ಮಿಲೇನಿಯಲ್ಸ್ ಎಂದು ಕರೆಸಿಕೊಳ್ಳುತ್ತಿರುವ ಇಂದಿನ ಯುವಜನಾಂಗ ಪ್ರೀತಿಯ ಅರ್ಥವನ್ನೇ ಮರೆತು ಬಿಟ್ಟಂತಿದೆ. ಪ್ರೀತಿಯೆಂಬ ಸುಮಧುರ ಬಾಂಧವ್ಯವನ್ನು ಕಾಮೋಪ್ರೇಕ್ಷೆಯಿಂದ ಅಳೆಯಲು ಶುರುವಿಟ್ಟಿರುವಂತೆ ಕಾಣಲಾರಂಭಿಸಿದೆ. ಪ್ರೀತಿಯ ಮೊಗ್ಗು ಅರಳಲಾಂಭಿಸುತ್ತಿದ್ದಂತೆ ಅದು ಕಾಮದೊಂದಿಗೆ ಅಂತ್ಯವಾಗಿಬಿಡುವ ಸನ್ನಿವೇಶಗಳು ಎಂದು ಹೆಚ್ಚಾಗಿ ಸಂಭವಿಸುತ್ತಿವೆ. ಅದರಲ್ಲೂ ಟೈಮ್ ಪಾಲ್ ಲವ್ ಎಂಬ ಹೊಸ ಟ್ರೆಂಡ್ ಬೇರೆ ಶುರುವಾಗಿದೆ. ಇಂತಹ ಟೈಮ್ ಪಾಸ್ ಲವ್‍ಗೆ ಬಲಿಯಾಗುವುದು ಯುವತಿಯರೇ ವಿನಃ ಯುವಕರಲ್ಲ. ಆದರೂ, ಸಿನಿಮಾ-ಸೀರಿಯಲ್‍ಗಳು ಹುಡುಗಿಯರೇ ಮೋಸಗಾತಿಯರು ಎಂಬಂತೆ ಬಿಂಬಿಸುತ್ತಿರುವುದು ಹೊಸತೇನಲ್ಲ.
ಮೊನ್ನೆಯಷ್ಟೇ ಕನ್ನಡ ಕಿರುತೆರೆ ಮತ್ತು ಸ್ಯಾಂಡಲ್‍ವುಡ್ ನಟಿ ಚಂದನ ಸೆಲ್ಫಿ ವಿಡಿಯೋ ಮಾಡಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ದಿನೇಶನನ್ನು ಪ್ರೀತಿಸಿ ಮೋಸ ಹೋದದ್ದು. ಅದು ಕೇವಲ ಪ್ರೀತಿಯಲ್ಲಾದ ಮೋಸವಷ್ಟೇ ಆಗಿರಲಿಲ್ಲ ಎಂಬುದು ವಾಸ್ತವ. ಸುಮಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಅವರಿಬ್ಬರೂ ಮಾನಸಿಕವಾಗಿಯಷ್ಟೇ ಅಲ್ಲದೆ, ದೈಹಿಕವಾಗಿಯೂ ಒಂದಾಗಿದ್ದರು. ಅವರಿಬ್ಬರ ದೈಹಿಕ ಬೆಸುಗೆಗೂ ಮುನ್ನ ಸುಮಾರು ಬಾರಿ ಆತನೇ ಮದುವೆಯ ವಿಚಾರ ಪ್ರಸ್ತಾಪಿಸಿದ್ದರೂ, ಕಾಲಕ್ರಮೇಣ ಮದುವೆಗೆ ಹಿಂದೇಟು ಹಾಕಲು ಆರಂಭಿಸಿದ್ದ. ಅಲ್ಲದೆ, ಆಕೆಯ ನಡತೆಯೇ ಸರಿಯಿಲ್ಲವೆಂದು ದೂಷಿಸಿದ್ದ. ಇಷ್ಟೆಲ್ಲವೂ ಆದ ನಂತರ ಈ ಆತ್ಮಹತ್ಯೆಯನ್ನು, ಪ್ರೀತಿಯ ನಂಬಿಕೆ, ಮದುವೆ ಭರವಸೆಯೊಂದಿಗೆ ದಿನೇಶ ಆಕೆಯ ಮೇಲೆ ನಡೆಸಿದ ಅತ್ಯಾಚಾರ ಮತ್ತು ಕೊಲೆ ಎಂದರೂ ತಪ್ಪಾಗಲಾದರು.
ಐದು ವರ್ಷಗಳಿಂದ ಆತನನ್ನು ಪ್ರೀತಿಸುತ್ತಿದ್ದ ಚಂದನ, ಆತನಿಗೆ 5 ಲಕ್ಷ ಹಣವನ್ನೂ ಕೊಟ್ಟಿದ್ದಳು. ಆಕೆಯ ಎಲ್ಲಾ ನಂಬಿಕೆಗೂ ದ್ರೋಹ ಬಗೆದ ದಿನೇಶ, ಆಕೆಯನ್ನು ಸಾವಿನ ಮನೆಗೆ ದೂಡಿ ಪರಾರಿಯಾಗಿದ್ದಾನೆ. ಭವಿಷ್ಯದ ಕನಸುಗಳನ್ನು ಒಡೆದ ಮನಸು ಸಾವಿಗೆ ಶರಣಾಗಿದೆ.
ಆತ ಮಾಡಿದ ಮೋಸಕ್ಕೆ ಈಕೆಗೆ ಆತ್ಮಹತ್ಯೆ ಒಂದೇ ಪರಿಹಾರವಾಗಿರಲಿಲ್ಲ. ಇದ್ದು ಜಯಿಸಲು ಸಾಕಷ್ಟು ದಾರಿಗಳಿದ್ದವು. ಎಲ್ಲ ದಾರಿಯನ್ನು ಮರೆತ ಆ ನಟಿ ಹಿಡಿದ ದಾರಿ ಆತ್ಮಹತ್ಯೆ. ಶೀಲ, ಮಾನ ಎಂಬುದು ಹೆಣ್ಣಿಗಷ್ಟೇ ಸೀಮಿತವಲ್ಲ. ಯಾವುದಕ್ಕೂ ಹೆದರುವ-ಅಂಜಿಕೊಳ್ಳುವ ಅಗತ್ಯವಿಲ್ಲ, ಮೋಸದ ಪ್ರೀತಿಗೆ ನಿರಾಶೆಯಾಗುವುದೂ ಬೇಕಿಲ್ಲ ಎಂದು ಆಕೆಯ ಅರಿವಾಗಿದ್ದ ಆಕೆ ಇಂದು ಭವಿಷ್ಯದ ಹೊಸ ಕನಸುಗಳನ್ನು ಕಾಣಬಹುದಿತ್ತು.


