Homeಚಳವಳಿನಾವು ಕೇವಲ ವೀಕ್ಷಕರಲ್ಲ. ಚಳವಳಿಯನ್ನು ಮುನ್ನಡೆಸುವ ನಾಯಕರುಗಳಾಗಲು ಬಯಸುತ್ತೇವೆ: ಚಂದ್ರಶೇಖರ್ ರಾವಣ್ ಸಂದರ್ಶನ

ನಾವು ಕೇವಲ ವೀಕ್ಷಕರಲ್ಲ. ಚಳವಳಿಯನ್ನು ಮುನ್ನಡೆಸುವ ನಾಯಕರುಗಳಾಗಲು ಬಯಸುತ್ತೇವೆ: ಚಂದ್ರಶೇಖರ್ ರಾವಣ್ ಸಂದರ್ಶನ

- Advertisement -
- Advertisement -

ಉತ್ತರ ಪ್ರದೇಶದ ಸಹ್ರನ್‍ಪುರದಲ್ಲಿ ‘ಭೀಮ್ ಆರ್ಮಿ’ ಎನ್ನುವ ಸಂಘಟನೆ ಕಟ್ಟಿ ಯುವಜನರಲ್ಲಿ ದೊಡ್ಡ ಸಂಚಲನ ಮೂಡಿಸಿದವರು ಚಂದ್ರಶೇಖರ್ ಆಝಾದ್ ರಾವಣ್. ಮೇಲ್ಜಾತಿ ಠಾಕೂರ್‍ಗಳ ಜಾತಿ ದಬ್ಬಾಳಿಕೆಗಳನ್ನು ಮಿಲಿಟೆಂಟ್ ಹೋರಾಟದ ಮೂಳಕ ಎದುರಿಸಲು ಮುನ್ನುಗ್ಗಿ ಲಕ್ಷಾಂತರ ಯುವಜನರಿಗೆ ಸ್ವಾಭಿಮಾನ ತುಂಬಿದ ಅವರು ತಮ್ಮ ಹೋರಾಟಗಳಿಗಾಗಿ ಒಂದೂವರೆ ವರ್ಷ ಜೈಲುವಾಸ ಸಹ ಅನುಭವಿಸಬೇಕಾಯಿತು. ಭೀಮ್ ಪಾಠಶಾಲಾಗಳನ್ನು ಆರಂಭಿಸಿ ಅಲ್ಲಿನ ದಲಿತ ಮಕ್ಕಳಿಗೆ ಶಿಕ್ಷಣ ನೀಡಲು ಶ್ರಮಿಸುತ್ತಿರುವ ಭೀಮ್ ಆರ್ಮಿಯ ಮುಖ್ಯಸ್ಥ ರಾವಣ್ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಹಮ್ಮಿಕೊಂಡಿದ್ದ ನಡುರಾತ್ರಿ ಸ್ವಾತಂತ್ರ್ಯೋತ್ಸವ ಹೋರಾಟದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದರು. ಆಗ ನಾನುಗೌರಿ.ಕಾಂ ವತಿಯಿಂದ ನಡೆಸಿದ ಸಂದರ್ಶನ ಇಲ್ಲಿದೆ.

ಸಂದರ್ಶನ: ಸ್ವಾತಿ ಶುಕ್ಲಾ, ಸರೋವರ್ ಬೆಂಕಿಕೆರೆ

ಪತ್ರಿಕೆ: ಮೊದಲ ಬಾರಿ ನೀವು ದಕ್ಷಿಣ ಭಾರತಕ್ಕೆ ಬಂದಿದ್ದೀರಿ, ಹೇಗೆ ಅನಿಸುತ್ತಿದೆ?
ಚಂದ್ರಶೇಖರ್ ರಾವಣ್: ಜೈ ಭೀಮ್. ನಾನು ಇಲ್ಲಿ ಭೂಮಿ ವಸತಿಗಾಗಿನ ಹೋರಾಟದಲ್ಲಿ ಭಾಗಿ ಆಗಲು ಬಂದಿದ್ದೇನೆ. ಉತ್ತರ ಭಾರತೀಯರು ದಕ್ಷಿಣ ಭಾರತವನ್ನು ಹೊರಗಿಟ್ಟು ಭಾರತವನ್ನು ನೋಡುವ ಕಲ್ಪನೆಯೇ ತಪ್ಪು. ಮೊದಲ ಬಾರಿಗೆ ಇಲ್ಲಿನ ಜನರನ್ನು ನೋಡುತ್ತಿರುವ ನನಗೆ ರೋಮಾಂಚನವಾಗುತ್ತಿದೆ. ಇಲ್ಲಿಗೆ ಬಂದು ನಾನು ಕೆಲಸ ಮಾಡಬೇಕಾಗುತ್ತದೆ ಎಂದು ನಾನು ಎಂದೂ ಎಣಿಸಿರಲಿಲ್ಲ. ಇಲ್ಲಿ ನನಗೆ ಭಾಷೆಯದ್ದು ದೊಡ್ಡ ಸಮಸ್ಯೆಯಾಗಿದೆ. ನಾನು ಇಲ್ಲಿನ ಮೂಲ ಭಾಷೆಯನ್ನು ಕಲಿಯುತ್ತೇನೆ ಮತ್ತು ಇಲ್ಲಿ ಕೆಲಸ ಮಾಡುತ್ತೇನೆ. ಇಲ್ಲಿನ ಜನರು ನೋವಿನಲ್ಲಿಯೂ ನಗುವುದನ್ನು ನೋಡಿ ಕರ್ನಾಟಕದಿಂದ ನಾನು ಸಾಕಷ್ಟು ಕಲಿತಿದ್ದೇನೆ.

ಪತ್ರಿಕೆ: ಭೂಮಿ, ವಸತಿಗಾಗಿ ನಡೆದ ಹೋರಾಟದಲ್ಲಿ ನೀವು “ದೇಶದಲ್ಲಿ ಇನ್ನೂ ಎಲ್ಲರಿಗೂ ಸ್ವಾತಂತ್ರ್ಯ ಸಿಕ್ಕಿಲ್ಲ” ಎಂದು ಹೇಳಿದಿರಿ. ಕಾರಣವೇನು?

ರಾವಣ್: ನಾನು ಬಲವಾಗಿ ನಂಬುವ ಇಬ್ಬರು ವ್ಯಕ್ತಿಗಳೆಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಕಾನ್ಶೀರಾಮ್‍ಜಿ. ಇವರ ಮಾತುಗಳಲ್ಲೇ ಹೇಳಬೇಕೇಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು “ಸಾಮಾಜಿಕ ಸಮಾನತೆಯಿಲ್ಲದ, ಆರ್ಥಿಕ ಸಮಾನತೆ ಇಲ್ಲದ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ” ಎಂದು ಹೇಳುತ್ತಾರೆ. ಕಾನ್ಶೀರಾಮ್‍ಜಿ ಅವರು “ದೇಶದ ಅಂತಿಮ ವ್ಯಕ್ತಿಯ ಅವಶ್ಯಕತೆಯನ್ನು ಪೂರ್ಣ ಮಾಡುವ ನಿಟ್ಟಿನಲ್ಲಿ ಸರ್ಕಾರಗಳು ಕೆಲಸ ಮಾಡಬೇಕು” ಅಂತ ಹೇಳಿದ್ದರು. ಜನರಿಗೆ ಭೂಮಿ, ವಸತಿ, ಉದ್ಯೋಗ ಯಾವುದರ ಅವಶ್ಯಕತೆಯಿದೆಯೋ ಅದನ್ನು ಖಾತ್ರಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು.

ಆದರೆ ನಿನ್ನೆ ನಡೆದ ಭೂಮಿ ವಸತಿ ಹೋರಾಟದಲ್ಲಿ ನಾನು ನೋಡಿದಾಗೆ, ಬಂದಿದ್ದ ಸಾವಿರಾರು ಜನರ ಕಣ್ಣುಗಳಲ್ಲಿ ನೋವು ತುಂಬಿತ್ತು. ಜೊತೆಗೆ ಹೋರಾಟವನ್ನು ಗೆಲ್ಲುತ್ತೇವೆ ಎನ್ನುವು ವಿಶ್ವಾಸವೂ ಇತ್ತು. ಆ ನನ್ನ ಜನರು ಪ್ರಜಾತಾಂತ್ರಿಕ ದೇಶವೊಂದರಲ್ಲಿ ವಾಸ ಮಾಡಲು ಭೂಮಿ ಕೊಡಿ, ಜೀವನ ಮಾಡಲು ತುಂಡು ಮನೆಯನ್ನಾದರೂ ಕೊಡಿ ಎಂದು ಕೇಳುತ್ತಿದ್ದರೆ ಮತ್ತೊಂದು ಕಡೆ ಲಕ್ಷಾಧೀಶ್ವರರೂ ಕೋಟ್ಯಾಧಿಪತಿಗಳಾಗುತ್ತಿದ್ದಾರೆ ಮತ್ತು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಆದರೆ ಇದೇ ದೇಶದಲ್ಲಿ ಲಕ್ಷಾಂತರ ಜನ ನಮಗೆ ಇರಲಿಕ್ಕೆ ಸಣ್ಣ ಮನೆ ಕೊಡಿ ಎಂದು ಕೇಳುತ್ತಿದ್ದಾರೆ ಅಂದರೆ ಇದನ್ನು ಸ್ವಾತಂತ್ರ್ಯ ಎಂದು ಹೇಗೆ ಹೇಳುತ್ತೀರ?

ನಾನು ಬೆಂಗಳೂರಿಗೆ ಬಂದಾಗ ಪೊಲೀಸರು ನನ್ನ ಬಳಿ ಬಂದು ನೀವು ಏನಾದರು ಮಾತನಾಡಿ, ಆದರೆ ಭಾಷಣದಲ್ಲಿ ದೇವನಹಳ್ಳಿಯಲ್ಲಿ ನಡೆದಿರುವ ದಲಿತ ದೌರ್ಜನ್ಯ ಪ್ರಕರಣದ ಬಗ್ಗೆ ಮಾತ್ರ ಮಾತನಾಡಬೇಡಿ ಎಂದು ಹೇಳುತ್ತಾರೆ. ನನ್ನ ಮಾತನಾಡುವ ಹಕ್ಕನ್ನು ಕಿತ್ತುಕೊಳ್ಳಲು ಪೊಲೀಸರು, ಸರ್ಕಾರಗಳು ಪ್ರಯತ್ನಿಸುತ್ತಿರುವಾಗ ನಾನು ಸ್ವಾತಂತ್ರ್ಯ ಎಲ್ಲರಿಗೂ ಸಿಕ್ಕಿಲ್ಲ ಎಂದೇ ಹೇಳಬೇಕಾಗುತ್ತದೆ. ನಮ್ಮ ಸಂವಿಧಾನದ 14 ರಿಂದ 20ರ ರವರೆಗಿನ ವಿಧಿಗಳು ಮೂಲಭೂತ ಹಕ್ಕುಗಳನ್ನು ಖಾತ್ರಿ ಮಾಡುತ್ತವೆ. ಆದರೆ ದೇಶದ ಇವತ್ತಿನ ಸ್ಥಿತಿ ನೋಡಿ ಜಾತೀಯತೆ ಇನ್ನೂ ಜೀವಂತವಾಗಿದೆ, ಅಸ್ಪøಶ್ಯತೆ ನಡೆಯುತ್ತಿದೆ. ದೇವಸ್ಥಾನ ಪ್ರವೇಶ ಮಾಡಿದರೆಂದು, ಮಕ್ಕಳನ್ನು ಕದ್ದರೆಂದು, ಗೋವಿನ ಹೆಸರಲ್ಲಿ ಗುಂಪು ಥಳಿತಗಳು ಆಗುತ್ತಲೇ ಇದೆ. ಇದರಿಂದ ಸಾಮಾನ್ಯ ಜನರಿಗೆ ನ್ಯಾಯದ ಮೇಲೆ ನಂಬಿಕೆ ಕಡಿಮೆ ಆಗುತ್ತಿದೆ. ಹೀಗಾಗಿ ನಾನು ದೇಶದಲ್ಲಿ ಇನ್ನೂ ಹಲವರಿಗೆ ಸ್ವಾತಂತ್ರ ಸಿಕ್ಕಿಲ್ಲ ಎಂದು ಹೇಳುತ್ತೇನೆ.

ಪತ್ರಿಕೆ: ಭೂಮಿ ಮತ್ತು ವಸತಿ ವಿಚಾರ ದೇಶಾದ್ಯಂತ ಇರುವ ಸಮಸ್ಯೆ ಆಗಿದೆ. ಇದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ನೀವು ಬಯಸುತ್ತೀರಿ?
ರಾವಣ್: ಭೂಮಿ ಮತ್ತು ವಸತಿ ಸಮಸ್ಯೆ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಇರುವ ಸಮಸ್ಯೆಯಾಗಿದೆ. ಸರ್ಕಾರಗಳು ಅಂಚಿಗೊತ್ತಲ್ಪಟ್ಟ ಜನರ ಹಿತಾಸಕ್ತಿಯನ್ನು ಬಯಸದೇ ನಮ್ಮ ಜಮೀನುಗಳನ್ನು ದೊಡ್ಡ ದೊಡ್ಡ ಬಂಡವಾಳಶಾಹಿಗಳಿಗೆ ನೀಡುತ್ತಿವೆ ಮತ್ತು ಅವರ ಬೆನ್ನಿಗೆ ನಿಂತುಬಿಟ್ಟಿವೆ. ಉತ್ತರಪ್ರದೇಶದ ಉದಾಹರಣೆ ಹೇಳಬೇಕೆಂದರೆ ಕಾಡಿನಲ್ಲಿ ವಾಸವಿದ್ದ ಜನರನ್ನು ಒಕ್ಕಲೆಬ್ಬಿಸಲು ಸರ್ಕಾರ ಮುಂದಾಗಿತ್ತು. ಆದರೆ ಆ ಜನರು ಅಲ್ಲಿ ವಾಸ ಮಾಡಲು ಕಾನೂನಿನ ಪ್ರಕಾರ ಅರ್ಹರಾಗಿದ್ದರು. ಆದರೆ ಸರ್ಕಾರದ್ದೇ ಗೂಂಡಾ ವ್ಯಕ್ತಿಗಳು ಜನರ ಮೇಲೆ ಅಲ್ಲಿ ಹಲ್ಲೆ ಮಾಡಿದ್ದೂ ಅಲ್ಲದೆ 10 ಜನರನ್ನು ಕೊಂದುಬಿಟ್ಟರು. ಕೋರ್ಟ್ ಸಹ ಸರ್ಕಾರದ ಪರವೇ ತೀರ್ಪು ನೀಡಿತು.

ಇದೇ ರೀತಿಯಾಗಿ ದೆಹಲಿಯ ತೊಘಲಖ್‍ಬಾದ್‍ನ 600 ವರ್ಷಗಳ ಹಿಂದಿನ ರಾಜ ಸಿಖಂದರ್ ಲೋಧಿ ಅವರು ದಲಿತ ಸಮುದಾಯಕ್ಕೆ ಸೇರಿದ ಭಕ್ತಿ ಚಳವಳಿಯಲ್ಲಿ ಹೆಸರು ಮಾಡಿರುವ ಗುರು ರವಿದಾಸ್ ಅವರಿಗೆ ಭೂಮಿಯನ್ನು ನೀಡಿದ್ದರು. ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದರಿಂದ ಅದು ದಲಿತರ ಭೂಮಿ ಆಗಿತ್ತು. ಆದರೆ 2011 ರಲ್ಲಿ ಡಿಡಿಎ ಅವರು ಕೋರ್ಟ್‍ನಲ್ಲಿ ದಾವೆ ಹೂಡಿ ಕೇಸ್ ಗೆದ್ದು 2019 ರ ಆಗಸ್ಟ್ 10 ರಂದು ಆ ಜಾಗವನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಿದರು. ದಲಿತರ ಭೂಮಿಯನ್ನು ಸರ್ಕಾರದ ಭೂಮಿ ಎಂದು ದಲಿತರ ಮೇಲೆ ದಮನವನ್ನು ಮಾಡಲಾಯಿತು. ದೇಶದ ಕೊನೆ ವ್ಯಕ್ತಿಯ ಘನತೆಯ ಜೀವನದ ಜವಾಬ್ದಾರಿಯು ಪ್ರಧಾನ ಮಂತ್ರಿಗಳ ಮೇಲೆ ಇರುತ್ತದೆ ಹಾಗೆಯೇ ಸ್ಥಳೀಯವಾಗಿ ಮುಖ್ಯಮಂತ್ರಿಗಳ ಮೇಲೆ ಇರುತ್ತದೆ. ಹಾಗೆ ಮಾಡುವ ರೀತಿಯ ಹೋರಾಟದಿಂದ ಮಾತ್ರ ಜನರಿಗೆ ಭೂಮಿ ಸಿಗಲು ಸಾಧ್ಯ.

ಪತ್ರಿಕೆ: ದಲಿತರ ವಿಚಾರದಲ್ಲಿ ಸರ್ಕಾರಗಳು/ಪಕ್ಷಗಳು ಕೊಡುವ ಭರವಸೆಗಳು, ಅಧಿಕಾರಕ್ಕೆ ಬಂದ ನಂತರ ಈಡೇರಿಸುವುದಿಲ್ಲ ಎಂದು ನೋಡುತ್ತಿದ್ದೇವೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ?
ರಾವಣ್: ದಲಿತ, ಅಲ್ಪಸಂಖ್ಯಾತ, ಆದಿವಾಸಿ ಮತ್ತು ಮಹಿಳೆಯರ ಕುರಿತು ಸರ್ಕಾರಗಳು ಹೇಳುವುದೊಂದು ಮಾಡುವುದೊಂದು ಆಗಿದೆ. ಈ ಸರ್ಕಾರಗಳು ತಾವು ಅಧಿಕಾರದಲ್ಲಿ ಇದ್ದಾಗ ಶೋಷಿತರ ಮೇಲೆ ದಮನ ನಡೆಯಲು ತಾವೂ ಭಾಗಿಯಾಗುತ್ತಾರೆ ಆದರೆ ವಿರೋಧ ಪಕ್ಷಕ್ಕೆ ಬರುತ್ತಿದ್ದಂತೆಯೇ ಜನರ ಮೇಲೆ ಶೋಷಣೆ ನಡೆಯುತ್ತಿದೆ ಎಂದು ಬೊಬ್ಬಿಡುತ್ತಾರೆ. ಕಾಡಿನಲ್ಲಿ ವಾಸಿಸುವ ಆದಿವಾಸಿಗಳಿಗೆ ಅಲ್ಲಿನ ಭೂಮಿಯ ಮೇಲೆ ಹಕ್ಕಿದೆ ಎಂದು ಅನುಚ್ಛೇದ 5 ಹೇಳುತ್ತದೆ ಆದರೆ ಸರ್ಕಾರ ಕಾಡಿನಿಂದ ಜನರನ್ನು ಓಡಿಸಲು ತೀರ್ಮಾನ ಮಾಡುತ್ತದೆ. ಜೊತೆಗೆ ಸ್ವತಃ ಸುಪ್ರೀಮ್ ಕೋರ್ಟ್ ಆದಿವಾಸಿ ಜನರನ್ನು ಒಕ್ಕಲೆಬ್ಬಿಸಲು ತೀರ್ಪನ್ನು ನೀಡುತ್ತದೆ. ಜನಸಾಮಾನ್ಯರಿಗೆ ಸರ್ಕಾರಗಳಿಂದ ನ್ಯಾಯ ಸಿಗದೇ ಇದ್ದಾಗ ಕೋರ್ಟ್‍ಗೆ ಹೋಗಲು ಬಯಸುತ್ತಾರೆ. ಆದರೆ ಕೋರ್ಟ್‍ಗಳೇ ಆಳುವ ಸರ್ಕಾರದ ಪರ ತೀರ್ಪು ನೀಡಿದರೆ ಜನರಿಗೆ ಕೋರ್ಟಿನ ಮೇಲೂ ನಂಬಿಕೆ ಹೋಗಿಬಿಡುತ್ತದೆ.

ಪತ್ರಿಕೆ: ಬಲಪಂಥೀಯ ಶಕ್ತಿ ಈಗ ಅಧಿಕಾರದಲ್ಲಿದೆ. ಇಂತಹ ಸಂದರ್ಭದಲ್ಲಿ ದಲಿತ ಹಾಗೂ ಅಲ್ಪಸಂಖ್ಯಾತ ಚಳವಳಿಗಳು ಒಟ್ಟಿಗೆ ಸೇರಿ ಹೋರಾಟ ರೂಪಿಸಬೇಕೆ?
ರಾವಣ್: ಧರ್ಮದ ಹೆಸರಿನಲ್ಲಿ, ಜಾನುವಾರುಗಳ ಹೆಸರಿನಲ್ಲಿ, ಪುರಾತನ ಪರಂಪರೆಯ ಹೆಸರಿನಲ್ಲಿ ಒಂದು ಗುಂಪು ಬಂದು ಜನರನ್ನು ಕೊಲೆ ಮಾಡುವ ಮಟ್ಟಕ್ಕೆ ಇಂದು ಅವರ ಶಕ್ತಿ ಬೆಳೆದಿದೆ. ಇದೀಗ ಸಂವಿಧಾನ ಅಪಾಯದಲ್ಲಿರುವ ಈ ಕಾಲಘಟ್ಟದಲ್ಲಿ ದಲಿತ, ಅಲ್ಪಸಂಖ್ಯಾತ, ಮಹಿಳಾ ಶಕ್ತಿಗಳು ಒಂದಾಗಿ ಹೋರಾಟ ರೂಪಿಸಬೇಕಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು “ಒಂದು ದೇಶದ ಪ್ರಗತಿಯನ್ನು ಆ ದೇಶದ ಹೆಣ್ಣುಮಕ್ಕಳ ಅಭಿವೃದ್ಧಿಯ ಸ್ಥಾನಮಾನದ ಮೇಲೆ ನಿರ್ಧರಿಸುತ್ತೇನೆ” ಎಂದು ಹೇಳುತ್ತಾರೆ ಆದರೆ ಈ ಸಂದರ್ಭದಲ್ಲಿ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯವೂ ಕಡಿಮೆಯಿದೆ ಹಾಗಾಗಿ ಮಹಿಳಾ ಚಳವಳಿಯೂ ಜೊತೆಯಾಗಬೇಕು. ಈ ಎಲ್ಲಾ ಸಮುದಾಯಗಳು, ಸಂವಿಧಾನವು ಅಪಾಯದಲ್ಲಿರುವ ಈ ಸಮಯದಲ್ಲಿ ಎಲ್ಲರೂ ಸಂವಿಧಾನದ ಪರವಾಗಿ ಬಂದು ನಿಲ್ಲಬೇಕೆಂದು ನಾನು ಭಾವಿಸುತ್ತೇನೆ. ಪಾರ್ಲಿಮೆಂಟ್‍ನಲ್ಲಿ ನಮ್ಮ ಜನಸಂಖ್ಯೆ ಕಡಿಮೆ ಇದ್ದಾಗ ಬೀದಿಯಲ್ಲಿ ನಮ್ಮ ಶಕ್ತಿ ದೊಡ್ಡದಾಗಿರಬೇಕಾಗಿರುವುದು ಬಹಳ ಮುಖ್ಯವಾಗುತ್ತದೆ. ಬೀದಿ ಹೋರಾಟಗಳ ಮೂಲಕ ನಾವು ನಿಜವಾದ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು.

ಪತ್ರಿಕೆ: ಉತ್ತರ ಭಾರತ ಮತ್ತು ದಕ್ಷಿಣ ಭಾರತಕ್ಕೆ ಬಹಳಷ್ಟು ಅಂತರವಿದೆ. ಹೀಗಿರುವಾಗ ಇಡೀ ಭಾರತಕ್ಕೆ ಒಂದೇ ರೀತಿಯ ಚಳವಳಿಗಳು ಅನ್ವಯ ಆಗುತ್ತದೆಯೆ?
ರಾವಣ್: ನಾನು ಆಗಲೇ ಹೇಳಿದ ಹಾಗೆ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಒಂದೇ ರೀತಿಯ ಸಮಸ್ಯೆಗಳಿವೆ. ಜೀವನ ನಡೆಸಲು ಎಲ್ಲರಿಗೂ ಭೂಮಿ ಬೇಕಿದೆ. ಆದರೆ ಇದು ಶೋಷಿತರಿಗೆ ಸಿಗದೇ ಕೇವಲ ದೊಡ್ಡ ಬಂಡವಾಳಶಾಹಿಗಳಿಗೇ ಸಿಗುತ್ತಿದೆ. ನೋಡಿ ದೇಶದಲ್ಲಿರುವ ಶೇ.54% ದಲಿತರ ಬಳಿ 1 ಎಕರೆಯಷ್ಟ್ಟು ಭೂಮಿ ಇಲ.್ಲ ಈಗ ನಿಮಗೆ ತಿಳಿಯುತ್ತದೆ ಭೂಮಿ ಯಾರ ಬಳಿ ಇದೆ ಎಂದು. ಹಾಗಾದರೆ ಭೂಮಿ ಇಲ್ಲವೇ ಇಲ್ಲ ಅಂತಲ್ಲ. ದೇಶದಲ್ಲಿ ಭೂಮಿ ಸಾಕಷ್ಟಿದೆ ಆದರೆ ಕೆಲವೇ ವ್ಯಕ್ತಿಗಳ ಕೈಯಲ್ಲಿದೆ. ಭೂಮಿ ರಾಷ್ಟ್ರೀಕರಣವಾಗಬೇಕಿದೆ. ಅದಕ್ಕಾಗಿ ಪ್ರಾಮಾಣಿಕವಾಗಿ, ಉತ್ತಮವಾಗಿ ಕೆಲಸ ಮಾಡುವವರ ಜೊತೆ ಶೋಷಿತರೆಲ್ಲಾ ಒಂದೇ ವೇದಿಕೆಯಡಿ ಬಂದು ಚಳವಳಿಯನ್ನು ರೂಪಿಸಬೇಕು ಸಂವಿಧಾನದ ಪರ ನಿಲ್ಲಬೇಕು.

ಪತ್ರಿಕೆ: ದೇಶದಲ್ಲಿ ಈಗ ಜಿಗ್ನೇಶ್ ಮೇವಾನಿ, ಕನ್ಹಯ್ಯ ಕುಮಾರ್, ಶೆಹ್ಲ ರಶೀದ್ ಹಾಗೂ ನೀವೂ ಸೇರಿದಂತೆ ಹಲವಾರು ಯುವ ನಾಯಕರು ರಾಜಕೀಯದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಎಲ್ಲರೂ ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನೇ ಮಾತನಾಡುತ್ತಿದ್ದಾರೆ ಈ ಕುರಿತು ಏನು ಹೇಳಲು ಬಯಸುತ್ತೀರಿ?
ರಾವಣ್: ಹಲವರು ಈಗೀಗ ಬಾಬಾಸಾಹೇಬ್ ಅವರ ಹೆಸರನ್ನು ಹೆಚ್ಚು ಹೇಳುತ್ತಿರುತ್ತಾರೆ. ನನ್ನ ಪ್ರಕಾರ ಅತಿ ಹೆಚ್ಚು ಬಳಸುತ್ತಿರುವುದು ಆರ್‍ಎಸ್‍ಎಸ್‍ನವರೇ ಅಗಿದ್ದಾರೆ. ಇವರು ಬಾಬಾಸಾಹೇಬ್ ಅಂಬೇಡ್ಕರ್‍ರವರ ವಿಚಾರಗಳ ವಿರುದ್ಧ ಇರುವವರು ಎಂದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಹಾಗಾಗಿ ನಾನು ಬಾಬಾಸಾಹೇಬರ ಹೆಸರು ಹೇಳುವವರನ್ನು ನಂಬುವುದಿಲ್ಲ ಬದಲಾಗಿ ಅವರ ವಿಚಾರಗಳಿಗಾಗಿ ಫೀಲ್ಡ್ ನಲ್ಲಿ ಕೆಲಸ ಮಾಡುವವರನ್ನು ನಂಬುತ್ತೇನೆ ಮತ್ತು ಬಾಬಾಸಾಹೇಬರ ಸಿದ್ಧಾಂತದ ಜೊತೆ ಕೆಲಸ ಮಾಡುವವರ ಜೊತೆ ನಾನೂ ಕೆಲಸ ಮಾಡಲು ಇಚ್ಛಿಸುತ್ತೇನೆ.

ಆದರೆ ಹಲವರಿಗೆ ಸಿದ್ಧಾಂತ ಅಂದರೆ ಏನು ಎಂದೇ ತಿಳಿದಿರುವುದಿಲ್ಲ ಅವರಿಗೆ ಕೇವಲ ಕುರ್ಚಿ ಬೇಕಾಗಿರುತ್ತದೆ. ಒಮ್ಮೆ ಈ ಪಕ್ಷದಲ್ಲಿದ್ದರೆ ಮತ್ತೊಮ್ಮೆ ಇನ್ನೊಂದು ಪಕ್ಷದಲ್ಲಿರುತ್ತಾರೆ. ಅಂತವರನ್ನು ನಾವು ದೂರ ಇಡಬೇಕಾಗಿದೆ. ನಾವು ಹಳೆಯ ರಾಜನೀತಿಗಳನ್ನು ತಗೆದುಹಾಗಿ ಹೊಸ ರಾಜಕೀಯವನ್ನು ತರಲು ಬಯಸುತ್ತೇವೆ. ಯುವಜನರಲ್ಲಿ ಅಂತಹ ಉತ್ಸಾಹ ಇದೆ. ಅದನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು. ಯುವಜನರು ಮುಂದೆ ಬರಲು ಅವರು ಬೆಳೆಯಲು ಬಿಡಬೇಕು.

ಪತ್ರಿಕೆ: ಎಡಚಳವಳಿ ಮತ್ತು ದಲಿತ ಚಳವಳಿಗಳು ಎರಡೂ ಸಹ ಜನಪರವಾಗಿ ಕೆಲಸ ಮಾಡುತ್ತಿದ್ದರೂ ಜೊತೆಯಾಗಿ ಕೆಲಸ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ? ಎಲ್ಲರೂ ಜೊತೆಯಾಗಬಹುದಾದ ಸಾಧ್ಯತೆಗಳು ಇವೆಯಾ?
ರಾವಣ್: ನೋಡಿ ಬಹಳ ದೀರ್ಘ ಕಾಲದಿಂದ ಚಳವಳಿಗಳು ನಡೆದುಕೊಂಡು ಬರುತ್ತಿರುವಾಗ ತಪ್ಪುಗಳು ಸಹಜ. ತಪ್ಪು ಎಲ್ಲಿ ಆಗಿದೆ ಎಂದು ನೋಡಿ ಅದನ್ನು ಸರಿಮಾಡಿಕೊಂಡು ಹೋಗಬೇಕಾಗುತ್ತದೆ. ಆದರೆ ನಾನು ಏನು ಹೇಳಲು ಬಯಸುತ್ತೇನೆ ಅಂದರೆ ನಾವು ಒಂದು ಗುಂಪಿನ ಸದಸ್ಯರಾಗಿ ಇರಲು ಬಯಸುವುದಿಲ್ಲ. ಎಲ್ಲಾ ಚಳವಳಿಯನ್ನು ಮುನ್ನಡೆಸುವ ನಾಯಕರುಗಳಾಗಲು ಬಯಸುತ್ತೇವೆ. ಇಲ್ಲಿಯವರೆಗೆ ಅವರು ಖುರ್ಚಿಯ ಮೇಲೆ ಕೂತುಕೊಂಡು ನಮ್ಮವರನ್ನು ಕೆಳಗೆ ಕೂರಿಸಿ ಭಾಷಣ ಮಾಡುತ್ತಾ ಬಂದಿದ್ದಾರೆ ಈಗಲಾದರು ನಮ್ಮವರನ್ನು ಕುರ್ಚಿಯಲ್ಲಿ ಕೂರಿಸಿ ಅವರು ಕೆಳಗೆ ಕೂತು ಏನು ಹೇಳುತ್ತಾರೆ ಎಂದು ಕೇಳಲಿ.

ಹೀಗೆ ದಲಿತರನ್ನು ಗುಂಪಿನ ಸದಸ್ಯರಾಗಿಸಿ ಉಳಿದವರು ಭಾಷಣ ಮಾಡುವುದರಿಂದ ಸಮಸ್ಯೆ ಪರಿಹಾರ ಆಗುವುದಿದ್ದರೆ ಇಷ್ಟು ಹೊತ್ತಿಗೆ ಸಮಸ್ಯೆಗಳೆ ಇರುತ್ತಿರಲಿಲ್ಲ. ಆದರೆ ಇಂದಿಗೂ ಆ ಸಮಸ್ಯೆ ಇದೆ ಎಂದಾದರೆ ಬದಲಾಯಿಸಿಕೊಳ್ಳಬೇಕಲ್ಲವೇ? ಕಾನ್ಶೀರಾಮ್‍ರವರು “ಆರ್ಥಿಕ ಸಮಾನತೆ ಸಾಧಿಸಬೇಕಾದರೆ ಶೋಷಿತರನ್ನು ಮುನ್ನಲೆಗೆ ತರಬೇಕು” ಎಂದು ಹೇಳಿದ್ದರು. ನಾವೂ ಅದನ್ನೇ ಹೇಳುತ್ತೇವೆ. ಚಳವಳಿಯಲ್ಲಿ ಎಡಪಂಥೀಯರು ಗುಂಪಿನ ಭಾಗವಾಗಿ ಕಾರ್ಯಕರ್ತರಾಗಿ ಕೆಲಸ ಮಾಡಿ ಮತ್ತು ದಲಿತರನ್ನು ಚಳವಳಿ ಮುನ್ನಡೆಸುವ ಜವಾಬ್ದಾರಿಯನ್ನು ಕೊಡಲಿ. ಯಾರು ಇದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬಲ್ಲರೋ ಅವರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ.

ಪತ್ರಿಕೆ: ಜಾತಿಯ ಪ್ರಶ್ನೆಯನ್ನು ಗಣನೆಗೆ ತಗೆದುಕೊಳ್ಳದೆ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ ಎನ್ನುವ ಚರ್ಚೆಯಿದೆ. ಹಾಗೆಯೇ 6ರಲ್ಲಿ 1 ಭಾಗ ಇರುವ ದಲಿತರ ವಿಚಾರವನ್ನು ಅಷ್ಟೇ ಇಟ್ಟುಕೊಂಡು ಸಾಮಾಜಿಕ ಬದಲಾವಣೆಯನ್ನು ತರಲು ಸಾಧ್ಯವೆ?
ರಾವಣ್: ಕೇವಲ ಜಾತಿಯ ಪ್ರಶ್ನೆಯಿಂದಾಗಿಯೇ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ ಎಂದು ನೀವು ಪ್ರಶ್ನೆ ಕೇಳುತ್ತಿದ್ದೀರಿ. ನಾನು ಹೇಳುವುದೇನೆಂದರೆ ಜಾತಿಯ ಪ್ರಶ್ನೆಯಿಂದಲ್ಲ ಜಾತಿಯ ವಿನಾಶವಾಗದೆ ಸಾಮಾಜಿಕ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ಜಾತಿಯಿಂದ ಕೆಲವರು ಲಾಭವನ್ನು ಪಡೆಯುತ್ತಿದ್ದರೆ ಇನ್ನೂ ಕೆಲವರು ಜಾತಿಯ ಕಾರಣಕ್ಕಾಗಿ ಅವಮಾನಿತರಾಗುತ್ತಿದ್ದಾರೆ. ಹಾಗಾಗಿ ಜಾತಿ ವಿನಾಶವಾಗದೆ ಸಾಮಾಜಿಕ ಬದಲಾವಣೆಯ ಸಂಘರ್ಷ ಮುನ್ನಡೆಯಲು ಸಾಧ್ಯವಿಲ್ಲ. ದೇಶವನ್ನು ಮುನ್ನಡೆಸಬೇಕೆಂದರೆ, ಬಲಿಷ್ಟ ರಾಷ್ಟ್ರ ನಿರ್ಮಾಣ ಮಾಡಬೇಕೆಂದರೆ ಜಾತಿ ವಿನಾಶ ಆಗಲೇಬೇಕಿದೆ. ದೇಶದಲ್ಲಿ ಜಾನುವಾರುಗಳ ಮೇಲೆ ಪ್ರೀತಿಯಿದ್ದು ಸಹಜೀವಿಯಾದ ಮನುಷ್ಯರ ಮೇಲೆ ದ್ವೇಷ ಕಾರುವ ಸ್ಥಿತಿ ಇರುವವರೆಗೂ ಯಾವುದೇ ದೇಶ ಬಲಿಷ್ಟ ದೇಶವಾಗಿ ಮುನ್ನಡೆಯಲು ಸಾಧ್ಯವಿಲ್ಲ. ಹಾಗಾಗಿ ಜಾತಿ ವಿನಾಶದೊಂದಿಗೇ ನಿಜಾರ್ಥದಲ್ಲಿ ಸಾಮಾಜಿಕ ಬದಲಾವಣೆ ತರಲು ಸಾಧ್ಯ.

ಪತ್ರಿಕೆ: ಬಾಲಿವುಡ್ ಸಿನಾಮಾಗಳಲ್ಲಿ ಜಾತಿಯ ವಿಚಾರ ಬರುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ‘ಆರ್ಟಿಕಲ್ 15’ ಸಿನೆಮಾ ಬಗ್ಗೆ, ಅದರಲ್ಲಿನ ನಿಮ್ಮ ಪಾತ್ರ ಹಾಗೂ ದೊರಕಿರುವ ಪ್ರಾತಿನಿಧ್ಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ರಾವಣ್: ನಿಜ ಹೇಳಬೇಕೆಂದರೆ ನಾನು ಆ ಸಿನೆಮಾವನ್ನು ಸರಿಯಾಗಿ ನೋಡಲು ಸಾಧ್ಯವೇ ಆಗಿಲ್ಲ. ಅಷ್ಟು ಸಮಯ ಸಿಗುವುದೇ ಇಲ್ಲವಲ್ಲ. ನೋಡಿ ಮೊನ್ನೆ ಇಡೀ ದಿನ ನಾನು ಪಂಜಾಬಿನಲ್ಲಿದ್ದೆ. ಅಲ್ಲಿ ನಾವು ಪಂಜಾಬ್ ಬಂದ್ ಮಾಡಿದ್ದೆವು. ಇನ್ನು ಸಿನೆಮಾದ ವಿಚಾರಕ್ಕೆ ಬಂದರೆ ಎಲ್ಲಿಯಾದರೂ ದಲಿತರ ಮೇಲೆ ದೌರ್ಜನ್ಯಗಳಾದರೆ ನಾವು ಅದಕ್ಕೆ ನ್ಯಾಯ ಕೊಡಿಸಬಹುದು ಎಂದು ಜನರು ನಂಬುತ್ತಾರೆ. ಅಂತಹ ನಮ್ಮ ಹೋರಾಟದ ಪ್ರಯತ್ನವನ್ನು ಸಿನೆಮಾದಲ್ಲಿ ತೋರಿಸುವುದು ಒಳ್ಳೆಯ ವಿಚಾರವೇ. ಮುಖ್ಯವಾಹಿನಿ ಮಾಧ್ಯಮಗಳು ಇದನ್ನು ತೋರಿಸುವುದಿಲ್ಲದಿರುವಾಗ ಸಿನೆಮಾಗಳಲ್ಲಿ ಬರುವುದು ಮುಖ್ಯವೂ ಹೌದು. ನಮ್ಮ ಹೋರಾಟವನ್ನು ಸಿನೆಮಾದಲ್ಲಿ ತೋರಿಸುತ್ತಾರೆ ಎಂದರೆ ಒಂದು ಜವಾಬ್ದಾರಿಯುತ ಹೋರಾಟವನ್ನು ನಾವು ಪ್ರಾಮಾಣಿವಾಗಿ ಮಾಡುತ್ತಿದ್ದೇವೆ ಎಂದು ನಂಬುತ್ತೇನೆ. ಇಂದು ಕೆಲವರು ಸ್ವಾತಂತ್ರದ ಬಗ್ಗೆ ಮಾತನಾಡುತ್ತಾರೆ ಆದರೆ ಸಮಾನತೆ ಬಗ್ಗೆ ಮಾತಾಡಲ್ಲ, ಸಂವಿಧಾನದ ಬಗ್ಗೆ ಮಾತನಾಡುತ್ತಾರೆ ಆದ್ರೆ ಅದರೊಳಗೆ ಬರೆದಿರುವುದರ ಬಗ್ಗೆ ಮಾತನಾಡುವುದಿಲ್ಲ, ದೇಶದ ಬಗ್ಗೆ ಮಾತನಾಡುತ್ತಾರೆ ಆದರೆ ದೇಶದೊಳಗಿನ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಗೌತಮ ಬುದ್ಧರ, ಸಾಮ್ರಾಟ್ ಆಶೋಕ ಅವರುಗಳ ವಿಚಾರಗಳು ಯಾವಾಗ ಶಾಸನವಾಗುತ್ತವೆಯೋ ಆಗ ಈ ದೇಶ ಬಲಿಷ್ಟ ದೇಶವಾಗುತ್ತದೆ.

ಪತ್ರಿಕೆ: ಕೊನೆಯದಾಗಿ ಏನಾದರು ಹೇಳಲು ಬಯಸುತ್ತೀರಾ?
ರಾವಣ್: ಹೌದು ಎರಡು ವಿಚಾರ ಹೇಳಬೇಕಿದೆ. ಒಂದು ಈ ನನ್ನ ಸಂದರ್ಶನ ನೋಡಿದವರು, ಓದಿದವರು ಸುಮ್ಮನಿದ್ದರೆ ಪ್ರಯೋಜನವಿಲ್ಲ. ನೀವು ಏನಾದರೂ ಮಾಡಲೇಬೇಕಿದೆ. ದೇಶವನ್ನು ವಿಭಾಗ ಮಾಡುತ್ತಿರುವ ದುಷ್ಟ ಶಕ್ತಿಯ ವಿರುದ್ಧ ಹೋರಾಡಿ ನಾವು ದೇಶ ಕಟ್ಟುವ ಕೆಲಸ ಮಾಡಬೇಕಿದೆ.

ಎರಡನೆಯದಾಗಿ ಗೌರಿ ಲಂಕೇಶ್ ಅವರು ತಮ್ಮ ಜೀವನವಿಡೀ ತಾವು ನಂಬಿದ್ದ ಸಿದ್ಧಾಂತಕ್ಕಾಗಿ ಸಂಘರ್ಷ ನಡೆಸಿದ್ದರು. ಅವರಿಗೆ ಆದಹಾಗೆ ಇತರರಿಗೆ ಆಗಬಾರದು. ಹಾಗಾಗಿ ನಾವು ಒಂದಾಗಿರಬೇಕು ಮತ್ತು ಗೌರಿ ಲಂಕೇಶ್ ಅವರ ಪ್ರಯತ್ನವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ನಿಮ್ಮ ತಂಡಕ್ಕೆ ಅಭಿನಂದನೆಗಳು. ನೀವು ಒಬ್ಬಂಟಿ ಅಲ್ಲ ನಿಮ್ಮ ಜೊತೆ ನಾವು ಸದಾ ಇರುತ್ತೇವೆ. ಜೈ ಭೀಮ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...