ದೇಶದ ಗಡಿಗಳನ್ನು ಅಂತಾರಾಷ್ಟ್ರೀಯ ಮಾನದಂಡಗಳು ನಿರ್ಧರಿಸುವುದಕ್ಕೂ ಮೊದಲಿನ ಸಮಯವನ್ನು ಊಹಿಸಿಕೊಳ್ಳಿ. ಆಯಾ ಪ್ರದೇಶಗಳನ್ನಾಳುತ್ತಿದ್ದ ರಾಜ ಅಥವಾ ಆಕ್ರಮಣಕಾರರ ಅಧಿಕಾರದ ಅವಧಿಯಲ್ಲಿ ಒಂದು ಪ್ರಾಂತ್ಯದ ಸ್ವರೂಪವು, ಕಾನೂನು, ಧರ್ಮದ ಮೇಲ್ಮೆ, ರೀತಿರಿವಾಜುಗಳು, ಆಯಾ ರಾಜ ಅಥವಾ ಆಕ್ರಮಣಕಾರರ ವೈಯಕ್ತಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ಬದಲಾಗುತ್ತಿದ್ದುದ್ದು ಐತಿಹಾಸಿಕ ಸತ್ಯ. ಆದರೆ, ನಂತರದ ದಿನಗಳಲ್ಲಿ ಪ್ರಮುಖವಾಗಿ ಎರಡನೇ ಮಹಾಯುದ್ಧದ ನಂತರ ಜಗತ್ತಿನ ಎಲ್ಲ ದೇಶಗಳಲ್ಲಿ ತಾವು ಸಾಚಾ ಅಥವಾ ಹೆಚ್ಚು ಸುಸಂಸ್ಕೃತರು ಎಂದು ತೋರಿಸಿಕೊಳ್ಳುವ ಒಂದು ದೊಡ್ಡ ಸ್ಪಧೆಯೇ ಶುರುವಾಯಿತು.
ಅತ್ಯಂತ ಹೆಚ್ಚು ಉದಾರನೀತಿಗಳು, ಶಾಂತಿಪಾಲನೆಯ ಸಂದೇಶಗಳು, ಯುದ್ಧಗಳ ವಿರೋಧಿ ಪ್ರಚಾರ, ಶೋಷಿತರ ರಕ್ಷಣೆಗೆ ಒತ್ತು ಮುಂತಾದವು ಪ್ರಾರಂಭವಾದವು. ಇದನ್ನೆಲ್ಲಾ ನೋಡುವಾಗ ಮನುಷ್ಯ ಇನ್ನೇನು ತನ್ನ ಉಚ್ಛ್ರಾಯ ಸ್ಥಿತಿ ತಲುಪುವ ದಿನಗಳು ದೂರವಿಲ್ಲ ಎಂದೆನಿಸಲು ಪ್ರಾರಂಭಿಸಿತ್ತು. ಇದೇ ಹಿನ್ನೆಲೆಯಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ, ವೈಚಾರಿಕ ಭಿನ್ನಮತಗಳು ಇದ್ದಾಗ್ಯೂ ಅಂದಿನ ಬಹುತೇಕ ರಾಷ್ಟ್ರೀಯ ನಾಯಕರ ಮಾತು ಅಥವಾ ಕೃತಿಗಳಲ್ಲಿ ದೇಶವನ್ನು ಅತ್ಯಂತ ವಿಶಾಲ, ಉನ್ನತ ಮೌಲ್ಯಗಳ ಮೇಲೆ ಕಟ್ಟುವ ಇರಾದೆ ಇದ್ದು, ಆ ಕೆಲಸ ಯಶಸ್ವಿಯಾಗಿ ಪ್ರಾರಂಭವಾಯಿತು. ಸಂವಿಧಾನದ ರಚನೆ ಈ ಇರಾದೆಯ ಭದ್ರ ಅಡಿಪಾಯವಾಗಿ ಮೂಡಿ ಬಂದಿತು. ಅಂದು ಮೂಡಿಬಂದ ಸೆಕ್ಯುಲರ್ ಎಂಬ ಮೌಲ್ಯ ಈ ದೇಶದ ಉದಾತ್ತತೆ ಮತ್ತು ವೈವಿಧ್ಯತೆಯನ್ನು ರಕ್ಷಿಸುವ ದಾರಿಯಲ್ಲಿ ಹೊಸ ಮೈಲಿಗಲ್ಲಾಯಿತು.
ಯಾವುದೇ ದೊಡ್ಡ ವಿಚಾರವಿರಲಿ ಅದನ್ನು ಕಟ್ಟಲು ತಗಲುವ ಸಮಯಕ್ಕಿಂತ ಕೆಡವಲು ತಗಲುವ ಸಮಯ ಬಹಳ ಕಡಿಮೆ. ಸ್ವಾತಂತ್ರ್ಯ ಸಿಕ್ಕ ಕೇವಲ 45 ವರ್ಷಗಳ ಒಳಗೆ ಅಧಿಕಾರ ಗಳಿಸುವ ಏಕೈಕ ಉದ್ದೇಶದಿಂದ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾತೃ ಸಂಘಟನೆಗಳ ಮುಖಂಡರು ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಐತಿಹಾಸಿಕ ಬಾಬ್ರಿ ಮಸೀದಿ ಕೆಡವಲು ಮುಂದಾದಾಗ ದೇಶದ ಸೆಕ್ಯುಲರ್ ಬುನಾದಿಯ ಕಲ್ಲು ಸಡಿಲವಾಯಿತು. ಬಾಬ್ರಿ ಮಸೀದಿಯನ್ನು ಮುಂದೆ ಉರುಳಿಸಿದ್ದೂ ಆಯಿತು. ಮುಂದೆ ಕಾಲಕ್ರಮೇಣ ಧಾರ್ಮಿಕ ದಂಗೆಗಳು, ಗೋದ್ರಾ ಹತ್ಯಾಕಾಂಡ, ಗುಜರಾತ್ ನರಮೇಧ ಒಂದೊಂದಾಗಿ ನಡೆದಂತೆ ಅಭದ್ರತೆ ಕಣ್ಣಿಗೆ ಕಾಣುವ ಮಟ್ಟಕ್ಕೆ ಬೆಳೆಯಿತು. ಆದರೆ ಈ ಎಲ್ಲ ಅಭದ್ರತೆಗೂ ಸರ್ಕಾರಿ ಮುದ್ರೆ ಬಿದ್ದಿದ್ದು ಕಳೆದ 6-7 ವರ್ಷಗಳಲ್ಲಿ.

2019ರಲ್ಲಿ ಹೊರಬಂದ ಬಾಬ್ರಿ ಮಸೀದಿ ತೀರ್ಪಿನಿಂದ ಈ ಎಲ್ಲ ಭಾವನೆಗಳ ಸಮ್ಮಿಳಿತ ರೂಪವಾಗಿ ಜನರ ಅಸುರಕ್ಷತೆಗೆ ಒಂದು ಸಾಂಸ್ಥಿಕ ಮುದ್ರೆ ಒತ್ತಿದಂತಾಯ್ತು. ಇದೇ ಹಿನ್ನೆಲೆಯಲ್ಲಿ ಮೊನ್ನೆ ದೆಹಲಿಯ ಬಿಜೆಪಿ ಮುಖಂಡ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಎಂಬುವವರು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ (PIL) 1991ರ ‘Place of Worship Act’ನ (ಪೂಜಾ ಸ್ಥಳಗಳ ಕಾಯ್ದೆ) ಔಚಿತ್ಯವನ್ನು ಪ್ರಶ್ನಿಸಿರುವುದು ಹಾಗೂ ಅದನ್ನು ಕೋರ್ಟು ದಾಖಲಿಸಿಕೊಂಡಿದ್ದನ್ನು ನೋಡಿದಾಗ ಇನ್ನೇನು ಸೆಕ್ಯುಲರ್ ಪದದ ಚೈತನ್ಯಕ್ಕೆ ಕೊನೆ ಮೊಳೆ ಹೊಡೆಯುವ ದಿನಗಳು ದೂರವಿಲ್ಲ ಎನಿಸಲು ಪ್ರಾರಂಭಿಸಿದೆ.
ಬಾಬ್ರಿ ಮಸೀದಿಯ ಧ್ವಂಸದ ನಂತರ ಕೇಂದ್ರದ ಕಾಂಗ್ರೆಸ್ ಸರ್ಕಾರ ದೇಶದ ಚೈತನ್ಯವನ್ನು, ಧಾರ್ಮಿಕ ಸಹಬಾಳ್ವೆ, ಸಮನ್ವಯತೆಯನ್ನು ಕಾಪಾಡುವ ಉದ್ದೇಶದಿಂದ “ಪೂಜಾ ಸ್ಥಳಗಳ ಕಾಯ್ದೆ”ಯನ್ನು ತರುವ ಸೂಚನೆ ನೀಡಿದಾಗ ಬಿಜೆಪಿಯನ್ನು ಬಿಟ್ಟು ಉಳಿದೆಲ್ಲ ಪಕ್ಷಗಳು ತಮ್ಮ ಸಹಮತ ಸೂಚಿಸಿದ್ದವು. ಕಾಯ್ದೆಯಲ್ಲಿ ಯಾವ ದಿನದಿಂದ ಇದು ಅನ್ವಯವಾಗಬೇಕು ಎಂಬ ಜಿಜ್ಞಾಸೆ ಬಂದಾಗ ಸಹಜವಾಗಿಯೇ ಭಾರತ ಸ್ವತಂತ್ರ್ಯ ಪ್ರಜಾಪ್ರಭುತ್ವವಾಗಿ ಹೊರಬಂದು ಜಾತ್ಯತೀತ ಮೌಲ್ಯದ ಮೇಲೆ ದೇಶಕಟ್ಟಲು ಪ್ರಾರಂಭಿಸಿದ ದಿನ ಅಂದರೆ ಆಗಸ್ಟ್ 15, 1947ನ್ನು ಮೂಲವಾಗಿ ಇಟ್ಟುಕೊಳ್ಳಲಾಯಿತು.
ಈ ಕಾಯ್ದೆಯ ಸೆಕ್ಷನ್ 3, 4ರ ಪ್ರಕಾರ ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪ ಆಗಸ್ಟ್ 18, 1947ರಂದು ಹೇಗೆ ಇತ್ತೋ ಅದೇ ರೀತಿ ಮುಂದುವರಿಯಬೇಕು ಮತ್ತು ಯಾರಾದರೂ ಅದನ್ನು ಬದಲಿಸಿ ಬೇರೆ ಧಾರ್ಮಿಕ ಕೊಡುವ ಪ್ರಯತ್ನ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ ಎಂದೂ ಹೇಳಿತು.
ಸೆಕ್ಷನ್ 4(2)ರ ಅಡಿಯಲ್ಲಿ ಈಗಾಗಲೇ ಈ ನಿಟ್ಟಿನಲ್ಲಿ ಕೋರ್ಟಿನ ಮುಂದೆ ಇರುವ ಪ್ರಕರಣಗಳು ಮುಕ್ತಾಯವಾಗುತ್ತವೆ ಎಂದು ನಿರ್ಧರಿಸಲಾಯಿತು. ಆದರೆ ಈಗಾಗಲೇ ಏರು ಸ್ಥಿತಿ ಮುಟ್ಟಿದ್ದ ಅಯೋಧ್ಯೆಯ ರಾಮಜನ್ಮಭೂಮಿ ಬಾಬ್ರಿಮಸೀದಿ ವಿವಾದವನ್ನು ಈ ಕಾಯ್ದೆಯ ಪರಿಧಿಯಿಂದ ಹೊರಗೆ ಇಡಲಾಯಿತು. ಹೀಗೆ ಅಯೋಧ್ಯೆಯನ್ನು ಈ ಕಾಯ್ದೆಯಿಂದ ಹೊರಗೆ ಇಟ್ಟದ್ದು ಸರಿಯೇ ತಪ್ಪೇ ಎಂಬುದನ್ನು ಮುಂದಿನ ದಿನಗಳಲ್ಲಿ ಇತಿಹಾಸದ ವಿದ್ಯಾರ್ಥಿಗಳು ನಿರ್ಧರಿಸಬಹುದು. ತಪ್ಪು ಸಾರ್ವಜನಿಕವಾದಾಗ ಸತ್ಯ ಸಜೆ ಅನುಭವಿಸಬೇಕಾಗುತ್ತದೆ.
1994ರಲ್ಲಿ ಎಮ್. ಇಸ್ಮಾಯಿಲ್ ಫಾರೂಕಿ ವರ್ಸಸ್ ಭಾರತ ಒಕ್ಕೂಟ ಕೇಸಿನಲ್ಲಿ ತನ್ನ ಅಭಿಪ್ರಾಯ ವ್ಯಕ್ತ ಪಡಿಸುತ್ತ ಸುಪ್ರೀಂಕೋರ್ಟ್ “ಬಾಬ್ರಿಮಸೀದಿ ಕೆಡವಿದವರಿಗೆ 1991ರ ಪೂಜಾ ಸ್ಥಳಗಳ ಕಾಯ್ದೆಯ ಬಗ್ಗೆ ಎಳ್ಳೆಷ್ಟೂ ಭಯ ಇರಲಿಲ್ಲ ಎಂದು ಅನಿಸುತ್ತದೆ ಎಂದಿತ್ತು. ಅಲ್ಲದೆ ಅಯೋಧ್ಯೆಯ ಕೆಲವೊಂದು ಸ್ಥಳಗಳನ್ನು ಸ್ವಾಧೀನಪಡಿಸಿಕೊಳ್ಳುವ ಕಾಯ್ದೆ 1993ನ್ನು ಕಿತ್ತು ಹಾಕಿತ್ತು. ಅತ್ಯಂತ ಮಹತ್ವದ್ದೆಂದರೆ ಈ ನಿಟ್ಟಿನಲ್ಲಿ ಅಂದಿನ ರಾಷ್ಟ್ರಪತಿ ಈ ಕೇಸಿನ ಬಗ್ಗೆ ಕೋರ್ಟಿನ ನಿರ್ಧಾರ ಪ್ರಶ್ನಿಸಿದಾಗ ಸುಪ್ರೀಂಕೋರ್ಟ್ ಅದಕ್ಕೆ ಉತ್ತರ ನೀಡದೆ ಇರುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಲ್ಲದೆ, ರಾಷ್ಟ್ರಪತಿಗಳ ಈ ಪ್ರಶ್ನೆ ದೇಶದಲ್ಲಿ ಒಂದು ಸಮುದಾಯದವರಿಗೆ ಅನುಕೂಲವಾಗುವಂತೆ ಇದ್ದು ದೇಶದ ಸಮಗ್ರತೆಯ ದೃಷ್ಟಿಯಿಂದ ನಾವಿದನ್ನು ಉತ್ತರಿಸದೆ ಇರಲು ನಿರ್ಧರಿಸಿದ್ದೇವೆ ಎಂದು ಹೇಳಿತು. ಹಾಗೆ ಹೇಳಿ ಅದು ನಿಜವಾದ ಅರ್ಥದಲ್ಲಿ ಸಂವಿಧಾನದ ಒಂದು ಸ್ತಂಭ ಎಂಬುದನ್ನು ಸಾಬೀತು ಮಾಡಿತ್ತು.
“ಅಯೋಧ್ಯೆ ಎಂಬುದು ಒಂದು ಬಿರುಗಾಳಿ, ಅದು ಬೀಸಿ ಮಾಯವಾಗುತ್ತದೆ, ಆದರೆ ಅದಕ್ಕಾಗಿ ಕೋರ್ಟಿನ ಘನತೆಯನ್ನು ಬಲಿಕೊಡಲು ಆಗದು” ಎಂದಿದ್ದ ಅಂದಿನ ಸುಪ್ರೀಂಕೋರ್ಟ್‌ಗೂ “ಹೌದು ಮಸೀದಿ ಕೆಡವಿದ್ದು ಅಪರಾಧ ಆದರೆ ಜನರ ಭಾವನೆಗಳಿಗೆ ಬೆಲೆಕೊಟ್ಟು ರಾಮಜನ್ಮಭೂಮಿ ಇದೆ” ಎಂದು ನಿರ್ಧಾರ ಮಾಡಿದ ಇಂದಿನ ಸುಪ್ರೀಂ ಕೋರ್ಟಿಗೂ ಇರುವ ವ್ಯತ್ಯಾಸ ಬೇಟೆಯಾಡಿ ತಿನ್ನುವ ಪ್ರಾಣಿಗೂ ಪರಾವಲಂಬಿ ಜೀವಿಗೂ ಇರುವಷ್ಟೇ ನಿಚ್ಚಳ. ರಾಮಜನ್ಮಭೂಮಿ ಪ್ರಕರಣದ ಇನ್ನೊಂದು ಭಾಗವಾದ ಎಂ ಸಿದ್ದಿಕ್ ಕೇಸಿನಲ್ಲಿ ಸುಪ್ರೀಂಕೋರ್ಟ್ 1991ರ ಪೂಜಾಸ್ಥಳದ ಕಾಯ್ದೆ, ಅದರ ಮಹತ್ವ ಸಾಂವಿಧಾನಿಕತೆ ಎಲ್ಲವನ್ನೂ ಎತ್ತಿ ಹಿಡಿಯುತ್ತದೆ. ಆದರೆ ಈ ಕಾಯ್ದೆಯ ಬಗ್ಗೆ ಪಾರ್ಲಿಮೆಂಟ್‌ನಲ್ಲಿ ಚರ್ಚೆಗಳು ನಡೆದಾಗ ಬಿಜೆಪಿ ತೀವ್ರವಾಗಿ ಅದನ್ನು ವಿರೋಧಿಸಿತ್ತು. ಅದರ ಪ್ರಕಾರ ’ಧಾರ್ಮಿಕ ಯಾತ್ರ್ರಾಸ್ಥಳಗಳು (Pilgrimage) ಮತ್ತು ರುದ್ರಭೂಮಿಗಳು ಸಂವಿಧಾನದಲ್ಲಿ ರಾಜ್ಯಗಳ ವಿಷಯ ಪಟ್ಟಿಯಲ್ಲಿ ಬರುತ್ತವೆ ಹಾಗಿದ್ದಾಗ ಕೇಂದ್ರ ಇದರ ಮೇಲೆ ಕಾನೂನು ರಚಿಸಲು ಸಾಧ್ಯವಿಲ್ಲ ಎಂದಾಗಿತ್ತು. ಆಗ ಕೇಂದ್ರ, ತನ್ನ ಕೇಂದ್ರ ಪಟ್ಟಿಯ 97ನೇ ವಿಷಯದ ಅಡಿ ಬರುವ ಕೇಂದ್ರ ವಿಶೇಷ ಅಧಿಕಾರಗಳ ಅಡಿಯಲ್ಲಿ ಈ ಕಾಯ್ದೆ ರಚಿಸುವುದಾಗಿ ಹೇಳಿತ್ತು. ಕೇಂದ್ರಗಳು ರಾಜ್ಯಗಳ ಪಟ್ಟಿಯಲ್ಲಿ ಆಗಾಗ ಕೈಹಾಕುವುದು ನಡದೇ ಇರುತ್ತಾದರೂ ಅದರ ಉದ್ದೇಶಗಳು ಕೆಲವೊಮ್ಮೆ ಅದರ ಕಾರ್ಯಕ್ಕೆ ಸಮರ್ಥನೆ ಒದಗಿಸುತ್ತದೆ. ಇಂದು ರಾಜ್ಯಗಳಿಗೆ ಸಂಬಂಧಿಸಿದ ಕೃಷಿಯಲ್ಲಿ ಕೇಂದ್ರ ತಂದಿರುವ ಕಾಯ್ದೆಗಳಿಗೆ ಕೇಂದ್ರ ಸರ್ಕಾರದ ಉದ್ದೇಶಗಳ ಹಿನ್ನೆಲೆಯಲ್ಲಿಯೇ ವಿರೋಧ ವ್ಯಕ್ತವಾಗಿರುವುದು.

ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ಬಾಬ್ರಿ ಮಸೀದಿ ಧ್ವಂಸದ ಜೊತೆಗೆ ದೇಶದಾದ್ಯಂತ 3000ಕ್ಕೂ ಹೆಚ್ಚು ಮಸೀದಿಗಳನ್ನು ಮರಳಿ ಪಡೆಯುವ ಘೋಷಣೆ ಮಾಡಿದ್ದಲ್ಲದೆ ಕಾಶಿಯ ಗ್ಯಾನವ್ಯಾಪಿ ಮಸೀದಿ ಹಾಗೂ ಮಥುರಾದ ಶಾಹಿ ಮಸೀದಿಯಿಂದ ಈ ಕಾರ್ಯ ಪ್ರಾರಂಭ ಮಾಡುವುದಾಗಿ ಹೇಳಿದಾಗ ಕೇಂದ್ರ 1991ರ ಕಾಯ್ದೆಯನ್ನು ತಂದಿತ್ತು.
ಇದೇ ತಿಂಗಳಲ್ಲಿ ವಾರಣಾಸಿಯ ಜಿಲ್ಲಾ ನ್ಯಾಯಾಲಯದಲ್ಲಿ ದೇವತೆಗಳಾದ ಶಿವ, ಮಾ ಶೃಂಗಾರ ಗೌರಿ ಮತ್ತು ಗಣೇಶರ ಹೆಸರಲ್ಲಿ ಸಿವಿಲ್ ದಾವೆ ದಾಖಲಾಗಿದ್ದು ದೇವಾಲಯದ ಎದುರು ಇರುವ ಗ್ಯಾನವ್ಯಾಪಿ ಮಸೀದಿಯನ್ನು ತೆಗೆದುಹಾಕಿ ಮಂದಿರಕ್ಕೆ ಆ ಜಾಗ ನೀಡಬೇಕೆಂದು ಕೋರಲಾಗಿದೆ. ಇಷ್ಟೇ ಆಗಿದ್ದರೆ ಚಿಂತಿಸಬೇಕಾಗಿರಲಿಲ್ಲ, ಆದರೆ ಕೋರ್ಟ್ ಇದನ್ನು ಪುರಸ್ಕರಿಸಿ ನೋಟಿಸನ್ನೂ ಜಾರಿ ಮಾಡಿದೆ. ಆದರೆ ಒಂದೇ ಪ್ರಶ್ನೆ, ಈ ದೇವತೆಗಳೆಲ್ಲಾ ವಕಾಲತ್‌ಗೆ ಹೇಗೆ ಮತ್ತು ಎಲ್ಲಿ ಸಹಿ ಹಾಕಿದರು ಎಂಬುದು; ವಕೀಲರುಗಳನ್ನು ಹೇಗೆ ನೇಮಿಸಿದರು ಅನ್ನುವುದು. ಜಿಲ್ಲಾ ನ್ಯಾಯಾಲಯಕ್ಕಷ್ಟೇ ಈ ವಿಷಯ ಸೀಮಿತವಾಗಿದ್ದರೆ ಕೂಡ ಚಿಂತೆ ಇರಲಿಲ್ಲ. ಈ ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಸುಪ್ರೀಂ ಕೋರ್ಟಿನಲ್ಲಿ 1991ರ ಕಾಯ್ದೆಯ ಔಚಿತ್ಯವನ್ನೇ ಪ್ರಶ್ನಿಸಿದಾಗ ಅದು ದಾಖಲಾಗುತ್ತದೆ ಎಂದರೆ ಅದು ತೀವ್ರ ಚಿಂತೆಯ ವಿಚಾರ.
ಇದಕ್ಕೂ ಮೊದಲು ಕೆಲ ಎನ್‌ಜಿಒಗಳು ಇಂಥ ಪ್ರಯತ್ನ ಮಾಡಿದಾಗ ಸುಪ್ರೀಂಕೋರ್ಟ್ “ಇಂದಿನ ದಿನ ಕಾನೂನು ಕೈಗೆತ್ತಿಕೊಂಡು ಐತಿಹಾಸಿಕ ತಪ್ಪುಗಳನ್ನು ಸರಿಮಾಡಲು ಆಗುವುದಿಲ್ಲ ಎಂದು ಹೇಳಿ ತಳ್ಳಿ ಹಾಕಿತ್ತು. ಆದರೆ, ಈಗ ಅಯೋಧ್ಯೆಯ ತೀರ್ಮಾನ ದೇಶದ ಧಾರ್ಮಿಕ ಸಾಮರಸ್ಯದ ಇತಿಹಾಸಕ್ಕೆ ಕೊಡಲಿ ಪೆಟ್ಟು ಕೊಟ್ಟಿರುವುದನ್ನು ಮುಂದಿನ ಜನಾಂಗ ಎಂದೂ ಮರೆಯುವುದಿಲ್ಲ. ಮತ್ತು 1991ರ ಪ್ರಮುಖ ಕಾನೂನನ್ನೇ ಪ್ರಶ್ನಿಸಿದಾಗ ಅದಕ್ಕೆ ಸಮ್ಮತಿ ದೊರಕುತ್ತದೆ ಎಂದರೆ ಅದು ಇನ್ನಷ್ಟು ಒಡಕುಗಳಿಗೆ, ಅದು ಸೃಷ್ಟಿಸುವ ಸಮಸ್ಯೆಗಳಿಗೆ ದೇಶ ತುತ್ತಾಗಬಲ್ಲದು. ಈ ಸೂಚನೆಯನ್ನು ಈಗ ಗಮನಿಸಿ ಅದಕ್ಕೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡದಿದ್ದರೆ ಮುಂಬರುವ ದಿನಗಳು ಭಯಾನಕವಾಗುವುದರಲ್ಲಿ ಸಂಶಯವಿಲ್ಲ.

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


