮತ್ತು ಮಾರ್ಗ ವ್ಯವಸ್ಥೆಗಳ ಉಲ್ಲಂಘನೆಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
‘ಬ್ಲೂ ಬುಕ್’ ಎಂಬುವುದು ಒಂದು ಗೌಪ್ಯ ದಾಖಲೆಯಾಗಿದ್ದು, ಇದು ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ಹಾಗೂ ಅವರ ಕುಟುಂಬಗಳಿಗೆ ಭದ್ರತೆ, ಶಿಷ್ಟಾಚಾರದ ನಿಯಮಗಳನ್ನು ವಿವರಿಸುತ್ತದೆ.
ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿದ ಪತ್ರದಲ್ಲಿ, ರಾಷ್ಟ್ರಪತಿ ರಾಜ್ಯಕ್ಕೆ ಆಗಮಿಸಿದಾಗ ಅವರನ್ನು ಸ್ವಾಗತಿಸಲು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಇಲ್ಲದಿರುವುದು ಬ್ಲೂ ಬುಕ್ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ಕೋರಿದೆ ಎಂದು ವರದಿ ಹೇಳಿದೆ.
ರಾಷ್ಟ್ರಪತಿಯನ್ನು ಸ್ವಾಗತಿಸಲು ಸಿಲಿಗುರಿ ಮೇಯರ್ ಮಾತ್ರ ಹಾಜರಿದ್ದರು ಎಂಬುವುದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಮೂಲಗಳ ಪ್ರಕಾರ, ರಾಷ್ಟ್ರಪತಿಗಾಗಿ ಸ್ಥಾಪಿಸಲಾಗಿದ್ದ ಶೌಚಾಲಯದಲ್ಲಿ ನೀರು ಇರಲಿಲ್ಲ, ಇದಕ್ಕಾಗಿ ರಾಜ್ಯ ಸರ್ಕಾರದಿಂದ ವಿವರಣೆ ಕೇಳಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ರಾಷ್ಟ್ರಪತಿಯನ್ನು ಕರೆದೊಯ್ಯಲು ಆಡಳಿತವು ಆಯ್ಕೆ ಮಾಡಿದ ಮಾರ್ಗವು ಕಸದಿಂದ ತುಂಬಿರುವುದಕ್ಕೆ ಕಾರಣವೇನು ಎಂಬುದನ್ನು ವಿವರಿಸಲು ರಾಜ್ಯ ಸರ್ಕಾರವನ್ನು ಕೇಳಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
ಮಾರ್ಚ್ 7ರಂದು ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿ ಸಮೀಪದ ಗೋಸೈನ್‌ಪುರದಲ್ಲಿ ನಡೆದ ಆದಿವಾಸಿಗಳ ಅಂತಾರಾಷ್ಟ್ರೀಯ ಸಂತಾಲ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪಶ್ಚಿಮ ಬಂಗಾಳಕ್ಕೆ ಹೋಗಿದ್ದರು. ಈ ವೇಳೆ ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಗಂಭೀರ ಆರೋಪಗಳನ್ನು ಮಾಡಿವೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಥವಾ ಯಾವುದೇ ರಾಜ್ಯ ಸಚಿವರು ರಾಷ್ಟ್ರಪತಿಯವರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಅಥವಾ ಅವರು ಭಾಗವಹಿಸಿದ್ದ 9ನೇ ಅಂತಾರಾಷ್ಟ್ರೀಯ ಸಾಂತಾಲ್ ಸಮ್ಮೇಳನಕ್ಕೆ ಹಾಜರಾಗದಿರುವುದು ಪ್ರಮುಖ ಆರೋಪವಾಗಿದೆ. ಇದರೊಂದಿಗೆ, ಭದ್ರತಾ ಕಾರಣಗಳನ್ನು ನೀಡಿ ಸಮ್ಮೇಳನದ ಸ್ಥಳವನ್ನು ಕೊನೆಯ ಕ್ಷಣದಲ್ಲಿ ಸಣ್ಣ ಮತ್ತು ಅನಾನುಕೂಲವಾದ ಜಾಗಕ್ಕೆ ಬದಲಾಯಿಸಲಾಗಿದೆ, ಇದರಿಂದಾಗಿ ಅನೇಕ ಬುಡಕಟ್ಟು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಮತ್ತು ಸ್ಥಳದಲ್ಲಿ ಕನಿಷ್ಠ ಸೌಕರ್ಯಗಳಾದ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದು ಹಾಗೂ ಮಾರ್ಗದುದ್ದಕ್ಕೂ ಕಸದ ರಾಶಿ ಇದ್ದ ಬಗ್ಗೆಯೂ ಕೇಂದ್ರ ಗೃಹ ಸಚಿವಾಲಯವು ವರದಿ ಕೇಳಿದೆ. ಈ ಬೆಳವಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು “ಅಪರೂಪ ಮತ್ತು ಅವಮಾನಕರ” ಎಂದು ಖಂಡಿಸಿದ್ದರೆ, ಮಮತಾ ಬ್ಯಾನರ್ಜಿ ಅವರು ಇವುಗಳನ್ನು ರಾಜಕೀಯ ಪ್ರೇರಿತ ಆರೋಪಗಳೆಂದು ತಳ್ಳಿಹಾಕಿದ್ದಾರೆ.


