ಶರಣಾದ ಮಾವೋವಾದಿಗಳಿಗೆ (ನಕ್ಸಲರಿಗೆ) ಉದ್ಯೋಗಾವಕಾಶಗಳನ್ನು ಒದಗಿಸಲು ಛತ್ತೀಸ್‌ಗಢದ ಬಿಜೆಪಿ ಸರ್ಕಾರ ಪ್ರಾರಂಭಿಸಿರುವ ವಿಶಿಷ್ಟ ‘ಪಂಡುಂ ಕೆಫೆ’ಯನ್ನು ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಸೋಮವಾರ (ನವೆಂಬರ್ 17) ಬಸ್ತಾರ್ ಪ್ರದೇಶದ ಜಗದಲ್‌ಪುರದ ವಿಭಾಗೀಯ ಪ್ರಧಾನ ಕಚೇರಿಯಲ್ಲಿ ಉದ್ಘಾಟಿಸಿದ್ದಾರೆ.
ಬಳಿಕ ಮಾತನಾಡಿದ ಸಿಎಂ, ಮಾಜಿ ನಕ್ಸಲರ ಹೊಸ ಜೀವನಕ್ಕೆ ಶುಭಾಷಯ ಹೇಳಿದ್ದಾರೆ. ನಕ್ಸಲಿಸಂಗೆ ತುತ್ತಾದ ವ್ಯಕ್ತಿಗಳು ಅಥವಾ ಶರಣಾದವರನ್ನು ಬೆಂಬಲಿಸುವುದು ಸರ್ಕಾರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ನಕ್ಸಲಿಸಂನಿಂದ ಹೊರ ಬಂದ ಯುವಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಾಯಿ ತಿಳಿಸಿದ್ದಾರೆ.
“‘ಪಂಡುಂ’ ಎಂಬ ಹೆಸರು ಬಸ್ತಾರ್‌ನ ಸಾಂಸ್ಕೃತಿಕ ಬೇರುಗಳು ಮತ್ತು ಸಾಂಪ್ರದಾಯಿಕ ನೀತಿಯನ್ನು ವ್ಯಕ್ತಪಡಿಸುತ್ತದೆ. ಇದರ ಟ್ಯಾಗ್‌ಲೈನ್ – “ಪ್ರತಿ ಕಪ್ ಒಂದು ಕಥೆಯನ್ನು ಹೇಳುವ ಸ್ಥಳ”, ಇದು ಇಲ್ಲಿ ನೀಡುವ ಪ್ರತಿಯೊಂದು ಕಪ್ ಸುವಾಸನೆ ಮತ್ತು ರುಚಿಯನ್ನು ಮಾತ್ರವಲ್ಲದೆ, ಧೈರ್ಯ, ಬದಲಾವಣೆ ಮತ್ತು ಹೊಸ ಆರಂಭದ ಕಥೆಯನ್ನು ಹೊಂದಿದೆ ಎಂಬುದನ್ನು ಸಂಕೇತಿಸುತ್ತದೆ” ಎಂದು ಬಸ್ತಾರ್ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಸುಂದರರಾಜ್ ಪಟ್ಲಿಂಗಮ್ ಹೇಳಿದ್ದಾರೆ.
ನೂತನ ಕೆಫೆಯಲ್ಲಿ ಕೆಲಸ ಮಾಡುವವರು ಬಸ್ತಾರ್‌ನಲ್ಲಿರುವ ಸರ್ಕಾರಿ ಕೌಶಲ್ಯ ಕೇಂದ್ರಗಳ ಮೂಲಕ ಆತಿಥ್ಯ, ಕೆಫೆ ನಿರ್ವಹಣೆ, ಗ್ರಾಹಕ ಸೇವೆ, ನೈರ್ಮಲ್ಯ, ಆಹಾರ ಸುರಕ್ಷತೆ ಮತ್ತು ಮೂಲಭೂತ ಉದ್ಯಮಶೀಲತೆಯಲ್ಲಿ ವಿಶೇಷ ತರಬೇತಿಯನ್ನು ಪಡೆದಿದ್ದಾರೆ ಎಂದು ವರದಿಗಳು ಹೇಳಿವೆ.


