ಚಕ್ರವರ್ತಿ ಸೂಲಿಬೆಲೆ ಸುಳ್ಳಿನ ಚಕ್ರವರ್ತಿ. ಬಾಯಿ ತೆರೆದರೆ ರಾಮಾಯಣ, ಮಹಾಭಾರತ, ಭಗವದ್ಗೀತೆ ಎನ್ನುವ ಅವರು, ಯಾವ ಪ್ರಮಾಣದಲ್ಲಿ ಸುಳ್ಳು ಹೇಳುತ್ತಾರೆ ಎನ್ನುವುದು ಇಡೀ ಕರ್ನಾಟಕದ ಜನತೆಗೆ ಗೊತ್ತು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಕುಂದಾಪುರದಲ್ಲಿ ಹಮ್ಮಿಕೊಂಡಿರುವ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ಕಾರ್ಯಕ್ರಮದ ಆಯೋಜಕರಿಗೆ ಪೊಲೀಸರು ನೋಟಿಸ್ ನೀಡಿರುವ ಕುರಿತು ಉಡುಪಿಯಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್, “ಚಕ್ರವರ್ತಿ ಸೂಲಿಬೆಲೆ ಕಪ್ಪಿಗಿರೋದನ್ನು ಬೆಳ್ಳಗೆ ಮಾಡೋದರಲ್ಲಿ, ಬೆಳ್ಳಗಿರುವುದನ್ನು ಕಪ್ಪಗೆ ಮಾಡೋದರಲ್ಲಿ ಬಹಳಷ್ಟು ನಿಸ್ಸೀಮರು” ಎಂದು ವಾಗ್ದಾಳಿ ನಡೆಸಿದ್ದಾರೆ.
ವಾಕ್‌ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ವಾಕ್‌ಸ್ವಾತಂತ್ರ್ಯ ಸೇರಿದಂತೆ ಎಲ್ಲಾ ರೀತಿಯ ಸ್ವಾತಂತ್ರ್ಯ ಇದೆ. ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ನಾವು ಚಕ್ರವರ್ತಿ ಸೂಲಿಬೆಲೆಯಿಂದ ಪಾಠ ಕೇಳಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಅವರು ಮೂರು ದಿನಗಳ ಕಾಲ ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಾರೆ ಎಂಬುವುದರ ಬಗ್ಗೆ ನನಗೆ ಮಾಹಿತಿಯಿದೆ. ಎಸ್ಪಿ ಈ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದಾರೆ. ಅವರು (ಸೂಲಿಬೆಲೆ) ತಮ್ಮ ಪ್ರವಾಸ ಮಾಡಲಿ. ಆದರೆ, ಕೋಮು ಸೌಹಾರ್ದತೆ ಕೆಡಿಸುವುದು, ಸುಳ್ಳು-ದ್ವೇಷ ಬಿತ್ತುವುದನ್ನು ಅವರು ಮಾಡಬಾರದು. ಏಕೆಂದರೆ, ಉಡುಪಿ ಜಿಲ್ಲೆಯ ಜನ ಶಾಂತಿ ಪ್ರಿಯರು ಎಂದಿದ್ದಾರೆ.
ಕೋಮು ನಿಗ್ರಹ ದಳಕ್ಕೆ ಉಡುಪಿಯ ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಪತ್ರಕರ್ತರ ಮಾತಿಗೆ ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್, “ಒಂದು ಕಡೆ ಕೋಮುವಾದಕ್ಕೆ ಪ್ರಚೋದನೆ ಮಾಡಿಕೊಂಡು ನಾವು ಮಾಡುತ್ತಿಲ್ಲ ಎನ್ನುತ್ತಾರೆ. ಮತ್ತೊಂದೆಡೆ ಕೋಮು ದ್ವೇಷ ನಿಗ್ರಹ ದಳಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಬಿಜೆಪಿ ಶಾಸಕರ ಈ ನಡವಳಿಕೆ ನೋಡಿ, ಅವರ ಮನಸ್ಥಿತಿ ಏನು ಎಂಬುವುದನ್ನು ಉಡುಪಿಯ ಜನರು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದ್ದಾರೆ.
ಕುಂದಾಪುರದ ಮೊಗವೀರ ಸಭಾಭವನದಲ್ಲಿ ಜೂ.20ರಿಂದ 22ರವರೆಗೆ ‘ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ’ ಎಂಬ ವಿಷಯದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಆಯೋಜಕರಿಗೆ 14 ಅಂಶಗಳ ಸೂಚನೆಗಳನ್ನು ನೀಡಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಮನೆ ಕೆಲಸದಾಕೆ ಮೇಲೆ ಅತ್ಯಾಚಾರ ಆರೋಪ: ಪ್ರಜ್ವಲ್ ರೇವಣ್ಣ ವಿರುದ್ಧ ವಿಚಾರಣೆಗೆ ಹೈಕೋರ್ಟ್ ಅಸ್ತು


