ಕಲ್ಯಾಣ ಕರ್ನಾಟಕ ಪ್ರದೇಶದ ಶೈಕ್ಷಣಿಕ ಕ್ಷೇತ್ರವನ್ನು ಸುಧಾರಿಸಲು ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ (ಕೆಕೆಆರ್‌ಡಿಬಿ) ಅಧ್ಯಕ್ಷರಾದ ಡಾ. ಅಜಯ್ ಧರಂ ಸಿಂಗ್ ಅವರು ತಜ್ಞರ ಸಮಿತಿಯನ್ನು ರಚಿಸಿದ್ದಾರೆ.
ಸಂಘಪರಿವಾರ ಹಿನ್ನೆಲೆಯ ಡಾ.ಗುರುರಾಜ ಕರಜಗಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿರುವುದು ಇದೀಗ ವಿರೋಧಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಡಾ.ಗುರುರಾಜ ಕರಜಗಿ ಅಧ್ಯಕ್ಷತೆ ವಹಿಸಿರುವ ಸಮಿತಿಯಲ್ಲಿ ಶಾಹೀನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ಭಾಲ್ಕಿಯ ಶ್ರೀ ಹಿರೇಮಠ ಸ್ವಾಮೀಜಿ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಡಾ.ರುದ್ರೇಶ್, ಫಾದರ್ ಫ್ರಾನ್ಸಿಸ್, ಎನ್.ಬಿ. ಪಾಟೀಲ್ ಸೇರಿದಂತೆ ಶಿಕ್ಷಣ ಕ್ಷೇತ್ರದ ಹಲವಾರು ಪ್ರಮುಖರು ಇದ್ದಾರೆ.
ಶುಕ್ರವಾರ ಕಲಬುರಗಿಯ ಕೆಕೆಆರ್‌ಡಿಬಿ ಕಚೇರಿಯಲ್ಲಿ ಸಮಿತಿಯ ಸಭೆ ನಡೆಸಲಾಗಿದ್ದು,ಕಲ್ಯಾಣ ಕರ್ನಾಟಕ ಭಾಗದಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ಕಾರ್ಯತಂತ್ರಗಳ ಕುರಿತು ಸದಸ್ಯರು ಚರ್ಚಿಸಿದರು. ಈ ಪ್ರದೇಶದಲ್ಲಿನ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವ ಕುರಿತು ಚರ್ಚೆಗಳು ಕೇಂದ್ರೀಕೃತವಾಗಿತ್ತು
‘ಅಕ್ಷರ ಆವಿಷ್ಕಾರ’ ಯೋಜನೆಗೆ ಕೆಕೆಆರ್‌ಡಿಬಿಯು ಗಮನ ನೀಡಲಾಗಿದ್ದು, ಶಾಲೆ ಮತ್ತು ಕಾಲೇಜುಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುವುದರ ಜೊತೆಗೆ, ಅರ್ಹ ಶಿಕ್ಷಕರು ಮತ್ತು ಉಪನ್ಯಾಸಕರ ನೇಮಕಾತಿಗೆ ಪ್ರಮುಖ್ಯತೆ ನೀಡಲಾಗಿದೆ.
ಕರಜಗಿ ಅಧ್ಯಕ್ಷತೆಗೆ ವಿರೋಧ:
ಡಾ.ಗುರುರಾಜ ಕರಜಗಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿರುವುದನ್ನು ಶಿಕ್ಷಣ ತಜ್ಞರಾದ ಬಿ. ಶ್ರೀಪಾದ್ ಭಟ್ ವಿರೋಧ ವ್ಯಕ್ತಪಡಿಸಿದ್ದಾರೆ. “ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಕಲ್ಯಾಣಕರ್ನಾಟಕದ (ಹೈದರಾಬಾದ್ ಕರ್ನಾಟಕ) ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಆರೆಸ್ಸೆಸ್ ಸಿದ್ಧಾಂತದ ಪರವಿರುವ ಗುರುರಾಜ್ ಕರ್ಜಗಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದಾರೆ. ಇವರಿಗೆ ನಾಚಿಕೆ, ಮಾನ, ಮರ್ಯಾದೆ ಇದೆಯೇ? ಕರ್ಜಗಿ ಯಾವ ಬಗೆಯಲ್ಲಿ ಶಿಕ್ಷಣ ತಜ್ಞರು? ಹೈದರಾಬಾದ್ ಕರ್ನಾಟಕದ ಸಮಾಜೋ-ಆರ್ಥಿಕ-ರಾಜಕೀಯ ಬಿಕ್ಕಟ್ಟಿನ ಕುರಿತು ಇವರಿಗೆ ಯಾವ ಮಾಹಿತಿ ಇದೆ? ಇವರ ಅರ್ಹತೆ ಏನು? ಯಾವ ಮಾನದಂಡಗಳನ್ನು ಆಧರಿಸಿ ಆಯ್ಕೆ ಮಾಡಿದ್ದಾರೆ” ಎಂದು ಪ್ರಶ್ನಿಸಿದ್ದಾರೆ.
“ಇದ್ಯಾವುದೂ ಕಾಂಗ್ರೆಸ್ ಸರ್ಕಾರಕ್ಕೆ ಮುಖ್ಯವಲ್ಲ. ಆರೆಸ್ಸೆಸ್ ನ ಕರ್ಜಗಿ ಮಾತ್ರ ಮುಖ್ಯ. ಇನ್ನು ಈ ಸಮಿತಿಯ ಇತರೇ ಸದಸ್ಯರಲ್ಲಿ ಬಹುತೇಕರು ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಅಲ್ಲಿ ಉದ್ಯೋಗದಲ್ಲಿರುವವರು. ಕಾಂಗ್ರೆಸ್‌ಗೆ ಯಾವುದೇ ಸಿದ್ಧಾಂತವಿಲ್ಲ ಎಂದು ಗೊತ್ತಿತ್ತು. ಆದರೆ, ನೈತಿಕವಾಗಿ ದಿವಾಳಿಯಾಗಿರುವುದಾಗಿ ಸಾಬೀತುಪಡಿಸುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಪತ್ರಕರ್ತರಾದ ಹರ್ಷ ಕುಗ್ವೆ ಅವರು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದು, “ಈ ಗುರುರಾಜ ಕರ್ಜಗಿ ಒಬ್ಬ ಶಿಕ್ಷಣ ತಜ್ಞ ಎನ್ನುವವರು ಮುಟ್ಟಾಳರು. ಅವನಂತ ಒಬ್ಬ ಮೌಡ್ಯ ಪ್ರತಿಪಾದಕ ಮತ್ತು ಸನಾತನಿಯನ್ನ ಜವಾಬ್ದಾರಿಯುತ ಹುದ್ದೆಗೆ ನೇಮಿಸಿರುವುದು ಸರ್ಕಾರದ ಆತ್ಮಹತ್ಯಾಕಾರಿ ಕೆಲಸ. ಕರ್ಜಗಿಯಂತ ಅವಕಾಶವಾದಿ ಕನ್ನಿಂಗ್ ಚೆಡ್ಡಿಜೀವಿಗಳಿಗೆ ಮಾನ್ಯತೆ ನೀಡುವಂತ ಅದಿಕಾರಿಗಳಿಗೆ ತಲೆಯಲ್ಲಿ ಬುದ್ದಿ ಅಂತೂ ಇರಲಿಕ್ಕಿಲ್ಲ” ಎಂದು ಫೇಸ್‌ಬುಕ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
“ಶಿಕ್ಷಣವನ್ನು ಕುಲಗಡೆಸುವ ಕೆಲಸ ಬರೀ ಬಿಜೆಪಿ ಸರ್ಕಾರದಲ್ಲಿ ನಡೆದಿದ್ದಲ್ಲ ಈಗಲೂ ಮುಂದುವರೆದಿದೆ. ಶಿಕ್ಷಣ ಕ್ಚೇತ್ರದಲ್ಲಿ ಹಲವಾರು ದಶಕಗಳಿಂದ ಹಗಲಿರುಳು ಕೆಲಸ ಮಾಡುತ್ತಿರುವ ಪ್ರೊ. ನಿರಂಜನಾರಾದ್ಯರಂತವರು ಇರುವಾಗ ಈ ಪಡಪೋಸಿ ಕರ್ಜಗಿ ಯಾಕೆ ಬೇಕಿತ್ತು? ಮಾನ್ಯ ಸಿ ಎಂ ಸಿದ್ದರಾಮಯ್ಯ ಅವರು ಈ ಕರ್ಜಗಿ ತಮಿತಿಯನ್ಜು ಕೂಡಲೇ ಉಚ್ಚಾಟಿಸಬೇಕು. ಹೊಸ ಸಮಿತಿ ರಚಿಸಬೇಕು” ಎಂದು ಹರ್ಷ ಆಗ್ರಹಿಸಿದ್ದಾರೆ.
ವಿದ್ಯಾರ್ಥಿ ಹೋರಾಟಗಾರ ಪಿ. ನಂದಕುಮಾರ್ ಅವರು ಪ್ರತಿಕ್ರಿಯಿಸಿ, “ಗುರುರಾಜ ಕರ್ಜಿಗಿಯವರು ಸನಾತನಿ ಸಂತತಿಯ ಅವಕಾಶವಾದಿ ಹಾಗೂ ಸಂಘ ಪರಿವಾರದ ವ್ಯಕಿ ಎನ್ನುವುದು ಈಗಾಗಲೇ ನಾಡಿನ ಪ್ರಜ್ಞಾವಂತ ನಾಗರೀಕರಿಗೆ ತಿಳಿದಿರುವಂತದ್ದೆ. ಅವರು ಕರ್ನಾಟಕದ ವಿವಿಧೆಡೆ ಕಾರ್ಯಕ್ರಮಗಳು ಆಯೋಜನೆಗೊಳ್ಳುವುದು ಕೇಶವ ಕೃಪೆಯಿಂದ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಮೂಲಕವೇ ಅವರು ಇವತ್ತು ಶಿಕ್ಷಣ ತಜ್ಞರಾದವರು. ಕೇವಲ ಭಾವನಾತ್ಮಕ ಮಾತುಗಳ ಮೂಲಕವೇ ಸಾಮಾನ್ಯ ಜನರನ್ನು ಮೂಡರನ್ನಾಗಿಸುವಲ್ಲಿ ನಿಸ್ಸಿಮರು. ಇಂತಹ ವ್ಯಕ್ತಿಯನ್ನು ಅದರಲ್ಲೂ ಮುಖ್ಯವಾಗಿ ಜಾತಿ ವಿನಾಶದ ಕ್ರಾಂತಿಯ ನೆಲವಾದ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟದ ಸುಧಾರಣ ಸಮಿತಿಗೆ ಸರ್ಕಾರ ಈ ಮನುವಾದದ ಪ್ರತಿಪಾದಕರನ್ನು ನೇಮಿಸಿರುವುದು ಒಪ್ಪಲಾಗದು” ಎಂದು ಹೇಳಿದ್ದಾರೆ.
ಈ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಕರ್ನಾಟಕ ಸರ್ಕಾರವು ಗುರುರಾಜ ಕರಜಗಿಯವರ ನೇಮಕ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು. ಇತ್ತೀಚೆಗೆ ಕರ್ನಾಟಕ ಸರ್ಕಾರ ಕೈಗೊಳ್ಳುತ್ತೀರಿವ ಈ ರೀತಿಯ ನಿರ್ಧಾರ ಕಾರಣಕ್ಕೆ ನಮ್ಮಂತ ಬಹುತೇಕರು ಕರ್ನಾಟಕ ಸರ್ಕಾರವನ್ನು ಅನುಮಾನದಿಂದ ಮತ್ತು ಅಸಹನೆಯಿಂದ ನೋಡುವಂತ ಪರಿಸ್ಥಿತಿ ಬಂದೊದಗಿದೆ. ಇದು ಈ ಸರ್ಕಾರದ ನೈತಿಕತೆ ಕುಸಿತವನ್ನು ಎತ್ತಿ ತೋರಿಸುವಂತೆ ಕಾಣುತ್ತಿದೆ. ಬಹಳ ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ರಾಜಕೀಯ ಚಿಂತನೆಯಲ್ಲೇ ಆಗಿರುವ ಬಹು ದೊಡ್ಡ ಲೋಪವನ್ನು ತೋರಿಸುತ್ತದೆ. ಸಮಾಜದಲ್ಲಿ ಸೂಕ್ಷ್ಮ ಮತ್ತು ತೀಕ್ಷ್ಣವಾದ ರಾಜಕೀಯ ಪ್ರಜ್ಞೆಯನ್ನು ಬಿಟ್ಟು ಕೊಡುವುದು ಬಹು ಘೋರ ದುರಂತಕ್ಕೆಡೆ ಮಾಡಿಕೊಡುತ್ತದೆ ಎನ್ನುವುದು ಆಳುವ ಸರ್ಕಾರ ಅರಿತುಕೊಳ್ಳಬೇಕು” ಎಂದು ಅವರು ಕಾಂಗ್ರೆಸ್ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ವೈಚಾರಿಕ ತಿಳುವಳಿಕೆ, ಅನಿಕೇತನ ಪ್ರಜ್ಞೆಯ ನೀತಿಯನ್ನು ಹಾಗೂ ಕವಿರಾಜ ಮಾರ್ಗಕಾರ ಹಾಕಿರುವ ವಿವೇಕ ತತ್ವಕ್ಕೆ ಬುನಾದಿ ಹಾಕುವಂತ ಶಿಕ್ಷಣ ತಜ್ಞರನ್ನು ನೇಮಿಸಿದರೆ ಶೈಕ್ಷಣಿಕವಾಗಿ ಹಿಂದುಳಿದ ಹೈದ್ರಾಬಾದ್ ಕರ್ನಾಟಕ ನಿಜವಾಗಿಯೂ ಕಲ್ಯಾಣ ಕರ್ನಾಟಕವಾಗುವುದು. ಈಗಿರುವುದು ಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕವಾಗಿದೆ ಅಷ್ಟೇ. ಹಾಗಾಗಿ, ಶೈಕ್ಷಣಿಕ ಗುಣಮಟ್ಟದ ಸುಧಾರಣೆ ಸಮಿತಿಗೆ ನೇಮಕಗೊಂಡ ಗುರುರಾಜ್ ಕರ್ಜಿಗಿಯವರನ್ನು ಕೈಬಿಟ್ಟು, ರಾಜ್ಯದ ಹಿರಿಯ ಬುದ್ಧಿಜೀವಿಗಳ,ಸಾಹಿತಿಗಳ ಸಲಹೆಗಳನ್ನು ಪಡೆದು ಸಮಿತಿ ಸದಸ್ಯರನ್ನು ನೇಮಕ ಮಾಡುವುದು ಒಳಿತು” ಎಂದು ನಂದಕುಮಾರ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ; ಬಿಜೆಪಿ ವಿರುದ್ದ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ ದಿನೇಶ್ ಗುಂಡೂರಾವ್ ಪತ್ನಿ



CongRSS