ಆಂಧ್ರ ಪ್ರದೇಶದ ಎನ್. ಚಂದ್ರಬಾಬು ನಾಯ್ಡು ಅವರು 931 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ. ತೆಲಂಗಾಣದ ಎ.ರೇವಂತ್ ರೆಡ್ಡಿ ಅವರು ಅತಿ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಮುಖ್ಯಮಂತ್ರಿ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್‌ಇಡಬ್ಲ್ಯು) ವರದಿಗಳು ಹೇಳಿವೆ.
ಸೋಮವಾರ (ಡಿ.30) ಬಿಡುಗಡೆಯಾದ ವರದಿಯಲ್ಲಿ ಭಾರತದ 31 ರಾಜ್ಯಗಳ ಹಾಲಿ ಮುಖ್ಯಮಂತ್ರಿಗಳು ಚುನಾವಣೆಗೆ ಸ್ಪರ್ಧಿಸುವ ವೇಳೆ ಅಫಿಡವಿಟ್‌ನಲ್ಲಿ ಸ್ವಯಂ ಘೋಷಿಸಿಕೊಂಡಿರುವ ಆಸ್ತಿ ವಿವರಗಳನ್ನು ವಿಶ್ಲೇಷಿಸಲಾಗಿದೆ. ಇದರಲ್ಲಿ ಮುಖ್ಯಮಂತ್ರಿಗಳ ಸಂಗಾತಿ ಮತ್ತು ಅವಲಂಬಿತರ ಹೆಸರಿನಲ್ಲಿ ಘೋಷಿಸಿರುವ ಆಸ್ತಿಗಳೂ ಸೇರಿವೆ.
ಚಂದ್ರಬಾಬು ನಾಯ್ಡು ಅವರು 931 ಕೋಟಿ ರೂ. ಘೋಷಿತ ಆಸ್ತಿಯ ಮೂಲಕ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಎನಿಸಿಕೊಂಡರೆ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರು ಕೇವಲ 15 ಲಕ್ಷ ರೂ. ಘೋಷಿತ ಆಸ್ತಿಯೊಂದಿಗೆ ಅತಿ ಕಡಿಮೆ ಆಸ್ತಿ ಹೊಂದಿರುವ ಸಿಎಂ ಆಗಿ ಗುರುತಿಸಿಕೊಂಡಿದ್ದಾರೆ.
ಚಂದ್ರಬಾಬು ನಾಯ್ಡು ಅವರು ಘೋಷಿಸಿಕೊಂಡಿರುವ 931 ಕೋಟಿ ರೂ. ಮೌಲ್ಯದ ಆಸ್ತಿಯಲ್ಲಿ 895 ಕೋಟಿ ರೂ. ಮೌಲ್ಯದ ಆಸ್ತಿ ನಾಯ್ಡು ಅವರ ಪತ್ನಿ, ಹೆರಿಟೇಜ್ ಫುಡ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿಯೂ ಆಗಿರುವ ನಾರಾ ಭುವನೇಶ್ವರಿ ಅವರ ಹೆಸರಿನಲ್ಲಿದೆ. ಹೆರಿಟೇಜ್ ಫುಡ್ಸ್ ಲಿಮಿಟೆಡ್‌ನಲ್ಲಿ ಭುವನೇಶ್ವರಿ ಅವರದ್ದು 764 ಕೋಟಿ ರೂ. ಮೌಲ್ಯದ ಷೇರುಗಳಿವೆ. ಇನ್ನುಳಿದಂತೆ ಸೆರಿಲಿಂಗಂಪಲ್ಲಿಯಲ್ಲಿ ಅವರು 55 ಕೋಟಿ ರೂ. ಮೌಲ್ಯದ ಕೃಷಿ ಭೂಮಿಯನ್ನು ಹೊಂದಿದ್ದಾರೆ.
ಅರುಣಾಚಲ ಪ್ರದೇಶದ ಸಿಎಂ ಹಾಗೂ ಬಿಜೆಪಿ ನಾಯಕ ಪೆಮಾ ಖಂಡು ಅವರು 332 ಕೋಟಿ ರೂ. ಮೌಲ್ಯದ ಘೋಷಿತ ಆಸ್ತಿಯೊಂದಿಗೆ ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಚಂದ್ರಬಾಬು ನಾಯ್ಡು ಮತ್ತು ಪೆಮಾ ಖಂಡು ಮಾತ್ರ ಈ ಪಟ್ಟಿಯಲ್ಲಿರುವ ಬಿಲಿಯನೇರ್ ಸಿಎಂಗಳಾಗಿದ್ದಾರೆ.
ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು 51 ಕೋಟಿ ರೂ. ಮೌಲ್ಯದ ಘೋಷಿತ ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ 30 ಕೋಟಿ ರೂ. ಮೌಲ್ಯದ ಆಸ್ತಿಯೊಂದಿಗೆ ಏಳನೇ ಶ್ರೀಮಂತರಾಗಿದ್ದಾರೆ. ಕೇವಲ 8 ಕೋಟಿ ರೂ. ಘೋಷಿತ ಆಸ್ತಿಯೊಂದಿಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ 14ನೇ ಸ್ಥಾನ ಪಡೆದಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಸುಮಾರು 1 ಕೋಟಿ ರೂ. ಮೌಲ್ಯದ ಘೋಷಿತ ಆಸ್ತಿಯೊಂದಿಗೆ ಪಟ್ಟಿಯಲ್ಲಿ ಕೆಳಗಡೆಯಿಂದ ಮೂರನೇ ಸ್ಥಾನದಲ್ಲಿದ್ದಾರೆ.
31 ಮುಖ್ಯಮಂತ್ರಿಗಳ ಒಟ್ಟು ಘೋಷಿತ ಆಸ್ತಿ ಮೌಲ್ಯ 1,630 ಕೋಟಿ ರೂ. ಇದ್ದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಸರಾಸರಿ ಆಸ್ತಿ ಮೌಲ್ಯ 52.59 ಕೋಟಿ ರೂ. ಇದೆ.
2023-2024ರಲ್ಲಿ ಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯ ಅಥವಾ ಎನ್‌ಎನ್‌ಐ ಸರಿ ಸುಮಾರು ರೂ 1,85,854 ಆಗಿದ್ದರೆ, ಮುಖ್ಯಮಂತ್ರಿಗಳ ಸರಾಸರಿ ಸ್ವಯಂ ಆದಾಯವು ರೂ. 13,64,310 ಆಗಿದೆ. ಇದು ಭಾರತದ ಸರಾಸರಿ ತಲಾ ಆದಾಯದ 7.3 ಪಟ್ಟು ಹೆಚ್ಚು ಎಂದು ವರದಿ ಹೇಳಿದೆ.
ಅರುಣಾಚಲ ಸಿಎಂ ಪೆಮಾ ಖಂಡು ಅವರು ಅತಿ ಹೆಚ್ಚು ಸಾಲ ಹೊಂದಿರುವ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಅವರ ಸಾಲದ ಮೊತ್ತ 180 ಕೋಟಿ ರೂ. ಇದೆ. ಖಂಡು ಬಳಿಕ 23 ಕೋಟಿ ರೂ. ಸಾಲದೊಂದಿಗೆ ಸಿದ್ದರಾಮಯ್ಯ ಎರಡನೇ ಸ್ಥಾನದಲ್ಲಿದ್ದು, ಚಂದ್ರಬಾಬು ನಾಯ್ಡು ಅವರು 10 ಕೋಟಿ ರೂ. ಸಾಲದಲ್ಲಿದ್ದಾರೆ.
ರೂ. 55 ಲಕ್ಷ ಮೌಲ್ಯದ ಘೋಷಿತ ಆಸ್ತಿ ಹೊಂದಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದ್ದಾರೆ.
ವರದಿಯ ಪ್ರಕಾರ, 31 ಮುಖ್ಯಮಂತ್ರಿಗಳ ಪೈಕಿ 13 ಮಂದಿ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ. ಈ ಪೈಕಿ 10 ಸಿಎಂಗಳು ಕೊಲೆಯತ್ನ, ಅಪಹರಣ, ಲಂಚ, ಕ್ರಿಮಿನಲ್ ಬೆದರಿಕೆ ಇತ್ಯಾದಿ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ.
ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ವಿರುದ್ಧ ಬರೋಬ್ಬರಿ 89 ಪ್ರಕರಣಗಳಿವೆ. ವರದಿಯ ಪ್ರಕಾರ, ಈ ಪೈಕಿ 72 ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ.
ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರು 11 ಗಂಭೀರ ಐಪಿಸಿ ಪ್ರಕರಣಗಳು ಸೇರಿದಂತೆ 47 ಪ್ರಕರಣಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಚಂದ್ರಬಾಬು ನಾಯ್ಡು ಅವರ ವಿರುದ್ಧ 19 ಕ್ರಿಮಿನಲ್ ಪ್ರಕರಣಗಳಿವೆ.
31 ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಮತ್ತು ದೆಹಲಿಯ ಅತಿಶಿ ಇವರಿಬ್ಬರು ಮಾತ್ರ ಮಹಿಳೆಯರು.
ವಯೋಮಾನದ ಆಧಾರದಲ್ಲಿ ಮಾಡಿದ ವಿಶ್ಲೇಷಣೆ ಪ್ರಕಾರ, 12 ಮುಖ್ಯಮಂತ್ರಿಗಳು 51-60 ವಯಸ್ಸಿನವರಿದ್ದಾರೆ. ಏಳು ಮಂದಿ 41 ರಿಂದ 50 ವರ್ಷದೊಳಗಿನವರು. ಆರು ಮಂದಿ 71-80ರ ವಯೋಮಾನದವರು ಮತ್ತು ಐವರು 61-70ರ ವಯೋಮಾನದವರು. ಒಬ್ಬರು ಮಾತ್ರ 31-40 ವಯೋಮಾನದವರಿದ್ದಾರೆ.
ಶಿಕ್ಷಣದ ಆಧಾರದಲ್ಲಿ ಮಾಡಿದ ವಿಶ್ಲೇಷಣೆ ಪ್ರಕಾರ, 10 ಮುಖ್ಯಮಂತ್ರಿಗಳು ಪದವೀಧರರು ಮತ್ತು ಒಂಬತ್ತು ಮಂದಿ ಸ್ನಾತಕೋತ್ತರ ಪದವೀಧರಿದ್ದಾರೆ. ಒಬ್ಬರು ಸಿಎಂ 10ನೇ ತರಗತಿ ಪಾಸಾಗಿದ್ದರೆ, ಮೂವರು 12ನೇ ತರಗತಿ ಪಾಸ್ ಆದವರಿದ್ದಾರೆ.
ಇದನ್ನೂ ಓದಿ : ಮಧ್ಯಪ್ರದೇಶ ಪೊಲೀಸ್ ಠಾಣೆಯಲ್ಲಿ ದಲಿತ ಯುವಕ ಸಾವು – ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್, ಪ್ರಿಯಾಂಕಾ ವಾಗ್ದಾಳಿ


