ಕಳ್ಳತನದ ಶಂಕೆ ಮೇಲೆ ಐಸ್‌ಕ್ರೀಮ್ ಫ್ಯಾಕ್ಟರಿ ಮಾಲೀಕ ಮತ್ತು ಆತನ ಸಹಾಯಕ ಇಬ್ಬರು ಕಾರ್ಮಿಕರಿಗೆ ವಿದ್ಯುತ್ ಶಾಕ್ ಕೊಟ್ಟು, ಉಗುರು ಕಿತ್ತು ಚಿತ್ರಹಿಂಸೆ ನೀಡಿರುವ ಘಟನೆ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ.
ರಾಜಸ್ಥಾನದ ಭಿಲ್ವಾರಾ ಜಿಲ್ಲೆಯವರಾದ ಅಭಿಷೇಕ್ ಭಂಬಿ ಮತ್ತು ವಿನೋದ್ ಭಂಬಿ ದೌರ್ಜನ್ಯಕ್ಕೊಳಗಾದ ಕಾರ್ಮಿಕರು. ಇವರನ್ನು ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಖಪ್ರಭಟ್ಟಿ ಪ್ರದೇಶದ ಐಸ್‌ಕ್ರೀಮ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಗುತ್ತಿಗೆದಾರರ ಮೂಲಕ ನೇಮಿಸಿಕೊಳ್ಳಲಾಗಿತ್ತು ಎಂದು ವರದಿಯಾಗಿದೆ.
ಏಪ್ರಿಲ್ 14 ರಂದು ಫ್ಯಾಕ್ಟರಿ ಮಾಲೀಕ ಛೋಟು ಗುರ್ಜರ್ ಮತ್ತು ಆತನ ಸಹಾಯಕ ಮುಖೇಶ್ ಶರ್ಮಾ ಕಾರ್ಮಿಕರ ಮೇಲೆ ಕಳ್ಳತನದ ಆರೋಪ ಹೊರಿಸಿದ್ದಾರೆ. ಬಳಿಕ ಇಬ್ಬರನ್ನೂ ವಿವಸ್ತ್ರಗೊಳಿಸಿ, ವಿದ್ಯುತ್ ಶಾಕ್ ನೀಡಿ, ಉಗುರುಗಳನ್ನು ಕಿತ್ತಿದ್ದಾರೆ. ಕಾರ್ಮಿಕರಿಗೆ ಚಿತ್ರಹಿಂಸೆ ನೀಡಿದ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಅರೆನಗ್ನ ವ್ಯಕ್ತಿಗೆ ವಿದ್ಯುತ್ ಶಾಕ್ ನೀಡಿ ಥಳಿಸಿದ ದೃಶ್ಯವಿದೆ ಎಂದು ಪೊಲೀಸರು ಹೇಳಿದ್ದಾಗಿ ವರದಿಗಳು ತಿಳಿಸಿವೆ.
ದೌರ್ಜನ್ಯಕ್ಕೊಳಗಾದ ಕಾರ್ಮಿಕರು ತಪ್ಪಿಸಿಕೊಂಡು ಹೋಗಿ ತಮ್ಮ ಊರಾದ ಭಿಲ್ವಾರ ತಲುಪುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಅವರು ಅಲ್ಲಿನ ಗುಲಾಬ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಜಸ್ಥಾನ ಪೊಲೀಸರು ‘ಝೀರೋ’ ಎಫ್‌ಐಆರ್ ದಾಖಲಿಸಿ, ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಕೊರ್ಬಾ ಪೊಲೀಸರಿಗೆ ವರ್ಗಾಯಿಸಿದ್ದರು. ಝೀರೋ ಎಫ್‌ಐಆರ್ ಅಡಿಯಲ್ಲಿ, ಅಪರಾಧದ ಸ್ಥಳವನ್ನು ಲೆಕ್ಕಿಸದೆ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಬಹುದು.
ಶುಕ್ರವಾರ ಕೊರ್ಬಾದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಐಸ್‌ಕ್ರೀಮ್ ಫ್ಯಾಕ್ಟರಿ ಮಾಲೀಕರಾದ ಗುರ್ಜರ್ ಮತ್ತು ಶರ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಕಾರ್ಮಿಕರಲ್ಲಿ ಒಬ್ಬರಾದ ಅಭಿಷೇಕ್ ಭಂಬಿ, ತನ್ನ ವಾಹನ ದುರಸ್ಥಿಗೆ ಮಾಲೀಕನಿಂದ 20,000 ರೂ. ಹಣವನ್ನು ಮುಂಗಡವಾಗಿ ಕೇಳಿದ್ದರು. ಮಾಲೀಕ ನಿರಾಕರಿಸಿದಾಗ, ಅಭಿಷೇಕ್ ಕೆಲಸ ಬಿಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಇದರಿಂದ ಕೋಪಗೊಂಡ ಮಾಲೀಕ ಮತ್ತು ಆತನ ಸಹಾಯಕ ಇಬ್ಬರೂ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
“ಪ್ರಕರಣದಲ್ಲಿ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಹೆಚ್‌ಒ) ಪ್ರಮೋದ್ ದಾದ್ಸೇನ ಹೇಳಿದ್ದಾಗಿ ವರದಿ ಹೇಳಿದೆ.
ಕೆನಡಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಸಾವು


