ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ಭೂ ಸ್ವಾಧೀನ ಕೈಬಿಟ್ಟಿರುವುದಾಗಿ ಮುಖ್ಯಮಂತ್ರಿ ಸಿದ್ದರಾಯಯ್ಯ ಘೋಷಿಸಿ ಮೂರು ತಿಂಗಳು ಕಳೆದರೂ, ಅಧಿಕೃತ ಆದೇಶ ಹೊರಡಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ (ಕೆಐಎಡಿಬಿ) ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು, ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರನ್ನು ಭೇಟಿಯಾಗಿ ಬೇಡಿಕೆ ಮುಂದಿಟ್ಟಿರುವ ರೈತರು, ಸಿಎಂ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಿದ್ದಾರೆ. ಭೂ ಸ್ವಾಧೀನ ಕೈಬಿಟ್ಟಿರುವ ಕುರಿತು ಅಧಿಕೃತ ಆದೇಶಕ್ಕಾಗಿ ಒತ್ತಾಯಿಸಿದ್ದಾರೆ.
ಭಾನುವಾರ (ಅ.19) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದೇವನಹಳ್ಳಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರನ್ನು ಭೇಟಿಯಾದ ರೈತರ ನಿಯೋಗ, ಸರ್ಕಾರದ ಧೋರಣೆಯನ್ನು ಖಂಡಿಸಿದೆ. ಸರ್ಕಾರ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕೂಡಲೇ ಭೂ ಸ್ವಾಧೀನ ರದ್ದತಿ ಬಗ್ಗೆ ಅಧಿಕೃತ ಆದೇಶ ಹೊರಡಿಸಬೇಕು, ಇಲ್ಲವಾದಲ್ಲಿ ಮತ್ತೊಮ್ಮೆ ಬೃಹತ್ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಕೂಡಲೇ ಆದೇಶ ಹೊರಡಿಸಲು ಸೂಚಿಸುವುದಾಗಿ ಸಿಎಂ ಸಿದ್ದರಾಮಯ್ಯ ರೈತರ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮೂರೂವರೆ ವರ್ಷಗಳ ನಿರಂತರ ಹೋರಾಟದ ಫಲವಾಗಿ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಹಳ್ಳಿಗಳ ರೈತರ 1,777 ಎಕರೆ ಭೂಸ್ವಾಧೀನವನ್ನು 2025 ಜುಲೈ 15ರಂದು ಸರ್ಕಾರ ಕೈಬಿಟ್ಟಿತ್ತು. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಅಧಿಕೃತ ಘೋಷಣೆ ಮಾಡಿದ್ದರು.
ಆದರೆ, ಸಿಎಂ ಘೋಷಣೆ ಇದುವರೆಗೆ ಅಧಿಕೃತ ಆದೇಶ ರೂಪದಲ್ಲಿ ಬಂದಿಲ್ಲ ಎಂದು ರೈತರು ಹೇಳಿದ್ದಾರೆ. ಈ ನಡುವೆ ಹ್ಯಾಡಾಳ, ಗೋಕರೆಬಚ್ಚೇನಹಳ್ಳಿ ಗ್ರಾಮಗಳ 439 ಎಕರೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಕೆಐಎಡಿಬಿ ಅಧಿಕಾರಿಗಳು ಸೆಪ್ಟೆಂಬರ್ 6ರಂದು ದರ ನಿಗದಿ ಸಭೆ ಕರೆದಿದ್ದರು. ಈ ಸಂಬಂಧ ರೈತರಿಗೆ ನೋಟಿಸ್ ನೀಡಿದ್ದರು.
ಇದರಿಂದ ಆಕ್ರೋಶಗೊಂಡ ರೈತರು ಮತ್ತು ಹೋರಾಟಗಾರರು ಸೆಪ್ಟೆಂಬರ್ 1ರಂದು ಬೆಂಗಳೂರಿನ ಖನಿಜ ಭವನದಲ್ಲಿರುವ ಕೆಐಎಡಿಬಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಚೇರಿ ಮತ್ತು ಅರವಿಂದ ಭವನದಲ್ಲಿರುವ ವಿಶೇಷ ಭೂ ಸ್ವಾಧೀನ ಅಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.
ನಂತರ, ಅಕ್ಟೋಬರ್ 17ರಂದು ಹರಳೂರು ಬಳಿಯ ಏರೋಸ್ಪೇಸ್ ಡಿಫೆನ್ಸ್ ಪಾರ್ಕ್‌ಗೆ ಭೇಟಿ ನೀಡಿದ್ದ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರನ್ನು ಭೇಟಿ ಮಾಡಿದ್ದ ರೈತರ ನಿಯೋಗ, ಭೂ ಸ್ವಾಧೀನ ರದ್ದತಿ ಆದೇಶ ಹೊರಡಿಸುವಂತೆ ಒತ್ತಾಯಿಸಿದೆ.
ಇದೇ ಕಾರ್ಯಕ್ರಮದಲ್ಲಿ ಹಾಜರಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಅವರನ್ನೂ ಭೇಟಿಯಾದ ನಿಯೋಗ, ಡಿನೋಟಿಫಿಕೇಶನ್ ಆದೇಶಕ್ಕಾಗಿ ಆಗ್ರಹಿಸಿದೆ.
ರೈತರ ನಿಯೋಗದೊಂದಿಗೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್ ಅವರು, “ಈ ಕುರಿತು ಈಗಾಗಲೇ ಸರ್ಕಾರದಲ್ಲಿ ಚರ್ಚೆಯಾಗಿದೆ. ದೀಪಾವಳಿ ಹಬ್ಬ ಮುಗಿದ ನಂತರ ಸಂಪೂರ್ಣ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವ ಆದೇಶ ಹೊರಡಿಸಲಾಗುವುದು” ಎಂದು ಭರವಸೆ ನೀಡಿದ್ದಾಗಿ ತಿಳಿದು ಬಂದಿದೆ.
ಈ ನಡುವೆ ಕೊನೆಯ ಪ್ರಯತ್ನವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ರೈತರ ನಿಯೋಗ ಮನವಿ ಸಲ್ಲಿಸಿದೆ. ಒಂದು ವೇಳೆ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಮತ್ತೊಮ್ಮೆ ಹೋರಾಟದ ರಣ ಕಹಳೆ ಮೊಳಗಿಸುವ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ.
ಚನ್ನರಾಯಪಟ್ಟಣ ರೈತರಿಂದ ಕೈಗಾರಿಕಾ ಸಚಿವರ ಭೇಟಿ; ಕೆಐಎಡಿಬಿ ‘ಡಿನೋಟಿಫಿಕೇಶನ್’ಗೆ ಒತ್ತಡ ಹೇರಿದ ಹೋರಾಟಗಾರರು


