ಉತ್ತರ ಪ್ರದೇಶದ ಗೋರಖ್‌ಪುರದಿಂದ ಕಣಕ್ಕಿಳಿದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ರಾವಣ್ ಕಣಕ್ಕಿಳಿಯಲಿದ್ದಾರೆ.
ಚಂದ್ರಶೇಖರ್ ಆಜಾದ್ ಸ್ಪರ್ಧೆಯಿಂದಾಗಿ ಗೋರಕ್‌ಪುರ ವಿಧಾನಸಭಾ ಕ್ಷೇತ್ರ ಉತ್ತರ ಪ್ರದೇಶದ ಚುನಾವಣೆಯಲ್ಲಿ ಗಮನ ಸೆಳೆಯುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ. ದಲಿತ ನಾಯಕ ಚಂದ್ರಶೇಖರ್ ಅವರ ‘ಆಜಾದ್ ಸಮಾಜ್ ಪಾರ್ಟಿ’ ಈ ಕುರಿತು ಟ್ವೀಟ್ ಮಾಡಿದೆ.
ಉತ್ತರ ಪ್ರದೇಶದ ಅಯೋಧ್ಯೆ ವಿಧಾನಸಭಾ ಕ್ಷೇತ್ರದಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಸ್ಪರ್ಧಿಸುತ್ತಾರೆಂಬ ಸುದ್ದಿ ಹರಡಿತ್ತು. ಆದರೆ ಗೋರಖ್‌ಪುರದಿಂದ ಸ್ಪರ್ಧಿಸುವುದು ಅಂತಿಮವಾಯಿತು.
ಆದಿತ್ಯನಾಥ್ ಅವರು ಐದು ಬಾರಿ ಸಂಸದರಾಗಿ ಆಯ್ಕೆಯಾದ ಗೋರಖ್‌ಪುರದ ತವರು ನೆಲಕ್ಕೆ ಕಳುಹಿಸುವ ಮೂಲಕ ಕೇಂದ್ರದ ನಾಯಕರು ಯೋಗಿ ಆದಿತ್ಯನಾಥ್ ಓಟಕ್ಕೆ ಬ್ರೇಕ್ ಹಾಕಿದ್ದರು. ಒಂದು ವೇಳೆ ಯೋಗಿಯವರು ಆಯೋಧ್ಯೆಯಿಂದ ಸ್ಪರ್ಧಿಸಿದ್ದರೆ ಹಿಂದುತ್ವದ ಪ್ರಬಲ ನಾಯಕರಾಗಲು ಹೆಚ್ಚಿನ ಅನುಕೂಲವಾಗುತ್ತಿತ್ತು ಎಂದು ವಿಶ್ಲೇಷಣೆಗಳು ಬಂದಿವೆ.
ಆದಿತ್ಯನಾಥ್ ಅವರು ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ದಲಿತ ನಾಯಕರಾಗಿ ಬೆಳೆದಿರುವ ಭೀಮ್ ಆರ್ಮಿಯ ಆಜಾದ್ ಚಂದ್ರಶೇಖರ್ ಸ್ಪರ್ಧೆ ಗೋರಕ್‌ಪುರ ವಿಧಾನಸಭಾ ಕ್ಷೇತ್ರದತ್ತ ಎಲ್ಲರ ದೃಷ್ಟಿ ನಡೆಯುವುದಕ್ಕೆ ಕಾರಣವಾಗುವುದು ಸುಳ್ಳಲ್ಲ. ಚಂದ್ರಶೇಖರ್ ಆಜಾದ್ ಅವರೂ ಮೊದಲ ಭಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ: ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಕಾಂಗ್ರೆಸ್‌ನಿಂದ ಟಿಕೆಟ್
2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ ನಂತರ ಹಿಂದೆ ಸರಿದಿದ್ದರು. ಆ ಸಮಯದಲ್ಲಿ “ತನಗೆ ಯಾವುದೇ ಪಕ್ಷವಿಲ್ಲದ ಕಾರಣ ಮಾಯಾವತಿ ಅವರ ಪಕ್ಷ ಮತ್ತು ಕಾಂಗ್ರೆಸ್‌ಗೆ ಬೆಂಬಲ ನೀಡುವುದು ಉತ್ತಮ” ಎಂದು ಅವರು ಹೇಳಿಕೆ ನೀಡಿದ್ದರು.
ಉತ್ತರ ಪ್ರದೇಶ ಚುನಾವಣೆಯಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಆಜಾದ್ ಸಮಾಜ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಬಗ್ಗೆ ಚಂದ್ರಶೇಖರ್ ಆಜಾದ್ ಸೂಚನೆ ನೀಡಿದ್ದರು.
“ಯುಪಿ ವಿಧಾನಸಭೆಯಲ್ಲಿ ಸ್ಥಾನ ಗೆಲ್ಲುವುದು ನನಗೆ ಮುಖ್ಯವಲ್ಲ. ಯೋಗಿ ಆದಿತ್ಯನಾಥ್ ಅವರು ವಿಧಾನಸಭೆಗೆ ಬರಬಾರದು ಎಂಬುದು ನನಗೆ ಮುಖ್ಯವಾಗಿದೆ. ಹಾಗಾಗಿ ಅವರು ಎಲ್ಲಿ ಸ್ಪರ್ಧಿಸಿದರೂ ನಾನು ಸ್ಪರ್ಧಿಸುತ್ತೇನೆ” ಎಂದು ಅವರು ಕಳೆದ ವರ್ಷ ಹೇಳಿದ್ದರು.
ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಚಂದ್ರಶೇಖರ್ ಆಜಾದ್, “ನಾವು ಯುಪಿಯಲ್ಲಿ ಇತರ ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗುತ್ತೇವೆ. ನಾನು ಶಾಸಕ ಮತ್ತು ಮಂತ್ರಿಯಾಗುವ ಪ್ರಸ್ತಾಪವನ್ನು ತಿರಸ್ಕರಿಸಿದ್ದೇನೆ” ಎಂದು ಹೇಳಿದ್ದರು.
ಚಂದ್ರಶೇಖರ್ ಅವರ ಪಕ್ಷಕ್ಕೆ ಗೋರಕ್‌ಪುರ ಅಥವಾ ಪೂರ್ವ ಉತ್ತರ ಪ್ರದೇಶದಲ್ಲಿ ಯಾವುದೇ ನೆಲೆ ಇಲ್ಲ. ಗೋರಖ್‌ಪುರ್ ಸದರ್ ಅಸೆಂಬ್ಲಿ ಸ್ಥಾನವು 1989ರಿಂದ ನಿರಂತರವಾಗಿ ಬಿಜೆಪಿ ಹಿಡಿತದಲ್ಲಿದೆ. ಒಮ್ಮೆ ಅಖಿಲ ಭಾರತೀಯ ಹಿಂದೂ ಮಹಾಸಭಾ ಮಾತ್ರ ಗೆದ್ದಿತ್ತು. 2017ರಲ್ಲಿ, ಬಿಜೆಪಿಯ ರಾಧಾ ಮೋಹನ್ ದಾಸ್ ಅಗರ್ವಾಲ್ 60,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು.
ಸಮಾಜವಾದಿ ಪಕ್ಷವು ನಮಗೆ 100 ಸೀಟು ನೀಡಿದರೂ ನಾನು ಅವರೊಂದಿಗೆ ಹೋಗುವುದಿಲ್ಲ. ಚುನಾವಣೆಯ ನಂತರ ಬಿಜೆಪಿಯನ್ನು ತಡೆಯಲು ನಾವು ಇತರ ಪಕ್ಷಗಳಿಗೆ ಸಹಾಯ ಮಾಡುತ್ತೇವೆ ಎಂದಿದ್ದರು. “ನಾನು ಮಾಯಾವತಿ ಜತೆ ಕೂಡಾ ಮೈತ್ರಿಗೆ ಯತ್ನಿಸಿದ್ದೆ, ಆದರೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ” ಎಂದು ಆಜಾದ್ ತಿಳಿಸಿದ್ದರು.
“ನಾನು ವೈಯಕ್ತಿಕ ಸಂತೋಷದ ಬಗ್ಗೆ ಎಂದಿಗೂ ತಲೆಕೆಡಿಸಿಕೊಂಡಿಲ್ಲ. ಕಳೆದ ಐದು ವರ್ಷಗಳಲ್ಲಿ ನಾನು ಬಹಳಷ್ಟು ಕಳೆದುಕೊಂಡಿದ್ದೇನೆ. ಹತ್ರಾಸ್, ಪ್ರಯಾಗ್ರಾಜ್ ಮತ್ತು ಉನ್ನಾವೋದಂತಹ ಪ್ರತಿಭಟನೆಯ ಘಟನೆಗಳಿಗಾಗಿ ನಾನು ಜೈಲಿಗೆ ಹೋಗಿದ್ದೆ” ಎಂದು ಹೇಳಿಕೆ ನೀಡಿದ್ದರು.
‘‘ಪ್ರತಿಪಕ್ಷಗಳ ವಿಭಜನೆಯಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ನಷ್ಟ” ಎಂದು ಹೇಳಿರುವ ಚಂದ್ರಶೇಖರ್ ಆಜಾದ್, ಭೀಮ್ ಆರ್ಮಿಯ ಕಾರ್ಯಕರ್ತರು ನಮ್ಮ ಶಕ್ತಿ ಎಂದು ತಿಳಿಸಿದ್ದರು.
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷವಾದ ಆಜಾದ್ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ)ದ ನಡುವೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಜನವರಿ 15 ರಂದು ತಳ್ಳಿಹಾಕಿದ್ದರು.
ಇದನ್ನೂ ಓದಿರಿ: ಭೂ ಹಗರಣ, ಬ್ರಾಹ್ಮಣರ ಮತಗಳು ಕೈ ತಪ್ಪುವ ಭಯ: ಅಯೋಧ್ಯೆಯ ಟಿಕೆಟ್ ಯೋಗಿ ಕಳೆದುಕೊಳ್ಳಲು ಕಾರಣವೇ?


