ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ರೈತರು ಇಂದು ಬೆಳಿಗ್ಗೆ ಭೂ ಸ್ವಾಧೀನವನ್ನು ಕೈ ಬಿಡುವಂತೆ ಒತ್ತಾಯಿಸಿ ಸಚಿವ ಕೆ.ಎಚ್. ಮುನಿಯಪ್ಪನವರನ್ನು ಭೇಟಿ ಮಾಡಲು ಹೊರಟಿದ್ದ ರೈತರ ವಾಹನಗಳನ್ನು ಪೋಲೀಸರು ಮಾರ್ಗ ಮಧ್ಯೆ ತಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅನ್ನದಾತರು, ಚನ್ನರಾಯಪಟ್ಟಣ ದೇವನಹಳ್ಳಿ ಮಾರ್ಗ ಮಧ್ಯೆ ರಸ್ತೆಯಲ್ಲಿ ಕುಳಿತು ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಹಲವು ಭಾರಿ ಭೂಸ್ವಾಧೀನ ಹಿಂತೆಗೆದುಕೊಳ್ಳುವ ಭರವಸೆ ನೀಡಿದ್ದ ಸಚಿವರು, ಈಗ ರೈತರನ್ನು ಭೇಟಿ ಮಾಡಲು ಹೆದರಿಕೊಂಡಿದ್ದಾರೆ. ಸಾಲದ್ದಕ್ಕೆ ಭೇಟಿಗೆ ಹೊರಟ ರೈತರನ್ನು ಕಂಡ ಕಂಡಲ್ಲಿ ಪೋಲೀಸ್ ದಿಗ್ಬಂದನ ಹಾಕಿಸಿ ತಡೆಯುತ್ತಿದ್ದಾರೆ.
ಚನ್ನರಾಯಪಟ್ಟಣದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಪ್ರತಿಭಟನಾನಿರತ ರೈತರು ಮಾತಾನಾಡಿದರು.
ಚನ್ನರಾಯಪಟ್ಟಣದ 13 ಹಳ್ಳಿಗಳಲ್ಲಿ ನಡೆಯುತ್ತಿರುವ ಭೂ ಸ್ವಾದೀನವನ್ನು ವಿರೋಧಿಸಿ ಕಳೆದ ಮೂರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದರು ಭೂಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸುವಂತೆ ಕೆಐಎಡಿಬಿ ಅಧಿಕಾರಿಗಳು ಶಿಫಾರಸ್ಸು ಮಾಡಿರುವುದರ ಕುರಿತಾಗಿ ಮಾತನಾಡಿ, ಈ ಪ್ರಕ್ರಿಯೆ ತಡೆಹಿಡಿಯುವಂತೆ ಒತ್ತಾಯಿಸಲು ಕಳೆದ ಸೋಮವಾರ ರೈತರು ದೇವನಹಳ್ಳಿ ಶಾಸಕ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆ ಎಚ್ ಮುನಿಯಪ್ಪನವರನ್ನು 10ನೇ ತಾರೀಕು ಗುರುವಾರದಂದು ಬಂದು ಭೇಟಿ ಮಾಡುವಂತೆ ಮಾತುಕತೆಯಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸುತ್ತಿದ್ದ ರೈತರನ್ನು ಉದ್ದೇಶಿಸಿ, ನಾನು ರೈತರ ಪರವಾಗಿ ನಿಂತು ಭೂಸ್ವಾಧೀನ ಪ್ರಕ್ರಿಯೆಯನ್ನು ತಡೆಹಿಡುವಂತೆ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಹೇಳಿದ್ದರು. ಅವರ ಮಾತಿನಂತೆ ನಾವು ಇಂದು ಮಂತ್ರಿಗಳನ್ನು ಭೇಟಿ ಮಾಡಲು ಹೊರಟರೆ ಪೊಲೀಸರು ನಮ್ಮನ್ನು ತಡೆಯುತ್ತಿದ್ದಾರೆ ಎಂದು ರೈತರು ಆಕ್ರೋಶ ಹೊರಹಾಕಿದರು.

ವಿಷ ಸೇವಿಸಲು ಮುಂದಾದ ರೈತ
ಈ ಮಧ್ಯೆ, ಕಳೆದ ಮೂರು ವರ್ಷಗಳಿಂದ ಬೀದಿಯಲ್ಲಿ ಕುಳಿತಿದ್ದರು ಸರ್ಕಾರಗಳು ನಮ್ಮನ್ನು ಗಮನಿಸುತ್ತಿಲ್ಲ ಎಂದು ಆಕ್ರೋಶಬರಿತವಾಗಿ ಮಾತನಾಡುತ್ತಿದ್ದ ರೈತರ ಗುಂಪು ಊಟದಲ್ಲಿ ವಿಷ ಬೆರೆಸಿ ತಿನ್ನಲು ಮುಂದಾಗಿತ್ತು. ಆದರೆ, ಅಲ್ಲಿನ ರೈತರು ನಿಂದವರನ್ನು ತಡೆದು ಸಮಾಧಾನಪಡಿಸಿದರು. ಈ ಮಧ್ಯೆ ನೂಕುನುಗ್ಗಲು ಉಂಟಾಗಿ ವಿಷ ಸೇವನೆಗೆ ಮುಂದಾಗಿದ್ದ ರೈತ ವೆಂಕಟೇಶ್ ರವರು ಅಸ್ವಸ್ಥಗೊಂಡರು. ತಕ್ಷಣವೇ ಅವರನ್ನು ರೈತರು ದೇವನಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.
‘ಪ್ರಾಣ ಬಿಟ್ಟರೂ ಸರಿ ಭೂಮಿ ಬಿಡುವುದಿಲ್ಲ’ ಎಂದು ಹಠ ಹಿಡಿದು ಕುಳಿತಿರುವ ರೈತರು, ನಾವು ಮಂತ್ರಿಗಳು ಅಧಿಕಾರಿಗಳು ಸೇರಿದಂತೆ ಎಲ್ಲರ ಮೇಲೆ ವಿಶ್ವಾಸವನ್ನು ಕಳೆದುಕೊಂಡಿದ್ದು, ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಿ ನಮ್ಮ ಸಮಸ್ಯೆಯನ್ನು ಬಗೆಹರಿಸುವವರಿಗೆ ನಾವು ವಾಪಸ್ಸು ಹೋಗುವುದಿಲ್ಲ ಎಂದು ಹೇಳುವ ಮೂಲಕ ರಸ್ತೆ ತಡೆಗೆ ಮುಂದಾಗಿದ್ದಾರೆ.
ಪೊಲೀಸ್ ಇಲಾಖೆ ಮಂತ್ರಿಗಳನ್ನು ಸಂಪರ್ಕಿಸಲು ಪ್ರಯತ್ನ ಪಡುತ್ತಿದೆಯಾದರೂ ಸಂಜೆಯವರೆಗೂ ಮುಖ್ಯಮಂತ್ರಿಗಳ ಭೇಟಿಯ ಕುರಿತಾಗಿ ಯಾವುದೇ ಮಾಹಿತಿ ಬಂದಿಲ್ಲ. ಆದ್ದರಿಂದ, ತಕ್ಷಣ ಭೂಸ್ವಾಧೀನಕ್ಕೆ ಉದ್ದೇಶಿಸಿ ನಡೆಸುತ್ತಿರುವ ಎಲ್ಲ ಪ್ರಕ್ರಿಯೆಗಳು ನಿಲ್ಲಿಸಬೇಕು ಮತ್ತು ಮುಖ್ಯಮಂತ್ರಿಗಳ ಭೇಟಿಗೆ ದಿನ ನಿಗದಿ ಮಾಡಲೇಬೇಕೆಂದು ಒತ್ತಾಯಿಸಿ ರೈತರು ರಸ್ತೆಯಲ್ಲಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.
ಹೋರಾಟದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಚಂದ್ರ ತೇಜಸ್ವಿ, ದಲಿತ ಸಂಘರ್ಷ ಸಮಿತಿ ಮುಖಂಡರಾದ ಕಾರಳ್ಳಿ ಶ್ರೀನಿವಾಸ್, ರೈತರಾದ ಜಯರಾಮೇಗೌಡ, ನಲ್ಲಪ್ಪನಹಳ್ಳಿ ನಂಜಪ್ಪ, ಪ್ರಮೋದ್, ಮೋಹನ್, ಮಾರೇಗೌಡ, ಗೋಪಿನಾತ್, ಬೈರೇಗೌಡ, ನಂದನ್, ಮುಕುಂದ, ಅಶ್ವತ್ಥಪ್ಪ, ವೆಂಕಟರಮಣಪ್ಪ, ಸುಶೀಲಮ್ಮ, ನಾರಾಯಣಮ್ಮ, ವೆಂಕಟೇಶ್ ಸೇರಿದಂತೆ ನೂರಾರು ರೈತರು ಭಾಗಿಯಾಗಿದ್ದರು.


