Homeಮುಖಪುಟ‘ಕರ್ಣನ್’ ಸಿನಿಮಾ ವಿಮರ್ಶೆ; ಘನತೆಗಾಗಿ ತಳ ಸಮುದಾಯದ ಪ್ರತಿರೋಧದ ಸೃಜನಶೀಲ ಅಭಿವ್ಯಕ್ತಿ

‘ಕರ್ಣನ್’ ಸಿನಿಮಾ ವಿಮರ್ಶೆ; ಘನತೆಗಾಗಿ ತಳ ಸಮುದಾಯದ ಪ್ರತಿರೋಧದ ಸೃಜನಶೀಲ ಅಭಿವ್ಯಕ್ತಿ

- Advertisement -
- Advertisement -

ಡಾ. ಬಾಬಾಸಾಹೇಬರು ಒಂದು ಭಾಷಣದಲ್ಲಿ ಹೀಗೆ ಹೇಳುತ್ತಾರೆ: “ಅಸ್ಪೃಶ್ಯರು ಹಳ್ಳಿಗಳನ್ನು ಬಿಟ್ಟುಬಂದು, ಎಲ್ಲೆಲ್ಲಿ ಬಂಜರು ಭೂಮಿ ಅವರಿಗೆ ಕಾಣಸಿಗುತ್ತದೆಯೋ ಅದನ್ನು ವಶಪಡಿಸಿಕೊಂಡು ಅಲ್ಲಿ ಕೃಷಿ ಪ್ರಾರಂಭಿಸಬೇಕು. ಯಾರಾದರೂ ಅದನ್ನು ತಡೆಯಲು ಪ್ರಯತ್ನಿಸಿದರೆ ಅದಕ್ಕೆ ಪ್ರತಿರೋಧ ತೋರಿಸಿ ಸರ್ಕಾರ ನಿಗದಿಪಡಿಸಿರುವ ಭೂಕಂದಾಯ ಕಟ್ಟಿ ತಮ್ಮ ಒಡೆತನವನ್ನು ಪ್ರತಿಪಾದಿಸಬೇಕು. ಈ ರೀತಿ  ತಮ್ಮ ಹೊಸ ಸಮಾಜದಲ್ಲಿ ಘನತೆಯಿಂದ ಬದುಕಬೇಕು. ಈ ರೀತಿಯಲ್ಲಿ ಅವರು ಹೊಸ ಘನತೆಯ ಸಮ ಸಮಾಜವನ್ನು ಸೃಷ್ಟಿಸಬಹುದು”

ಕರ್ಣನ್ ಸಿನೆಮಾದ ಪ್ರಾರಂಭದಲ್ಲಿಯೇ ಒಬ್ಬ ಯುವಕನನ್ನು ಪೋಲಿಸರು ಹಿಡಿದು ಕಟ್ಟಿ, ಮುಖವನ್ನು ಬಟ್ಟೆಯಿಂದ ಮುಚ್ಚಿ ಕೋರ್ಟ್ ಗೆ ಕರೆದುಕೊಂಡು ಹೋಗುತ್ತಿದ್ದಾರೆ. ಎರಡೂ ಮುಂಗಾಲುಗಳಿಂದ ರಕ್ತ ತೊಟ್ಟಿಕ್ಕುತ್ತಿದೆ. ಆದರೂ ಪೊಲೀಸರ ಬೂಟುಗಳು ಆ ಮುಂಗಾಲುಗಳನ್ನೂ ತುಳಿಯುತ್ತವೆ. ಈ ಇಮೇಜ್ ಗಳ ಜೊತೆಗೆ ಒನಕೆಬಂಡಿಯ, ಬಸವನ ಹುಳದ ಇಮೇಜ್ ಗಳು ಜಕ್ಸ್ಟಪೋಸ್ ಆಗುತ್ತವೆ. ಹೌದಲ್ಲಾ, ಒನಕೆಬಂಡಿ ಮುಟ್ಟಿದೊಡನೆ ಸುರಳಿ ಸುತ್ತಿಕೊಂಡು ತನ್ನನ್ನು ರಕ್ಷಿಸಿಕೊಳ್ಳುವುದಕ್ಕೆ ಕ್ಯಾಮಫ್ಲಾಜ್ ಆಗತ್ತೆ. ಬಸವನಹುಳು ತನ್ನ ಶೆಲ್ ಒಳಗೆ ಸೇರಿಕೊಳ್ಳತ್ತೆ. ಆದರೆ ಈ ದೇಶದಲ್ಲಿ ದಲಿತ ಸಮುದಾಯದವರ ಮೇಲೆ ಶೋಷಕರು ದಾಳಿ ಮಾಡಿದಾಗ ಈ ಸಣ್ಣ ಪ್ರಾಣಿಗಳಿಗೆ ಇರುವ ರಕ್ಷಣಾತಂತ್ರಗಳು ಕೂಡ ಇಲ್ಲವೆಲ್ಲ! ಇಂತಹ ಕ್ರೂರ ಸಮಾಜದ ಬಗ್ಗೆ ಇರುವ ಸಿಟ್ಟು- ಆಕ್ರೋಶದ ಸೃಜನಶೀಲ ಅಭಿವ್ಯಕ್ತಿಯೇ ಮಾರಿ ಸೆಲ್ವರಾಜ್ ನಿರ್ದೇಶನದ ‘ಕರ್ಣನ್’. ಇಂತಹ ದೌರ್ಜನ್ಯದ, ಅಸಮಾನ ಸಮಾಜದ ವಿರುದ್ಧ ಸಿಡಿದೆದ್ದಿರುವವನೇ ಕರ್ಣನ್ (ಧನುಶ್ ನಟಿಸಿದ್ದಾರೆ).

ಅಂಬೇಡ್ಕರ್ ಮಾತಿನಂತೆ, ಹೆದ್ದಾರಿಯಿಂದ ದೂರವಿರುವ ಒಂದು ಜಾಗವನ್ನು ತಮ್ಮದಾಗಿಸಿಕೊಂಡು, ತಮ್ಮ ಪೂರ್ವಜರ ಹೆಸರುಗಳನ್ನು ಬದಲಿಸಿಕೊಂಡು ಘನತೆಯಿಂದ ಬದುಕಲು ಪ್ರಯತ್ನಿಸುತ್ತಿರುವ ಊರದು. ದುರ್ಯೋಧನ, ಕರ್ಣನ್, ಅಭಿಮನ್ಯು ಹೀಗೆ ಹೊಸ ಹೆಸರುಗಳನ್ನು ಇಟ್ಟುಕೊಂಡು ಹೊಸ ಜೀವನ ಕಟ್ಟಿಕೊಂಡು ಬದುಕುತ್ತಿರುವ ಪೊಡಿಯಾಂಗುಳಂ ಊರಿಗೆ ಹೊಸ ಗುರುತು ಸಿಕ್ಕಿರುವುದು ಪಕ್ಕದ ಮೇಲೂನವರಿಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ.  ಪೊಡಿಯಾಂಗುಳಂ ಊರಿನ ಹೆಸರು ಸೂಚಿಸುವ ಹೊಸ ಬೋರ್ಡ್ ಹಾಕಿದರೂ ಅದನ್ನು ಕಿತ್ತು ಬಿಸಾಕುವಷ್ಟು, ಆ ಊರಿಗೆ ಒಂದು ಬಸ್ ನಿಲ್ದಾಣ ಕೂಡ ಸಿಗದಂತೆ ನೋಡಿಕೊಳ್ಳುವಷ್ಟು, ಮೇಲೂರಿನ ಬಸ್ ನಿಲ್ದಾಣಕ್ಕೆ ನಡೆದು ಬಂದರೆ ಅವರಿಗೆ ಕಿರುಕುಳ ಕೊಡುವಷ್ಟು ಅಸಹನೆಯ ಸಮಾಜ. ಈಗಷ್ಟೇ ಪೊಡಿಯಾಂಗುಳಂ ಊರಿನ ಒಬ್ಬರೋ ಇಬ್ಬರೋ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಆದರೆ ಅದಕ್ಕೆ ಪೂರಕ ಸೌಲಭ್ಯಗಳಿಲ್ಲ.

ಚಲನಚಿತ್ರ ಟೈಟಲ್ ಕಾರ್ಡ್ ನೊಂದಿಗೆ ಪ್ರಾರಂಭವಾದಾಗ ಹುಡುಗಿಯೊಬ್ಬಳು ಫಿಟ್ಸ್ ಬಂದು ನರಳಿ ನಡುರಸ್ತೆಯಲ್ಲಿ ಸಹಾಯವಿಲ್ಲದೆ ಮರಣಹೊಂದುತ್ತಾಳೆ. ಅಕ್ಕ-ಪಕ್ಕ ಬಸ್ಸು-ಕಾರುಗಳು ತಮ್ಮಪಾಡಿಗೆ ಹಾದುಹೋಗುತ್ತವೆ. ಹಾಗೆಯೇ ಬಾಲಕಿಯ ಮುಖ ಆ ಊರಿನ ದೇವತೆಯ ಮುಖವಾಗಿ ಬದಲಾಗಿಹೋಗುತ್ತದೆ. ಬಸ್ ನಿಲ್ಲಿಸದೆ ಇರುವುದಕ್ಕೆ, ಅವಳಿಗೆ ಸರಿಯಾದ ಸಮಯಕ್ಕೆ ಸಹಾಯ ಸಿಗದೆ ಹೋದದ್ದಕ್ಕೆ ಆದದ್ದು ಅದು. ಅದು ಆಕಸ್ಮಿಕ ಸಾವೇ? ವ್ಯವಸ್ಥೆ ಮಾಡಿದ ಕೊಲೆಯೇ? ಯಾವುದನ್ನೂ ವಾಚ್ಯಗೊಳಿಸದೆ ವೀಕ್ಷಕನಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಾರೆ ನಿರ್ದೇಶಕ. ರೋಹಿತ್ ವೇಮುಲಾನ ಸಾಂಸ್ಥಿಕ ಹತ್ಯೆಯ ನೆನಪು ಹಾದು ಹೋಗದೇ ಇರದು. ಈ ಬಾಲಕಿಯ ಅಣ್ಣನೇ ಕರ್ಣನ್. ಸಿಟ್ಟಿನ ಯುವಕ. ಹಿರಿಯರು ಅನುಸರಿಸಿಕೊಂಡು ಹೋಗಬೇಕೆನ್ನುವ ಮಾತನ್ನು ಕೇಳದವ. ಅನ್ಯಾಯವನ್ನು ಪ್ರಶ್ನಿಸುವವನು. ಸಂಘರ್ಷಕ್ಕೆ ಸಿದ್ಧನಾಗಿರುವವ. ಊರ ಹಬ್ಬದ ಸಮಯದಲ್ಲಿ ಆನೆ ಮೇಲೆ ಕೂತು ಮೆರವಣಿಗೆ ಮಾಡುತ್ತಾ ರಸ್ತೆ ತಡೆ ಮಾಡಿ, ಪ್ರತಿರೋಧ ತೋರಿಸುವ ಕೆಚ್ಚಿದೆಯವ. ಈ ಸಿಟ್ಟಿಗೆ ಒಂದು ದಿಕ್ಕು ಬೇಕೇ? ಅದಕ್ಕೆ ತನ್ನ ಭೂತವನ್ನು ಹಿಂದಿರುಗಿ ನೋಡಬೇಕೇ?

ತನ್ನ ತಂದೆಯ ಮೇಲೆ ಈಗ ದೇವತೆಯಾಗಿರುವ ಬಾಲಕಿ ಬಂದು, ತನ್ನಕ್ಕನ ಮದುವೆಗಾಗಿ ದುಡ್ಡು ಕೂಡಿಟ್ಟಿದ್ದೇನೆ. ಅದು ಮನೆಯಲ್ಲಿ ಹೂತಿದೆ ಎಂದು ತಿಳಿಸುತ್ತಾಳೆ. ಒಲ್ಲದ ಮನಸ್ಸಿನಿಂದ ತನ್ನ ಅಕ್ಕ ಮತ್ತು ತಾಯಿಗೆ ಬಯ್ಯುತ್ತ ಮನೆಯ ನಡುವೆ ಆರೆ ಪಿಕಾಸಿ ಹಿಡಿದು ಕರ್ಣನ್ ಅಗೆಯುತ್ತಾ ಹೋಗುತ್ತಾನೆ. ಯಾವ ನಿಧಿಯೂ ಇಲ್ಲ ಎಂದು ಸಿಟ್ಟಾಗಿ ಕೈಚೆಲ್ಲಿ ರೇಗುತ್ತಾನೆ. ಮತ್ತೆ ಕೇಳಿಕೊಂಡಾಗ ಅಗೆಯುವುದನ್ನು ಮುಂದುವರೆಸಿದಾಗ ಚಿಲ್ಲರೆ ಕಾಸಿನ ಡಬ್ಬ ಝಲ್ ಎನ್ನುತ್ತದೆ. ವೀಕ್ಷಕನ ಎದೆ ಝಲ್ ಎಂದು ನಡುಗುತ್ತದೆ. ಕಣ್ಣಲ್ಲಿ ಎರಡು ಹನಿ ಜಿನುಗುತ್ತದೆ. ಕರ್ಣನ್ ತಾನು ಅಗೆದ ಗುಂಡಿಯಲ್ಲಿ ಕುಸಿದು ಬೀಳುತ್ತಾನೆ. ಮತ್ತೆ ಭೂತದ ನೆನಪುಗಳು ಬೆನ್ನೇರುತ್ತದೆ. ಆ ಮಣ್ಣಿನಲ್ಲಿ ಇನ್ನೂ ಎರೆಹುಳುಗಳು ಹರಿಯುತ್ತಿವೆ. ಹೋರಾಟಕ್ಕೆ ಫಲವತ್ತಾಗಿದೆ ಭೂಮಿ. ಎಲ್ಲರೂ ಸಂಘಟಿತರಾಗಿ ಹೋರಾಡಲು ಸಜ್ಜಾಗಬೇಕಿದೆ.

ಬಹುಷಃ ಇದು ನಿರ್ದೇಶಕ ಮಾರಿ ಸೆಲ್ವರಾಜ್ ತನ್ನ ಇತಿಹಾಸವನ್ನು ಕೆದಕಿಕೊಳ್ಳುತ್ತಿರುವ ಬಗೆಯೂ ಇರಬಹುದೇ? ತಮ್ಮ ಹಿಂದಿನ ಚಿತ್ರ ‘ಪರಿಯೇರುಮ್ ಪೆರುಮಾಳ್’ನಲ್ಲಿ ಪೆರುಮಾಳ್ ಶಿಕ್ಷಿತ. ತನ್ನ ಮೇಲೆ ದೌರ್ಜನ್ಯವೆಸಗಿದ ತನ್ನ ಪ್ರೇಯಸಿಯ ತಂದೆ, ಇಡೀ ವ್ಯವಸ್ಥೆಯ ಒಳಿತಿಗಾಗಿ ಬದಲಾಗಬೇಕು ಎಂದು ಬಯಸುವವನು. ತನ್ನನ್ನು ರಕ್ಷಣೆ ಮಾಡಿಕೊಂಡು, ಸಮಾಜ ಒಳ್ಳೆಯ ರೀತಿಯಲ್ಲಿ ಬದಲಾಗಲು ಶೋಷಕನಿಗೂ ತಿಳಿವು ಮೂಡಬೇಕೆಂಬ ನಂಬಿಕೆ ಇರುವವನು. ಈ ಅವಕಾಶ ಪೆರುಮಾಳ್ ನ ಹಿಂದಿನ ಪೀಳಿಗೆಗೆ ಇತ್ತೇ? ದೌರ್ಜನ್ಯವನ್ನು ವರದಿ ಮಾಡಲು, ಸಮಾಧಾನಕ್ಕಾದರೂ ಮತ್ತೊಬ್ಬನ ಬಳಿ ಹೇಳಿಕೊಳ್ಳಲು ಸಾಧ್ಯವಾಗದೇ ಇರದ ಅಥವಾ ತಿಂಗಳುಗಳ ಕಾಲವೇ ಕಾಯಬೇಕಿದ್ದ ಒಂದು ಕಾಲ ಇತ್ತೆಲ್ಲಾ.. ಆ ಕಥೆಯನ್ನು ಇವತ್ತು ಹೇಳಬೇಕಲ್ಲವೇ? ಹೀಗೆ ಮಾರಿ ಸೆಲ್ವರಾಜ್ ತಮ್ಮ ಪೂರ್ವಿಕರ ಕಥಾವಸ್ತುವನ್ನು ಈ ಸಿನೆಮಾದಲ್ಲಿ ಹ್ಯಾಂಡಲ್ ಮಾಡುತ್ತಾರೆ.

ಪ್ರಾರಂಭದ ದೃಶ್ಯದಲ್ಲಿ ಬಾಲಕಿ ಮೃತಪಟ್ಟಾಗ ಭಾರತದ ಬಾವುಟ ಎತ್ತರದಲ್ಲಿ ತನ್ನ ಪಾಡಿಗೆ ತಾನು ಹಾರಾಡುತ್ತಾ ಇರುತ್ತದೆ. ಇಡೀ ಪೊಡಿಯಾಂಗುಳಂನಲ್ಲಿ ಸರ್ಕಾರಿ ವೃತ್ತಿಯಲ್ಲಿ ಇರುವವರೂ ಯಾರೂ ಇಲ್ಲ. ಹಸಿವಿನಿಂದ ತಪ್ಪಿಸಿಕೊಳ್ಳುವುದಕ್ಕೆ, ಒಂದು ಕೆಲಸ ಹುಡುಕಿಕೊಳ್ಳಲು, ಆರ್ಮಿ ಸೆಲೆಕ್ಷನ್ ಗೆ ಹೋಗುವ ಕರ್ಣನ್ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಪಾಸಾಗುತ್ತಾನೆ. ಅದೇ ಪರೀಕ್ಷೆಯಲ್ಲಿ ಓಡುವ ಪರೀಕ್ಷೆಯಲ್ಲಿ ನಪಾಸಾಗುವ ವ್ಯಕ್ತಿಯೊಬ್ಬನ ಆರ್ತ ಮುಖಭಾವ, ಕೆಲಸ ಸಿಕ್ಕಿದ ಆರ್ಡರ್ ಬಂದ ಮೇಲೆ,  ಊರಿನ ಪ್ರಮುಖರೆಲ್ಲರೂ ಒಪ್ಪಿಸಿದ್ದರಿಂದ ದೇಶ ರಕ್ಷಣೆಯ ಸೇನೆ ಸೇರಲು ಕರ್ಣನ್ ನಡೆದುಹೋಗುತ್ತಿದ್ದರೆ, ಅತ್ತ ಪ್ರಭುತ್ವದ ಪೊಲೀಸ್ ಪಡೆ ಇಡೀ ಊರಿನ ಮತ್ತು ಕರ್ಣನ್ ನ ಪ್ರೀತಿ ಪಾತ್ರರಾದ ಜನರ ನಾಶಕ್ಕೆ ಪೂರ್ಣ ಪ್ರಮಾಣದ ಬಲಪ್ರಯೋಗದಿಂದ ನುಗ್ಗಿದ್ದಾರೆ. ಈ ದೃಶ್ಯಗಳಲ್ಲಿ ಯಾವುದು ದೇಶ? ಅದು ಗಡಿಗಳು ಮಾತ್ರವೇ? ಬೆರಳೆಣಿಕೆಯಷ್ಟು ಶ್ರೀಮಂತರು ಮಾತ್ರ ಈ ದೇಶವೇ? ಮೇಲ್ಜಾತಿಯ ಜನಗಳು ಮಾತ್ರರೇ? ಇಂತಹ ಪ್ರಶ್ನೆಗಳ ಬಿರುಗಾಳಿಯನ್ನೇ ಎಬ್ಬಿಸುತ್ತಾರೆ ಮಾರಿ.

ಇಷ್ಟಕ್ಕೂ ತಮ್ಮ ಪಾಡಿಗೆ ತಾವು ಬದುಕುತ್ತಿರುವ ಜನಗಳ ಮೇಲೆ ಈಪಾಟಿ ಕೋಪ-ಸಿಟ್ಟು ಹಾಗೂ ಪಕ್ಕದೂರಿನವರ-ಪೊಲೀಸರ ದೌರ್ಜನ್ಯ ಏತಕ್ಕೆ? ತಮ್ಮ ಊರಿನಲ್ಲಿ ಬಸ್ ನಿಲ್ಲಿಸಲ್ಲ ಎಂಬ ಸಿಟ್ಟಿಗೆ ಕಲ್ಲು ತೂರಿ ಅದನ್ನು ಪುಡಿಗುಟ್ಟಿದ್ದಕ್ಕಾ? ಬಸ್ ಮಾಲೀಕನೇ ಬಸ್ ನಿಲ್ಲಿಸದೆ ಇದ್ದದ್ದನ್ನು ತನ್ನ ತಪ್ಪೆಂದು ಒಪ್ಪಿಕೊಂಡು ಕೇಸ್ ಹಾಕುವುದಿಲ್ಲ ಅಂದಿದ್ದಾನೆ. ಆದರೂ ಪೊಲೀಸರು ಈ ಊರಿನ ಜನರ ಮೇಲೆ ದಬ್ಬಾಳಿಕೆ ನಡೆಸಲು ಬರುವುದೇಕೆ? ಅದನ್ನು ಮೇಲೂರಿನ ಜನ ದೂರದಲ್ಲೇ ನಿಂತು ನೋಡಿ ಸಂಭ್ರಮಿಸುವುದೇಕೆ? ಊರಿನ ಮುಖಂಡ ದುರ್ಯೋಧನ ಹೇಳುತ್ತಾರೆ. ನಾವು ಬಸ್ ಪುಡಿಗುಟ್ಟಿದ್ದಕ್ಕೆ ಅವರು ನಮ್ಮ ಮೇಲೆ ಎರಗಿದ್ದಲ್ಲ. ನಾವು ಅವರ ಮುಂದೆ ಎದೆ ಸೆಟೆದು ನಿಂತಿದ್ದಕ್ಕೆ, ಅವರ ಮುಂದೆ ತಲೆಗೆ ಮುಂಡಾಸು ಕಟ್ಟಿ ನಿಂತು ಘನತೆಯನ್ನು ಪ್ರದರ್ಶಿಸಿದ್ದರಿಂದ ಮತ್ತು ಅವರಿಂದಲೂ ಅದನ್ನು ಡಿಮ್ಯಾಂಡ್ ಮಾಡುತ್ತಿರುವುದಕ್ಕೆ!

ಹೀಗೆ ಘನತೆಯ ಬದುಕಿಗಾಗಿ ತಮ್ಮದೇ ಊರೊಂದನ್ನು ಕಟ್ಟಿಕೊಂಡು, ಬದುಕಿಗಾಗಿ ಸೌದೆ ಉರಿಸಿ ಇದ್ದಿಲು ಮಾಡಿಕೊಂಡು ಶ್ರಮಿಸುತ್ತಿರುವ, ಶಿಕ್ಷಣಕ್ಕೆ ಆಗಷ್ಟೇ ತೆರೆದುಕೊಳ್ಳುತ್ತಿರುವ ಊರಿನಲ್ಲಿ, ಹಿರಿಯರು ಮತ್ತು ಯುವಕರು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಒಗ್ಗೂಡಿ, ಸಂಘಟಿತರಾಗಿ, ತಮ್ಮ ಮುಂದಿನ ಪೀಳಿಗೆಯ ರಕ್ಷಣೆ, ಶಿಕ್ಷಣ ಮತ್ತು ಅರೋಗ್ಯದ ಸೌಲಭ್ಯಗಳಿಗಾಗಿ, ತಮ್ಮ ವಿರುದ್ಧ ನಿಂತಿರುವ ವ್ಯವಸ್ಥೆಯ ಶೋಷಕರ ವಿರುದ್ಧ ಹೋರಾಡುತ್ತಾರೆ. ಈ ಪ್ರತಿರೋಧದ ಕಥೆಯಲ್ಲಿ ನಿರ್ದೇಶಕ ಕಟ್ಟಿಕೊಟ್ಟಿರುವ ಹಲವು ರೂಪಕಗಳು ಕಾಡುತ್ತವೆ. ಸಿನಿಮಾದಲ್ಲಿ ಆಗಾಗ ಕಾಣಿಸುವ ಕತ್ತೆಮರಿಯೊಂದಕ್ಕೆ ಮುಂಗಾಲನ್ನು ಕಟ್ಟಲಾಗಿದೆ. ಮುಕ್ತವಾಗಿ ಚಲಿಸದೆ, ಕುಂಟುಕೊಂಡು ನಡೆಯುವುದಕ್ಕೆ ಅದಕ್ಕೆ ಅಭ್ಯಾಸವಾಗಿಬಿಟ್ಟಿದೆ. ಕರ್ಣನ್ ಕಟ್ಟಿರುವ ಕತ್ತೆ ಕಾಲು ಬಿಚ್ಚುವುದಕಕ್ಕೂ, ನಿಲ್ಲಿಸಲು ನಿರಾಕರಿಸುವ ಬಸ್ಸನ್ನು ಪುಡಿಗುಟ್ಟುವುದಕ್ಕೂ, ಬೆಟ್ಟದ ಮರೆಯಿಂದ ದೇವತೆಯಾಗಿರುವ ಬಾಲಕಿ ಎದ್ದು ಆ ದೃಶ್ಯವನ್ನು ಕಣ್ಣುತುಂಬಿಕೊಳ್ಳುವುದಕ್ಕೂ ಸಮವಾಗುತ್ತದೆ. ಕುದುರೆ ಸಾಕುವ, ಆನೆಯ ಮೇಲೆ ಸವಾರಿ ಮಾಡುವ ದೃಶ್ಯಗಳು ಘನತೆಯನ್ನು ಮರುಕಳಿಸಿಕೊಳ್ಳುವ ಸಂಕೇತಗಳಾಗಿ ಮೂಡುತ್ತವೆ. ದೌರ್ಜನ್ಯದ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದ ಪ್ರತಿ ಸಂಘರ್ಷದ ಸಮಯದಲ್ಲೂ, ಆ ವ್ಯವಸ್ಥೆಗೆ ಹತರಾಗಿರುವ ಬಾಲಕಿಯರೆಲ್ಲರೂ ದೇವತೆಗಳ ರೂಪದಲ್ಲಿ ಇಣುಕಿ ನೋಡುತ್ತಾರೆ. ಉತ್ರಾಧೀಂಗ ಯೆಪ್ಪೊ ಉತ್ರಾಧೀಂಗ ಯೆಮ್ಮೋ (ಬಿಡ್ಬೇಡಿ ಅಪ್ಪ, ಬಿಟ್ಬಿಡ್ಬೇಡಿ ಅಮ್ಮ, ಬಿಟ್ಬಿಡ್ಬೇಡಿ ಅಣ್ಣಾ) ಎಂದು ಉತ್ತೇಜಿಸುತ್ತಾರೆ. ಊರಿನ ಜನ ತಲೆಯಿಲ್ಲದ ಬುದ್ಧನಂತಹ ಪ್ರತಿಮೆಯನ್ನು ಪೂಜಿಸುತ್ತಾರೆ. ಸಮುದಾಯಕ್ಕೊಂದು, ತಲೆಗೊಂದು ದೇವರನ್ನು ಸೃಷ್ಟಿಸಿಕೊಂಡು, ದೇವರುಗಳಲ್ಲೂ ಅಸಮಾನ ಸಮಾಜ ಸೃಷ್ಟಿಸಿರುವ ವ್ಯವಸ್ಥೆಯ ವಿರುದ್ಧ ಕಟ್ಟಿಕೊಂಡಿರುವ ವಿವೇಕದಂತೆ ಇದು ಕಾಣುತ್ತದೆ. ಇಂತಹ ರೂಪಕಗಳು- ಸಂಕೇತಗಳು ಕಾಡುವಂತೆ ಮೂಡಿಬಂದಿವೆ. ಆದರೆ ಹದ್ದು ಕೋಳಿಮರಿಯನ್ನು ಎತ್ತಿಕೊಂಡು ಹೋವುವಂತಹ ರೂಪಕಗಳನ್ನು ಅವಾಯ್ಡ್ ಮಾಡಬಹುದಿತ್ತೇನೋ ಅನ್ನಿಸದೆ ಇರದು. ಒಂದು ನೈಸರ್ಗಿಕ ಆಹಾರ ಸರಪಳಿಯನ್ನು, ಶೋಷಕ-ಶೋಷಣೆಯ ಸಂಕೇತವಾಗಿ ಬಳಸುವುದು ಅಷ್ಟೇನೂ ಸಮಂಜಸವಾಗಿ ಕಾಣುವುದಿಲ್ಲ.

ಕಾಡುವ ರೂಪಕಗಳು, ಸಂಕೇತಗಳ ಜೊತೆಗೇ ಆ ಸಮುದಾಯದ ಜೀವನ ದೃಷ್ಟಿಯನ್ನು ಕಟ್ಟಿಕೊಡುವ ದೃಶ್ಯಗಳು – ಮಂಜನತಿ ಪುರಾಣ ಹಾಡು, ತಾತ ಅಜ್ಜಿಯ ಬಳಿ ಹತ್ತು ರುಪಾಯಿ ಎತ್ತುವಾಗಿನ, ಅಕ್ಕ-ತಮ್ಮನ ಅನ್ಯೋನ್ಯತೆಯ, ದ್ರೌಪದಿ ಜೊತೆಗಿನ ಪ್ರೀತಿಯ ಥಟ್ಟಾನ್ ಥಟ್ಟಾ ಹಾಡಿನ ದೃಶ್ಯಗಳು ಹೀಗೆ ಮಾನವೀಯತೆಗೆ ಕಡೆಗೆ ತುಡಿಯುವ ಜೀವನ ದೃಷ್ಟಿಯ ಸಮುದಾಯದ ಚಿತ್ರಣ ಅನನ್ಯವಾಗಿದೆ. ಅಲ್ಲಿಯೂ ಸಣ್ಣ ಪುಟ್ಟ ಗಲಾಟೆಗಳಿವೆ. ಇಲ್ಲವೇ ಇಲ್ಲವೆಂದಲ್ಲ.

ಸಿನಿಮಾದ ಅಂತ್ಯಕ್ಕೆ ಕರ್ಣನ್ ತನ್ನ ಜೈಲುವಾಸ ಮುಗಿಸಿ ಬಂದ ದಿನವೇ ಸಂಕ್ರಾಂತಿ ದೀಪಾವಳಿ ಎಲ್ಲಾ, ಎಂಬ ಸಂಭಾಷಣೆ ಬರತ್ತೆ. ಅದು ಆ ಹಬ್ಬಗಳಾಗದೆ ಆ ಊರಿನ, ಆ ಸಮುದಾಯದ ವಿಶೇಷ ಹಬ್ಬಗಳ ಹೆಸರಾಗಬಹುದಿತ್ತು. ಆದರೆ ಕರ್ಣನ್ ಹಿಂದಿರುಗಿದ ಮೇಲೆ ಅಜ್ಜಿಯೊಂದು – ಅಳುವ ಸಮಯವಲ್ಲಪ್ಪ ಇದು, ಹಾಡೋಣ ಕುಣಿಯೋಣ ಬಾರಪ್ಪ ಎನ್ನತ್ತೆ. ಊರಿಗೆ ಬಸ್ ಸ್ಟ್ಯಾಂಡ್ ಬಂದಿದೆ. ಒಂದು ಮಟ್ಟಕ್ಕೆ ಶಿಕ್ಷಣ ಬಂದಿದೆ. ಸಂಘಟನೆ ಮತ್ತು ಹೋರಾಟದ ಫಲ ಅದು. ತನ್ನ ಬಿಡುಗಡೆಯ ಮುಂದಿನ ಹಂತಕ್ಕೆ ಸಮುದಾಯದಿಂದಲೇ ಹೋರಾಟ ಮುಂದುವರೆಯಲಿದೆ, ಮುಂದುವರೆಯುತ್ತಿದೆ. ಮುಂದಿನ ಜನಾಂಗಕ್ಕೆ ಶಿಕ್ಷಣವೇ ಪ್ರತಿರೋಧದ ಅಸ್ತ್ರ ಆಗಬಹುದೇನೋ! ಆದರೆ ಅದಕ್ಕೆ ತಳಪಾಯ ಹಾಕಿಕೊಟ್ಟದ್ದು ಯಾವುದೆಂದು ನಿರ್ದೇಶಕ ಮಾರಿ ‘ಕರ್ಣನ್’ ಮೂಲಕ ಶೋಧಿಸಿದ್ದಾರೆ.

  • ಗುರುಪ್ರಸಾದ್ ಡಿ ಎನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ಸಿನಿಮಾ ಬಹಳ ಚೆನ್ನಾಗಿದೆ. ಇಂತಹ ಸಿನೆಮಾಗಳು ಕನ್ನಡದಲ್ಲೂ ಬರಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...