ಛತ್ತೀಸ್‌ಗಢದ ಗಲಭೆಪೀಡಿತ ಬಿಜಾಪುರ ಜಿಲ್ಲೆಯಲ್ಲಿ ಭಾನುವಾರ ನಡೆದ ಗುಂಡಿನ ಚಕಮಕಿಯಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ)ನ 31 ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಘರ್ಷದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಛತ್ತೀಸ್‌ಗಢ
ಇಬ್ಬರು ಭದ್ರತಾ ಸಿಬ್ಬಂದಿಯನ್ನು ತಕ್ಷಣವೆ ವೈದ್ಯಕೀಯ ಚಿಕಿತ್ಸೆಗಾಗಿ ರಾಯ್‌ಪುರಕ್ಕೆ ಹೆಲಿಕಾಪ್ಟರ್ ಮೂಲಕ ಎನ್‌ಕೌಂಟರ್ ಸ್ಥಳದಿಂದ ಕರೆದೊಯ್ಯಲಾಯಿತು ಮತ್ತು ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಛತ್ತೀಸ್‌ಗಢ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಅರಣ್ಯದಲ್ಲಿ ಬೆಳಿಗ್ಗೆ ವಿವಿಧ ಭದ್ರತಾ ಪಡೆಗಳ ಸಿಬ್ಬಂದಿಗಳ ಜಂಟಿ ತಂಡವು ನಕ್ಸಲೈಟ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಪ್ರಾಥಮಿಕ ಮಾಹಿತಿಯ ಪ್ರಕಾರ, ಗುಂಡಿನ ಚಕಮಕಿಯಲ್ಲಿ 31 ನಕ್ಸಲರು ಸಾವನ್ನಪ್ಪಿದ್ದಾರೆ. ಅವರೆಲ್ಲರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಅವರು ಹೇಳಿದ್ದಾರೆ.
ರಾಜ್ಯ ಪೊಲೀಸರ ಜಿಲ್ಲಾ ಮೀಸಲು ಪಡೆ ಮತ್ತು ವಿಶೇಷ ಕಾರ್ಯಪಡೆಗೆ ಸೇರಿದ ಇಬ್ಬರು ಭದ್ರತಾ ಸಿಬ್ಬಂದಿ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
“ಬಿಜಾಪುರ ಜಿಲ್ಲೆಯ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಮಾವೋವಾದಿಗಳ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಜಿಲ್ಲಾ ಮೀಸಲು ಪಡೆ (DRG) ಮತ್ತು ವಿಶೇಷ ಕಾರ್ಯಪಡೆ (STF) ಒಳಗೊಂಡ ಭದ್ರತಾ ಪಡೆಗಳ ಜಂಟಿ ತಂಡವು ಶನಿವಾರ ಮಾವೋವಾದಿ ವಿರೋಧಿ ಕಾರ್ಯಾಚರಣೆಗೆ ಹೊರಟಿತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಕ್ಸಲ್ ಬಂಡುಕೋರರ ಸಾವುನೋವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿ ಹೇಳಿದ್ದಾರೆ. ಮೃತ ಭದ್ರತಾ ಸಿಬ್ಬಂದಿಯ ಶವಗಳನ್ನು ವಶಕ್ಕೆ ಪಡೆಯಲು ಮತ್ತು ಗಾಯಗೊಂಡ ಜವಾನರನ್ನು ಸ್ಥಳಾಂತರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.
ಸಿಪಿಐ-ಮಾವೋವಾದಿ ಪಕ್ಷದ ತೆಲಂಗಾಣ ರಾಜ್ಯ ಸಮಿತಿಯ ಸದಸ್ಯ ಮಂದಮರ್ರಿ ಪ್ರದೇಶದ ಬಂಡಿ ಪ್ರಕಾಶ್ (65) ಅಲಿಯಾಸ್ ಬಂಡಿ ದಾದಾ ಅಲಿಯಾಸ್ ಪ್ರಭಾತ್ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ಆದಿಲಾಬಾದ್ ಪ್ರದೇಶ ಕಾರ್ಯದರ್ಶಿ ಅಡೇಲು ಭಾಸ್ಕರ್ ಕೂಡ ಸೇರಿದ್ದಾರೆ ಎಂದು ವರದಿಯಾಗಿದೆ.
ಕಾರ್ಯಾಚರಣೆ ನಡೆದ ಸ್ಥಳವು ಛತ್ತೀಸಗಡ ಮತ್ತು ಮಹಾರಾಷ್ಟ್ರ-ತೆಲಂಗಾಣ ಗಡಿಗೆ ಹೊಂದಿಕೊಂಡಿದೆ. ಅಲ್ಲಿ ಎ.ಕೆ.47, ಎಸ್ ಎಲ್ ಆರ್, ಪಾಯಿಂಟ್ 303 ರೈಫಲ್, ಬ್ಯಾರಲ್ ಗ್ರೆನೇಡ್ ಲಾಂಚರ್ ಗಳು, ಸ್ಫೋಟಕಗಳು ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ ಎಂದು ಬಸ್ತರ್ ವಲಯದ ಐಜಿಪಿ ಪಿ.ಸುಂದರ ರಾಜ್ ತಿಳಿಸಿದ್ದಾರೆ.
ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯಪಡೆ ಮತ್ತು ಬಸ್ತರ್ ಫೈಟರ್, ಕೋಬ್ರಾ ಕಮಾಂಡೊಗಳು, ಕೇಂದ್ರ ಮೀಸಲು ಪಡೆ ಪೊಲೀಸರನ್ನು ಶೋಧ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಸುಮಾರು 1000ಕ್ಕೂ ಹೆಚ್ಚು ಮಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಮೃತ ನಕ್ಸಲರು ಸಮವಸ್ತ್ರದಲ್ಲಿದ್ದರು ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 1 ರಂದು, ಭದ್ರತಾ ಪಡೆಗಳು ಬಿಜಾಪುರದಲ್ಲಿ ಎಂಟು ಮಾವೋವಾದಿಗಳನ್ನು ಕೊಂದಿದ್ದರು. ಈ ವರ್ಷ, ಛತ್ತೀಸ್‌ಗಢದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 62 ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳದಿಂದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ದೊಡ್ಡ ಸಂಗ್ರಹವನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಛತ್ತೀಸ್‌ಗಢ ರಾಜ್ಯವನ್ನು ನಿಷೇಧಿತ ಮಾವೋವಾದಿಗಳ ಪ್ರಭಾವದಿಂದ ಮುಕ್ತಗೊಳಿಸುವ ತಂತ್ರದ ಭಾಗವಾಗಿ ಎಡಪಂಥೀಯ ಕ್ರಾಂತಿಕಾರಿ ನಕ್ಸಲ್ ಹೋರಾಟಗಾರರ ವಿರುದ್ಧದ ಸರಣಿ ಎನ್‌ಕೌಂಟರ್‌ಗಳು ನಡೆಯುತ್ತಿದೆ. ಬಿಜಾಪುರ ಬಸ್ತಾರ್‌ನಲ್ಲಿ ಅತ್ಯಂತ ಹೆಚ್ಚು ಮಾವೋವಾದಿ ಪೀಡಿತ ಜಿಲ್ಲೆಗಳಲ್ಲಿ ಒಂದಾಗಿದ್ದು, ದಕ್ಷಿಣ ಛತ್ತೀಸ್‌ಗಢದ ಎಡಪಂಥೀಯ ಕ್ರಾಂತಿಕಾರಿಗಳ ಕೇಂದ್ರವಾಗಿದೆ.
2026ರ ವೇಳೆಗೆ ನಕ್ಸಲೀಯರ ಸಂಪೂರ್ಣ ನಿರ್ನಾಮ: ಅಮಿತ್ ಶಾ
2026ರ ವೇಳೆಗೆ ನಕ್ಸಲೀಯರ ಸಂಪೂರ್ಣ ನಿರ್ನಾಮ ಮಾಡಲಾಗುವುದೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನಮ್ಮ ದೇಶವನ್ನು ನಕ್ಸಲೀಯರಿಂದ ಸಂಪೂರ್ಣ ಮುಕ್ತಗೊಳಿಸುವ ನಿಟ್ಟಿನಲ್ಲಿ ಭದ್ರತಾ ಪಡೆಗಳಿಂದ ನಡೆಯುತ್ತಿರುವ ಕಾರ್ಯಾಚರಣೆಯು ಛತ್ತೀಸ್ ಗಡದ ಬಿಜಾಪುರದಲ್ಲಿ ಬಹುದೊಡ್ಡ ಯಶಸ್ಸನ್ನು ಕಂಡಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ದೆಹಲಿ | ಬಿಜೆಪಿ ಗೆಲ್ಲುತ್ತಿದ್ದಂತೆ ಯಾವುದೇ ಕಡತಗಳ ಸ್ಥಳಾಂತರ ನಿಷೇಧ; ಸಚಿವಾಲಯದೊಳಗೆ ಪ್ರವೇಶ ನಿರ್ಬಂಧ!
ದೆಹಲಿ | ಬಿಜೆಪಿ ಗೆಲ್ಲುತ್ತಿದ್ದಂತೆ ಯಾವುದೇ ಕಡತಗಳ ಸ್ಥಳಾಂತರ ನಿಷೇಧ; ಸಚಿವಾಲಯದೊಳಗೆ ಪ್ರವೇಶ ನಿರ್ಬಂಧ!


