ದಾಖಲೆರಹಿತ ವಲಸಿಗರನ್ನು ಗಡಿಪಾರು ಮಾಡುವವರೆಗೆ ಅವರ ಓಡಾಟವನ್ನು ನಿರ್ಬಂಧಿಸಲು ಬಂಧನ ಕೇಂದ್ರಗಳನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.
ಈ ಸಂಬಂಧ, ವಲಸೆ ಮತ್ತು ವಿದೇಶಿಯರ ಆದೇಶ, 2025ರ ಭಾಗವಾಗಿ ಕೇಂದ್ರ ಗೃಹ ಸಚಿವಾಲಯ ಸೋಮವಾರ (ಸೆ.1) ಅಧಿಸೂಚನೆ ಹೊರಡಿಸಿದೆ.
ವಲಸೆ ಮತ್ತು ವಿದೇಶಿಯರ ಕಾಯ್ದೆ, 2025ರ ಅಡಿ ಅಧಿಸೂಚನೆ ಹೊರಡಿಸಲಾಗಿದೆ. ಈ ಕಾಯ್ದೆಯನ್ನು 2025ರ ಏಪ್ರಿಲ್‌ನಲ್ಲಿ ಸಂಸತ್ತು ಅಂಗೀಕರಿಸಿದೆ. ಇದು 1920ರ ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯ್ದೆ, 1939ರ ವಿದೇಶಿಯರ ನೋಂದಣಿ ಕಾಯ್ದೆ, 1946 ವಿದೇಶಿಯರ ಕಾಯ್ದೆ ಮತ್ತು ವಲಸೆ ವಾಹಕರ ಹೊಣೆಗಾರಿಕೆ ಕಾಯ್ದೆ, 2000 ಅನ್ನು ಬದಲಾಯಿಸಿದೆ.
ವಿದೇಶಿಗಳನ್ನು ವಿಚಾರಣೆ ನಡೆಸುವ ಮೂಲಕ, ಯಾವುದೇ ವಿಮಾನ ಅಥವಾ ಇತರ ಸಾರಿಗೆ ವಿಧಾನವನ್ನು ಪರಿಶೀಲಿಸುವ ಮೂಲಕ ಮತ್ತು ಯಾವುದೇ ಸ್ಥಳವನ್ನು ಪರಿಶೀಲಿಸುವ ಮೂಲಕ ‘ಕಾಲಕಾಲಕ್ಕೆ’ ಭಾರತದಲ್ಲಿ ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರದ ಆದೇಶದಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಲಾಗಿದೆ.
ದಾಖಲೆರಹಿತ ವಲಸಿಗರು ಕಂಡುಬಂದರೆ ಅವರನ್ನು ಬಂಧನ ಕೇಂದ್ರಗಳಲ್ಲಿ ಇಟ್ಟು ಓಡಾಟಕ್ಕೆ ನಿರ್ಬಂಧ ವಿಧಿಸುವಂತೆ ಮತ್ತು ಅವರನ್ನು ಗಡಿಪಾರು ಮಾಡಲು ಅಧಿಕಾರಿಗಳು ‘ಸೂಕ್ತ ಕ್ರಮಗಳನ್ನು’ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಈ ಅಧಿಸೂಚನೆಯೊಂದಿಗೆ ಕೇಂದ್ರ ಸರ್ಕಾರವು ಯಾವುದೇ ವ್ಯಕ್ತಿಗೆ ಸಮನ್ಸ್ ನೀಡುವ ಮತ್ತು ಅವರು ತನ್ನ ಮುಂದೆ ಹಾಜರಾಗಲು ವಿಫಲವಾದರೆ ಬಂಧನ ವಾರಂಟ್ ಹೊರಡಿಸುವ ಅಧಿಕಾರವನ್ನು ವಿದೇಶಿ ನ್ಯಾಯಮಂಡಳಿಗಳಿಗೆ ನೀಡಿದೆ.
ಕೇಂದ್ರದ ಅಧಿಸೂಚನೆ ದೇಶದಾದ್ಯಂತ ಅನ್ವಯವಾಗುತ್ತಿದ್ದರೂ, ವಿದೇಶಿಯರ ನ್ಯಾಯಮಂಡಳಿಗಳು ಪ್ರಸ್ತುತ ಅಸ್ಸಾಂನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇತರ ರಾಜ್ಯಗಳಲ್ಲಿ, ದಾಖಲೆರಹಿತ ವಲಸಿಗರನ್ನು ನ್ಯಾಯಾಲಯಗಳ ಮುಂದೆ ಹಾಜರುಪಡಿಸಲಾಗುತ್ತದೆ.
ಅಸ್ಸಾಂನಲ್ಲಿರುವ ವಿದೇಶಿಯರ ನ್ಯಾಯಮಂಡಳಿಗಳು ಅರೆ-ನ್ಯಾಯಾಂಗ ಸಂಸ್ಥೆಗಳಾಗಿದ್ದು, ಅವು ವಂಶಾವಳಿ ಮತ್ತು 1971ರ ಅಂತಿಮ ದಿನಾಂಕದ ಆಧಾರದ ಮೇಲೆ ಪೌರತ್ವದ ವಿಷಯಗಳಲ್ಲಿ ತೀರ್ಪು ನೀಡುತ್ತವೆ. ಅವು ಪ್ರಾಥಮಿಕವಾಗಿ 1971ಕ್ಕಿಂತ ಮೊದಲು ಅಸ್ಸಾಂ ಅಥವಾ ಭಾರತದಲ್ಲಿ ತಮ್ಮ ಕುಟುಂಬದ ವಾಸವನ್ನು ಖಚಿತಪಡಿಸಲು ವ್ಯಕ್ತಿಗಳು ಸಲ್ಲಿಸಿದ ದಾಖಲೆಗಳನ್ನು ಅವಲಂಬಿಸಿವೆ.
ಆದರೆ, ಈ ನ್ಯಾಯಮಂಡಳಿಗಳು ಅನಿಯಂತ್ರಿತತೆ ಮತ್ತು ಪಕ್ಷಪಾತದ ಆರೋಪಗಳನ್ನು ಹೊಂದಿವೆ. ಸಣ್ಣ ಕಾಗುಣಿತ ತಪ್ಪುಗಳು, ದಾಖಲೆಗಳ ಕೊರತೆ ಅಥವಾ ನೆನಪಿನ ಕೊರತೆಗಳ ಆಧಾರದ ಮೇಲೆ ಜನರನ್ನು ವಿದೇಶಿಯರೆಂದು ಘೋಷಿಸುತ್ತಿವೆ ಎನ್ನಲಾಗ್ತಿದೆ.
ದೇಶದ ಯಾವುದೇ ನ್ಯಾಯಾಲಯಕ್ಕೆ ಒಬ್ಬರು ವ್ಯಕ್ತಿಯ ಉಪಸ್ಥಿತಿ ಅಗತ್ಯವಿದ್ದರೆ ಅಥವಾ ಅವರು ದೇಶದಿಂದ ಹೊರಹೋಗುವುದು ವಿದೇಶಿ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿದ್ದರೆ ಅಂತವರು ದೇಶ ತೊರೆಯಲು ಅನುಮತಿ ನಿರಾಕರಿಸಬಹುದು ಎಂದು ಸೋಮವಾರ ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆ ಹೇಳಿದೆ.
ಭಾರತವನ್ನು ತೊರೆಯಲು ಅನುಮತಿ ತಡೆ ಹಿಡಿದ ವ್ಯಕ್ತಿಗಳ ಪಟ್ಟಿಯನ್ನು ವಲಸೆ ಬ್ಯೂರೋ ನಿರ್ವಹಿಸುತ್ತದೆ.
ಖಾಸಗಿ ವಲಯದಲ್ಲಿ ವಿದೇಶಿಯರನ್ನು ನೇಮಿಸಿಕೊಳ್ಳುವ ಮಾರ್ಗಸೂಚಿಗಳನ್ನೂ ಕೂಡ ಗೃಹ ಸಚಿವಾಲಯದ ಆದೇಶ ಪಟ್ಟಿ ಮಾಡಿದೆ. ನಾಗರಿಕ ಪ್ರಾಧಿಕಾರದ ಅನುಮತಿಯಿಲ್ಲದೆ, ಯಾವುದೇ ವಿದೇಶಿಯರೂ ಕೂಡ ‘ಖಾಸಗಿ ವಲಯದ ವಿದ್ಯುತ್, ನೀರು ಪೂರೈಕೆಯಲ್ಲಿ ಅಥವಾ ಪೆಟ್ರೋಲಿಯಂ ವಲಯದಲ್ಲಿ ತೊಡಗಿರುವ ಉದ್ಯಮಗಳಲ್ಲಿ ಉದ್ಯೋಗ ಪಡೆಯಲು ಅವಕಾಶವಿಲ್ಲ ಎಂದು ಹೇಳಿದೆ.
ರಕ್ಷಣೆ, ಬಾಹ್ಯಾಕಾಶ ತಂತ್ರಜ್ಞಾನ, ಪರಮಾಣು ಶಕ್ತಿ, ಮಾನವ ಹಕ್ಕುಗಳು ಅಥವಾ ಇವುಗಳ ಪರವಾಗಿ ನಿರ್ದಿಷ್ಟಪಡಿಸಿದ ಯಾವುದೇ ವಲಯದಲ್ಲಿ ತೊಡಗಿಸಿಕೊಂಡಿರುವ ಖಾಸಗಿ ವಲಯದ ಯಾವುದೇ ಉದ್ಯಮವು ಕೇಂದ್ರ ಸರ್ಕಾರದ ಪೂರ್ವಾನುಮತಿಯಿಲ್ಲದೆ ಯಾವುದೇ ವಿದೇಶಿಯರನ್ನು ನೇಮಿಸಿಕೊಳ್ಳಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಸ್ಸಾಂನಲ್ಲಿ CAA ಅಡಿಯಲ್ಲಿ ಕೇವಲ ಮೂವರು ವಿದೇಶಿಯರಿಗೆ ಪೌರತ್ವ: ಮುಖ್ಯಮಂತ್ರಿ ಶರ್ಮಾ


