ಛತ್ತೀಸ್‌ಗಢದ ನಾರಾಯಣಪುರ ಪ್ರದೇಶದಲ್ಲಿ ಬುಧವಾರ (ಮೇ.21) ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಪಕ್ಷದ 27 ಮಂದಿ ಸದಸ್ಯರು ಸಾವಿಗೀಡಾಗಿದ್ದಾರೆ.
ಮೃತರಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸುಮಾರು 68 ವರ್ಷ ವಯಸ್ಸಿನ ನಂಬಾಲಾ ಕೇಶವ ರಾವ್ ಅಲಿಯಾಸ್ ಬಸವರಾಜು ಸೇರಿದ್ದಾರೆ ಎಂದು ವರದಿಯಾಗಿದೆ.
ಕಾರ್ಯಾಚರಣೆಯ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, “ನಕ್ಸಲ್‌ವಾದವನ್ನು ನಿರ್ಮೂಲನೆ ಮಾಡುವ ಹೋರಾಟದಲ್ಲಿ ಇದೊಂದು ಹೆಗ್ಗುರುತಿನ ಸಾಧನೆ. ಇಂದು, ಛತ್ತೀಸ್‌ಗಢದ ನಾರಾಯಣಪುರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ನಮ್ಮ ಭದ್ರತಾ ಪಡೆಗಳು 27 ಭಯಾನಕ ಮಾವೋವಾದಿಗಳನ್ನು ಹತ್ಯೆ ಮಾಡಿದ್ದಾರೆ. ಅವರಲ್ಲಿ ಸಿಪಿಐ-ಮಾವೋವಾದಿಯ ಪ್ರಧಾನ ಕಾರ್ಯದರ್ಶಿ, ಅಗ್ರ ನಾಯಕ ಮತ್ತು ನಕ್ಸಲ್ ಚಳುವಳಿಯ ಬೆನ್ನೆಲುಬು ನಂಬಾಲಾ ಕೇಶವ ರಾವ್ ಅಲಿಯಾಸ್ ಬಸವರಾಜು ಸೇರಿದ್ದಾರೆ. ನಕ್ಸಲ್‌ವಾದದ ವಿರುದ್ಧ ಭಾರತ ನಡೆಸುತ್ತಿರುವ ಮೂರು ದಶಕಗಳ ಹೋರಾಟದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನ ಕಾರ್ಯದರ್ಶಿ ಶ್ರೇಣಿಯ ನಾಯಕನನ್ನು ನಮ್ಮ ಪಡೆಗಳು ಹತ್ಯೆಗೈದಿವೆ. ಈ ಮಹತ್ವದ ಸಾಧನೆಗಾಗಿ ನಮ್ಮ ಧೈರ್ಯಶಾಲಿ ಭದ್ರತಾ ಪಡೆಗಳು ಮತ್ತು ಸಂಸ್ಥೆಗಳನ್ನು ನಾನು ಶ್ಲಾಘಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
A landmark achievement in the battle to eliminate Naxalism. Today, in an operation in Narayanpur, Chhattisgarh, our security forces have neutralized 27 dreaded Maoists, including Nambala Keshav Rao, alias Basavaraju, the general secretary of CPI-Maoist, topmost leader, and the…
— Amit Shah (@AmitShah) May 21, 2025
ಹತರಾದ ಬಸವರಾಜು ಅವರು, 2010ರಲ್ಲಿ ದಂತೇವಾಡದಲ್ಲಿ 76 ಸಿಆರ್‌ಪಿಎಫ್ ಸಿಬ್ಬಂದಿ ಮೃತಪಟ್ಟಿದ್ದ ದಾಳಿ ಮತ್ತು 2013ರಲ್ಲಿ ಛತ್ತೀಸ್‌ಗಢ ರಾಜ್ಯ ಕಾಂಗ್ರೆಸ್ ನಾಯಕರೂ ಸೇರಿದಂತೆ 27 ಮಂದಿ ಸಾವಿಗೀಡಾಗಿದ್ದ ಜೀರಂ ಘಾಟಿ ಹತ್ಯಾಕಾಂಡ ಸೇರಿದಂತೆ ಪ್ರಮುಖ ಮಾವೋವಾದಿ ದಾಳಿಗಳ ಹಿಂದಿನ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದೆ.
ಬಸವರಾಜು ಅವರ ತಲೆಗೆ ಎನ್‌ಐಎ, ಛತ್ತೀಸ್‌ಗಢ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು 1.5 ಕೋಟಿ ರೂಪಾಯಿಯಷ್ಟು ನಗದು ಬಹುಮಾನ ಘೋಷಿಸಿತ್ತು.
ಬಸವರಾಜು ಯಾರು?
ವರದಿಗಳ ಪ್ರಕಾರ, ಸುಮಾರು 68 ವರ್ಷ ವಯಸ್ಸಿನ ಬಸವರಾಜು ಅವರು ಸಿಪಿಐ (ಮಾವೋವಾದಿ) ಪಕ್ಷದ ಪ್ರಧಾನ ಕಾರ್ಯದರ್ಶಿ, ಅದರ ಪಾಲಿಟ್‌ಬ್ಯೂರೋ, ಕೇಂದ್ರ ಸಮಿತಿ ಮತ್ತು ಕೇಂದ್ರ ಸೇನಾ ಸಮಿತಿ ನಾಯಕರಾಗಿದ್ದರು.
ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಜಿಯನ್ನಪೇಟೆ ಮೂಲದ ಬಸವರಾರು ಅವರು ಈಗಿನ ತೆಲಂಗಾಣ ರಾಜ್ಯದ ವಾರಂಗಲ್‌ನ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜಿನಿಂದ ಇಂಜಿನಿಯರಿಂಗ್ ಪದವಿ ಪಡೆದವರು. ರ್‍ಯಾಡಿಕಲ್ ಸ್ಟೂಡೆಂಟ್ ಯೂನಿಯನ್ (ಆರ್‌ಎಸ್‌ಯು) ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಅವರು, ನಂತರ ನಕ್ಸಲ್ ಚಳವಳಿಗೆ ಸೇರಿಕೊಂಡರು.
ಕಾಲೇಜು ದಿನಗಳಲ್ಲಿಯೇ ಎಡಪಂಥೀಯ ವಿದ್ಯಾರ್ಥಿ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಬಸವರಾಜು ಅವರು, 1980ರಲ್ಲಿ ‘ಸಿಪಿಐ (ಮಾರ್ಕ್ಸ್-ಲೆನಿನ್) ಪೀಪಲ್ಸ್ ವಾರ್’ ಪಕ್ಷವನ್ನು ಇತರರ ಜೊತೆ ಸೇರಿಕೊಂಡು ಸ್ಥಾಪಿಸಿದ್ದರು. 1992ರಲ್ಲಿ ಆ ಪಕ್ಷದ ಕೇಂದ್ರ ಸಮಿತಿ ಸದಸ್ಯರಾಗಿದ್ದರು. 2004ರಲ್ಲಿ ಸಿಪಿಐ (ಮಾವೋವಾದಿ) ಪಕ್ಷದೊಂದಿಗೆ ‘ಸಿಪಿಐ (ಮಾರ್ಕ್ಸ್-ಲೆನಿನ್) ಪೀಪಲ್ಸ್ ವಾರ್’ ವಿಲೀನವಾಯಿತು.
ಆ ಬಳಿಕ ಬಸವರಾಜು ಅವರು ಸಿಪಿಐ (ಮಾವೋವಾದಿ) ಪಕ್ಷದ ಕೇಂದ್ರ ಸೇನಾ ಸಮಿತಿಯ ಮುಖ್ಯಸ್ಥರಾದರು. ನಂತರ ಪಾಲಿಟ್ ಬ್ಯೂರೋ ಸದಸ್ಯರಾದರು.
ಕಾಲೇಜು ದಿನಗಳಲ್ಲಿಯೇ ತೀವ್ರ ಎಡಪಂಥೀಯ ರಾಜಕಾರಣಕ್ಕೆ ತೆರೆದುಕೊಂಡಿದ್ದ ಬಸವರಾಜು ಅವರು, 1980ರಲ್ಲಿ ಎಬಿವಿಪಿ ಸದಸ್ಯರೊಂದಿಗೆ ಜಗಳ ಮಾಡಿಕೊಂಡ ಆರೋಪದಲ್ಲಿ ಬಂಧಿತರಾಗಿದ್ದರು. 1970ರಲ್ಲಿ ಹುಟ್ಟೂರು ತೊರೆದು ನಕ್ಸಲ್ ಚಳವಳಿ ಸೇರಿದ ಅವರು, ಛತ್ತೀಸ್‌ಗಢದ ಬಸ್ತಾರ್‌ನಲ್ಲಿ 1987ರಲ್ಲಿ ಎಲ್‌ಟಿಟಿಇ ಹೋರಾಟಗಾರರಿಂದ ಗೆರಿಲ್ಲಾ ಯುದ್ದ ತಂತ್ರ ಮತ್ತು ಸ್ಟೋಟಕಗಳ ಕುರಿತು ತರಬೇತಿ ಪಡೆದುಕೊಂಡಿದ್ದರು ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಪ್ರಜಾವಾಣಿ ಪತ್ರಿಕೆ ವರದಿ ಮಾಡಿದೆ.
ಗಂಗಣ್ಣ, ಗಗಣ್ಣ, ಪ್ರಕಾಶ್, ಕೃಷ್ಣ, ವಿಜಯ್, ಬಸವರಾಜು, ಬಿಆರ್, ಉಮೇಶ್, ರಾಜು, ದರಪು ಮತ್ತು ನರಸಿಂಹ ಎಂಬ ಹಲವಾರು ಅಡ್ಡ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಕೇಶವ ರಾವ್, 2017-18ರಲ್ಲಿ ಗಣಪತಿ ಅವರಿಂದ ಸಿಪಿಐ (ಮಾವೋವಾದಿ) ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಂಡರು. ಗಣಪತಿ ಅವರು ವಯಸ್ಸು ಮತ್ತು ಅನಾರೋಗ್ಯದ ಕಾರಣದಿಂದ ಪಕ್ಷದ ಕಾರ್ಯಚಟುವಟಿಕೆಗಳಿಂದ ಹಿಂದೆ ಸರಿದರು ಎಂದು ವರದಿಗಳು ಹೇಳಿವೆ.
ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳ ಗಡಿ ಪ್ರದೇಶ ಕರ್ರೆಗುತ್ತಲು ಬೆಟ್ಟಗಳಲ್ಲಿ 21 ದಿನಗಳ ಕಾಲ ನಡೆದ ಅತಿದೊಡ್ಡ ‘ಆಪರೇಷನ್ ಬ್ಲಾಕ್ ಫಾರೆಸ್ಟ್’ ಪೂರ್ಣಗೊಂಡ ಕೆಲ ದಿನಗಳ ನಂತರ, ಅಬುಜ್‌ಮಾದ್ ಪ್ರದೇಶದಲ್ಲಿ ನಾರಾಯಣಪುರ, ದಂತೇವಾಡ, ಕೊಂಡಗಾಂವ್ ಮತ್ತು ಬಿಜಾಪುರ ಜಿಲ್ಲೆಗಳ ಡಿಆರ್‌ಜಿ ಘಟಕಗಳನ್ನು ಒಳಗೊಂಡ ಇತ್ತೀಚಿನ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆದಿದೆ.
ಸಿಆರ್‌ಪಿಎಫ್, ಛತ್ತೀಸ್‌ಗಢ ಪೊಲೀಸರು ಮತ್ತು ಇತರ ಕೇಂದ್ರ ಮತ್ತು ರಾಜ್ಯ ಪಡೆಗಳ ಆಪರೇಷನ್ ಬ್ಲಾಕ್ ಫಾರೆಸ್ಟ್‌ನಲ್ಲಿ 31 ಮಾವೋವಾದಿಗಳನ್ನು ಹತ್ಯೆಗೈಯ್ಯಲಾಗಿದೆ. ಶಸ್ತ್ರಾಸ್ತ್ರಗಳು ಮತ್ತು ಇತರ ನಕ್ಸಲ್ ಸರಬರಾಜುಗಳ ಬೃಹತ್ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಮೇ 11ರಂದು 21 ದಿನಗಳ ಆಪರೇಷನ್ ‘ಬ್ಲಾಕ್ ಫಾರೆಸ್ಟ್’ ಅಂತ್ಯಗೊಂಡ ನಂತರ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಹಾರಾಷ್ಟ್ರದಾದ್ಯಂತ 54 ನಕ್ಸಲರನ್ನು ಬಂಧಿಸಲಾಗಿದೆ ಮತ್ತು 84 ನಕ್ಸಲರು ಶರಣಾಗಿದ್ದಾರೆ ಎಂದು ಗೃಹ ಸಚಿವರು ಬುಧವಾರ ಮಾಹಿತಿ ನೀಡಿದ್ದಾರೆ.
“ಮಾರ್ಚ್ 31, 2026ರ ಮೊದಲು ದೇಶದಲ್ಲಿ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಲು ಮೋದಿ ಸರ್ಕಾರ ದೃಢನಿಶ್ಚಯ ಮಾಡಿದೆ” ಎಂದು ಗೃಹ ಸಚಿವರು ಹೇಳಿದ್ದಾರೆ.
ಛತ್ತೀಸ್‌ಗಢ ಪೊಲೀಸರ ಪ್ರಕಾರ, ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ನಾರಾಯಣಪುರ ಕಾರ್ಯಾಚರಣೆಯಲ್ಲಿ ಹಲವು ನಕ್ಸಲರನ್ನು ಎನ್‌ಕೌಂಟರ್ ಮಾಡಲಾಗಿದೆ ಮತ್ತು ಅವರಿಗೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬುಧವಾರ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ನಾರಾಯಣಪುರ ವ್ಯಾಪ್ತಿಯ ಬೋಟರ್ ಗ್ರಾಮ ಮತ್ತು ಲೆಕವಾಡಾ ಕಾಡಿನಲ್ಲಿ ಮಾವೋವಾದಿಗಳು ಮತ್ತು ಡಿಆರ್‌ಜಿ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಬಸವರಾಜು ಸೇರಿದಂತೆ 27 ನಕ್ಸಲರನ್ನು ಹತ್ಯೆಗೈಯ್ಯಲಾಗಿದೆ. ಅವರಿಂದ ದೊಡ್ಡ ಮಟ್ಟದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕ್ಸಲರನ್ನು ಎದುರಿಸುವಾಗ ಒಬ್ಬ ಡಿಆರ್‌ಜಿ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಬಸವರಾಜು ಹೊರತುಪಡಿಸಿ ಎನ್‌ಕೌಂಟರ್‌ನಲ್ಲಿ ಹತರಾದ ಇತರರಲ್ಲಿ ಹಿರಿಯ ನಕ್ಸಲ್ ನಾಯಕರು ಮತ್ತು ವಾಂಟೆಡ್ ಕಾರ್ಯಕರ್ತರು ಸೇರಿದ್ದಾರೆ. ಅವರ ಗುರುತುಗಳನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.
“ನಮ್ಮ ಧೈರ್ಯಶಾಲಿ ಭದ್ರತಾ ಸಿಬ್ಬಂದಿ ಮೂರು ದಿನಗಳಿಂದ ಅತ್ಯಂತ ಸವಾಲಿನ ಭೂಪ್ರದೇಶದಲ್ಲಿ ಸಾಟಿಯಿಲ್ಲದ ಸಮರ್ಪಣೆ ಮತ್ತು ಶೌರ್ಯದಿಂದ ದೃಢವಾಗಿ ನಿಂತಿದ್ದಾರೆ. ಈ ಹೋರಾಟವು ನಕ್ಸಲರ ವಿರುದ್ಧ ಮಾತ್ರವಲ್ಲ, ಶಾಂತಿ ಮತ್ತು ಅಭಿವೃದ್ಧಿಯ ಪರವಾಗಿದೆ. ಇಡೀ ರಾಜ್ಯವು ಅವರ ಮನೋಭಾವಕ್ಕೆ ವಂದಿಸುತ್ತದೆ” ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಹೇಳಿದ್ದಾರೆ.
ಭದ್ರತಾ ಪಡೆಗಳ ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ವರದಿಯಾಗಿದೆ.
ಮುರ್ಷಿದಾಬಾದ್ ಹಿಂಸಾಚಾರದ ವೇಳೆ ಪೊಲೀಸರು ನಿಷ್ಕ್ರಿಯ: ಹೈಕೋರ್ಟ್ ನೇಮಿಸಿದ ಸಮಿತಿ


