ರಾಷ್ಟ್ರಪತಿಯವರು ಹೊರಡಿಸಿರುವ ಸಾಂವಿಧಾನಿಕ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯ) ಆದೇಶ 2019ನ್ನು ಪ್ರಶ್ನಿಸಿ ವಿಧಿ 32ರ ಅನ್ವಯ ಆರೆಸ್ಸೆಸ್‌ಗೆ ನಿಕಟವಾಗಿರುವ ಕುಖ್ಯಾತ ವಕೀಲ ಮನೋಹರಲಾಲ್ ಶರ್ಮಾ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಇದು ಕೇಂದ್ರ ಗೃಹಮಂತ್ರಿ ಅಮಿತ್ ಶಾ ಮಾಡಿರುವ ತಂತ್ರವೆಂದು ನ್ಯಾಯಾಂಗ ವಲಯದಲ್ಲಿ ಮಾತನಾಡಲಾಗುತ್ತಿದ್ದು, ಅವರ ಕೋರಿಕೆಯಂತೆಯೇ ಶರ್ಮಾ ಈ ಅರ್ಜಿ ಸಲ್ಲಿಸಿದ್ದಾರೆಂದು ಹೇಳಲಾಗುತ್ತಿದೆ.
ತನ್ನದೇ ಕಾನೂನುಬಾಹಿರ ಕ್ರಮದ ವಿರುದ್ಧ ಬಲವಾದ ಪ್ರಕರಣವನ್ನು ದುರ್ಬಲಗೊಳಿಸಲೆಂದೇ ದುರ್ಬಲವಾದ ಅರ್ಜಿಯೊಂದನ್ನು ಸಲ್ಲಿಸಲಾಗಿದ್ದು, ಒಂದು ವೇಳೆ ಸುಪ್ರೀಂಕೋರ್ಟ್ ಈ ಅರ್ಜಿಯನ್ನು ವಜಾ ಮಾಡಿದಲ್ಲಿ ಈ ಆದೇಶವನ್ನು ನಿಜವಾಗಿಯೂ ವಿರೋಧಿಸುವ ಬೇರಾರಿಗೂ ಮುಂದೆ ಅದನ್ನು ಪ್ರಶ್ನಿಸುವುದು ಕಷ್ಟವಾಗುತ್ತದೆ. ಇದಕ್ಕಾಗಿಯೇ ಈ ಕುಟಿಲತಂತ್ರವನ್ನು ಹೆಣೆಯಲಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕಿತ್ತುಹಾಕುವ ರಾಷ್ಟ್ರಪತಿಯವರ ಆದೇಶವು ಸಂವಿಧಾನಬಾಹಿರವಾಗಿದೆ ಎಂದು ಅರ್ಜಿಯಲ್ಲಿ ಹೇಳಿರುವ ಶರ್ಮಾ, ಸರಕಾರವು ಇದಕ್ಕಾಗಿ ಸಂಸದೀಯ ಹಾದಿಯಲ್ಲಿ ಮುಂದುವರಿಯಬೇಕಾಗಿತ್ತು ಎಂದು ಹೇಳಿದ್ದಾರೆ.
ಸಂವಿಧಾನದ ವಿಧಿ 370ನ್ನು ಅದೇ ವಿಧಿಯಲ್ಲಿನ ಅಧಿಕಾರಗಳನ್ನು ಬಳಸಿಕೊಂಡು ಅಸಿಂಧುಗೊಳಿಸುವುದು ಸಂವಿಧಾನಬಾಹಿರ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಆಗಸ್ಟ್ 5, 2019ರಂದು ರಾಷ್ಟ್ರಪತಿಯವರು ಹೊರಡಿಸಿರುವ ಸಾಂವಿಧಾನಿಕ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯ) ಆದೇಶ 1954ನ್ನು ಅಸಿಂಧುಗೊಳಿಸುತ್ತದೆ. ಅದು ಭಾರತೀಯ ಸಂವಿಧಾನದ ಎಲ್ಲಾ ವಿಧಿಗಳು ಜಮ್ಮು ಮತ್ತು ಕಾಶ್ಮೀರಕ್ಕೂ ಅನ್ವಯವಾಗುವುದಾಗಿ ಹೇಳುತ್ತದೆ. ‘ರಾಜ್ಯ ಸಾಂವಿಧಾನಿಕ ವಿಧಾನಸಭೆ’ ಎಂಬ ಪದವನ್ನು ಅದು ‘ರಾಜ್ಯ ಶಾಸಕಾಂಗ ವಿಧಾನಸಭೆ’ ಎಂಬ ಪದದಿಂದ ಬದಲಿಸುತ್ತದೆ. ಇದು ಜಮ್ಮು ಮತ್ತು ಕಾಶ್ಮೀರವನ್ನು ನೇರವಾಗಿ ಕೇಂದ್ರ ಸರಕಾರದ ನಿಯಂತ್ರಣಕ್ಕೆ ತರುತ್ತದೆ.
ಆರೆಸ್ಸೆಸ್ ವಕೀಲ ಎಂದೇ ಪರಿಚಿತರಾಗಿರುವ ಮನೋಹರಲಾಲ್ ಶರ್ಮಾ ಎಷ್ಟು ಕುಖ್ಯಾತ ವಕೀಲ ಎಂದರೆ 2013ರಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣವೊಂದರಲ್ಲಿ ಆರೋಪಿಗಳ ಪರ ವಾದಿಸುತ್ತಾ, ಭಾರತದಲ್ಲಿ ಈ ತನಕ ‘ಗೌರವಾರ್ಹ ಮಹಿಳೆ’ಯೊಬ್ಬರ ಮೇಲೆ ಅತ್ಯಾಚಾರ ನಡೆದಿರುವುದನ್ನು ತಾನು ಕೇಳಿಯೇ ಇಲ್ಲ ಎಂದು ಹೇಳಿದ್ದರು.
ಕೊಲೆಯಾದ ಕಾಲೇಜು ವಿದ್ಯಾರ್ಥಿನಿಯ ಸಂಗಾತಿಯೇ ಈ ಪ್ರಕರಣಕ್ಕೆ ‘ಸಂಪೂರ್ಣ ಹೊಣೆ’ ಎಂದು ವಾದಿಸಿದ್ದ ಈತ, ಅವಿವಾಹಿತ ಜೋಡಿ ರಾತ್ರಿ ಹೊತ್ತು ರಸ್ತೆಯಲ್ಲಿ ಇರಲೇಬಾರದಿತ್ತು ಎಂದು ಹೇಳಿದ್ದರು.
ಕೃಪೆ: ಅಕ್ಷಿತಾ ಸಕ್ಸೇನಾ, (ಲೈವ್ ಲಾ)


